ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ನೇಮಕಾತಿ ಹಗರಣದಲ್ಲಿ ಭಾಗಿಯಾಗಿರುವ ಆರೋಪದಲ್ಲಿ ಬಂಧಿತರಾಗಿ, ಅಮಾನತುಗೊಂಡಿರುವ ಪೊಲೀಸ್ ನೇಮಕಾತಿ ವಿಭಾಗದ ಅಂದಿನ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಮೃತ್ ಪೌಲ್ ಅವರು ಜಾಮೀನು ಕೋರಿ ಬೆಂಗಳೂರಿನ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಶುಕ್ರವಾರ ಅರ್ಜಿ ಸಲ್ಲಿಸಿದ್ದಾರೆ.
ಪೌಲ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುತ್ತಿದ್ದಂತೆಯೇ ಸಲ್ಲಿಕೆಯಾಗಿದ್ದ ಜಾಮೀನು ಮನವಿಯ ವಿಚಾರಣೆಯನ್ನು ಬೆಂಗಳೂರಿನ ಒಂದನೇ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಧೀಶರಾದ ಆನಂದ್ ಟಿ. ಚವ್ಹಾಣ್ ಅವರು ನಡೆಸಿದರು.
ಅಪರಾಧ ತನಿಖಾ ದಳ (ಸಿಐಡಿ) ಪ್ರತಿನಿಧಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕರಾದ ಪಿ ಪ್ರಸನ್ನ ಕುಮಾರ್ ಅವರು ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ಜಾಮೀನು ಮನವಿಯ ವಿಚಾರಣೆಯನ್ನು ಜುಲೈ 19ಕ್ಕೆ ಮುಂದೂಡಲಾಯಿತು.
ಎಡಿಜಿಪಿಯಾಗಿ ಕರ್ತವ್ಯ ನಿರ್ಹಿಸುತ್ತಿದ್ದ ಪೌಲ್ ಅವರು ಕಳಂಕರಹಿತ ಸೇವಾ ದಾಖಲೆ ಹೊಂದಿದ್ದಾರೆ. ಆರೋಪಿಯು ತನಿಖೆಗೆ ಸಂಪೂರ್ಣ ಸಹಕಾರ ನೀಡಿದ್ದು, ಅದನ್ನು ಮುಂದುವರಿಸಲಿದ್ದಾರೆ. ಇಂದೂ ಸಹ ಅಗತ್ಯ ಮಾಹಿತಿ ನೀಡಲು ತನಿಖಾ ಸಂಸ್ಥೆಯ ಮುಂದೆ ಆರೋಪಿಯು ಹಾಜರಾಗಿದ್ದರು ಎಂದು ಜಾಮೀನು ಕೋರಿಕೆಯಲ್ಲಿ ತಿಳಿಸಲಾಗಿದೆ.
ಪೌಲ್ ವಿರುದ್ಧದ ಆರೋಪಗಳು ಮರಣ ದಂಡನೆ ಅಥವಾ ಜೀವಾವಧಿ ಶಿಕ್ಷೆ ವಿಧಿಸುವ ಗಂಭೀರತೆ ಹೊಂದಿಲ್ಲವಾದ್ದರಿಂದ ಜಾಮೀನು ಮಂಜೂರು ಮಾಡಬೇಕು ಎಂದು ಕೋರಲಾಗಿದೆ.
ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಆರೋಪಿಗಳಾಗಿರುವವರ ಜಾಮೀನು ಮನವಿಯ ವಿಚಾರಣೆಯ ಸಂದರ್ಭದಲ್ಲಿ ಕರ್ನಾಟಕ ಹೈಕೋರ್ಟ್ ಇತ್ತೀಚೆಗೆ, “ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ (ಪಿಎಸ್‌ಐ) ನೇಮಕಾತಿ ಹಗರಣವು ಕೊಲೆಗಿಂತ ದೊಡ್ಡದಾಗಿದೆ. ಕೊಲೆಯಲ್ಲಿ ಒಬ್ಬರು ಬಾಧಿತರಾಗುತ್ತಾರೆ. ಇಲ್ಲಿ ಇಡೀ ಸಮಾಜ ಬವಣೆಪಡುವಂತಾಗಿದೆ. ಸಂತ್ರಸ್ತರು ಅಗಾಧ ಸಂಖ್ಯೆಯಲ್ಲಿದ್ದಾರೆ. ಅದಕ್ಕಾಗಿಯೇ ಹಿಂದಿನ ಆದೇಶದಲ್ಲಿ 50 ಸಾವಿರ ಮಂದಿ ಸಂತ್ರಸ್ತರಾಗಿದ್ದಾರೆ ಎಂದು ಉಲ್ಲೇಖಿಸಿದ್ದೇನೆ. ಕೊಲೆ ತರಹದ ಅಪರಾಧ ಎಸಗುವುದಿಕ್ಕಿಂತ ಇದು ಭಿನ್ನವಾಗಿರುತ್ತದೆ. ಇದು ಸಮಾಜದ ಮೇಲಿನ ದಾಳಿ. ಇದರಿಂದ ಸಮಾಜಕ್ಕೆ ಧಕ್ಕೆಯಾಗಿದೆ. ಈ ರೀತಿಯ ಎಲ್ಲಾ ನೇಮಕಾತಿಗಳಲ್ಲೂ ಪರೀಕ್ಷೆ ನಡೆಸಲು ಬಿಟ್ಟು ನ್ಯಾಯಾಲಯವು ಕಣ್ಣು ಮುಚ್ಚಿ ಕುಳಿತಿಕೊಳ್ಳಬೇಕೆ?” ಎಂದು ಕಟುವಾಗಿ ಪ್ರಶ್ನಿಸಿತ್ತು.
ಓಎಂಆರ್ ಶೀಟ್ ತಿದ್ದಿರುವುದು ಹಾಗೂ ಸ್ಟ್ರಾಂಗ್ ರೂಮ್‌ನಲ್ಲಿ ಅಕ್ರಮ ಎಸಗಿರುವುದಕ್ಕೆ ಸಂಬಂಧಿಸಿದಂತೆ ಸಂಗ್ರಹಿಸಿದ ಸಾಕ್ಷ್ಯವನ್ನು ಆಧರಿಸಿ ನೇಮಕಾತಿ ವಿಭಾಗದ ಮುಖಸ್ಥ ಪೌಲ್ ಅವರನ್ನು ಬಂಧಿಸಲಾಗಿದೆ ಎನ್ನಲಾಗಿದೆ. 13 ದಿನ ಪೊಲೀಸ್ ಕಸ್ಟಡಿಯಲ್ಲಿದ್ದ ಪೌಲ್ ಅವರನ್ನು ನಿನ್ನೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಒಪ್ಪಿಸಿದೆ.