ಸುದ್ದಿಗಳು

ಪಿಎಸ್‌ಐ ನೇಮಕಾತಿ ಮರು ಪರೀಕ್ಷೆ: ಆಕ್ಷೇಪಣೆ ಸಲ್ಲಿಸಲು ಸರ್ಕಾರಕ್ಕೆ ಮೇ 24ರವರೆಗೆ ಕಾಲಾವಕಾಶ ನೀಡಿದ ಕೆಎಸ್‌ಎಟಿ

"ಕಳಂಕ ರಹಿತ ಮತ್ತು ಕಳಂಕಿತ ಅಭ್ಯರ್ಥಿಗಳನ್ನು ಪ್ರತ್ಯೇಕಿಸಿ ಈಗಾಗಲೇ ಹೊರಡಿಸಿರುವ ಆದೇಶದ ಪ್ರಕಾರ ನೇಮಕಾತಿಗೆ ಆದೇಶಿಸಬೇಕು ಎಂದು ಬೆಂಗಳೂರಿನ ಪವಿತ್ರಾ ಎಲ್‌ ಎನ್‌ ಸೇರಿದಂತೆ 28 ಅಭ್ಯರ್ಥಿಗಳು ಕೆಎಸ್‌ಎಟಿಯಲ್ಲಿ ಮನವಿ ಸಲ್ಲಿಸಿದ್ದಾರೆ.

Siddesh M S

ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ಗಳ (ಪಿಎಸ್‌ಐ) ನೇಮಕಾತಿಗೆ ಸಂಬಂಧಿಸಿದ ಹಗರಣ ಬೆಳಕಿಗೆ ಬಂದ ಬೆನ್ನಿಗೇ ಮರುಪರೀಕ್ಷೆ ನಡೆಸುವ ಸಂಬಂಧ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶವನ್ನು ಬದಿಗೆ ಸರಿಸಲು ಕೋರಿ ಪರೀಕ್ಷೆಯಲ್ಲಿ ಆಯ್ಕೆಯಾಗಿರುವ ಇಪ್ಪತ್ತೆಂಟು ಅಭ್ಯರ್ಥಿಗಳು ಸಲ್ಲಿಸಿರುವ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿಯು (ಕೆಎಸ್‌ಎಟಿ) ಬುಧವಾರ ರಾಜ್ಯ ಸರ್ಕಾರಕ್ಕೆ ಮೇ 24ರ ವರೆಗೆ ಕಾಲಾವಕಾಶ ನೀಡಿದೆ.

ಬೆಂಗಳೂರಿನ ಪವಿತ್ರಾ ಎಲ್‌ ಎನ್‌ ಸೇರಿದಂತೆ 28 ಅಭ್ಯರ್ಥಿಗಳು "ಕಳಂಕ ರಹಿತ ಮತ್ತು ಕಳಂಕಿತ ಅಭ್ಯರ್ಥಿಗಳನ್ನು ಪ್ರತ್ಯೇಕಿಸಿ ಈಗಾಗಲೇ ಹೊರಡಿಸಿರುವ ಆದೇಶದ ಪ್ರಕಾರ ನೇಮಕಾತಿ ಆದೇಶ ನೀಡಲು ಆದೇಶಿಸಬೇಕು ಎಂದು ಕೋರಿ ಸಲ್ಲಿಸಿರುವ ಮನವಿಯ ವಿಚಾರಣೆಯನ್ನು ನ್ಯಾಯಿಕ ಸದಸ್ಯರಾದ ಟಿ ನಾರಾಯಣ ಸ್ವಾಮಿ ಅವರ ನೇತೃತ್ವದ ರಜಾಕಾಲೀನ ಏಕಸದಸ್ಯ ಪೀಠವು ನಡೆಸಿತು.

