ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿಯು ಈಗಾಗಲೇ ಆರೋಪ ಪಟ್ಟಿ ಸಲ್ಲಿಸಿರುವುದರಿಂದ ಕಲಬುರ್ಗಿಯ ಚೌಕ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಆರೋಪಿಗಳಾಗಿರುವ 26 ಮಂದಿ ಜಾಮೀನಿಗೆ ಅರ್ಹರು ಎಂದು ಕಲಬುರ್ಗಿಯ ಪ್ರಧಾನ ಜಿಲ್ಲಾ ನ್ಯಾಯಾಲಯವು ಈಚೆಗೆ ಮಹತ್ವದ ಆದೇಶ ಮಾಡಿತ್ತು.
ಬಿಜೆಪಿ ನಾಯಕಿ ದಿವ್ಯಾ ಹಾಗರಗಿ, ಹಲವು ಅಧಿಕಾರಿಗಳು, ಮಧ್ಯವರ್ತಿಗಳು ಹಾಗೂ ಅಭ್ಯರ್ಥಿಗಳು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಕಲಬುರ್ಗಿಯ ಪ್ರಧಾನ ಸತ್ರ ನ್ಯಾಯಾಧೀಶರಾದ ಕೃಷ್ಣಾಜಿ ಬಾಬುರಾವ್ ಪಾಟೀಲ್ ಅವರು ಪುರಸ್ಕರಿಸಿದ್ದರು. ಜಾಮೀನು ಮಂಜೂರು ಮಾಡುವಾಗ ನ್ಯಾಯಾಲಯವು ಪ್ರಾಸಿಕ್ಯೂಷನ್ ವಾದವನ್ನು ಮಾನ್ಯ ಮಾಡಿಲ್ಲ. ಆದೇಶದಲ್ಲಿ ನ್ಯಾಯಾಲಯವು ಉಲ್ಲೇಖಿಸಿರುವ ಪ್ರಮುಖ ಅಂಶಗಳು ಇಂತಿವೆ.
ಹಾಲಿ ಪ್ರಕರಣದಲ್ಲಿ ಆರೋಪ ಪಟ್ಟಿಯನ್ನು ಪರಿಶೀಲಿಸಿದಾಗ ಮತ್ತು ಸರ್ಕಾರಿ ಅಭಿಯೋಜಕರು ಹೇಳಿರುವ ಪ್ರಕಾರ ತನಿಖಾಧಿಕಾರಿಯು ಸಿಆರ್‌ಪಿಸಿ ಸೆಕ್ಷನ್ 41 ಮತ್ತು 41ಎ ಅನ್ವಯ ನಡೆದುಕೊಂಡಿಲ್ಲ. ಅಂದರೆ, ಆರೋಪಿಯನ್ನು ಬಂಧಿಸುವುದಕ್ಕೂ ಮುನ್ನ ಅವರಿಗೆ ನೋಟಿಸ್ ಜಾರಿ ಮಾಡಿ, ಅದು ತೃಪ್ತಿದಾಯಕವಲ್ಲ ಎಂದಾಗ ಬಂಧಿಸುವ ಪ್ರಕ್ರಿಯೆ ಮಾಡಿಲ್ಲ.
ಪ್ರಕರಣದಲ್ಲಿ ತನಿಖೆ ಮುಗಿದಿದ್ದು, ಬಂಧನವಾದಾಗಿನಿಂದಲೂ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ. ಅರ್ಜಿದಾರರ ಪೈಕಿ ಅಭ್ಯರ್ಥಿಗಳು, ಮೌಲ್ಯಮಾಪಕರು, ಮಧ್ಯವರ್ತಿಗಳು ಹಾಗೂ ಸರ್ಕಾರಿ ಅಧಿಕಾರಿಗಳು ಇದ್ದಾರೆ. ಸರ್ಕಾರವು ಪಿಎಸ್‌ಐ ಪರೀಕ್ಷೆಯನ್ನು ರದ್ದುಪಡಿಸಿದೆ. ಜಾಮೀನು ಮಂಜೂರು ಮಾಡಿದರೂ ಅರ್ಜಿದಾರರಿಗೆ ಯಾವುದೇ ಲಾಭ ದೊರೆಯುವುದಿಲ್ಲ.
