ಪರಿಶಿಷ್ಟ ಜಾತಿಯ ಸಮುದಾಯಕ್ಕೆ ಸೇರಿದ ಯುವಕನೊಬ್ಬನನ್ನು ಠಾಣೆಗೆ ಎಳೆದೊಯ್ದು ಅಮಾನವೀಯವಾಗಿ ಹಲ್ಲೆ ನಡೆಸಿ, ಮೂತ್ರ ನೆಕ್ಕಿಸಿದ ಪ್ರಕರಣದಲ್ಲಿ ಆರೋಪಿಯಾಗಿರುವ ಮಾಜಿ ಪಿಎಸ್‌ಐ ಕೆ. ಅರ್ಜುನ್ ಹೊರಕೇರಿ ಯಾವುದೇ ಕಾರಣಕ್ಕೂ ನಿರೀಕ್ಷಣಾ ಜಾಮೀನು ಪಡೆಯಲು ಅರ್ಹರಲ್ಲ ಎಂದು ಚಿಕ್ಕಮಗಳೂರಿನ ಮೊದಲನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯಕ್ಕೆ ಪಬ್ಲಿಕ್ ಪ್ರಾಸಿಕ್ಯೂಟರ್ ಶುಕ್ರವಾರ ತಿಳಿಸಿದ್ದಾರೆ.
ಪ್ರಕರಣವೊಂದರ ವಿಚಾರಣೆ ನೆಪದಲ್ಲಿ ಗೋಣಿಬೀಡು ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ತನ್ನ ಬಾಯಿಗೆ ಮೂತ್ರ ಹುಯ್ಯಿಸಿ, ನೆಲದಲ್ಲಿ ಬಿದ್ದಿದ್ದ ಮೂತ್ರದ ಹನಿ ನೆಕ್ಕಿಸಿದ್ದಾರೆ ಎಂದು ಕಿರಗುಂದ ಗ್ರಾಮದ ಯುವಕ ಕೆ ಎಲ್ ಪುನೀತ್ ದೂರು ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿ ಅರ್ಜುನ್ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು.
“ಅರ್ಜಿದಾರ ಆರೋಪಿ (ಅರ್ಜುನ್) ಪಿಎಸ್‌ಐ ಆಗಿದ್ದು ಇವರಿಗೆ ಜಾಮೀನು ನೀಡಿದಲ್ಲಿ ಇಲಾಖೆಯ ಪ್ರಭಾವ ಬೀರುತ್ತಾರೆ. ರಾಜಕೀಯವಾಗಿ ಮತ್ತು ಆರ್ಥಿಕವಾಗಿ ಬಲಾಢ್ಯವಾಗಿರುವ ಹಾಗೂ ಕಾನೂನಿಗೆ ಬೆಲೆ ಕೊಡದ ಇವರು ನಿರೀಕ್ಷಣಾ ಜಾಮೀನು ದುರುಪಯೋಗಪಡಿಸಿಕೊಂಡು ಪ್ರಾಸಿಕ್ಯೂಷನ್ ಪರ ಸಾಕ್ಷ್ಯಾಧಾರಗಳನ್ನು ನಾಶಪಡಿಸಿ ಪ್ರಕರಣಕ್ಕೆ ಧಕ್ಕೆ ಉಂಟು ಮಾಡುವ ಸಾಧ್ಯತೆ ಇರುತ್ತದೆ. ಫಿರ್ಯಾದಿ (ಕಿರಗುಂದ ಗ್ರಾಮದ ಕೆ ಎಲ್ ಪುನೀತ್) ಮತ್ತು ಅವರ ಕುಟುಂಬದ ವಿರುದ್ಧ ಮತ್ತೆ ಇಂತಹುದೇ ಗಂಭೀರ ಸ್ವರೂಪದ ಕೃತ್ಯ ಮುಂದುವರೆಸುವ ಸಾಧ್ಯತೆಗಳಿರುತ್ತವೆ. ಆದ್ದರಿಂದ ಅರ್ಜಿದಾರ ಆರೋಪಿ ಯಾವುದೇ ಕಾರಣಕ್ಕೂ ಜಾಮೀನು ಪಡೆಯಲು ಅರ್ಹರಲ್ಲ" ಎಂದು ಸಿಆರ್‌ಪಿಸಿ ಸೆಕ್ಷನ್ 438ರಡಿ ಸಲ್ಲಿಸಲಾಗಿರುವ ತಕರಾರು ಅರ್ಜಿಯಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್ ಭಾವನ ವಿವರಿಸಿದ್ದಾರೆ.
