ಮುಂದಿನ ವರ್ಷದಿಂದ ಪ್ರತಿ ತಿಂಗಳ ಎರಡು ಶನಿವಾರ ಹೈಕೋರ್ಟ್ ಕಲಾಪ ನಡೆಸುವ ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಅವರ ಪ್ರಸ್ತಾವವನ್ನು ಬೆಂಗಳೂರು ವಕೀಲರ ಸಂಘ ಈಚೆಗೆ ಸಾರಸಗಟಾಗಿ ತಿರಸ್ಕರಿಸಿದೆ.
ಎಎಬಿಯ ಸಭಾಂಗಣದಲ್ಲಿ ನಡೆದ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಶನಿವಾರದ ಕಲಾಪಕ್ಕೆ ಹಾಜರಾಗದಿರಲು ಒಕ್ಕೊರಲ ನಿರ್ಣಯ ಕೈಗೊಳ್ಳಲಾಗಿದೆ. ಶನಿವಾರದಂದು ಯಾವುದೇ ಕಾರಣಕ್ಕೂ ಕೆಲಸ ಮಾಡಲಾಗದು ಮತ್ತು ಈ ಪ್ರಸ್ತಾವಕ್ಕೆ ವಕೀಲರ ಸಂಘ ತೀವ್ರ ವಿರೋಧ ದಾಖಲಿಸಿದೆ ಎಂದು ಎಎಬಿ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
ಮುಖ್ಯ ನ್ಯಾಯಮೂರ್ತಿ ಅವರು ವಕೀಲರ ಸಂಘದ ಅಭಿಪ್ರಾಯ ಪರಿಗಣಿಸಿದಿರುವುದು ದುರದೃಷ್ಟಕರ. ಇದರಿಂದ ವಕೀಲರ ಸಮುದಾಯದ ಜೊತೆ ಅನಗತ್ಯ ತಿಕ್ಕಾಟ ಶುರುವಾಗಲಿದೆ. ಪ್ರತಿದಿನ ಹೆಚ್ಚು ಸಮಯ ಕೆಲಸ ಮಾಡುವ ವಕೀಲರ ಆರೋಗ್ಯ ಮತ್ತು ಸೌಖ್ಯವನ್ನು ಮುಖ್ಯ ನ್ಯಾಯಮೂರ್ತಿಗಳು ಪರಿಗಣಿಸುತ್ತಿಲ್ಲ ಎಂದು ಆಕ್ಷೇಪಿಸಲಾಗಿದೆ.
ವಕೀಲರ ಸಮುದಾಯದವರನ್ನು ನ್ಯಾಯಮೂರ್ತಿಗಳನ್ನಾಗಿ ನೇಮಿಸಲು ಎರಡು ತಿಂಗಳಲ್ಲಿ ಹೈಕೋರ್ಟ್ ತಕ್ಷಣ ಕ್ರಮಕೈಗೊಳ್ಳಬೇಕು. ಇಲ್ಲವಾದಲ್ಲಿ ಧರಣಿ ಆರಂಭಿಸಲಾಗುವುದು. ನ್ಯಾಯಾಂಗದಲ್ಲಿ ವಕೀಲರಿಗೆ ಆದ್ಯತೆ ನೀಡಿ ವಕೀಲರ ಸಮುದಾಯದವರನ್ನು ನ್ಯಾಯಮೂರ್ತಿಗಳನ್ನಾಗಿ ನೇಮಕ ಮಾಡದಿರುವುದು ತಲೆಮಾರಿನ ಅಂತರಕ್ಕೆ ಕಾರಣವಾಗಿದೆ. ಈ ಕುರಿತು ಕರ್ನಾಟಕದವರಾದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಬಿ ವಿ ನಾಗರತ್ನ ಮತ್ತು ಅರವಿಂದ್ ಕುಮಾರ್ ಹಾಗೂ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರನ್ನು ಬೆಂಗಳೂರು, ಧಾರವಾಡ ಮತ್ತು ಕಲಬುರ್ಗಿಯ ವಕೀಲರ ಸಂಘಗಳ ನಿಯೋಗ ಭೇಟಿ ಮಾಡಿ, ಅವರಿಗೆ ವಿಚಾರ ಮನವರಿಕೆ ಮಾಡಿಕೊಡಲಾಗುವುದು ಎಂದು ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಶನಿವಾರದಂದು ಕೆಲಸ ಮಾಡುವ ಕುರಿತು ಹೈಕೋರ್ಟ್ ಯಾವುದೇ ನಿರ್ಧಾರ ಕೈಗೊಂಡರೆ ಎಎಬಿಯು ಸಾಮಾನ್ಯ ಸಭೆ ನಡೆಸಿ ಮುಂದಿನ ಕಾರ್ಯತಂತ್ರದ ಕುರಿತು ನಿರ್ಧರಿಸಲಿದೆ ಎಂದು ವಿವರಿಸಲಾಗಿದೆ. ಅಲ್ಲದೇ, ಕರ್ನಾಟಕದ ವಕೀಲರು ಎದುರಿಸುತ್ತಿರುವ ಪರಿಸ್ಥಿತಿಯ ಕುರಿತು ಸಿಜೆಐಗೆ ಪತ್ರ ಬರೆಯಲು ನಿರ್ಧರಿಸಲಾಗಿದೆ ಎಂದು ಎಎಬಿ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ ತಿಳಿಸಿದ್ದಾರೆ.