PSI exam scam and Karnataka HC 
ಸುದ್ದಿಗಳು

ಪಿಎಸ್‌ಐ ನೇಮಕಾತಿ ಹಗರಣ: ಪಿಐಎಲ್‌ ವಿಚಾರಣೆಯಿಂದ ಹಿಂದೆ ಸರಿದ ಮುಖ್ಯ ನ್ಯಾಯಮೂರ್ತಿ ವರಾಳೆ

ಎಸ್‌ಐಟಿ ರಚಿಸಿ ತನಿಖೆ ನಡೆಸಲು ರಾಜ್ಯ ಸರ್ಕಾರಕ್ಕೆ ಆದೇಶಿಸಬೇಕು. ಇದರ ಮೇಲೆ ನ್ಯಾಯಾಲಯ ನಿಗಾ ಇಡಬೇಕು ಎಂದು ಕೋರಿರುವ ಅರ್ಜಿದಾರ ಶಾಸಕ ಪ್ರಿಯಾಂಕ್‌ ಖರ್ಗೆ.

Siddesh M S

ಪೊಲೀಸ್‌ ಸಬ್‌ಇನ್‌ಸ್ಪೆಕ್ಟರ್‌ (ಪಿಎಸ್‌ಐ) ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ದಾಖಲಾಗಿರುವ ಎಫ್‌ಐಆರ್‌ ಹಾಗೂ ತನಿಖೆಗೆ ಸಂಬಂಧಿಸಿದ ದಾಖಲೆಯನ್ನು ನ್ಯಾಯಾಲಯಕ್ಕೆ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ಆದೇಶಿಸುವಂತೆ ಕೋರಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಬೇರೊಂದು ಪೀಠದ ಮುಂದೆ ಪಟ್ಟಿ ಮಾಡುವಂತೆ ಕರ್ನಾಟಕ ಹೈಕೋರ್ಟ್‌ ಶುಕ್ರವಾರ ಆದೇಶಿಸಿದೆ.

ಕಾಂಗ್ರೆಸ್‌ ಶಾಸಕ ಪ್ರಿಯಾಂಕ್‌ ಖರ್ಗೆ ಸಲ್ಲಿಸಿರುವ ಅರ್ಜಿಯು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ್‌ ಎಸ್‌. ಕಿಣಗಿ ಅವರ ನೇತೃತ್ವದ ಪೀಠದ ಮುಂದೆ ವಿಚಾರಣೆಗೆ ನಿಗದಿಯಾಗಿತ್ತು. ಅರ್ಜಿ ಕೈಗೆತ್ತಿಕೊಂಡ ಮುಖ್ಯ ನ್ಯಾಯಮೂರ್ತಿ ವರಾಳೆ ಅವರು “ಕ್ಷಮಿಸಿ, ಈ ಪೀಠದ ಮುಂದೆ ಬೇಡ. ನಾವಿಬ್ಬರೂ ಇಲ್ಲದಿರುವ ಪೀಠದ ಮುಂದೆ ಅರ್ಜಿ ಪಟ್ಟಿಮಾಡಬೇಕು” ಎಂದಷ್ಟೇ ಹೇಳಿದರು.

ಪಿಎಸ್‌ಐ ಹಗರಣಕ್ಕೆ ಸಂಬಂಧಿಸಿದ ಇಲ್ಲಿಯವರೆಗೆ ವಿವಿಧೆಡೆ ದಾಖಲಾಗಿರುವ ಎಫ್‌ಐಆರ್‌ ಮತ್ತು ದೂರುಗಳಿಗೆ ಸಂಬಂಧಿಸಿದ ಸಂಪೂರ್ಣವಾದ ತನಿಖಾ ದಾಖಲೆಗಳನ್ನು ಸಲ್ಲಿಸಲು ಸಿಐಡಿಗೆ ಆದೇಶಿಸಬೇಕು. ಪ್ರಕರಣದ ತನಿಖೆ ನಡೆಸಿರುವ ಸಿಐಡಿಗೆ ಪೊಲೀಸ್‌ ನೇಮಕಾತಿ ವಿಭಾಗದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ (ಎಡಿಜಿಪಿ) ಅಮೃತ್‌ ಪೌಲ್‌ ಬಂಧನ ಬಳಿಕದ ಸ್ಥಿತಿಗತಿಯ ಕುರಿತು ಮಾಹಿತಿ ನೀಡಲು ನಿರ್ದೇಶಿಸಬೇಕು. ನ್ಯಾಯಯುತ, ಸ್ವತಂತ್ರ ಮತ್ತು ಪಾರದರ್ಶಕವಾಗಿ ತನಿಖೆ ನಡೆಸಲು ರಾಜ್ಯ ಸರ್ಕಾರ ಮತ್ತು ಸಿಐಡಿಗೆ ನಿರ್ದೇಶಿಸಬೇಕು ಎಂದು ಪಿಐಎಲ್‌ನಲ್ಲಿ ಕೋರಲಾಗಿದೆ.

