Transgender persons
Transgender persons 
ಸುದ್ದಿಗಳು

ಸರ್ಕಾರಿ ಸೇವೆಯಲ್ಲಿ ತೃತೀಯ ಲಿಂಗಿಗಳಿಗೆ ಸಮತಲ ಮೀಸಲಾತಿ ಕಲ್ಪಿಸುವ ಕುರಿತು ಪರಿಶೀಲಿಸಿ: ಕರ್ನಾಟಕ ಹೈಕೋರ್ಟ್‌

Bar & Bench

ಸರ್ಕಾರಿ ಸೇವೆಯಲ್ಲಿ ತೃತೀಯ ಲಿಂಗಿಗಳಿಗೆ ಹೇಗೆ ಮೀಸಲಾತಿ ಕಲ್ಪಿಸಬಹುದು ಎಂಬುದನ್ನು ಪರಿಶೀಲಿಸುವಂತೆ ಸೋಮವಾರ ಕರ್ನಾಟಕ ಹೈಕೋರ್ಟ್‌ ರಾಜ್ಯ ಸರ್ಕಾರಕ್ಕೆ ಮೌಖಿಕವಾಗಿ ಸೂಚಿಸಿದೆ.

“ಸಂವಿಧಾನದ 338ಬಿ ವಿಧಿಯಡಿ ನಮೂದಿಸಲಾಗಿರುವಂತೆ ಸಾಮಾಜಿಕವಾಗಿ ಹಿಂದುಳಿದ ವರ್ಗಗಳ ಅಡಿಯಲ್ಲಿ ತೃತೀಯ ಲಿಂಗಿಗಳಿಗೆ ಮೀಸಲಾತಿ ಕಲ್ಪಿಸುವಂತೆ ನಾವು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬಹುದೇ?” ಎಂದು ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ಮತ್ತು ಎಸ್‌ ಎಸ್‌ ಮಗದುಮ್‌ ಅವರಿದ್ದ ವಿಭಾಗೀಯ ಪೀಠ ಹೇಳಿದೆ.

ಪೊಲೀಸ್ ಕಾನ್‌ಸ್ಟೆಬಲ್ ನೇಮಕಾತಿಗೆ ಸಂಬಂಧಿಸಿದ ಅಧಿಸೂಚನೆಯಲ್ಲಿ ಮಹಿಳೆಯರು ಮತ್ತು ಪುರುಷರಿಗೆ ವಿಭಾಗ ಕಲ್ಪಿಸಿರುವಂತೆ ತೃತೀಯ ಲಿಂಗಿಗಳಿಗೆ ಅವಕಾಶ ಮಾಡಿಕೊಟ್ಟಿಲ್ಲ ಎಂದು ರಾಜ್ಯ ಸರ್ಕಾರದ ನಿರ್ದಾರ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ನಡೆಸಿತು (ಸಂಗಮ ವರ್ಸಸ್‌ ರಾಜ್ಯ ಸರ್ಕಾರ).

ಕೇಂದ್ರ ಸರ್ಕಾರ ಮತ್ತು ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗವನ್ನು ಪ್ರಕರಣದಲ್ಲಿ ಪ್ರತಿವಾದಿಗಳನ್ನಾಗಿಸುವಂತೆ ಅರ್ಜಿದಾರರ ಪರ ವಕೀಲ ತರ್ಜಾನಿ ದೇಸಾಯಿ ಅವರಿಗೆ ಪೀಠವು ಸೂಚಿಸಿದೆ.

