ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಜಾರಿಗೆ ವಿರೋಧಿಸಿ ಪ್ರತಿಭಟನೆ ನಡೆಸಿದ್ದ ಸಂಬಂಧ ಎಂಟು ಮಂದಿಯ ವಿರುದ್ಧ ದಾಖಲಾಗಿದ್ದ ದೊಂಬಿ ಮತ್ತು ಅಕ್ರಮವಾಗಿ ಗುಂಪುಗೂಡಿದ್ದ ಆರೋಪ ಒಳಗೊಂಡ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ಈಚೆಗೆ ರದ್ದುಪಡಿಸಿದೆ.
ಮಂಗಳೂರಿನ ಅತಾವುಲ್ಲಾ ಜೋಕಟ್ಟೆ ಸೇರಿ ಎಂಟು ಮಂದಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಮೊಹಮ್ಮದ್ ನವಾಜ್ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ.
ನ್ಯಾಯಾಲಯವು ತನ್ನ ಆದೇಶದಲ್ಲಿ "ದೂರುದಾರ ಬೆಳ್ತಂಗಡಿಯ ಸುಧಾಕರ್ ಗೌಡಗೆ ಆರೋಪಿಗಳು ಅಪರಿಚಿತರಾಗಿದ್ದಾರೆ ಎಂಬುದು ಒಪ್ಪಿತ ವಿಚಾರ. ಗುಂಪಿನಲ್ಲಿದ್ದು ಯಾರೆಲ್ಲಾ ಕಲ್ಲು ತೂರಾಟ ನಡೆಸಿದ್ದಾರೆ ಇತ್ಯಾದಿ ವಿಚಾರವನ್ನು ಅವರು ವಿವರಿಸಿಲ್ಲ. 50-100 ಮಂದಿಯ ವಿರುದ್ಧ ಎಫ್‌ಐಆರ್ ದಾಖಲಾಗಿದ್ದರೂ 16 ಆರೋಪಿಗಳ ವಿರುದ್ಧ ಮಾತ್ರ ಆರೋಪ ಪಟ್ಟಿ ಸಲ್ಲಿಸಲಾಗಿದೆ. ಗುಂಪಿನಲ್ಲಿ ಆರೋಪಿಗಳನ್ನು ಪತ್ತೆ ಹಚ್ಚುವುದು ಅನುಮಾನವಾಗಿದ್ದು, ಇತರರ ವಿರುದ್ಧ ಯಾಕೆ ಆರೋಪ ಪಟ್ಟಿ ಸಲ್ಲಿಸಲಾಗಿಲ್ಲ ಎಂಬುದಕ್ಕೆ ತನಿಖಾಧಿಕಾರಿ ಕಾರಣಗಳನ್ನು ನೀಡಿಲ್ಲ” ಎಂದು ಹೇಳಿದೆ.
ಅರ್ಜಿದಾರರ ಪರ ವಕೀಲ ಬಿ ಲತೀಫ್ ಅವರು “ಐಪಿಸಿ ಸೆಕ್ಷನ್ 141ರ ಅಡಿ ಉಲ್ಲೇಖಿಸಿರುವ ಉದ್ದೇಶಗಳಡಿ ಬರುವ ಸಮಾನ ಉದ್ದೇಶ ವಿಚಾರವನ್ನು ಬಹಿರಂಗಪಡಿಸದ ಹೊರತು ಕಾನೂನುಬಾಹಿರವಾಗಿ ಗುಂಪುಗೂಡಿದ್ದ ಕಡೆ ಇದ್ದರು ಎಂದ ಮಾತ್ರಕ್ಕೆ ಅವರು ಹೊಣೆಗಾರರು ಎನ್ನಲಾಗದು. ಕಾನೂನುಬಾಹಿರ ಗುಂಪು ಸೇರುವಿಕೆಯ ಹಿಂದಿನ ಸಾಮಾನ್ಯ ಉದ್ದೇಶವನ್ನು ಸಾಬೀತುಪಡಿಸದಿದ್ದರೆ ಐಪಿಸಿ ಸೆಕ್ಷನ್ 143 ಅಥವಾ 149ರ ಅಡಿ ಆರೋಪಿಗಳನ್ನು ಮೂಲ ಅಪರಾಧದಲ್ಲಿ ದೋಷಿಗಳು ಎಂದು ಘೋಷಿಸಲಾಗದು” ಎಂದು ವಾದಿಸಿದ್ದರು.