ವಿಚಾರಣೆ ಆರಂಭವಾಗುತ್ತಿದ್ದಂತೆ ಸರ್ಕಾರವನ್ನು ಪ್ರತಿನಿಧಿಸಿದ್ದ ವಕೀಲರು ಆಕ್ಷೇಪಣೆ ಸಲ್ಲಿಸಲು ಮತ್ತು ವಾದ ಮಂಡಿಸಲು ಕಾಲಾವಕಾಶ ನೀಡಬೇಕು ಎಂದು ಕೋರಿದರು.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಡಿ ಆರ್‌ ರವಿಶಂಕರ್‌ ಅವರು “ಮರು ಪರೀಕ್ಷೆ ನಡೆಸಲು ಅಧಿಸೂಚನೆ ಹೊರಡಿಸದಂತೆ ಸರ್ಕಾರವನ್ನು ನಿರ್ಬಂಧಿಸಿ ಮಧ್ಯಂತರ ಆದೇಶ ಮಾಡಬೇಕು” ಎಂದು ಕೋರಿದರು.

ಇದಕ್ಕೆ ಸರ್ಕಾರದ ಪರ ವಕೀಲರು “ಮರು ಪರೀಕ್ಷೆ ನಡೆಸಲು ಇನ್ನೂ ಸಾಕಷ್ಟು ಕಾಲಾವಕಾಶ ಬೇಕಿದೆ. ಹೀಗಾಗಿ, ಮಧ್ಯಂತರ ಆದೇಶ ಅಗತ್ಯವಿಲ್ಲ” ಎಂದರು. ಇದನ್ನು ಪರಿಗಣಿಸಿದ ಪೀಠವು ವಿಚಾರಣೆಯನ್ನು ಮೇ 24ಕ್ಕೆ ಮುಂದೂಡಿತು.

ಪೊಲೀಸ್‌ ಇಲಾಖೆಯ 545 ಸಬ್‌ ಇನ್ಸ್‌ಪೆಕ್ಟರ್‌ಗಳ ಆಯ್ಕೆ ಪ್ರಕ್ರಿಯೆಯಲ್ಲಿ ವ್ಯಾಪಕ ಅಕ್ರಮ ನಡೆದಿರುವುದು ರಾಜ್ಯಾದ್ಯಂತ ಸಂಚಲನಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಮರುಪರೀಕ್ಷೆಗೆ ಮುಂದಾಗಿದೆ. ಆದರೆ ರಾಜ್ಯ ಸರ್ಕಾರದ ಈ ನಡೆಯಿಂದ ಯಾವುದೇ ಅಕ್ರಮವೆಸಗದೆ ಕಳಂಕ ರಹಿತವಾಗಿ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ಅನ್ಯಾಯವಾಗಲಿದೆ ಎಂಬುದು ಅರ್ಜಿದಾರರ ಆಕ್ಷೇಪವಾಗಿದೆ.

ಮೇ 4ರಂದು ನಡೆದಿದ್ದ ವಿಚಾರಣೆಯಲ್ಲಿ ಪೀಠವು ಅರ್ಜಿದಾರರ ಪರ ವಕೀಲರ ವಾದವನ್ನು ಆಲಿಸಿ ಪ್ರಕರಣದಲ್ಲಿ ಪ್ರತಿವಾದಿಗಳಾಗಿರುವ ಒಳಾಡಳಿತ ಇಲಾಖೆಯ (ಪೊಲೀಸ್‌ ಸೇವೆಗಳು-1) ಪ್ರಧಾನ ಕಾರ್ಯದರ್ಶಿ, ಪೊಲೀಸ್‌ ಮಹಾನಿರ್ದೇಶಕರು, ನೇಮಕಾತಿ ವಿಭಾಗದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕರು, ಅಪರಾಧ ತನಿಖಾ ವಿಭಾಗದ (ಸಿಐಡಿ) ಪೊಲೀಸ್‌ ಮಹಾನಿರ್ದೇಶಕರಿಗೆ ನೋಟಿಸ್‌ ಜಾರಿ ಮಾಡಿದ್ದು, ಆಕ್ಷೇಪಣೆ ಸಲ್ಲಿಸಲು ಆದೇಶಿಸಿತ್ತು. ಈಗ ಆಕ್ಷೇಪಣೆ ಸಲ್ಲಿಸಲು ಸರ್ಕಾರ ಕಾಲಾವಕಾಶ ಕೋರಿದ್ದು, ಅದಕ್ಕೆ ಪೀಠ ಅಸ್ತು ಎಂದಿದೆ.

