Jail
Jail 
ಸುದ್ದಿಗಳು

ಪಿಎಸ್‌ಐ ಹಗರಣ: ಪರೀಕ್ಷಾ ಮೇಲ್ವಿಚಾರಕಿ, ಮೂವರು ಅಭ್ಯರ್ಥಿಗಳು ಸೇರಿ ಐವರಿಗೆ ಜಾಮೀನು ನಿರಾಕರಿಸಿದ ಕಲಬುರ್ಗಿ ನ್ಯಾಯಾಲಯ

Bar & Bench

ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ (ಪಿಎಸ್‌ಐ) ನೇಮಕಾತಿ ಹಗರಣದಲ್ಲಿ ಭಾಗಿಯಾಗಿರುವ ಆರೋಪದ ಹಿನ್ನೆಲೆಯಲ್ಲಿ ಐವರು ಆರೋಪಿಗಳಿಗೆ ಜಾಮೀನು ನೀಡಲು ಈಚೆಗೆ ಕಲಬುರ್ಗಿ ಜಿಲ್ಲಾ ನ್ಯಾಯಾಲಯ ನಿರಾಕರಿಸಿದೆ.

ಕಲಬುರ್ಗಿ ಜ್ಞಾನಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ನಡೆದಿದ್ದ ಪರೀಕ್ಷಾ ಅಕ್ರಮದಲ್ಲಿ ಭಾಗಿಯಾಗಿ, ವಿವಿಧ ಆರೋಪಗಳನ್ನು ಎದುರಿಸುತ್ತಿರುವ ಐವರು ಆರೋಪಿಗಳು ಪ್ರತ್ಯೇಕವಾಗಿ ಸಲ್ಲಿಸಿದ್ದ ಮನವಿಗಳ ವಿಚಾರಣೆ ನಡೆಸಿರುವ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶುಕ್ಲಾಕ್ಷ ಪಾಲನ್‌ ಅವರು ಕೋರಿಕೆಯನ್ನು ತಿರಸ್ಕರಿಸಿದ್ದಾರೆ.

ನ್ಯಾಯಾಂಗ ಬಂಧನದಲ್ಲಿರುವ ಪರೀಕ್ಷಾ ಕೇಂದ್ರದಲ್ಲಿ ಮೇಲ್ವಿಚಾರಕಿಯಾಗಿದ್ದ ಸುಮಾ,‌ ಪ್ರಮುಖ ಆರೋಪಿ ಅರ್ಚನಾ ನಾಪತ್ತೆಯಾಗಲು ನೆರವಾಗಿದ್ದ ಆರೋಪ ಎದುರಿಸುತ್ತಿರುವ ರಾಜೇಶ್‌ ಅಭ್ಯರ್ಥಿಗಳಾದ ಪ್ರವೀಣ್‌ ಕುಮಾರ್‌, ಚೇತನ್‌ ಸಿದ್ರಾಮಪ್ಪ ನಂದಗಾಂವ್ ಮತ್ತು ಅರುಣ್‌ಕುಮಾರ್‌ ಅವರ ಜಾಮೀನು ಮನವಿಗಳನ್ನು ನ್ಯಾಯಾಲಯ ವಜಾ ಮಾಡಿದೆ.

“ಆರೋಪಿಗಳು ಅಪರಾಧಿಗಳೋ, ಅಲ್ಲವೋ ಎಂಬುದು ತನಿಖೆ ಪೂರ್ಣಗೊಂಡ ಬಳಿಕ ತಿಳಿಯುತ್ತದೆ. ಪ್ರಕರಣದಲ್ಲಿ ಕೋಟ್ಯಂತರ ರೂಪಾಯಿ ಲಂಚದ ಆರೋಪವಿದೆ. ಇನ್ನೂ ತನಿಖೆ ಪೂರ್ಣಗೊಂಡಿಲ್ಲ. ನ್ಯಾಯಾಲಯದ ಬಗ್ಗೆ ಸಾರ್ವಜನಿಕರ ನಂಬಿಕೆ ಕುಗ್ಗದಂತೆ ನೋಡಿಕೊಳ್ಳಬೇಕಿದ್ದು, ಜನರ ಹಿತಾಸಕ್ತಿಯನ್ನು ರಕ್ಷಿಸಬೇಕಿದೆ. ಹೀಗಾಗಿ, ಆರೋಪಿಗಳಿಗೆ ಜಾಮೀನು ನೀಡಲಾಗದು” ಎಂದು ಪೀಠವು ಆದೇಶದಲ್ಲಿ ಹೇಳಿದೆ.

