Asianet News and Kerala High Court
Asianet News and Kerala High Court 
ಸುದ್ದಿಗಳು

ಏಷ್ಯಾನೆಟ್‌ ನ್ಯೂಸ್‌ ಚಾನೆಲ್‌ ಬಯಸಿದರೆ ಪೊಲೀಸ್‌ ಭದ್ರತೆ ಕಲ್ಪಿಸಿ: ಕೇರಳ ಹೈಕೋರ್ಟ್‌

Bar & Bench

ಭಾರತೀಯ ವಿದ್ಯಾರ್ಥಿ ಸಂಘಟನೆ (ಎಸ್‌ಎಫ್‌ಐ) ಕಾರ್ಯಕರ್ತರು ಸುಳ್ಳು ಸುದ್ದಿ ಪ್ರಸಾರ ಮಾಡಲಾಗಿದೆ ಎಂದು ಆರೋಪಿಸಿ ಈಚೆಗೆ ಮಲಯಾಳಂ ಸುದ್ದಿ ವಾಹಿನಿ ಏಷ್ಯಾನೆಟ್‌ ವಿರುದ್ಧ ಪ್ರತಿಭಟನೆ ನಡೆಸಿರುವ ಹಿನ್ನೆಲೆಯಲ್ಲಿ ಸುದ್ದಿ ವಾಹಿನಿ ಬಯಸಿದರೆ ಪೊಲೀಸ್‌ ಭದ್ರತೆ ಕಲ್ಪಿಸುವಂತೆ ರಾಜ್ಯ ಪೊಲೀಸರಿಗೆ ಕೇರಳ ಹೈಕೋರ್ಟ್‌ ಬುಧವಾರ ನಿರ್ದೇಶಿಸಿದೆ [ಏಷ್ಯಾನೆಟ್‌ ನ್ಯೂಸ್‌ ವರ್ಸಸ್‌ ರಾಜ್ಯ ಪೊಲೀಸ್‌ ಮುಖ್ಯಸ್ಥರು].

ಸುಳ್ಳು ಸುದ್ದಿ ಪ್ರಕಟಿಸಲಾಗಿದೆ ಎಂಬ ಆರೋಪವು ರಾಜಕೀಯ ರೂಪ ಪಡೆದುಕೊಂಡಿದ್ದು, ಚಾನೆಲ್‌ ಕಚೇರಿ ಮುಂದೆ ಹೆಚ್ಚಿನ ರೀತಿಯಲ್ಲಿ ಪ್ರತಿಭಟನೆ ಮತ್ತು ಗಲಭೆ ನಡೆಯಬಹುದು ಎಂದು ನ್ಯಾಯಮೂರ್ತಿ ಎನ್‌ ನಗರೇಶ್‌ ಅವರ ನೇತೃತ್ವದ ಏಕಸದಸ್ಯ ಪೀಠವು ಹೇಳಿದೆ.

“ಘಟನೆಗೆ ರಾಜಕೀಯ ಬಣ್ಣ ಪಡೆದುಕೊಂಡಿದ್ದು, ಅರ್ಜಿದಾರ ಸಂಸ್ಥೆಯ ವಿರುದ್ಧ ಪ್ರತಿಭಟನೆಗಳು ನಡೆದಿದ್ದು, ಮುಂದೆಯೂ ಪ್ರತಿಭಟನೆ ನಡೆಯಲಿದ್ದು, ಅದು ಗಂಭೀರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಇದೆ. ಅಂಥ ಸ್ಥಿತಿ ನಿರ್ಮಾಣವಾದರೆ ಅರ್ಜಿದಾರ ಸಂಸ್ಥೆಯ ಕೊಚ್ಚಿ, ಕೋರಿಕ್ಕೋಡ್‌, ಕಣ್ಣೂರು ಮತ್ತು ತಿರುವನಂತಪುರದಲ್ಲಿನ ಕಚೇರಿಗಳಿಗೆ ಸೂಕ್ತ ಭದ್ರತೆ ನೀಡಬೇಕು” ಎಂದು ಆದೇಶದಲ್ಲಿ ಹೇಳಲಾಗಿದೆ.