ಪೊಲೀಸ್‌ ನೇಮಕಾತಿ ವಿಭಾಗದ ಕೆಲವು ಅಧಿಕಾರಿಗಳು, ರಾಜಕಾರಣಿಗಳ ನೆರವಿನಿಂದ ಅಕ್ರಮ ಮಾರ್ಗದ ಮೂಲಕ ಕೆಲವು ಅಭ್ಯರ್ಥಿಗಳಿಗೆ ಅನುಕೂಲವಾಗಿದ್ದು, ಇದರಿಂದ ಪಿಎಸ್‌ಐ ಪರೀಕ್ಷೆಯನ್ನು ಅರ್ಹತೆಯ ಆಧಾರದಲ್ಲಿ ಯಶಸ್ವಿಯಾಗಿ ಪೂರ್ಣಗೊಳಿಸಿದ ಅಭ್ಯರ್ಥಿಗಳ ಬದುಕು ಮತ್ತು ವೃತ್ತಿಯು ಅತಂತ್ರಕ್ಕೆ ಸಿಲುಕಿದೆ. ಪರೀಕ್ಷೆ ನಡೆಸುವುದರ ಪ್ರತಿ ಹಂತದ ಕುರಿತು ನೇಮಕಾತಿ ವಿಭಾಗದ ಎಡಿಜಿಪಿ, ನೇಮಕಾತಿ ಸಮಿತಿ ಮತ್ತು ಗೃಹ ಸಚಿವರಿಗೆ ಮಾಹಿತಿ ಇತ್ತು ಎಂಬುದು ತನಿಖೆಯ ಸಂದರ್ಭದಲ್ಲಿ ಬಹಿರಂಗವಾಗಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ಹಗರಣದ ಕುರಿತು ಮಾಧ್ಯಮಗಳಲ್ಲಿ ಸಾಕಷ್ಟು ವರದಿಗಳು ಪ್ರಕಟವಾಗಿವೆ. ಪರೀಕ್ಷೆಯಲ್ಲಿ ಪಾಲ್ಗೊಂಡಿದ್ದ ಅಭ್ಯರ್ಥಿಗಳು ಅಕ್ರಮ ನಡೆದಿರುವ ಕುರಿತು ದೂರು ನೀಡಿದ್ದಾರೆ. ಸಚಿವ ಸಂಪುಟದ ಸದಸ್ಯರು, ವಿಧಾನ ಪರಿಷತ್‌ ಸದಸ್ಯರು, ಶಾಸಕರು ಮತ್ತು ಗೃಹ ಸಚಿವರ ವಿರುದ್ದ ಅಕ್ರಮದ ಆರೋಪ ಮಾಡಲಾಗಿದೆ. ಇಷ್ಟಾದರೂ ಎರಡನೇ ಪ್ರತಿವಾದಿಯಾಗಿರುವ ಗೃಹ ಇಲಾಖೆಯು ಪಿಎಸ್‌ಐ ನೇಮಕಾತಿಯಲ್ಲಿ ಅಕ್ರಮ ನಡೆದಿಲ್ಲ ಎಂದು ವಾದಿಸಿದೆ ಎಂದು ವಿವರಿಸಲಾಗಿದೆ.

ಐವರು ಅಭ್ಯರ್ಥಿಗಳು ನೀಡಿರುವ ದೂರನ್ನು ಪರಿಶೀಲಿಸಲಾಗಿದ್ದು, ಯಾವುದೇ ಅಕ್ರಮ ನಡೆದಿಲ್ಲ ಎಂದು 2022ರ ಫೆಬ್ರವರಿ 17 ಮತ್ತು ಮಾರ್ಚ್‌ 10ರಂದು ಗೃಹ ಸಚಿವರು ವಿಧಾನಸಭೆಯಲ್ಲಿ ಹೇಳಿಕೆ ನೀಡಿದ್ದಾರೆ. ಗೃಹ ಸಚಿವರ ಈ ಹೇಳಿಕೆಯ ಹೊರತಾಗಿಯೂ ಸಿಐಡಿ ತನಿಖೆ ನಡೆಸುತ್ತಿದ್ದು, ಇದನ್ನು ಬೃಹತ್‌ ನೇಮಕಾತಿ ಹಗರಣ ಎಂದು ವ್ಯಾಖ್ಯಾನಿಸಿರುವುದು ಸರಿಯಾಗಿದೆ ಎಂದು ಉಲ್ಲೇಖಿಸಲಾಗಿದೆ.

