KPCC President B K Hariprasad & HC 
ಸುದ್ದಿಗಳು

ಪಿಎಸ್ಐ ನೇಮಕಾತಿ ಅಕ್ರಮ ಖಂಡಿಸಿ ಪ್ರತಿಭಟನೆ: ಬಿ ಕೆ ಹರಿಪ್ರಸಾದ್‌ ವಿರುದ್ಧದ ಪ್ರರಕಣ ರದ್ದುಪಡಿಸಿದ ಹೈಕೋರ್ಟ್‌

ಭಾರತೀಯ ದಂಡ ಸಂಹಿತೆಸೆಕ್ಷನ್ 188 ಹಾಗೂ ಪೊಲೀಸ್ ಕಾಯಿದೆಯ ಸೆಕ್ಷನ್ 103ರಡಿ ಅಡಿ ಹರಿಪ್ರಸಾದ್‌ ಮತ್ತಿತರರ ವಿರುದ್ಧ ಪ್ರಕರಣ ದಾಖಲಾಗಿತ್ತು.

Bar & Bench

ಪಿಎಸ್ಐ ನೇಮಕಾತಿ ಅಕ್ರಮ ಖಂಡಿಸಿ 2022ರಲ್ಲಿ ಅಂದಿನ ಉನ್ನತ ಶಿಕ್ಷಣ ಸಚಿವ ಡಾ. ಸಿ ಎನ್ ಅಶ್ವತ್ಥನಾರಾಯಣ ಅವರ ಮನೆ ಮುಂದೆ ಪ್ರತಿಭಟನೆ ನಡೆಸಿದ ಸಂಬಂಧ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ಬಿ ಕೆ ಹರಿಪ್ರಸಾದ್ ವಿರುದ್ಧದ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ಶುಕ್ರವಾರ ರದ್ದುಪಡಿಸಿದೆ.

ಪ್ರಕರಣ ಸಂಬಂಧ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ದಾಖಲಾದ ದೂರು ಆಧರಿಸಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣಾ ಪ್ರಕ್ರಿಯೆ ರದ್ದುಪಡಿಸುವಂತೆ ಕೋರಿ ಬಿ ಕೆ ಹರಿಪ್ರಸಾದ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಅರ್ಜಿ ಗಮನಿಸಿದ ಪೀಠವು ಅರ್ಜಿದಾರರ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 188 ಹಾಗೂ ಪೊಲೀಸ್ ಕಾಯಿದೆಯ ಸೆಕ್ಷನ್ 103ರಡಿ ದೂರು ದಾಖಲಾಗಿ, ಅದರ ವಿಚಾರಣೆ ನಡೆಯುತ್ತಿದೆ. ಇಂತಹದ್ದೇ ಪ್ರಕರಣ ಸಂಬಂಧ ಹೈಕೋರ್ಟ್ ಹತ್ತಾರು ಪ್ರಕರಣಗಳಲ್ಲಿ ಆದೇಶ ನೀಡಿದೆ. ಈ ಪ್ರಕರಣಕ್ಕೂ ಅದು ಅನ್ವಯವಾಗಲಿದೆ ಎಂದು ಹೇಳಿ ಅರ್ಜಿಯನ್ನು ಮಾನ್ಯ ಮಾಡಿ ಪ್ರಕರಣವನ್ನು ರದ್ದುಪಡಿಸಿ ಆದೇಶಿಸಿತು. ಬಿ ಕೆ ಹರಿಪ್ರಸಾದ್ ಪರ ವಕೀಲ ಸೂರ್ಯ ಮುಕುಂದರಾಜ್ ವಕಾಲತ್ತು ವಹಿಸಿದ್ದರು.