ಎಸ್‌ಎಫ್‌ಐ ಕಾರ್ಯಕರ್ತರು ಎರ್ನಾಕುಲಂನ ಏಷ್ಯಾನೆಟ್‌ ಕಚೇರಿಗೆ ನುಗ್ಗಿ ಪ್ರತಿಭಟನೆಯ ಭಾಗವಾಗಿ ಘೋಷಣೆ ಕೂಗಿದ ಹಿನ್ನೆಲೆಯಲ್ಲಿ ಪೊಲೀಸ್‌ ಭದ್ರತೆ ಕೋರಿ ವಾಹಿನಿಯು ಅರ್ಜಿ ಸಲ್ಲಿಸಿತ್ತು.  ರಾಜ್ಯದಲ್ಲಿ ಮಾದಕ ದ್ರವ್ಯ ದುರ್ಬಳಕೆ ಮತ್ತು ಸಂತ್ರಸ್ತರಿಗೆ ಸಂಬಂಧಿಸಿದ ʼಮಾದಕ ದ್ರವ್ಯ ಎಂಬ ಹೊಲಸು ಉದ್ಯಮʼ ಎಂಬ ಹೆಸರಿನ ಕಾರ್ಯಕ್ರಮ ಪ್ರಸಾರ ಮಾಡಿದ ಬಳಿಕ ಏಷ್ಯಾನೆಟ್‌ ಪ್ರತಿಭಟನೆ ಎದುರಿಸುತ್ತಿದೆ.

ಕಾರ್ಯಕ್ರಮದಲ್ಲಿ ಮಾದಕ ವಸ್ತು ಮಾರಾಟ ಜಾಲಕ್ಕೆ ಅಪ್ರಾಪ್ತ ಬಾಲಕಿ ಸಿಲುಕಿದ್ದನ್ನು ತೋರಿಸಲಾಗಿತ್ತು. ಇದರ ಬೆನ್ನಿಗೇ ಆಡಳಿತ ರೂಢ ಸಿಪಿಐ (ಎಂ) ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಬಳಕೆ ಮಾಡಿದ ವಿಡಿಯೊ ಮತ್ತು ಚಿತ್ರಗಳು ಬೇರೆ ಕಾರ್ಯಕ್ರಮದ್ದಾಗಿವೆ ಎಂದು ಆರೋಪಿಸಿದ್ದರು. ಆನಂತರ ಎಸ್‌ಎಫ್‌ಐ ಕಾರ್ಯಕರ್ತರು ಏಷ್ಯಾನೆಟ್‌ ಕಚೇರಿಗೆ ನುಗ್ಗಿ ಪ್ರತಭಟನೆ ನಡೆಸಿದ್ದರು.

ಈ ಮಧ್ಯೆ, ಸಿಪಿಐ (ಎಂ) ಶಾಸಕ ಪಿ ವಿ ಅನ್ವರ್‌ ಅವರು ಕಾರ್ಯಕ್ರಮದ ಕುರಿತು ಪ್ರಕರಣ ದಾಖಲಿಸಿದ್ದಾರೆ. ಇದರ ಬೆನ್ನಿಗೇ ಮಾರ್ಚ್‌ 5ರಂದು ಪೊಲೀಸರು ಏಷ್ಯಾನೆಟ್‌ನ ಕೋರಿಕ್ಕೋಡ್‌ ಕಚೇರಿಯ ಮೇಲೆ ದಾಳಿ ನಡೆಸಿದ್ದರು. ಇದನ್ನು ವಿರೋಧ ಪಕ್ಷಗಳು ಮತ್ತು ಪತ್ರಕರ್ತರು ಖಂಡಿಸಿದ್ದರು.