ಸಾರ್ವಜನಿಕ ಒತ್ತಡ ವ್ಯಾಪಕವಾಗಿದ್ದರಿಂದ ಮುಖ ಉಳಿಸಿಕೊಳ್ಳುವ ಕ್ರಮದ ಭಾಗವಾಗಿ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ. ಹಿರಿಯ ಅಧಿಕಾರಿಗಳು ಮತ್ತು ಗೃಹ ಸಚಿವರು ಹಗರಣವನ್ನು ಅಲ್ಲಗಳೆದಿದ್ದರೂ ಪ್ರಮುಖ ಸ್ಥಾನಗಳಲ್ಲಿ ಉಳಿಯುವ ಮೂಲಕ ಸಿಐಡಿ ತನಿಖೆಯನ್ನು ಪ್ರಭಾವಿಸಲಾಗುತ್ತಿದೆ. ಕಲಬುರ್ಗಿಯ ಚೌಕ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಅದನ್ನು ಸಿಐಡಿಗೆ ವರ್ಗಾಯಿಸಿದ್ದರೂ ಅಭ್ಯರ್ಥಿಗಳು, ಅಧಿಕಾರಿಗಳು ಮತ್ತು ರಾಜಕಾರಣಿಗಳ ನಡುವಿನ ಸಂಬಂಧ ಬಹಿರಂಗಗೊಂಡಿಲ್ಲ. ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಮತ್ತು ಡಿವೈಎಸ್‌ಪಿ ಶಾಂತಕುಮಾರ್‌ ಬಂಧನದ ಬಳಿಕ ಏನಾಗಿದೆ ಎಂದು ಮಾಹಿತಿ ಇಲ್ಲ.

ಗೃಹ ಸಚಿವರ ನಿರ್ದೇಶನದಂತೆ ಸಿಐಡಿಯು ಸತ್ಯ ಮುಚ್ಚಿಟ್ಟು, ವಿಚಾರಣೆಯ ಸಂದರ್ಭದಲ್ಲಿ ಕೆಲವರು ನೀಡಿದ ಹೇಳಿಕೆಗಳನ್ನು ಮುಚ್ಚಿಹಾಕಿದೆ. ಪ್ರಮುಖ ಆರೋಪಿಯಾಗಿರುವ ದಿವ್ಯಾ ಹಾಗರಗಿ ಅವರು ಗೃಹ ಸಚಿವರು ಇರುವ ಕಡೆ ಕಾಣಿಸಿಕೊಂಡಿದ್ದರು ಎಂದು ವರದಿಯಾಗಿದೆ. ಈ ಕುರಿತು ಯಾವುದೇ ತನಿಖೆ ನಡೆದಿಲ್ಲ. ಕ್ಯಾಬಿನೆಟ್‌ ಸಚಿವರೊಬ್ಬರು ಹಗರಣದಲ್ಲಿ ಭಾಗಿಯಾಗಿದ್ದು, ತಮ್ಮ ಕೆಲವು ಅಭ್ಯರ್ಥಿಗಳು ಕಾನೂನುಬಾಹಿರವಾಗಿ ಆಯ್ಕೆಯಾಗುವಂತೆ ನೋಡಿಕೊಂಡಿದ್ದರು ಎಂದು ವರದಿಯಾಗಿದ್ದು, ಈ ಕುರಿತೂ ತನಿಖೆಯಾಗಿಲ್ಲ ಎಂದು ವಿವರಿಸಲಾಗಿದೆ.

ಹಗರಣ ಬೆಳಕಿಗೆ ಬಂದು ಐದು ತಿಂಗಳು ಪೂರ್ಣಗೊಂಡರೂ ಸಿಐಡಿಯು ಕೆಲವೇ ಕೆಲವರನ್ನು ಬಂಧಿಸಿದ್ದು, ಅಧಿಕಾರಿಗಳು, ಅಭ್ಯರ್ಥಿಗಳು ಮತ್ತು ರಾಜಕಾರಣಿಗಳ ನಡುವಿನ ಜಾಲ ಭೇದಿಸಿ, ತಪ್ಪಿತಸ್ಥರನ್ನು ಬಂಧಿಸಿಲ್ಲ. ನೇಮಕಾತಿ ವಿಭಾಗದ ಸ್ಟ್ರಾಂಗ್‌ರೂಮ್‌ನಲ್ಲಿ, ಓಎಂಆರ್‌ ಸೀಟುಗಳನ್ನು ಇಟ್ಟಿದ್ದ ಸ್ಥಳದಲ್ಲಿ ಸಿಸಿಟಿವಿ ಕಾರ್ಯನಿರ್ವಹಿಸದಿರುವುದರ ಕುರಿತು ತಾರ್ಕಿಕ ವಿವರಣೆಯನ್ನು ಸಿಐಡಿ ನೀಡಿಲ್ಲ. ಗೃಹ ಇಲಾಖೆ ಮತ್ತು ಗೃಹ ಸಚಿವರು ಆರೋಪಿಗಳಿಗೆ ಕ್ಲೀನ್‌ಚಿಟ್‌ ನೀಡಿರುವುದರಿಂದ ಗೃಹ ಇಲಾಖೆಯ ಅಡಿ ಬರುವ ಸಿಐಡಿಯು ಸದ್ಯದ ಪರಿಸ್ಥಿತಿಯಲ್ಲಿ ನ್ಯಾಯಯುತ ತನಿಖೆ ನಡೆಸುವ ಸ್ಥಾನದಲ್ಲಿಲ್ಲ ಎಂದು ವಿವರಿಸಲಾಗಿದೆ.

