IPS officer Amrit Paul and Karnataka HC
IPS officer Amrit Paul and Karnataka HC 
ಸುದ್ದಿಗಳು

[ಪಿಎಸ್‌ಐ ಹಗರಣ] ಐಪಿಎಸ್‌ ಅಧಿಕಾರಿ ಪೌಲ್‌ ನ್ಯಾಯಾಂಗ ಬಂಧನ ವಿಸ್ತರಣೆಗೆ ಆಕ್ಷೇಪ: ಸಿಐಡಿಗೆ ಹೈಕೋರ್ಟ್‌ ನೋಟಿಸ್‌

Bar & Bench

ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ (ಪಿಎಸ್‌ಐ) ನೇಮಕಾತಿ ಹಗರಣದಲ್ಲಿ ಪ್ರಮುಖ ಆರೋಪಿಯಾಗಿ, ನ್ಯಾಯಾಂಗ ಬಂಧನದಲ್ಲಿರುವ ಹಿರಿಯ ಐಪಿಎಸ್‌ ಅಧಿಕಾರಿ ಅಮೃತ್‌ ಪೌಲ್‌ ಅವರನ್ನು ಅಕ್ರಮವಾಗಿ ವಶದಲ್ಲಿ ಇಡಲಾಗಿದೆ ಎಂದು ಆಕ್ಷೇಪಿಸಿ ಸಲ್ಲಿಸಿದ್ದ ಹೇಬಿಯಸ್‌ ಕಾರ್ಪಸ್‌ ಅರ್ಜಿ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್‌ ಮಂಗಳವಾರ ಅಪರಾಧ ತನಿಖಾ ದಳಕ್ಕೆ (ಸಿಐಡಿ) ನೋಟಿಸ್‌ ಜಾರಿ ಮಾಡಿದೆ.

ಅಮೃತ್‌ ಪೌಲ್‌ ಅವರ ನ್ಯಾಯಾಂಗ ಬಂಧನದ ವಿಸ್ತರಣೆಯನ್ನು ಯಾವುದೇ ಕೋರಿಕೆ ಇಲ್ಲದೇ ವಿಚಾರಣಾಧೀನ ನ್ಯಾಯಾಲಯ ವಿಸ್ತರಣೆ ಮಾಡಿರುವುದು ಕಾನೂನುಬಾಹಿರ ಎಂದು ಆಕ್ಷೇಪಿಸಿ ನ್ಯಾಯಮೂರ್ತಿ ಎಸ್‌ ಆರ್‌ ಕೃಷ್ಣ ಕುಮಾರ್‌ ಅವರ ನೇತೃತ್ವದ ರಜಾಕಾಲೀನ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು.

ಆರೋಪ ಪಟ್ಟಿ ಸಲ್ಲಿಸಿದ ಬಳಿಕ ಸಂಜ್ಞೇಯ ಪರಿಗಣಿಸದೇ ಅವರನ್ನು ಹವಾಲತ್ತಿಗೆ (ರಿಮ್ಯಾಂಡ್‌) ನೀಡುವ ಮೂಲಕ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು ಪ್ರಮಾದ ಎಸಗಿದೆ. 2022ರ ಜುಲೈ 4ರಿಂದು ಪೌಲ್‌ ಅವರನ್ನು ಬಂಧಿಸಲಾಗಿದ್ದು, ಆರೋಪ ಪಟ್ಟಿ ಸಲ್ಲಿಸಿ ಏಳು ತಿಂಗಳಾದರೂ ಅವರನ್ನು ಇನ್ನೂ ನ್ಯಾಯಾಂಗ ಬಂಧನದಲ್ಲಿ ಇಡಲಾಗಿದೆ. ಈ ವಿಚಾರದಲ್ಲಿ ಕೇಂದ್ರ ಸರ್ಕಾರದಿಂದ ಪ್ರಾಸಿಕ್ಯೂಷನ್‌ ಮಾಡಲು ಅನುಮತಿಯನ್ನೂ ಪಡೆಯಲಾಗಿಲ್ಲ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಈ ಹಿಂದೆ 35ನೇ ಆರೋಪಿಯಾಗಿರುವ ಪೌಲ್‌ ಅವರು ಸಿಆರ್‌ಪಿಸಿ ಸೆಕ್ಷನ್‌ 309 (2)ರ ಅಡಿ ಹವಾಲತ್ತು ರದ್ದು ಮಾಡಿ, ಬಿಡುಗಡೆ ಮಾಡಲು ಆದೇಶಿಸುವಂತೆ ಕೋರಲಾಗಿತ್ತು. ಇದನ್ನು ವಿಚಾರಣಾಧೀನ ನ್ಯಾಯಾಲಯ ಮಾನ್ಯ ಮಾಡಿರಲಿಲ್ಲ.