ನಿರೀಕ್ಷಣಾ ಜಾಮೀನು ನೀಡಬಾರದು ಎಂಬುದಕ್ಕೆ ಉಳಿದ ಕಾರಣಗಳನ್ನು ಅವರು ವಿವರಿಸಿದ್ದಾರೆ. “ಪ್ರಕರಣದಲ್ಲಿ ಫಿರ್ಯಾದಿ ತನಗಾದ ಅನ್ಯಾಯ ಮತ್ತು ಅಮಾನುಷ ಕೃತ್ಯದ ಬಗ್ಗೆ ಫಿರ್ಯಾದಿ ನುಡಿದಿರುವುದರಿಂದ ಸದರಿ ಪ್ರಕರಣದಲ್ಲಿ ಸಾಮಾಜಿಕ ಕಳಕಳಿಯಿಂದ ಆರೋಪಿಯ ನಿರೀಕ್ಷಣಾ ಜಾಮೀನು ಅರ್ಜಿ ವಜಾ ಮಾಡಬೇಕು. ಎಫ್‌ಐಆರ್‌ನಲ್ಲಿ ಫಿರ್ಯಾದಿ ತಾನು ತಡವಾಗಿ ದೂರು ದಾಖಲಿಸುತ್ತಿರುವುದಕ್ಕೆ ಸಕಾರಣಗಳನ್ನು ನೀಡಿದ್ದಾನೆ” ಎಂದು ಅವರು ಹೇಳಿದ್ದಾರೆ.
ಘಟನೆಯ ತೀವ್ರತೆಯನ್ನು ಗಮನಿಸಿ ಸಿಐಡಿ ತನಿಖೆಗೆ ಪ್ರಕರಣವನ್ನು ಒಪ್ಪಿಸಲಾಗಿದ್ದು ಪ್ರಕರಣದಲ್ಲಿ ಸಾಕ್ಷಿಗಳ ಮಹತ್ವದ ಹೇಳಿಕೆಗಳನ್ನು ಪಡೆಯುವುದು ಬಾಕಿ ಇರುತ್ತದೆ. ಹಾಗೂ ಸಿಆರ್‌ಪಿಸಿ ಸೆಕ್ಷನ್ 164ರ ಅಡಿ ಫಿರ್ಯಾದಿ ಮತ್ತು ಸಾಕ್ಷಿದಾರರ ಹೇಳಿಕೆಗಳನ್ನು ಪಡೆಯುವಂತೆ ನ್ಯಾಯಾಲಯಕ್ಕೆ ಕೋರಿಕೆ ಸಲ್ಲಿಸಬೇಕಾಗಿರುತ್ತದೆ. ಅಲ್ಲದೆ ಆರೋಪಿ ಕೃತ್ಯಕ್ಕೆ ಬಳಸಿದ ವಸ್ತುಗಳು ಮತ್ತು ಫಿರ್ಯಾದಿ ಘಟನೆಯ ದಿನ ಧರಿಸಿದ್ದ ಬಟ್ಟೆಯನ್ನು ವಶಕ್ಕೆ ಪಡೆಯುವ ಅಗತ್ಯವಿರುತ್ತದೆ ಎಂದು ತಿಳಿಸಲಾಗಿದೆ.
