The Bhagavad Gita 
ಸುದ್ದಿಗಳು

ಶಾಲೆಗಳಲ್ಲಿ ಭಗವದ್ಗೀತೆ ಕಲಿಕೆ ವಿರುದ್ಧ ಪಿಐಎಲ್‌: ಇದು ಅಪಪ್ರಚಾರ ಎಂದ ಅಸಮಾಧಾನ ವ್ಯಕ್ತಪಡಿಸಿದ ಗುಜರಾತ್‌ ಹೈಕೋರ್ಟ್‌

ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಕಾರ, ಜಾತ್ಯತೀತತೆಯ ಆಧಾರದಲ್ಲಿ ಎಲ್ಲಾ ಧರ್ಮಗಳ ತತ್ವಗಳನ್ನು ಶಾಲೆಗಳಲ್ಲಿ ಕಲಿಸಬೇಕು, ಕೇವಲ ಒಂದೇ ಧರ್ಮವನ್ನು ಆಧರಿಸಿರಬಾರದು ಎನ್ನುವುದು ಅರ್ಜಿದಾರರ ವಾದ.

Bar & Bench

ಶಾಲೆಗಳಲ್ಲಿ ಭಗವದ್ಗೀತೆ ತತ್ವಗಳನ್ನು ಕಲಿಸುವ ರಾಜ್ಯ ಸರ್ಕಾರದ ಇತ್ತೀಚಿನ ನಿರ್ಧಾರದ ವಿರುದ್ಧ ಜಾಮಿಯತ್ ಉಲಮಾ-ಇ-ಹಿಂದ್ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (ಪಿಐಎಲ್) ಬಗ್ಗೆ ಗುಜರಾತ್ ಹೈಕೋರ್ಟ್ ಗುರುವಾರ ಅಸಮಾಧಾನ ವ್ಯಕ್ತಪಡಿಸಿದೆ [ಜಾಮಿಯತ್‌ ಉಲಮಾ-ಇ-ಹಿಂದ್ ಗುಜರಾತ್ ಮತ್ತು ಇನ್ನೊಬ್ಬರು. v. ಯೂನಿಯನ್ ಆಫ್ ಇಂಡಿಯಾ ಮತ್ತು ಇತರರು].

ಮುಖ್ಯ ನ್ಯಾಯಮೂರ್ತಿ (ಸಿಜೆ) ಸುನಿತಾ ಅಗರ್ವಾಲ್ ಮತ್ತು ಪ್ರಣವ್ ತ್ರಿವೇದಿ ಅವರ ಪೀಠವು ಭಗವದ್ಗೀತೆ ಯಾವುದೇ ಧಾರ್ಮಿಕ ಬೋಧನೆಯನ್ನು ಪ್ರತಿಪಾದಿಸುವುದಿಲ್ಲ ಮತ್ತು ಗೀತೆಯನ್ನು ಬೋಧಿಸುವುದರ ವಿರುದ್ಧದ ಪಿಐಎಲ್‌ ಕೇವಲ ಅಪಪ್ರಚಾರವಾಗಿದೆ ಎಂದು ಹೇಳಿದೆ.

“ಭಗವದ್ಗೀತೆಯಲ್ಲಿ ಯಾವುದೇ ಧಾರ್ಮಿಕ ಬೋಧನೆ ಇಲ್ಲ. ಕರ್ಮ ಕರ್ ಫಲ್ ಕಿ ಇಕ್ಷಾ ಮತ್ ಕರ್ (ಫಲಾಫಲಗಳ ಅಪೇಕ್ಷೆ ಇಲ್ಲದೆ ಕರ್ತವ್ಯಗಳನ್ನು ಮಾಡಿ) ಎನ್ನುವ ಗೀತೆಯ ತತ್ವ ಮೂಲಭೂತ ನೈತಿಕ ತತ್ವವಾಗಿದೆ. ಭಗವದ್ಗೀತೆಯಲ್ಲಿ ಯಾವುದೇ ಧಾರ್ಮಿಕ ಬೋಧನೆ ಇಲ್ಲ. ಈ ಸಾರ್ವಜನಿಕ ಹಿತಾಸಕ್ತಿಯು ಅಪಪ್ರಚಾರ ಅಥವಾ ಗಮನಸೆಳೆಯುವ ತಂತ್ರದ ಹೊರತು ಬೇರೇನೂ ಅಲ್ಲ," ಎಂದು ನ್ಯಾಯಾಲಯ ಟೀಕಿಸಿದೆ.

ಗುಜರಾತ್‌ ಶಾಸನಸಭೆಯಲ್ಲಿ ಫೆಬ್ರವರಿ 2024ರಲ್ಲಿ ಸರ್ವಾನುಮತದ ನಿರ್ಣಯವನ್ನು ಅಂಗೀಕರಿಸುವ ಮೂಲಕ 6 ರಿಂದ 12ನೇ ತರಗತಿಯ ಶಾಲಾ ಮಕ್ಕಳಿಗೆ ಗೀತೆಯ ತತ್ವ, ಬೋಧನೆ ಮತ್ತು ಶ್ಲೋಕ, ಪ್ರಾರ್ಥನೆಗಳನ್ನು ಕಲಿಸುವ ಬಗ್ಗೆ ನಿರ್ಣಯಿಸಲಾಗಿದೆ.