ಪ್ರಕರಣದ ಹಿನ್ನೆಲೆ: 2021ರ ಅಕ್ಟೋಬರ್‌ 3ರಂದು ರಾಜ್ಯದ 92 ಕೇಂದ್ರಗಳಲ್ಲಿ ಪಿಎಸ್‌ಐ ನೇಮಕಾತಿ ಪರೀಕ್ಷೆ ನಡೆದಿತ್ತು. ಕಲಬುರ್ಗಿ ಜ್ಞಾನಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಅಕ್ರಮ ನಡೆದಿದೆ ಎಂಬ ವಿಚಾರ ಬಹಿರಂಗವಾಗುತ್ತಿದ್ದಂತೆ ರಾಜ್ಯ ಸರ್ಕಾರವು ಪ್ರಕರಣವು ಸಿಐಡಿ ತನಿಖೆಗೆ ವಹಿಸಿತ್ತು.

ಕಲಬುರ್ಗಿಯ ಚೌಕ್‌ ಮತ್ತು ಸ್ಟೇಷನ್‌ ಬಜಾರ್‌ ಠಾಣೆಯಲ್ಲಿ ಪ್ರತ್ಯೇಕ ಎಫ್‌ಐಆರ್‌ ದಾಖಲಾಗಿದ್ದು, ಬಿಜೆಪಿ ನಾಯಕಿ, ಪ್ರಕರಣದ ಪ್ರಮುಖ ಕಿಂಗ್‌ಪಿನ್‌ ದಿವ್ಯಾ ಹಾಗರಗಿ ಸೇರಿದಂತೆ ಹಲವರನ್ನು ಪೋಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಪರೀಕ್ಷಾ ಕೇಂದ್ರಗಳಲ್ಲಿ ಅಕ್ರಮ ನಡೆದಿರುವುದಕ್ಕೆ ಸಂಬಂಧಿಸಿದಂತೆ ಹೈಗ್ರೌಂಡ್ಸ್‌ ಠಾಣೆಯಲ್ಲಿ 22 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದ್ದು, ಹಲವರನ್ನು ಬಂಧಿಸಲಾಗಿದೆ.

ಈ ಮಧ್ಯೆ, ಹೈಗ್ರೌಂಡ್ಸ್‌ ಪೊಲೀಸ್‌ ಠಾಣೆಯಲ್ಲಿ ದಾಖಲಿಸಿರುವ ಪ್ರಥಮ ಮಾಹಿತಿ ವರದಿ (ಎಫ್‌ಐಆರ್‌) ರದ್ದುಪಡಿಸುವಂತೆ ಕೋರಿ ತಾತ್ಕಲಿಕ ಪಟ್ಟಿಯಲ್ಲಿ ಪ್ರಥಮ ರ‍್ಯಾಂಕ್‌ ಪಡೆದಿರುವ ಬೆಂಗಳೂರಿನ ರಚನಾ ಹನಮಂತ್‌ ಹಾಗೂ ನಾಲ್ಕನೇ ರ‍್ಯಾಂಕ್‌ ಪಡೆದಿರುವ ಜಾಗೃತ್‌ ಅವರು ಕರ್ನಾಟಕ ಹೈಕೋರ್ಟ್‌ನಲ್ಲಿ ಪ್ರತ್ಯೇಕ ಮನವಿಗಳನ್ನು ಸಲ್ಲಿಸಿದ್ದಾರೆ. ಇವುಗಳು ನಾಳೆ (ಮೇ 19) ವಿಚಾರಣೆಗೆ ಬರಲಿವೆ.