“ಎನ್‌ಎಎಲ್‌ಎಸ್‌ಎ ವರ್ಸಸ್‌ ಭಾರತ ಸರ್ಕಾರದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ರೂಪಿಸಿರುವ ಕಾನೂನು ಪರಿಗಣಿಸಿ, ಉದ್ಯೋಗದ ವಿಚಾರಕ್ಕೆ ಸಂಬಂಧಿಸಿದಂತೆ ತೃತೀಯ ಲಿಂಗಿಗಳಿಗೆ ಪರಿಹಾರ ಒದಗಿಸಬೇಕಿದೆ. ಇದರ ಜೊತೆಗೆ ಸಂವಿಧಾನದ 338ಬಿ ವಿಧಿಯ ಅನ್ವಯ ಭಾರತ ಸರ್ಕಾರ ಮತ್ತು ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗಗಳನ್ನು ಪ್ರಕರಣದಲ್ಲಿ 4 ಮತ್ತು 5ನೇ ಪ್ರತಿವಾದಿಗಳನ್ನಾಗಿಸುವಂತೆ” ಅರ್ಜಿದಾರರ ಪರ ವಕೀಲರಿಗೆ ಪೀಠವು ಆದೇಶಿಸಿದೆ.

ಒಬಿಸಿ ವಿಭಾಗದಲ್ಲಿ ತೃತೀಯ ಲಿಂಗಿಗಳಿಗೆ ನೀಡಲಾಗುವ ಮೀಸಲಾತಿಯು ಶೇ. 50ರ ಪ್ರಮಾಣವನ್ನು ಮೀರಬಹುದೇ? ತೃತೀಯ ಲಿಂಗಿಗಳಿಗೆ ಮೀಸಲಾತಿ ಕಲ್ಪಿಸುವುದು ಹೇಗೆ ಎಂದು ವಿಚಾರಣೆಯ ಸಂದರ್ಭದಲ್ಲಿ ಪೀಠವು ಸರ್ಕಾರವನ್ನು ಪ್ರಶ್ನಿಸಿತು.

“ಒಬಿಸಿ ವಿಭಾಗದ ಅಡಿ ತೃತೀಯ ಲಿಂಗಿಗಳಿಗೆ ಮೀಸಲಾತಿ ಕಲ್ಪಿಸಬಹುದೇ? ಅದನ್ನೇ ನಾವು ಇಲ್ಲಿ ಪ್ರಶ್ನಿಸುತ್ತಿರುವುದು” ಎಂದು ಹಿರಿಯ ವಕೀಲ ಜಯಂತ್‌ ಕೊಠಾರಿ ವಾದಿಸಿದರು.

2018ರಲ್ಲಿ ಸಂವಿಧಾನಕ್ಕೆ 102ನೇ ತಿದ್ದುಪಡಿ ಮಾಡುವ ಮೂಲಕ ಅದನ್ನು ಜಾರಿಗೊಳಿಸಲಾಗಿದ್ದು, ಸಂವಿಧಾನದ 338ಬಿ ವಿಧಿಯ ಅಡಿ ಸಾಂವಿಧಾನಿಕ ಚೌಕಟ್ಟಿನ ಕುರಿತು ಕೊಠಾರಿ ಪೀಠಕ್ಕೆ ವಿವರಿಸಿದರು. ವಾದ-ಪ್ರತಿವಾದ ಆಲಿಸಿದ ಪೀಠವು ವಿಚಾರಣೆಯನ್ನು ಫೆಬ್ರುವರಿ 4ಕ್ಕೆ ಮುಂದೂಡಿತು.

ಸರ್ಕಾರಿ ಉದ್ಯೋಗದಲ್ಲಿ ತೃತೀಯ ಲಿಂಗಿಗಳಿಗೆ ಸಮತಲ ಮೀಸಲಾತಿ ಕಲ್ಪಿಸುವಂತೆ ಕೋರಿ ಜೀವ ಟ್ರಸ್ಟ್‌ ಸಲ್ಲಿಸಿದ್ದ ಮಧ್ಯಪ್ರವೇಶ ಅರ್ಜಿಗೆ ಸಂಬಂಧಿಸಿದಂತೆ ಕಳೆದ ನವೆಂಬರ್‌ನಲ್ಲಿ ಕರ್ನಾಟಕ ಹೈಕೋರ್ಟ್‌, ರಾಜ್ಯ ಸರ್ಕಾರಕ್ಕೆ ಪ್ರತಿಕ್ರಿಯೆ ಸಲ್ಲಿಸುವಂತೆ ಸೂಚಿಸಿತ್ತು.