ಪ್ರಕರಣದ ಹಿನ್ನೆಲೆ: 2019ರ ಡಿಸೆಂಬರ್ 19ರಂದು ಮಂಗಳೂರು ನಗರದ ಕಂಕನಾಡಿ ಹೈಲ್ಯಾಂಡ್ ಆಸ್ಪತ್ರೆಯ ಬಳಿ ಬಸ್ ಚಲಾಯಿಸುತ್ತಿದ್ದಾಗ ಸುಮಾರು 50-100 ಮಂದಿ ರಸ್ತೆ ತಡೆ ನಡೆಸಿದ್ದರು. ಈ ವೇಳೆ ನಿರ್ವಾಹಕನನ್ನು ಅವಾಚ್ಯ ಶಬ್ದಗಳಲ್ಲಿ ನಿಂದಿಸಿದ್ದರು. ಬಸ್ಸಿನ ಮೇಲೆ ಕಲ್ಲು ಮತ್ತು ಸೋಡಾ ಬಾಟಲಿ ಇತ್ಯಾದಿಗಳನ್ನು ತೂರಿದ್ದರು. ಆ ಮೂಲಕ ರೂ. 60 ಸಾವಿರ ಮೌಲ್ಯದಷ್ಟು ನಷ್ಟ ಮಾಡಿದ್ದಾರೆ ಎಂದು ಸುಧಾಕರ್ ಗೌಡ ಎಂಬುವರು ದೂರು ದಾಖಲಿಸಿದ್ದರು.
ಇದನ್ನು ಆಧರಿಸಿ ಮಂಗಳೂರು ದಕ್ಷಿಣ ಪೊಲೀಸರು, ಅರ್ಜಿದಾರ/ ಆರೋಪಿಗಳ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ್ದರು. ಆರೋಪಿಗಳು ಸಿಎಎ ಮತ್ತು ಎನ್‌ಆರ್‌ಸಿ ವಿರೋಧಿಸಿ ಪ್ರತಿಭಟನೆ ನಡೆಸಿದ್ದರು. ಅನುಮತಿ ಇಲ್ಲದೆಯೂ ಕಾನೂನುಬಾಹಿರವಾಗಿ ಸಭೆ ನಡೆಸಿದ್ದು, ನಿರ್ಬಂಧದ ನಡುವೆಯೂ ಸಾರ್ವಜನಿಕ ಆಸ್ತಿಗಳ ಮೇಲೆ ಕಲ್ಲು ಮತ್ತು ಸೋಡಾ ಬಾಟಲಿ ತೂರಿದ್ದರು ಎಂದು ಐಪಿಸಿ 143(ಅಕ್ರಮ ಸಭೆ), 147 (ಗಲಭೆ), 148 (ಮಾರಕಾಸ್ತ್ರಗಳನ್ನು ಹಿಡಿದು ದೊಂಬಿ ಎಬ್ಬಿಸುವುದು), 341 (ಅಕ್ರಮವಾಗಿ ನಿರ್ಬಂಧ), 268 (ಸಾರ್ವಜನಿಕರಿಗೆ ಕಿರುಕುಳ), 290 (ಸಾರ್ವಜನಿಕರಿಗೆ ಕಿರಿಕಿರಿ), 427 (ಕಿಡಿಗೇಡಿತನ), 336 (ವ್ಯಕ್ತಿಗತ ಸುರಕ್ಷಿತಗೆ ಅಪಾಯ) ಮತ್ತು 149 (ಸಮಾನ ಉದ್ದೇಶ), ಕರ್ನಾಟಕ ಆಸ್ತಿ ಹಾನಿ ಮತ್ತು ನಷ್ಟ ತಡೆ 1981ರ ಸೆಕ್ಷನ್ 2(ಎ) ಸಂಬಂಧ ಆರೋಪ ಪಟ್ಟಿ ಸಲ್ಲಿಸಿದ್ದರು.