ಕಲ್ಕತ್ತಾ ಹೈಕೋರ್ಟ್ ಮತ್ತು ಪಶ್ಚಿಮ ಬಂಗಾಳ 
ಸುದ್ದಿಗಳು

ಬಂಗಾಳಿ ತಿನಿಸುಗಳಂತೆಯೇ ಪ್ರತಿಭಟನೆಗಳು ಅಲ್ಲಿನ ಸಂಸ್ಕೃತಿಯ ಭಾಗ: ಕಲ್ಕತ್ತಾ ಹೈಕೋರ್ಟ್

ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಹೌರಾದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲು ರಾಜ್ಯ ಸರ್ಕಾರಿ ನೌಕರರಿಗೆ ಅನುಮತಿ ನೀಡಿದ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

Bar & Bench

ಮಿಶ್ತಿ ದೋಯಿ, ಆಲೂ ಪೋಸ್ತೊ ಹಾಗೂ ಲುಚಿ ರೀತಿಯ ಬಂಗಾಳಿ ತಿನಿಸುಗಳಂತೆಯೇ ಸಮಾವೇಶ ಮತ್ತು ಪ್ರತಿಭಟನೆಗಳು ಅಲ್ಲಿನ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿವೆ ಎಂದು ಗುರುವಾರ ತಿಳಿಸಿರುವ ಕಲ್ಕತ್ತಾ ಹೈಕೋರ್ಟ್ ಪಶ್ಚಿಮ ಬಂಗಾಳ ರಾಜ್ಯ ಸರ್ಕಾರಿ ನೌಕರರ ಸಂಘಗಳು ಹೌರಾದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲು ಅನುಮತಿ ನೀಡಿದೆ. (ಪಶ್ಚಿಮ ಬಂಗಾಳ ರಾಜ್ಯ ಮತ್ತು ರಾಜ್ಯ ಸಮನ್ವಯ ಸಮಿತಿ)

ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಪ್ರತಿಭಟನೆ ನಡೆಸಲು ರಾಜ್ಯ ಸರ್ಕಾರಿ ನೌಕರರಿಗೆ ಮುಖ್ಯ ನ್ಯಾಯಮೂರ್ತಿ ಟಿ.ಎಸ್.ಶಿವಜ್ಞಾನಂ ಮತ್ತು ನ್ಯಾಯಮೂರ್ತಿ ಹಿರಣ್ಮಯ್ ಭಟ್ಟಾಚಾರ್ಯ ಅವರಿದ್ದ ವಿಭಾಗೀಯ ಪೀಠ ಅನುಮತಿ ನೀಡಿತು.

"ನಿಸ್ಸಂದೇಹವಾಗಿ ಮಿಶ್ತಿ ದೋಯಿ, ಆಲೂ ಪೋಸ್ತೊ, ಲುಚಿ (ತಿನಿಸುಗಳು) ಬಂಗಾಳಿ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿರುವಂತೆ, ಸಾರ್ವಜನಿಕ ಸಮಾವೇಶ ಪ್ರತಿಭಟನೆ ಕೂಡ ಈ ಸಂಸ್ಕೃತಿಯ ಭಾಗವೆಂದು ತೋರುತ್ತದೆ. ನಮ್ಮ ಅಭಿಪ್ರಾಯದಲ್ಲಿ, ಎಲ್ಲಾ ಬಂಗಾಳಿಗಳು ಹುಟ್ಟಿನಿಂದ ವಾಗ್ಮಿಗಳು. ರಾಜ್ಯ (ಅಂತಹ) ಸಂಸ್ಕೃತಿ ಮತ್ತು ಪರಂಪರೆಯಿಂದ ತುಂಬಿದೆ" ಎಂದು ಪೀಠ ಅಭಿಪ್ರಾಯಪಟ್ಟಿದೆ.  ಪ್ರತಿಭಟನೆ ನಡೆಸಲು ಸರ್ಕಾರಿ ನೌಕರರಿಗೆ ಕೆಲವು ಷರತ್ತುಗಳನ್ನು ವಿಧಿಸಿದ ನ್ಯಾಯಾಲಯ ಪ್ರತಿಭಟನಾಕಾರರು ನಗರದಲ್ಲಿ ಕಾನೂನು ಸುವ್ಯವಸ್ಥೆಗೆ ಭಂಗ ತರುತ್ತಾರೆ ಎಂಬ ರಾಜ್ಯ ಸರ್ಕಾರದ ಆತಂಕವನ್ನು ತಿರಸ್ಕರಿಸಿತು.  