ಜಗದೀಶ್ ಮತ್ತು ಕರ್ನಾಟಕ ಸರ್ಕಾರ ನಡುವಣ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್, ಪೃಥ್ವಿರಾಜೇ ಚೌಹಾಣ್ ಮತ್ತು ಕೇಂದ್ರ ಸರ್ಕಾರ ನಡುವಣ ಪ್ರಕರಣದಲ್ಲಿ ಸುಪ್ರೀಂಕೋರ್ಟ್, ರಾಮಗೋವಿಂದ್ ಉಪಾಧ್ಯಾಯ ಮತ್ತು ಸುದರ್ಶನ್ ಸಿಂಗ್ ನಡುವಣ ಪ್ರಕರಣ, ಅನಿಲ್‌ಕುಮಾರ್ ತುಳಸಿಯಾನಿ ಮತ್ತು ಉತ್ತರಪ್ರದೇಶ ಸರ್ಕಾರ ಹಾಗೂ ಇನ್ನಿತರರ ನಡುವಣ ಪ್ರಕರಣ, ಸಿಆರ್‌ಪಿಸಿ 438 ಮತ್ತು 439ನೇ ಸೆಕ್ಷನ್‌ಗಳನ್ನು ಉಲ್ಲೇಖಿಸಿರುವ ಪಬ್ಲಿಕ್ ಪ್ರಾಸಿಕ್ಯೂಟರ್ ಅವರು “ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕಾಯಿದೆ ಕಲಂ 18 (2) ಪ್ರಕಾರ ಆರೋಪಿ ನಿರೀಕ್ಷಣಾ ಜಾಮೀನು ಪಡೆಯಲು ಅವಕಾಶ ಇರುವುದಿಲ್ಲ” ಎಂದಿದ್ದಾರೆ.
ಆರೋಪಿ ಅಪರಾಧ ಮಾಡಿದ್ದಾನೆಂದು ನಂಬಲು ಯಾವುದೇ ಮೇಲ್ನೋಟದ ಅಥವಾ ಸಮಂಜಸವಾದ ಆಧಾರವಿದೆಯೇ ಎನ್ನುವುದನ್ನು ಗಮನಿಸಬೇಕು, ಆರೋಪದ ಸ್ವರೂಪ ಮತ್ತು ಗಹನತೆ, ಅಪರಾಧ ಸಾಬೀತಾದಾಗ ಶಿಕ್ಷೆಯ ತೀವ್ರತೆ, ಆರೋಪಿ ಸ್ಥಾನದಲ್ಲಿರುವವರ ಪಾತ್ರ, ನಡವಳಿಕೆ ಮತ್ತು ನಿಲುವು, ಅಪರಾಧವನ್ನು ಪುನರಾವರ್ತಿಸುವ ಸಾಧ್ಯತೆ, ಸಾಕ್ಷಿಗಳು ಪ್ರಭಾವಿತರಾಗುತ್ತಾರೆ ಎಂಬ ಆತಂಕ ಹಾಗೂ ಜಾಮೀನು ನೀಡುವುದರಿಂದ ನ್ಯಾಯಕ್ಕೆ ಉಂಟಾಗುವ ಅಡ್ಡಿಯ ಅಪಾಯದಂತಹ ಅಂಶಗಳನ್ನು ಪರಿಗಣಿಸಿ ನ್ಯಾಯಾಲಯ ಆರೋಪಿಗೆ ಜಾಮೀನು ನೀಡಬಾರದು ಎಂದು ತಿಳಿಸಲಾಗಿದೆ. ಫಿರ್ಯಾದಿ ರಾಜಕೀಯ ಅಥವಾ ಆರ್ಥಿಕವಾಗಿ ಪ್ರಭಾವಿಯಲ್ಲ ಎಂಬ ಅಂಶವನ್ನು ಕೂಡ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ನಿರೀಕ್ಷಣಾ ಜಾಮೀನು ಕೋರಿ ವಕೀಲ ಎಚ್ ಎಂ ಸುಧಾಕರ್ ಅವರ ಮೂಲಕ ಅರ್ಜುನ್ ಅರ್ಜಿ ಸಲ್ಲಿಸಿದ್ದರು.
