Gautami Tadimalla Facebook
ಸುದ್ದಿಗಳು

ನಟಿ ಗೌತಮಿಯಿಂದ ಆಸ್ತಿ ವಂಚನೆ ದೂರು: ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ನಿರಾಕರಿಸಿದ ಮದ್ರಾಸ್ ಹೈಕೋರ್ಟ್

ಚಲನಚಿತ್ರ ನಿರ್ಮಾಪಕ ಸಿ ಅಳಗಪ್ಪನ್ & ಅವರ ಕುಟುಂಬ ಸದಸ್ಯರು ಗೌತಮಿಗೆ ಮೋಸ ಮಾಡಿದ್ದಾರೆ ಎಂದು ಮೇಲ್ನೋಟಕ್ಕೆ ಶಂಕಿಸಲು ಸಾಕಷ್ಟು ಪುರಾವೆಗಳಿವೆ ಎಂದಿರುವ ನ್ಯಾಯಮೂರ್ತಿ ಸಿ ವಿ ಕಾರ್ತಿಕೇಯನ್ ಅವರು ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿದರು.

Bar & Bench

ನಟಿ ಮತ್ತು ಭಾರತೀಯ ಜನತಾ ಪಕ್ಷದ (ಬಿಜೆಪಿ) ಮಾಜಿ ಸದಸ್ಯೆ ಗೌತಮಿ ತಡಿಮಲ್ಲ ಅವರು ದಾಖಲಿಸಿರುವ ಆಸ್ತಿ ವಂಚನೆ ಪ್ರಕರಣದಲ್ಲಿ ಆರೋಪಿಗಳಾದ ಚಲನಚಿತ್ರ ನಿರ್ಮಾಪಕ ಸಿ ಅಳಗಪ್ಪನ್ ಮತ್ತು ಅವರ ಕುಟುಂಬ ಸದಸ್ಯರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ಇತ್ತೀಚೆಗೆ ತಿರಸ್ಕರಿಸಿದೆ.

ಅಳಗಪ್ಪನ್, ಅವರ ಪತ್ನಿ ಎ ಎಲ್ ನಚಲ್, ಅವರ ಅಳಿಯಂದಿರಾದ ಶಿವ ಮತ್ತು ಭಾಸ್ಕರ್, ಅವರ ಮಗಳು ಆರತಿ ಮತ್ತು ಅವರ ಚಾಲಕ ಸತೀಶ್ ಕುಮಾರ್ ಅವರಿಗೆ ನ್ಯಾಯಮೂರ್ತಿ ಸಿ.ವಿ ಕಾರ್ತಿಕೇಯನ್ ಅವರು ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿದ್ದಾರೆ.

"ಮೋಸ ಮಾಡುವ ಉದ್ದೇಶವನ್ನು ಸಂಚನ್ನು ಆರಂಭದಿಂದಲೂ ಪೋಷಿಸಲಾಗಿದೆ ಮತ್ತು ಈಗಾಗಲೇ ಸಂಕಷ್ಟದಲ್ಲಿರುವ, ದುರ್ಬಲಗೊಳಿಸುವ ಕಾಯಿಲೆಯಿಂದ ಬಳಲುತ್ತಿರುವ ಹೆಣ್ಣಿನ ಮೇಲೆ ವಿನಾಶಕಾರಿ ಪರಿಣಾಮ ಬೀರಿದೆ, ಆಕೆ ತನ್ನ ಪುಟ್ಟ ಮಗಳಿಗೆ ಭದ್ರತೆಯನ್ನು ಒದಗಿಸಲು ಬಯಸಿದ್ದಳು. ಎರಡು ಪ್ರತ್ಯೇಕ ತನಿಖಾ ಸಂಸ್ಥೆಗಳು ದಾಖಲಿಸಿರುವ ಎರಡೂ ಪ್ರಕರಣಗಳಲ್ಲಿ ಆರೋಪಿಗಳ ವೈಯಕ್ತಿಕ ಲಾಭಕ್ಕಾಗಿ ವಂಚನೆ ಮಾತ್ರವಲ್ಲ ಹಣವನ್ನು ದುರುಪಯೋಗಪಡಿಸಿಕೊಂಡಿರುವುದು ಬಹಿರಂಗವಾಗಿದೆ" ಎಂದು ನ್ಯಾಯಾಲಯ ಹೇಳಿದೆ.

ಗೌತಮಿ ಅವರ ದೂರಿನ ನಂತರ ತಮಿಳುನಾಡು ಪೊಲೀಸರು ದಾಖಲಿಸಿದ ವಂಚನೆ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಅಳಗಪ್ಪನ್ ಈ ವರ್ಷದ ನವೆಂಬರ್‌ನಲ್ಲಿ ಹೈಕೋರ್ಟ್ ಮೆಟ್ಟಿಲೇರಿದ್ದರು.

