Mohammed Faizal and Supreme CourtFacebook 
ಸುದ್ದಿಗಳು

[ಶಾಸಕರ ಅನರ್ಹತೆ] ಕಾಯಿದೆ ತೀವ್ರ ಪರಿಣಾಮದಿಂದ ಕೂಡಿದ್ದು ನ್ಯಾಯಾಲಯಗಳು ಜಾಗ್ರತೆ ವಹಿಸಬೇಕು: ಸುಪ್ರೀಂ ಕೋರ್ಟ್‌

ಅಪರಾಧದ ತೀರ್ಪು ಬಂದ ಬಳಿಕ ಚುನಾಯಿತ ಪ್ರತಿನಿಧಿಗಳನ್ನು ತನ್ನಿಂತಾನೇ ಅನರ್ಹಗೊಳಿಸಲು ಅವಕಾಶ ನೀಡುವ ಜನಪ್ರತಿನಿಧಿ ಕಾಯಿದೆಯ ಸೆಕ್ಷನ್ 8(3) ಅತಿರೇಕದ್ದಾಗಿದೆ ಎಂದಿದೆ ಪೀಠ.

Bar & Bench

ಶಿಕ್ಷೆ ವಿಧಿಸಲ್ಪಟ್ಟ ಸಂಸದರು ತನ್ನಿಂತಾನೇ ಅನರ್ಹಗೊಳ್ಳುವುದು ತೀವ್ರ ಪರಿಣಾಮದ ಕ್ರಮವಾಗಿದ್ದು ಜನ ಪ್ರತಿನಿಧಿಗಳಿಗೆ ಶಿಕ್ಷೆ ವಿಧಿಸುವಾಗ ನ್ಯಾಯಾಲಯಗಳು ಜಾಗ್ರತೆ ವಹಿಸಬೇಕು ಎಂದು ಸುಪ್ರೀಂ ಕೋರ್ಟ್‌ ಬುಧವಾರ ಮೌಖಿಕವಾಗಿ ಹೇಳಿದೆ.

ತಪ್ಪಿತಸ್ಥರೆಂದು ಸಾಬೀತಾಗಿ ಎರಡು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಜೈಲು ಶಿಕ್ಷೆಗೊಳಗಾದ ಕೂಡಲೇ ಜನಪ್ರತಿನಿಧಿಗಳನ್ನು ತನ್ನಿಂತಾನೇ ಅನರ್ಹಗೊಳಿಸಲು ಜನಪ್ರತಿನಿಧಿ ಕಾಯಿದೆಯ ಸೆಕ್ಷನ್ 8(3) ಅನುವು ಮಾಡಿಕೊಡುತ್ತದೆ ಎಂಬ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಕೆ ಎಂ ನಟರಾಜ್ ಅವರ ಮಾತಿಗೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳಾದ ಕೆ ಎಂ ಜೋಸೆಫ್ ಮತ್ತು ಬಿ ವಿ ನಾಗರತ್ನ ಅವರಿದ್ದ ಪೀಠ ಈ ಅಭಿಪ್ರಾಯ ತಿಳಿಸಿತು.

"ಆದರೆ ಈ ಸೆಕ್ಷನ್ ತೀವ್ರ ಪರಿಣಾಮದಿಂದ ಕೂಡಿದೆ. ಇದಕ್ಕಾಗಿಯೇ ಶಿಕ್ಷೆಯ ಬಗ್ಗೆ ಎಚ್ಚರಿಕೆಯಿಂದ ಯೋಚಿಸಬೇಕು" ಎಂದು ನ್ಯಾಯಮೂರ್ತಿ ಜೋಸೆಫ್ ಹೇಳಿದರು.

ಎನ್‌ಸಿಪಿ ನಾಯಕ ಹಾಗೂ ಲಕ್ಷದ್ವೀಪ ಸಂಸದ ಪಿ ಪಿ ಮೊಹಮ್ಮದ್‌ ಫೈಜಲ್‌ ಅವರಿಗೆ ಸಂಬಂಧಿಸಿದ ಎರಡು ಅರ್ಜಿಗಳ ವಿಚಾರಣೆ ವೇಳೆ ನ್ಯಾಯಾಲಯ ಈ ವಿಚಾರ ಹಂಚಿಕೊಂಡಿತು. ಕೊಲೆ ಯತ್ನ ಪ್ರಕರಣವೊಂದರಲ್ಲಿ ತನ್ನ ವಿರುದ್ಧ ಶಿಕ್ಷೆ ರದ್ದಾಗಿದ್ದರೂ ತಮ್ಮ ಸಂಸತ್‌ ಸದಸ್ಯತ್ವವನ್ನು ಪುನರ್‌ಸ್ಥಾಪಿಸಿಲ್ಲ ಎಂದು ಫೈಜಲ್‌ ಒಂದು ಅರ್ಜಿ ಸಲ್ಲಿಸಿದ್ದರೆ ಲಕ್ಷದ್ವೀಪ ಆಡಳಿತ ಸಲ್ಲಿಸಿದ್ದ ಇನ್ನೊಂದು ಅರ್ಜಿಯಲ್ಲಿ ಫೈಜಲ್‌ ಅವರ ಅಪರಾಧ ಮತ್ತು ಶಿಕ್ಷೆ ರದ್ದುಪಡಿಸಿದ ಕೇರಳ ಹೈಕೋರ್ಟ್‌ ಆದೇಶಕ್ಕೆ ತಡೆ ನೀಡುವಂತೆ ಕೋರಲಾಗಿತ್ತು.

ಸುಪ್ರೀಂ ಕೋರ್ಟ್‌ ವಿಚಾರಣೆಗೂ ಮುನ್ನವೇ ಲೋಕಸಭಾ ಕಾರ್ಯಾಲಯ ಫೈಝಲ್‌ ಅವರ ಸದಸ್ಯತ್ವ ಮರುಸ್ಥಾಪನೆಗೆ ಸೂಚನೆ ನೀಡಿತ್ತು. ಈ ವಿಚಾರ ತಿಳಿದ ನ್ಯಾಯಾಲಯ ಪ್ರಕರಣವನ್ನು ವಿಲೇವಾರಿ ಮಾಡಿತು. ಆದರೆ ಕೊಲೆ ಯತ್ನದ ಆರೋಪದಡಿಯಲ್ಲಿ ಫೈಜಲ್‌ ಅವರಿಗೆ 10 ವರ್ಷಗಳ ಶಿಕ್ಷೆ ರದ್ದುಪಡಿಸಿ ಕೇರಳ ಹೈಕೋರ್ಟ್ ನೀಡಿದ ಆದೇಶವನ್ನು ಪ್ರಶ್ನಿಸಿ ಲಕ್ಷದ್ವೀಪ ಆಡಳಿತವು ಸಲ್ಲಿಸಿದ ಮೇಲ್ಮನವಿಯನ್ನು ಅದು ವಿಚಾರಣೆಗೆ ಕೈಗೆತ್ತಿಕೊಂಡಿತು. ಇದನ್ನು ಆಲಿಸಲು ಸಿದ್ಧವಾಗಿರುವುದಾಗಿ ನ್ಯಾಯಾಲಯ ಹೇಳಿದಾಗ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಪ್ರಕರಣವನ್ನು ಮುಂದೂಡುವಂತೆ ಕೋರಿದರು. ಹೀಗಾಗಿ ಪೀಠ ಪ್ರಕರಣವನ್ನು ಏ. 24ಕ್ಕೆ ಮುಂದೂಡಿತು.