ಘಟನೆಯ ಹಿನ್ನೆಲೆ:
ಪುನೀತ್ ಸಲ್ಲಿಸಿರುವ ದೂರಿನಲ್ಲಿ “ಮೇ 10ರಂದು ಬೆಳಿಗ್ಗೆ ಕೆಲವರು ನನ್ನ ಮನೆ ಬಳಿ ಬಂದು ʼಮಹಿಳೆಗೆ ಫೋನ್ ಮಾಡಿದ್ದೀಯಾ. ನಿನ್ನ ಬಳಿ ಮಾತನಾಡಬೇಕು ಬಾ ಎಂದು ಕರೆದಿದ್ದರುʼ. ಅವರು ತುಂಬಾ ಜನ ಇದ್ದುದರಿಂದ ನಾನು ತೆರಳಲು ನಿರಾಕರಿಸಿದೆ. ಅವರು ನನ್ನ ಮನೆ ಸುತ್ತುವರೆದಿದ್ದರು. ರಕ್ಷಣೆಗಾಗಿ 112ಕ್ಕೆ ಕರೆ ಮಾಡಿದಾಗ ಪೊಲೀಸರು ಬಂದು ವಿಚಾರಿಸಿ ಗೋಣಿಬೀಡು ಠಾಣೆ ಪಿಎಸ್‌ಐ ಅರ್ಜುನ್‌ಗೆ ಕರೆ ಮಾಡಿದರು. ಪಿಎಸ್‌ಐ ಬಂದು ಯಾವುದೇ ವಿಚಾರಣೆ ಮಾಡದೆ ಜೀಪ್ ಹತ್ತಲು ಹೇಳಿದರು. ಯಾಕೆ ಎಂದು ಕೇಳಿದಾಗ ಬೈದು ಠಾಣೆಗೆ ಕೊರೆದೊಯ್ದರು. ಠಾಣೆಯಲ್ಲಿ ನನ್ನ ಬಟ್ಟೆ ಬಿಚ್ಚಿಸಿ ಕೈಕಾಲುಗಳನ್ನು ಹಗ್ಗದಿಂದ ಕಟ್ಟಿ ತೊಡೆಯ ಹತ್ತಿರ ಕಬ್ಬಿಣದ ರಾಡ್ ಇರಿಸಿ ಮನಬಂದಂತೆ ಹೊಡೆದು ಎಷ್ಟು ದಿನದಿಂದ ಮಹಿಳೆ ಜೊತೆ ಸಂಬಂಧ ಇತ್ತೆಂದು ಕೇಳಿದರು. ಮಹಿಳೆಯೊಂದಿಗೆ ಯಾವುದೇ ಸಂಬಂಧ ಇಲ್ಲ. ಆರು ತಿಂಗಳ ಹಿಂದೆ ಫೋನ್‌ನಲ್ಲಿ ಮಾತನಾಡಿದ್ದೆ. ಆ ಬಗ್ಗೆ ವಿಚಾರಣೆ ನಡೆದು ತೀರ್ಮಾನವಾಗಿತ್ತು. ನಂತರ ಫೋನ್ ಮಾಡಿಲ್ಲ ಎಂದೆ” ಎಂಬುದಾಗಿ ತಿಳಿಸಿದ್ದರು.