ಅರ್ಜಿದಾರರ ಪರ ವಕೀಲರು, ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಕಾರ, ಜಾತ್ಯತೀತತೆಯ ಆಧಾರದಲ್ಲಿ ಎಲ್ಲಾ ಧರ್ಮಗಳ ತತ್ವಗಳನ್ನು ಶಾಲೆಗಳಲ್ಲಿ ಕಲಿಸಬೇಕು. ಕೇವಲ ಒಂದೇ ಧರ್ಮವನ್ನು ಆಧರಿಸಿರಬಾರದು ಎಂದು ವಾದಿಸಿದರು. "ಇದು ಎಲ್ಲಾ ಧರ್ಮಗಳು ಕಲಿಸುವ ನೈತಿಕತೆಯನ್ನು ಆಧರಿಸಿರಬೇಕು" ಎಂದು ಸಲಹೆ ನೀಡಿದರು.

ಎಲ್ಲಾ ಧರ್ಮಗಳು ನಮ್ಮ ಸಂಸ್ಕೃತಿ ಮತ್ತು ನೈತಿಕತೆಗೆ ಅವಿಭಾಜ್ಯ ಎಂದು ಪ್ರತಿಪಾದಿಸುವ ವಿಷಯದ ಕುರಿತು ಸುಪ್ರೀಂ ಕೋರ್ಟ್‌ನ ನಿಲುವನ್ನು ವಕೀಲರು ತಮ್ಮ ವಾದದಲ್ಲಿ ಉಲ್ಲೇಖಿಸಿದರು. ಸರ್ವೋಚ್ಚ ನ್ಯಾಯಾಲಯದ ಪ್ರಕಾರ, ಎಲ್ಲಾ ಧರ್ಮಗಳಲ್ಲಿ ಸಾಮಾನ್ಯವಾಗಿರುವ ಒಳ್ಳೆಯ ಮನುಷ್ಯರನ್ನು ರೂಪಿಸುವ ತತ್ವಗಳನ್ನು ಕಲಿಸಬಹುದು ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ಶಾಸನಸಭೆಯ ನಿರ್ಣಯಕ್ಕೆ ಯಾವುದೇ ಧಾರ್ಮಿಕ ಬಣ್ಣವಿದೆ ಎಂಬುದನ್ನು ಕೋರ್ಟ್ ಒಪ್ಪಲಿಲ್ಲ. ಬದಲಿಗೆ, ಈ ಕ್ರಮವು ನೈತಿಕ ವಿಜ್ಞಾನದಂತಹ ವಿಷಯಗಳ ಬೋಧನೆಗಳಿಗೆ ಹತ್ತಿರವಿದೆ ಎಂದು ಅಭಿಪ್ರಾಯಪಟ್ಟಿತು. "ಇದು ಒಂದು ರೀತಿಯ ನೈತಿಕ ವಿಜ್ಞಾನವಾಗಿದೆ. ನೈತಿಕ ವಿಜ್ಞಾನದ ಪಾಠಗಳು ಉಪನ್ಯಾಸಕಾರರ ಬೋಧನೆಗಳಲ್ಲದೆ ಬೇರೇನೂ ಅಲ್ಲ" ಎಂದು ಸಿಜೆ ಅಗರ್ವಾಲ್‌ ಮೌಖಿಕವಾಗಿ ಅವಲೋಕಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಅರ್ಜಿದಾರರ ವಕೀಲರು ನೈತಿಕ ವಿಜ್ಞಾನದ ಪಾಠಗಳು "ತಟಸ್ಥ ಗುಣ" ಹೊಂದಿರುತ್ತವೆ ಎಂದರು. ಮುಂದುವರೆದು, ಈ ನಿರ್ಣಯವನ್ನು ಇದಾಗಲೇ ಜಾರಿಗೊಳಿಸಿದ್ದು ತಮ್ಮ ಅರ್ಜಿಗೆ ಸರ್ಕಾರವು ಪ್ರತ್ಯುತ್ತರವನ್ನು ಸಲ್ಲಿಸಿಲ್ಲ ಎಂದು ನ್ಯಾಯಾಲಯದ ಗಮನಕ್ಕೆ ತಂದರು.

ಈ ವೇಳೆ ನ್ಯಾಯಾಲಯವು ನಿರ್ಣಯವು ನಿರ್ದಿಷ್ಟ ದಾಖಲೆ ಅಥವಾ ಉಪದೇಶದಿಂದ (ಭಗವದ್ಗೀತೆ) ಬೋಧನೆಗಳನ್ನು ಪರಿಚಯಿಸುವ ಉಪಕ್ರಮವಾಗಿದೆ ಎಂದಿತು. ಆದರೆ, ಇದು ರಾಷ್ಟ್ರೀಯ ಶಿಕ್ಷಣ ನೀತಿಯ ಭಾಗವಾಗಿಲ್ಲ ಎಂದು ಅರ್ಜಿದಾರ ಪರ ವಕೀಲರು ವಾದಿಸಿದರು.

ಅಂತಿಮವಾಗಿ ನ್ಯಾಯಾಲಯವು ಒಂದು ತಿಂಗಳ ನಂತರ ಪ್ರಕರಣದ ಅರ್ಹತೆಯ ಕುರಿತಾಗಿ ಆಲಿಸಲು ಪಟ್ಟಿ ಮಾಡುವುದಾಗಿ ತಿಳಿಸಿತು. ಜಾಮಿಯತ್‌ ಉಲಮಾ-ಎ-ಹಿಂದ್‌ ಪರವಾಗಿ ವಕೀಲ ಇಸಾ ಹಕೀಂ ವಾದಿಸಿದರು. ಕೇಂದ್ರ ಸರ್ಕಾರವನ್ನು ಸರ್ಕಾರಿ ವಕೀಲ ಹರ್ಷೀಲ್ ಡಿ ಶುಕ್ಲಾ ಪ್ರತಿನಿಧಿಸಿದ್ದರು.