ಸುಮಾರು 20 ವರ್ಷಗಳ ಹಿಂದೆ ನಡೆದ ಆಸ್ತಿ ವ್ಯವಹಾರದಲ್ಲಿ ಅಳಗಪ್ಪನ್ ತನಗೆ ಮೋಸ ಮಾಡಿದ್ದಾನೆ ಎಂದು ಈ ವರ್ಷದ ಸೆಪ್ಟೆಂಬರ್ 7ರಂದು ಗೌತಮಿ ಅವರು ತಮಿಳುನಾಡು ಪೊಲೀಸರಿಗೆ ದೂರು ನೀಡಿದ್ದರು.

ಗೌತಮಿ ಅವರ ದೂರಿನ ಪ್ರಕಾರ, 2004ರಲ್ಲಿ ಅವರು ತಮ್ಮ ಒಡೆತನದ 46 ಎಕರೆ ಭೂಮಿಯನ್ನು ಮಾರಾಟ ಮಾಡಲು ನಿರ್ಧರಿಸಿದ್ದರು. ಅಲಗಪ್ಪನ್ ತಾನು ಬಿಲ್ಡರ್ ಮತ್ತು ಪ್ರಾಪರ್ಟಿ ಏಜೆಂಟ್ ಎಂದು ಹೇಳಿಕೊಂಡು ಗೌತಮಿ ಅವರನ್ನು ಸಂಪರ್ಕಿಸಿದ್ದನು. ಈ ಭೂಮಿ ಮಾರಾಟ ಮಾಡಲು ಗೌತಮಿ ಅವರು ಆತನಿಗೆ ಅಟಾರ್ನಿ ಅಧಿಕಾರ ನೀಡಿದ್ದರು. ಹಲವು ವರ್ಷಗಳಿಂದ, ಅಳಗಪ್ಪನ್ ಮತ್ತು ಅವರ ಪತ್ನಿ ಗೌತಮಿಗೆ ಸೇರಿದ ಇತರ ಆಸ್ತಿಗಳ ಮಾರಾಟ ಮತ್ತು ಸ್ವಾಧೀನದೊಂದಿಗೆ ವ್ಯವಹರಿಸಿದರು.

ಆದಾಗ್ಯೂ, ಅಂತಹ ವ್ಯವಹಾರಗಳ ಸಮಯದಲ್ಲಿ, ಅಳಗಪ್ಪನ್, ಅವರ ಪತ್ನಿ ಮತ್ತು ಅವರ ಕುಟುಂಬ ಸದಸ್ಯರು 25 ಕೋಟಿ ರೂಪಾಯಿಗಿಂತ ಹೆಚ್ಚು ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಇತ್ತೀಚೆಗೆ ಅರಿತುಕೊಂಡೆ ಎಂದು ಗೌತಮಿ ದೂರಿನಲ್ಲಿ ವಿವರಿಸಿದ್ದರು.

ದೂರಿನ ನಂತರ, ಪೊಲೀಸರು ಅಲಗಪ್ಪನ್ ಮತ್ತು ಇತರ ಹನ್ನೆರಡು ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಈ ಪೈಕಿ ಆರು ಮಂದಿಯನ್ನು ಬಂಧಿಸಲಾಗಿದೆ. ಅಳಗಪ್ಪನ್ ಅವರನ್ನು ಇನ್ನೂ ಬಂಧಿಸಲಾಗಿಲ್ಲ. ಪೊಲೀಸರಿಗೆ ದೂರು ನೀಡಿದ ನಂತರ ತನಗೆ ಮತ್ತು ತನ್ನ ಮಗಳಿಗೆ ಅಪರಿಚಿತ ವ್ಯಕ್ತಿಗಳಿಂದ ಕೊಲೆ ಬೆದರಿಕೆಗಳು ಬರುತ್ತಿವೆ ಎಂದು ಗೌತಮಿ ಹೇಳಿದ್ದಾರೆ.

ಅಕ್ಟೋಬರ್ 23ರಂದು ಗೌತಮಿ ಅವರು ಬಿಜೆಪಿಯ ಸದಸ್ಯರು ಅಗತ್ಯವಿರುವ ಸಮಯದಲ್ಲಿ ಸಹಾಯ ಮಾಡಲು ವಿಫಲರಾಗಿದ್ದಾರೆ ಮತ್ತು ಪಕ್ಷದ ಕೆಲವು ಸದಸ್ಯರು ಅಳಗಪ್ಪನ್ ಅವರಿಗೆ ಸಹಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿ ಬಿಜೆಪಿಗೆ ರಾಜೀನಾಮೆ ನೀಡಿದ್ದರು.

[ಆದೇಶ ಓದಿ]

C Alagappan vs The State.pdf
Preview