ಕೆಲವೇ ಕೆಲವರನ್ನು ಹರಕೆಯ ಕುರಿಗಳನ್ನಾಗಿಸಲಾಗುತ್ತಿದ್ದು, ಬಲಾಢ್ಯರನ್ನು ರಕ್ಷಿಸಲಾಗುತ್ತಿದೆ. ಸಿಐಡಿ ತನಿಖೆಯು ಕಣ್ಣೊರೆಸುವ ತಂತ್ರವಾಗಿದೆ. ವಿಧಾನಸಭೆಯಲ್ಲಿ ಯಾವುದೇ ಪಿಎಸ್‌ಐ ನೇಮಕಾತಿಯಲ್ಲಿ ಯಾವುದೇ ಹಗರಣ ನಡೆದಿಲ್ಲ ಎಂದು ಗೃಹ ಸಚಿವರು ಹೇಳಿದ್ದು, ಈಗ ಪರೀಕ್ಷೆ ರದ್ದುಪಡಿಸಲಾಗಿದೆ. ಹೊಸದಾಗಿ ಪರೀಕ್ಷೆ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ. ಇದರರ್ಥ ಗೃಹ ಸಚಿವರು ಅಕ್ರಮ ನಡದಿರುವುದನ್ನು ಒಪ್ಪಿಕೊಂಡಂತಾಗಿದೆ. ಈ ಮೂಲಕ ನೂರಾರು ಅಭ್ಯರ್ಥಿಗಳ ಭವಿಷ್ಯ ಅತಂತ್ರಕ್ಕೆ ಸಿಲುಕಿಸಿದ್ದಾರೆ ಎಂದು ವಿವರಿಸಲಾಗಿದೆ.

ಬಿಜೆಪಿ ಶಾಸಕ ಬಸವರಾಜ್‌ ಧಡೇಸುಗೂರ್‌ ಅವರ ಆಡಿಯೊ ಕ್ಲಿಪ್‌ನಲ್ಲಿ ಹಗರಣ ನಡೆದಿರುವ ಕುರಿತು ಸ್ಪಷ್ಟವಾಗಿದೆ. ಇಲ್ಲಿ ಅಮೃತ್‌ ಪೌಲ್‌ ಅವರ ಬಂಧನ ಕಣ್ಣೊರೆಸುವ ತಂತ್ರವಾಗಿದ್ದು, ಈ ಮೂಲಕ ಸಚಿವರು ಹಾಗೂ ಶಾಸಕರನ್ನು ರಕ್ಷಿಸಲಾಗುತ್ತಿದೆ. ಧಡೇಸುಗೂರ್‌ ಆಡಿಯೊ ಕ್ಲಿಪ್‌ ಕುರಿತು ಸಂಪೂರ್ಣ ತನಿಖೆ ನಡೆಯಬೇಕು. ಸತ್ಯ ಬಯಲು ಮಾಡಲು ನ್ಯಾಯಾಲಯದ ನಿಗಾದಲ್ಲಿ ತನಿಖೆ ನಡೆಯಬೇಕು. ಸಿಐಡಿ ತನಿಖೆಯ ಮೇಲೆ ನ್ಯಾಯಾಲಯ ನಿಗಾ ಇಡಬೇಕು. ಸ್ವತಂತ್ರ ತನಿಖಾ ಸಂಸ್ಥೆಯನ್ನು ರಚಿಸದಿದ್ದರೆ ತಪ್ಪಿತಸ್ಥರನ್ನು ರಕ್ಷಿಸುವ ಸಾಧ್ಯತೆ ಇದೆ. ಹೀಗಾಗಿ, ಎಸ್‌ಐಟಿ ರಚಿಸಿ ತನಿಖೆ ನಡೆಸಲು ರಾಜ್ಯ ಸರ್ಕಾರಕ್ಕೆ ಆದೇಶಿಸಬೇಕು. ಇದರ ಮೇಲೆ ನ್ಯಾಯಾಲಯ ನಿಗಾ ಇಡಬೇಕು ಎಂದು ಕೋರಲಾಗಿದೆ.