ಮಹತ್ವದ ಬೆಳವಣಿಗೆಯಲ್ಲಿ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಹಗರಣದ ಪ್ರಮುಖ ಆರೋಪಿ ಹಾಗೂ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ, ಪ್ರಕರಣದ ಮೊದಲನೇ ಆರೋಪಿ ವೀರೇಶ್, ಹಲವು ಸರ್ಕಾರಿ ಅಧಿಕಾರಿಗಳು, ಮಧ್ಯವರ್ತಿಗಳು ಹಾಗೂ ಅಭ್ಯರ್ಥಿಗಳು ಸೇರಿದಂತೆ ಒಟ್ಟು 27 ಮಂದಿಗೆ ಕಲಬುರ್ಗಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಗುರುವಾರ ಜಾಮೀನು ಮಂಜೂರು ಮಾಡಿದೆ.
ಪ್ರಕರಣದ ಮೊದಲ ಆರೋಪಿ ವೀರೇಶ್ ಸೇರಿದಂತೆ ಹಲವರು ಪ್ರತ್ಯೇಕವಾಗಿ ಸಲ್ಲಿಸಿದ್ದ ಅರ್ಜಿಗಳನ್ನು ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶರಾದ ಕೃಷ್ಣಾಜಿ ಬಾಬುರಾವ್ ಪಾಟೀಲ್ ಅವರು ಜಾಮೀನು ಮಂಜೂರು ಮಾಡಿ, ಆದೇಶ ಮಾಡಿದ್ದಾರೆ. ವಿಸ್ತೃತ ಆದೇಶ ಇನ್ನಷ್ಟೇ ಬಿಡುಗಡೆಯಾಗಬೇಕಿದೆ.
ಒಂದರಿಂದ ಏಳನೇ ಆರೋಪಿಗಳಾಗಿರುವ ಅಭ್ಯರ್ಥಿ ವೀರೇಶ್, ಜ್ಞಾನಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕರಾದ ಸಾವಿತ್ರಿ, ಸುಮಾ, ಸಿದ್ದಮ್ಮ, ಜೈಲಿನ ವಾರ್ಡನ್ ಚೇತನ್ ನಂದಗಾಂವ್, ಕೆ ಪ್ರವೀಣ್ ಕುಮಾರ್, ಒಂಭತ್ತರಿಂದ 12ನೇ ಆರೋಪಿಗಳಾಗಿರುವ ಡಿಎಆರ್‌ನ ಹೆಡ್ ಕಾನ್‌ಸ್ಟೆಬಲ್ ಹಳ್ಯಾಳಿ ದೇಸಾಯಿ, ಸಿಎಆರ್‌ನ ಹೆಡ್ ಕಾನ್‌ಸ್ಟೆಬಲ್ ರುದ್ರಗೌಡ, ಶರಣಬಸಪ್ಪ, ವಿಶಾಲ್ ಶಿರೂರ, 16ನೇ ಆರೋಪಿ ಸುನಿಲ್ ಅಲಿಯಾಸ್ ಸುನಿಲ್ ಕುಮಾರ್, 18-20ನೇ ಆರೋಪಿಗಳಾಗಿರುವ ಬಿಜೆಪಿ ಮುಖಂಡೆ ದಿವ್ಯಾ ಹಾಗರಗಿ, ಶಿಕ್ಷಕಿಯರಾದ ಅರ್ಚನಾ, ಸುನಂದಾ, 24ರಿಂದ 34ನೇ ಆರೋಪಿಗಳಾಗಿರುವ ನೀರಾರಿ ಇಲಾಖೆಯಲ್ಲಿ ಸಹಾಯಕ ಎಂಜಿನಿಯರ್ ಮಂಜುನಾಥ್ ಮೇಳಕುಂದಿ, ಶ್ರೀಧರ್ ಪವಾರ್, ಜ್ಞಾನಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ಕಾಶೀನಾಥ್, ಪೊಲೀಸ್ ಇನ್‌ಸ್ಪೆಕ್ಟರ್ ಆನಂದ್ ಮೇತ್ರಿ, ಡಿವೈಎಸ್‌ಪಿಯಾಗಿದ್ದ ಮಲ್ಲಿಕಾರ್ಜುನ ಸಾಲಿ, ಕೆಎಸ್‌ಆರ್‌ಪಿ ಸಹಾಯಕ ಕಮಾಂಡಂಟ್ ವೈಜನಾಥ್ ರೇವೂರ, ಶಾಂತಿಬಾಯಿ, ಬಸಯ್ಯನಾಯಕ್ ಚವಾಣ್, ಮೊಹಮ್ಮದ್ ಆಯೂಬ್, ಅಸ್ಲಾಮ್ ಮುಜಾವರ್ ಮತ್ತು ವಸಂತರಾಯ ನರಿಬೋಳ ಅವರಿಗೆ ಜಾಮೀನು ಮಂಜೂರಾಗಿದೆ.
ಪಿಎಸ್‌ಐ ಆಕಾಂಕ್ಷಿ ವೀರೇಶ್ ಬಂಧನದೊಂದಿಗೆ ಇಡೀ ಹಗರಣ ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಕಲಬುರ್ಗಿಯ ಚೌಕ್ ಮತ್ತು ಸ್ಟೇಷನ್ ಬಜಾರ್ ಠಾಣೆಗಳಲ್ಲಿ ಪ್ರತ್ಯೇಕವಾಗಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 109, 114, 119, 120(b), 201, 202, 204, 212, 409, 411, 420, 465, 468, 471, 477(A) ಜೊತೆಗೆ 34,36,37,149 ಹಾಗೂ ಭ್ರಷ್ಟಾಚಾರ ನಿಯಂತ್ರಣ ಕಾಯಿದೆಯ 7(a) ಅಡಿ ಪ್ರಕರಣ ದಾಖಲಿಸಲಾಗಿದೆ.