ಪೊಲೀಸ್ ಸಬ್ ಇನ್‌ಸ್ಪೆಕ್ಟರ್ (ಪಿಎಸ್‌ಐ) ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಅಪರಾಧ ತನಿಖಾ ದಳವು (ಸಿಐಡಿ) ಬುಧವಾರ 3,000 ಪುಟಗಳ ಆರೋಪ ಪಟ್ಟಿ ಸಲ್ಲಿಸಿದೆ.
ಬೆಂಗಳೂರಿನ ಒಂದನೇ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಧೀಶರಾದ ಆನಂದ್ ಟಿ. ಚವ್ಹಾಣ್ ಅವರಿಗೆ ಸಿಐಡಿ ಅಧಿಕಾರಿಗಳು ಆರೋಪ ಪಟ್ಟಿ ಸಲ್ಲಿಸಿದ್ದಾರೆ.
ಅಮಾನತುಗೊಂಡಿರುವ ಪೊಲೀಸ್ ನೇಮಕಾತಿ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಮೃತ್ ಪೌಲ್ ಅವರು ಪ್ರಕರಣದಲ್ಲಿ 35ನೇ ಆರೋಪಿಯಾಗಿದ್ದಾರೆ. ಓಎಂಆರ್ ಶೀಟುಗಳನ್ನು ತಿರುಚುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಡಿವೈಎಸ್‌ಪಿ ಶಾಂತಕುಮಾರ್, ಹಲವು ಪಿಎಸ್‌ಐಗಳು, ಮಧ್ಯವರ್ತಿಗಳು, ಪರೀಕ್ಷೆ ಬರೆದಿದ್ದ ಅಭ್ಯರ್ಥಿಗಳ ಪಾತ್ರದ ಕುರಿತು ಆರೋಪಪಟ್ಟಿಯಲ್ಲಿ ವಿವರಿಸಲಾಗಿದೆ.
ಸಿಐಡಿ ಉಪ ಪೊಲೀಸ್ ವರಿಷ್ಠಾಧಿಕಾರಿ ಪಿ ನರಸಿಂಹ ಮೂರ್ತಿ ಅವರ ದೂರಿನ ಮೇರೆಗೆ ಐಪಿಸಿ ಸೆಕ್ಷನ್ 120B (ಕ್ರಿಮಿನಲ್ ಪಿತೂರಿ), 420 (ವಂಚನೆ), 465 (ನಕಲು), 468 (ವಂಚನೆಗೆ ವಿದ್ಯುನ್ಮಾನ ಸಾಧನ ಬಳಕೆ), 471 (ನಕಲಿ ದಾಖಲೆಯನ್ನು ನೈಜ ಎಂದು ಬಿಂಬಿಸುವುದು) ಜೊತೆಗೆ 34ರ (ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿ) ಅಡಿ ಆರೋಪಿಗಳ ವಿರುದ್ಧ ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಈಗ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲಾಗಿದೆ.
545 ಪಿಎಸ್‌ಐ ಹುದ್ದೆ ನೇಮಕಾತಿಗೆ ನಡೆದ ಪರೀಕ್ಷೆಯನ್ನು 54,287 ಅಭ್ಯರ್ಥಿಗಳು ಎದುರಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿಯು ಹಲವು ಮಂದಿಯನ್ನು ಬಂಧಿಸಿದೆ. ಹಗರಣಕ್ಕೆ ಸಂಬಂಧಿಸಿದಂತೆ ಕಲಬುರ್ಗಿಯ ಚೌಕ್ ಮತ್ತು ಸ್ಟೇಷನ್ ಬಜಾರ್ ಠಾಣೆ, ಬೆಂಗಳೂರಿನ ಹೈಗ್ರೌಂಡ್ಸ್ ಸೇರಿದಂತೆ ಹಲವು ಕಡೆ ಆರೋಪಿಗಳ ವಿರುದ್ಧ ಪ್ರತ್ಯೇಕ ಎಫ್‌ಐಆರ್ ದಾಖಲಿಸಲಾಗಿದೆ.
ಕಲಬುರ್ಗಿಯಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಪೊಲೀಸರು ವಿಚಾರಣಾಧೀನ ನ್ಯಾಯಾಲಯಕ್ಕೆ ಸುಮಾರು 2 ಸಾವಿರ ಪುಟಗಳ ಆರೋಪ ಪಟ್ಟಿ ಸಲ್ಲಿಸಿದ್ದಾರೆ.