"ಇವರು ಸರ್ಕಾರಿ ನೌಕರರಾಗಿದ್ದು ರಾಜಕೀಯ ಪಕ್ಷದ ಕಾರ್ಯಕರ್ತರಲ್ಲ. ಈ ಒಕ್ಕೂಟದ ಎಲ್ಲಾ ಸದಸ್ಯರು ಸಮಾಜಕ್ಕೆ ಮತ್ತು ಪ್ರಭುತ್ವಕ್ಕೆ ಕರ್ತವ್ಯನಿಷ್ಠರಾಗಿರುತ್ತಾರೆ. ಆದ್ದರಿಂದ ಸರ್ಕಾರಿ ನೌಕರರಿಗೆ ತಕ್ಕಂತೆ ಅವರ ವರ್ತನೆ ಇರುತ್ತದೆ ಎಂಬುದರಲ್ಲಿ ನಮಗೆ ಯಾವುದೇ ಸಂದೇಹವಿಲ್ಲ" ಎಂದು ಮುಖ್ಯ ನ್ಯಾಯಮೂರ್ತಿ ಶಿವಜ್ಞಾನಂ ತಿಳಿಸಿದರು.

ಬಂಗಾಳದಲ್ಲಿ ಈಗ ಸಾಮಾನ್ಯವಾಗಿರುವ ಇಂತಹ ಪ್ರತಿಭಟನೆ ಮತ್ತು ಮೆರವಣಿಗೆಗಳು ಸಾರ್ವಜನಿಕರಿಗೆ ಗಂಭೀರ ಅನಾನುಕೂಲತೆಯನ್ನುಂಟುಮಾಡುತ್ತವೆ ಎಂಬ ಅಂಶವನ್ನು ಸಂಬಂಧಪಟ್ಟವರು ಗಂಭೀರವಾಗಿ ಪರಿಗಣಿಸಬೇಕು. ರಾಜಕೀಯ ಅಥವಾ ಇತರೆ ಸಮಾವೇಶಗಳ ಸಂಘಟಕರು ತಮ್ಮ ಅಹವಾಲುಗಳನ್ನು ಸಲ್ಲಿಸಲು ಪರ್ಯಾಯ ಮಾರ್ಗಗಳನ್ನು ರೂಪಿಸುವುದಕ್ಕೆ ಇದು ಸಕಾಲ. ಏಕೆಂದರೆ ಕಿರಿದಾದ ರಸ್ತೆಗಳಲ್ಲಿ ಇಂತಹ ಪ್ರತಿಭಟನಾ ಮೆರವಣಿಗೆಗಳು ಸಾರ್ವಜನಿಕರಿಗೆ ತುಂಬಾ ಅನಾನುಕೂಲತೆ ಉಂಟು ಮಾಡುತ್ತವೆ" ಎಂದು ನ್ಯಾಯಾಲಯ ನುಡಿಯಿತು.

ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನೆ ನಡೆಸಲು ಕೇಂದ್ರ ಸರ್ಕಾರಕ್ಕೆ ಅನುಮತಿ ನೀಡಿದ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಅಂತರ್ ನ್ಯಾಯಾಲಯ ಮೇಲ್ಮನವಿಯನ್ನು ಕೂಡ ಇದೇ ವೇಳೆ ವಿಚಾರಣೆ ನಡೆಸಿದ ವಿಭಾಗೀಯ ಪೀಠ ಅದನ್ನು ವಜಾಗೊಳಿಸಿತು.