Indian Police Service 
ಸುದ್ದಿಗಳು

ಎಡಿಜಿಪಿ ಹುದ್ದೆಗೆ ಉಮೇಶ್‌ ಕುಮಾರ್, ಅರುಣ್‌ ಚಕ್ರವರ್ತಿಗೆ ಬಡ್ತಿ: ರಾಜ್ಯ ಸರ್ಕಾರದ ಆದೇಶಕ್ಕೆ ಸಿಎಟಿ ತಡೆ

ಸೇವಾ ಹಿರಿತನದಲ್ಲಿ ತನಗಿಂತಲೂ ಕಿರಿಯರಾದ ಉಮೇಶ್ ಕುಮಾರ್, ಅರುಣ್ ಚಕ್ರವರ್ತಿಗೆ ಮುಂಬಡ್ತಿ ನೀಡಿ ಸರ್ಕಾರ ಆದೇಶಿಸಿದೆ. ಇದು ಕಾನೂನುಬಾಹಿರ ಹಾಗೂ ಏಕಪಕ್ಷೀಯ ಕ್ರಮ ಎಂದು ಹಿರಿಯ ಐಪಿಎಸ್‌ ಅಧಿಕಾರಿ ಅಲೋಕ್‌ ಕುಮಾರ್‌ ಸಿಎಟಿ ಮೊರೆ ಹೋಗಿದ್ದಾರೆ.

Bar & Bench

ಹಿರಿಯ ಐಪಿಎಸ್‌ ಅಧಿಕಾರಿಗಳಾದ ಉಮೇಶ್‌ ಕುಮಾರ್ ಮತ್ತು ಅರುಣ್‌ ಚಕ್ರವರ್ತಿ ಅವರಿಗೆ ರಾಜ್ಯ ಪೊಲೀಸ್‌ ಮಹಾ ನಿರ್ದೇಶಕರ (ಡಿಜಿಪಿ) ಹುದ್ದೆಗೆ ಪದೋನ್ನತಿ ನೀಡಿ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶಕ್ಕೆ ಕೇಂದ್ರ ಆಡಳಿತಾತ್ಮಕ ನ್ಯಾಯಾಧಿಕರಣ (ಸಿಎಟಿ) ಗುರುವಾರ ಮಧ್ಯಂತರ ತಡೆಯಾಜ್ಞೆ ನೀಡಿದೆ.

ಉಮೇಶ್‌ ಕುಮಾರ್ ಮತ್ತು ಅರುಣ್‌ ಚಕ್ರವರ್ತಿಗೆ ಡಿಜಿಪಿ ಹುದ್ದೆಗೆ ಪದೋನ್ನತಿ ನೀಡಿ ರಾಜ್ಯ ಸರ್ಕಾರವು 2025ರ ಸೆಪ್ಟೆಂಬರ್‌ 12ರಂದು ಹೊರಡಿಸಿದ ಅಧಿಸೂಚನೆ ರದ್ದುಪಡಿಸುವಂತೆ ಕೋರಿ ರಾಜ್ಯ ಪೊಲೀಸ್‌ ತರಬೇತಿ ಕೇಂದ್ರದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ (ಎಡಿಜಿಪಿ) ಅಲೋಕ್‌ ಕುಮಾರ್‌ ಸಿಎಟಿಗೆ ಅರ್ಜಿ ಸಲ್ಲಿಸಿದ್ದರು.

ಗುರುವಾರ ಅರ್ಜಿದಾರ ಪರ ವಕೀಲರ ವಾದ ಆಲಿಸಿದ ನ್ಯಾಯಾಧೀಶರಾದ ಎಸ್‌ ಸುಜಾತ ಮತ್ತು ಡಾ.ಸಂಜೀವ್‌ ಕುಮಾರ್‌ ಅವರ ನೇತೃತ್ವದ ವಿಭಾಗೀಯ ಪೀಠವು ಅರ್ಜಿ ಕುರಿತ ಮುಂದಿನ ವಿಚಾರಣೆವರೆಗೆ ಸರ್ಕಾರ ಸೆಪ್ಟೆಂಬರ್‌ 12ರಂದು ಹೊರಡಿಸಿರುವ ಆದೇಶಕ್ಕೆ ತಡೆ ನೀಡಿದೆ. ಅಲ್ಲದೆ, ಅರ್ಜಿಯಲ್ಲಿ ಪ್ರತಿವಾದಿಗಳಾದ ರಾಜ್ಯ ಸರ್ಕಾರ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ನೋಟಿಸ್‌, ಐಪಿಎಸ್‌ ಅಧಿಕಾರಿಗಳಾದ ಉಮೇಶ್‌ ಕುಮಾರ್ ಮತ್ತು ಅರುಣ್‌ ಚಕ್ರವರ್ತಿ ಅವರಿಗೆ ತುರ್ತು ನೋಟಿಸ್‌ ನೀಡಿ ವಿಚಾರಣೆಯನ್ನು ಸೆಪ್ಟೆಂಬರ್‌ 23ಕ್ಕೆ ಮುಂದೂಡಿದೆ.