ಬ್ಲೂಟೂತ್‌ ಮತ್ತಿತರ ವಿದ್ಯುನ್ಮಾನ ಸಾಧನಗಳಿಂದ ಪ್ರಮುಖ ಆರೋಪಿ ಅರ್ಚನಾ ಅವರ ನೆರವಿನಿಂದ ಅಭ್ಯರ್ಥಿಗಳು ಅರೆಬರೆ ತುಂಬಿದ್ದ ಒಎಂಆರ್‌ನಲ್ಲಿ ಸರಿಯಾದ ಉತ್ತರ ತುಂಬಿದ ಆರೋಪವು ಮೂರನೇ ಆರೋಪಿಯಾಗಿರುವ ಸುಮಾ ಅವರ ಮೇಲಿದೆ. ಪ್ರಮುಖ ಆರೋಪಿ ಅರ್ಚನಾ ನಾಪತ್ತೆಯಾಗಲು ಸಹಕರಿಸಿದ ಆರೋಪ ಎದುರಿಸುತ್ತಿರುವ ರಾಜೇಶ್‌ ಪ್ರಕರಣದಲ್ಲಿ ಎಂಟನೇ ಆರೋಪಿಯಾಗಿದ್ದಾರೆ. ಅಭ್ಯರ್ಥಿಯಾಗಿರುವ ಪ್ರವೀಣ್‌ ಕುಮಾರ್‌ ಆರನೇ ಆರೋಪಿಯಾಗಿದ್ದು, ರಾಯಚೂರು ಜೈಲಿನಲ್ಲಿ ವಾರ್ಡನ್ ಆಗಿದ್ದ ಐದನೇ ಆರೋಪಿ ಚೇತನ್‌ ಸಿದ್ರಾಮಪ್ಪ ನಂದಗಾಂವ್ ಮತ್ತು ಏಳನೇ ಆರೋಪಿ ಅರುಣ್‌ಕುಮಾರ್‌ ಅವರ ಜಾಮೀನು ಮನವಿ ವಜಾಗೊಂಡಿದೆ.

ಪ್ರಕರಣದ ಹಿನ್ನೆಲೆ: 2021ರಲ್ಲಿ ನಡೆದಿದ್ದ ಪರೀಕ್ಷೆಯಲ್ಲಿ ಅಕ್ರಮದ ಭಾಗವಾಗಿ ಕೆಲವು ಅಭ್ಯರ್ಥಿಗಳಿಗೆ ಉತ್ತರ ಪತ್ರಿಕೆಯ ಜೆರಾಕ್ಸ್‌ ಕಾಪಿ ನೀಡಲಾಗಿತ್ತು. ಅಕ್ರಮದಲ್ಲಿ ಭಾಗಿಯಾಗಿದ್ದ ಅಭ್ಯರ್ಥಿಗಳು ಜೆರಾಕ್ಸ್‌ ಕಾಪಿಯಲ್ಲಿ ಉತ್ತರಿಸಿದ್ದರು. ಬಳಿಕ ಪ್ರಮುಖ ಆರೋಪಿಯಾಗಿರುವ ಅರ್ಚನಾ ಅವರು ಬ್ಲೂಟೂತ್‌ ಬಳಸಿ ನಿಜವಾದ ಉತ್ತರ ಹೇಳಿದ್ದು, ಅದನ್ನು ಪರೀಕ್ಷಾ ಕೇಂದ್ರದ ಮೇಲ್ವಿಚಾರಕರು ಕೇಳಿಸಿಕೊಂಡು ಒರಿಜಿನಲ್‌ ಒಎಂಆರ್‌ನಲ್ಲಿ ತುಂಬಿದ್ದರು.

ಉತ್ತರ ಪತ್ರಿಕೆಯ ಮೌಲ್ಯಮಾಪನದ ಸಂದರ್ಭದಲ್ಲಿ ಹಗರಣ ಬೆಳಕಿಗೆ ಬಂದಿತ್ತು. ಪ್ರಕರಣದಲ್ಲಿ ಮೊದಲ ಆರೋಪಿಯಾದ ವೀರೇಶ್‌ ಕೇವಲ 21 ಪ್ರಶ್ನೆಗಳಿಗೆ ಉತ್ತರಿಸಿದ್ದರೂ ಅವರಿಗೆ 100 ಅಂಕ ನೀಡಲಾಗಿತ್ತು. ಆಗ ವೀರೇಶ ಮತ್ತಿತರ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿತ್ತು. ಇವರು ನೀಡಿದ ಹೇಳಿಕೆಗಳನ್ನು ಆಧರಿಸಿ ಮೇಲಿನ ಆರೋಪಿಗಳ ಮೊಬೈಲ್‌ ಪರಿಶೀಲಿಸಿ, ಪೂರಕ ದಾಖಲೆಗಳನ್ನು ಸಂಗ್ರಹಿಸಲಾಗಿತ್ತು. ಇದನ್ನು ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ. ಕಲಬುರ್ಗಿಯ ಸ್ಟೇಷನ್‌ ಬಜಾರ್‌ ಮತ್ತು ಚೌಕ್‌ ಪೊಲೀಸ್‌ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್‌ಗಳಾದ 120B (ಕ್ರಿಮಿನಲ್‌ ಪಿತೂರಿ), 420 (ವಂಚನೆ), 465 (ನಕಲು), 468 (ವಂಚನೆಗೆ ವಿದ್ಯುನ್ಮಾನ ಸಾಧನ ಬಳಕೆ), 471 (ನಕಲಿ ದಾಖಲೆಯನ್ನು ನೈಜ ಎಂದು ಬಿಂಬಿಸುವುದು) ಜೊತೆಗೆ 34ರ (ಹಲವು ಕೃತ್ಯದಲ್ಲಿ ಭಾಗಿ) ಅಡಿ ಪ್ರತ್ಯೇಕ ಕ್ರಿಮಿನಲ್ ಪ್ರಕರಣ ದಾಖಲು ಮಾಡಲಾಗಿದೆ.

Chetan Nandagaon and other V. State of Karantaka.pdf
Preview
Suma V. State of Karnataka.pdf
Preview
Praveen Kumar V. State of Karnataka.pdf
Preview
Rajesh V. State of Karnataka.pdf
Preview