ಹಾಲಿ ಪ್ರಕರಣದಲ್ಲಿ ಆರೋಪಿಗಳಿಗೆ ಗರಿಷ್ಠ 7 ವರ್ಷ ಮಾತ್ರ ಶಿಕ್ಷೆಯಾಗುವ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಿಸಲಾಗಿದ್ದು, ವಿಚಾರಣೆ ಮುಗಿದು ಆರೋಪ ಪಟ್ಟಿ ಸಲ್ಲಿಸಲಾಗಿದೆ. ಹೀಗಿರುವಾಗ ಆರೋಪಿಗಳ ಕಸ್ಟಡಿಯ ತನಿಖೆಗೆ ಬೇಕಾಗಿಲ್ಲ.
ಆರೋಪ ಪಟ್ಟಿಯಲ್ಲಿ ಪ್ರಾಸಿಕ್ಯೂಷನ್ 145 ಸಾಕ್ಷಿಗಳನ್ನು ಉಲ್ಲೇಖಿಸಿದ್ದು, ತನಿಖಾಧಿಕಾರಿ ಸಾಕಷ್ಟು ದಾಖಲೆಗಳನ್ನು ಸಲ್ಲಿಸಿದ್ದಾರೆ. ವಿಚಾರಣೆ ಪೂರ್ಣಗೊಳ್ಳಲು ಸಾಕಷ್ಟು ಸಮಯಬೇಕಾಗಬಹುದು. ಇಲ್ಲಿ ಅರ್ಜಿದಾರರು ಕಸ್ಟಡಿಯಲ್ಲಿರುವ ಅಗತ್ಯವಾಗುವುದಿಲ್ಲ. ಅರ್ಜಿದಾರರಿಗೆ ಕಠಿಣ ಷರತ್ತುಗಳನ್ನು ವಿಧಿಸುವ ಮೂಲಕ ಪ್ರಾಸಿಕ್ಯೂಷನ್ ಆತಂಕವನ್ನು ನಿವಾರಿಸಬಹುದಾಗಿದೆ. ನ್ಯಾಯಾಲಯದ ಷರತ್ತುಗಳನ್ನು ಉಲ್ಲಂಘಿಸಿದರೆ ಆರೋಪಿಗಳ ಜಾಮೀನು ರದ್ದುಪಡಿಸಲು ಪ್ರಾಸಿಕ್ಯೂಷನ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.
ಆರೋಪ ಪಟ್ಟಿ ಸಲ್ಲಿಸುವಾಗ ಪ್ರಾಸಿಕ್ಯೂಷನ್ ತನ್ನ ಆಕ್ಷೇಪಣೆಯಲ್ಲಿ ತನಿಖೆ ಪೂರ್ಣಗೊಂಡಿಲ್ಲದಿರುವ ಕುರಿತು ವಿವರಿಸಿಲ್ಲ. ಪ್ರಾಸಿಕ್ಯೂಷನ್ ಆಕ್ಷೇಪಣೆಯ ಜೊತೆಗೆ ತನಿಖಾಧಿಕಾರಿಯು ನೀಡಿರುವ ಮಾಹಿತಿಯಲ್ಲಿ ಇನ್ನೂ ಹಲವರನ್ನು ಬಂಧಿಸಬೇಕಿದೆ ಎಂದು ಹೇಳಿದ್ದಾರೆ. ಈ ಆಧಾರದಲ್ಲಿ ಜಾಮೀನು ಅರ್ಜಿ ತಿರಸ್ಕರಿಸಲಾಗದು.
ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದರೆ ಸಮಾಜಕ್ಕೆ ಕೆಟ್ಟ ಸಂದೇಶ ರವಾನೆಯಾಗುತ್ತದೆ ಎಂದು ಪ್ರಾಸಿಕ್ಯೂಷನ್ ಹೇಳಿರುವುದನ್ನು ಒಪ್ಪಲಾಗದು. ಆರೋಪಿಗಳು ಬಂಧನವಾದ ದಿನದಿಂದ ನ್ಯಾಯಾಂಗ ಬಂಧನದಲ್ಲಿದ್ದುಕೊಂಡು ಸಾಕಷ್ಟು ಯಾತನೆ ಅನುಭವಿಸಿದ್ದಾರೆ. ಆರೋಪಿಗಳು ಸುಶಿಕ್ಷಿತರಾಗಿದ್ದು, ಇಂಥ ಅಪರಾಧದಲ್ಲಿ ಭಾಗಿಯಾಗುವುದರ ಪರಿಣಾಮ ತಿಳಿದಿದೆ. ಹೀಗಾಗಿ, ನಾಪತ್ತೆಯಾಗುತ್ತಾರೆ ಎಂಬ ವಾದವನ್ನು ಒಪ್ಪಲಾಗದು.
ಯಾವ ತನಿಖೆ ಬಾಕಿ ಉಳಿದಿದೆ ಎಂಬುದನ್ನು ತನಿಖಾಧಿಕಾರಿ ತಿಳಿಸಿಲ್ಲ ಮತ್ತು ಯಾವ ರೀತಿಯಲ್ಲಿ ತನಿಖೆ ಮುಂದುವರಿಸುತ್ತಾರೆ ಎಂಬುದನ್ನೂ ವಿವರಿಸಿಲ್ಲ. ಯಾರೆಲ್ಲರ ವಿರುದ್ಧ ಹೆಚ್ಚಿನ ತನಿಖೆ ಅಗತ್ಯವಿದೆ ಎಂಬುದನ್ನೂ ಪ್ರಾಸಿಕ್ಯೂಷನ್ ಬಹಿರಂಗಪಡಿಸಿಲ್ಲ. ಅದಾಗ್ಯೂ, ಹೆಚ್ಚಿನ ತನಖೆ ನಡೆಸಿ, ಹೆಚ್ಚುವರಿ ಆರೋಪ ಪಟ್ಟಿ ಸಲ್ಲಿಸಲು ತನಿಖಾಧಿಕಾರಿಗೆ ಸ್ವಾತಂತ್ರ್ಯ ಕಲ್ಪಿಸಲಾಗಿದೆ.
ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಸೆಕ್ಷನ್ 7, 7(ಎ) ಅಡಿ ಪ್ರಕರಣ ದಾಖಲಿಸಿದರೂ ಅದಕ್ಕೂ ಗರಿಷ್ಠ ಏಳು ವರ್ಷ ಶಿಕ್ಷೆಯಾಗಲಿದೆ. ಇದಕ್ಕೂ ಸಿಆರ್‌ಪಿಸಿ ಸೆಕ್ಷನ್ 41, 41(ಎ) ಅನ್ವಯಿಸಲಿದೆ. ಪಿಸಿ ಕಾಯಿದೆಯ ಸೆಕ್ಷನ್ 19ರ ಅಡಿ ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆಯದೇ ಪಿಸಿ ಕಾಯಿದೆ ಸೆಕ್ಷನ್ 7, 7ಎ ಅಡಿ ತನಿಖಾಧಿಕಾರಿ ಪ್ರಕರಣ ದಾಖಲಿಸಿದ್ದಾರೆ. ಹೀಗಾಗಿ, ಜಾಮೀನು ಕೋರಿರುವ ಅರ್ಜಿದಾರರ ಮನವಿಗಳನ್ನು ಪುರಸ್ಕರಿಸಬೇಕಿದೆ ಎಂದು ನ್ಯಾಯಾಲಯ ಹೇಳಿದೆ.