ಪ್ರಕರಣದ ಹಿನ್ನೆಲೆ: ರಾಜ್ಯ ಸಶಸ್ತ್ರ ಮೀಸಲು ಪಡೆಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾಗಿದ್ದ (ಎಡಿಜಿಪಿ) ಉಮೇಶ್ ಕುಮಾರ್ ಅವರಿಗೆ ಡಿಜಿಪಿ ಹುದ್ದೆಗೆ ಮುಂಬಡ್ತಿ ನೀಡಿ ನೇಮಕಾತಿ ವಿಭಾಗದ ಮುಖ್ಯಸ್ಥರಾಗಿ ಸರ್ಕಾರ ನೇಮಿಸಿತ್ತು. ರಾಜ್ಯ ಪೊಲೀಸ್ ಗೃಹ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಅರುಣ್ ಚಕ್ರವರ್ತಿ ಅವರಿಗೆ ಡಿಜಿಪಿ ಹುದ್ದೆಗೆ ಪದನ್ನೋತಿ ನೀಡಿ ಅದೇ ಹುದ್ದೆಯಲ್ಲಿ ಮುಂದುವರೆಸಿ 2025ರ ಸೆಪ್ಟೆಂಬರ್‌ 12ರಂದು ಆದೇಶಿಸಿತ್ತು.

ಸೇವಾ ಹಿರಿತನ ಆಧಾರದ ಮೇರೆಗೆ ಎಡಿಜಿಪಿಯಾದ ಅಲೋಕ್‌ ಕುಮಾರ್ ಅವರು ಡಿಜಿಪಿ ಹುದ್ದೆಗೆ ಪದೋನ್ನತಿಯ ರೇಸ್‌ನಲ್ಲಿದ್ದರು. ಆದರೆ, ಅವರಿಗೆ ಸರ್ಕಾರವು ಡಿಜಿಪಿ ಹುದ್ದೆಗೆ ಪದೋನ್ನತಿ ನೀಡಲಿಲ್ಲ. ಇದರಿಂದ ಸಿಎಟಿ ಮೆಟ್ಟಿಲೇರಿರುವ ಅಲೋಕ್‌ ಕುಮಾರ್‌, ಫೋನ್ ಕದ್ದಾಲಿಕೆ ಪ್ರಕರಣದಲ್ಲಿ ತಮ್ಮ ವಿರುದ್ಧ ಇಲಾಖಾ ತನಿಖೆ ಬಾಕಿಯಿದೆ ಎಂಬ ಕಾರಣ ಮಂದಿಟ್ಟು ತಮಗೆ ಡಿಜಿಪಿಯಾಗಿ ಪದೋನ್ನತಿ ನೀಡಿಲ್ಲ. ಡಿಜಿಪಿ ಹುದ್ದೆಗೆ ಪದೋನ್ನತಿ ಪಡೆಯಲು ತಾನು ಅರ್ಹ. ಆದರೆ, ಸೇವಾಹಿರಿತನದಲ್ಲಿ ತನಗಿಂತಲೂ ಕಿರಿಯರಾದ ಉಮೇಶ್ ಕುಮಾರ್ ಹಾಗೂ ಅರುಣ್ ಚಕ್ರವರ್ತಿ ಅವರಿಗೆ ಮುಂಬಡ್ತಿ ನೀಡಿ ಸರ್ಕಾರ ಆದೇಶಿಸಿದೆ. ಇದು ಕಾನೂನುಬಾಹಿರ ಹಾಗೂ ಏಕಪಕ್ಷೀಯ ಕ್ರಮವಾಗಿದೆ. ಆದ್ದರಿಂದ ಸರ್ಕಾರವು ಸೆಪ್ಟೆಂಬರ್‌ 12ರಂದು ಹೊರಡಿಸಿರುವ ಆದೇಶ ರದ್ದುಪಡಿಸಬೇಕು ಎಂದು ಕೋರಿದ್ದಾರೆ.