“ಎಷ್ಟು ಬೇಡಿಕೊಂಡರೂ ಕೇಳಲಿಲ್ಲ ಒಪ್ಪಿಕೋ ಎಂದು ಹಿಂಸಿಸಿದರು. ನನ್ನನ್ನು ಬಿಡಿ ಎಂದು ಕೇಳಿಕೊಂಡೆ. ನಂತರ ಬಿಡುತ್ತೇನೆ ಒಪ್ಪಿಕೋ ಎಂದು ಹೊಡೆದರು. ದೇಹದಲ್ಲಿ ರಕ್ತ ಸುರಿಯುತ್ತಿದ್ದುದರಿಂದ ಅವರು ಹೇಳಿದಂತೆ ಒಪ್ಪಿಕೊಂಡೆ. ನನ್ನ ಜಾತಿ ಯಾವುದು ಎಂದು ಪಿಎಸ್‌ಐ ಕೇಳಿದರು. ಪರಿಶಿಷ್ಟ ಜಾತಿಗೆ ಸೇರಿರುವುದಾಗಿ ತಿಳಿಸಿದೆ. ಅವರು ಅವಾಚ್ಯ ಶಬ್ದಗಳಿಂದ ಕೆಟ್ಟದಾಗಿ ನಿಂದಿಸಿದರು. ಬಾಯಾರಿಕೆಯಾಗಿದೆ ನೀರು ಕೊಡಿ ಎಂದಾಗ ಕಳ್ಳತನ ಪ್ರಕರಣದಲ್ಲಿ ಸಿಲುಕಿಕೊಂಡಿದ್ದ ಚೇತನ್ ಎಂಬ ವ್ಯಕ್ತಿಯನ್ನು ಕರೆಸಿ ಬಾಯಿಗೆ ಮೂತ್ರ ಮಾಡಿಸಿದರು. ನೆಲದಲ್ಲಿ ಬಿದ್ದ ಮೂತ್ರ ನೆಕ್ಕಿಸಿದರು. ಬಳಿಕ ಹಿಂಸೆ ನೀಡಿದ ವಿಚಾರವನ್ನು ಯಾರಿಗೂ ಹೇಳಬಾರದು ಎಂದು ಬೆದರಿಕೆ ಹಾಕಿದ್ದರು” ಎಂದು ಪುನೀತ್ ಆರೋಪಿಸಿದ್ದರು.
ಘಟನೆ ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿತ್ತು. ಪಿಎಸ್‌ಐ ಅರ್ಜುನ್ ಅವರನ್ನು ಅಮಾನತು ಮಾಡಲಾಗಿತ್ತು. ಜೊತೆಗೆ ಉಡುಪಿ ಜಿಲ್ಲೆಗೆ ವರ್ಗಾಯಿಸಲಾಗಿತ್ತು. ಘಟನೆಯನ್ನು ವಿವಿಧ ಸಂಘಟನೆಗಳು ಖಂಡಿಸಿದ್ದವು. ಸರ್ಕಾರ ಪ್ರಕರಣವನ್ನು ಸಿಐಡಿಗೆ ಒಪ್ಪಿಸಿತ್ತು. ರಾಜ್ಯಸಭಾ ಸದಸ್ಯ ಡಾ. ಎಲ್ ಹನುಮಂತಯ್ಯ ಸಬ್‌ಇನ್ಸ್‌ಪೆಕ್ಟರ್ ಅರ್ಜುನ್ ಅವರನ್ನು ಬಂಧಿಸಿ ಜೈಲಿಗೆ ಕಳಿಸುವಂತೆ ಆಗ್ರಹಿಸಿದ್ದರು.
ಪಶ್ಚಿಮ ವಲಯ ಐಜಿಪಿ ದೇವಜ್ಯೋತಿ ರೇ ಅವರು ಗೋಣಿಬೀಡು ಠಾಣೆಗೆ ಸೋಮವಾರ ಭೇಟಿ ನೀಡಿ ಘಟನೆ ಸಂಬಂಧ ಸಿಬ್ಬಂದಿಯೊಂದಿಗೆ ಸಮಾಲೋಚನೆ ನಡೆಸಿದ್ದರು. ಅಲ್ಲದೆ ಪುನೀತ್ ಅವರ ಜೊತೆಗೂ ಮಾತುಕತೆ ನಡೆಸಿದ್ದರು. ಇತ್ತ ಯುವಕ ಪುನೀತ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿ ಮಹಿಳೆ ಕೂಡ ದೂರು ನೀಡಿದ್ದರು. ತನ್ನ ಸಂಸಾರ ಹಾಳಾಗುವುದಕ್ಕೆ ಪುನೀತ್ ಕಾರಣ. ತನ್ನ ಜೊತೆ ಬರುವಂತೆ ಪುನೀತ್ ಒತ್ತಾಯಿಸುತ್ತಿದ್ದರು. ಪುನೀತ್ ಪ್ರಕರಣ ಬಯಲಾದ ಬಳಿಕ ನನ್ನ ವಿಚಾರ ಎಲ್ಲರಿಗೂ ಗೊತ್ತಾಗಿ ನನ್ನ ಮಾನ ಹಾಳಾಗಿದೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದರು.