IPS officer Amrit Paul and Karnataka HC 
ಸುದ್ದಿಗಳು

ಪಿಎಸ್‌ಐ ನೇಮಕ ಹಗರಣ: ಮಾಜಿ ಐಪಿಎಸ್‌ ಅಧಿಕಾರಿ ಅಮೃತ್‌ ಪೌಲ್‌ ವಿರುದ್ಧದ ವಿಚಾರಣೆ ರದ್ದುಪಡಿಸಲು ಹೈಕೋರ್ಟ್‌ ನಕಾರ

ಐದು ಕೋಟಿ ಲಂಚ ಪಡೆದು ಪಿಎಸ್‌ಐ ಪರೀಕ್ಷೆ ಬರೆದಿದ್ದ ಅಭ್ಯರ್ಥಿಗಳ ಒಎಂಆರ್‌ ಕಿಟ್‌ ಬಾಕ್ಸ್‌ಗಳನ್ನು ಇಟ್ಟಿದ್ದ ಅಲ್ಮೇರಾಗಳ ಕೀಗಳನ್ನು ನೀಡುವ ಮೂಲಕ ಹಗರಣಕ್ಕೆ ಪೌಲ್‌ ನಾಂದಿ ಹಾಡಿದ್ದರು ಎಂದು ಆರೋಪಿಸಲಾಗಿದೆ.

Bar & Bench

ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿದ್ದ ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ (ಪಿಎಸ್‌ಐ) ನೇಮಕಾತಿ ಹಗರಣದ ಪ್ರಮುಖ ಆರೋಪಿಯಾಗಿರುವ ಅಮಾನತುಗೊಂಡಿರುವ ಹಿರಿಯ ಐಪಿಎಸ್‌ ಅಧಿಕಾರಿ ಅಮೃತ್‌ ಪೌಲ್‌ ತಮ್ಮ ವಿರುದ್ಧದ ಆರೋಪ ಪಟ್ಟಿ ಮತ್ತು ವಿಚಾರಣಾಧೀನ ನ್ಯಾಯಾಲಯದ ವಿಚಾರಣೆ ರದ್ದುಪಡಿಸಲು ಕರ್ನಾಟಕ ಹೈಕೋರ್ಟ್‌ ಗುರುವಾರ ನಿರಾಕರಿಸಿದೆ.

ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಸಿಐಡಿ ಪೊಲೀಸರು ಸಲ್ಲಿಸಿರುವ ಏಳು (1 ಪ್ರಾಥಮಿಕ, 6 ಹೆಚ್ಚುವರಿ) ಆರೋಪ ಪಟ್ಟಿಗಳನ್ನು ರದ್ದುಪಡಿಸಬೇಕು. ಪ್ರಕರಣ ಕುರಿತು ನಗರದ 23ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯದಲ್ಲಿ ನಡೆಸುತ್ತಿರುವ ವಿಚಾರಣೆ ಅನೂರ್ಜಿತಗೊಳಿಸಬೇಕು ಎಂದು ಕೋರಿ ಎಡಿಜಿಪಿ ಅಮೃತ್‌ ಪೌಲ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಜೆ ಎಂ ಖಾಜಿ ಅವರ ಪೀಠ ವಿಚಾರಣೆ ನಡೆಸಿತು. ವಿಸ್ತೃತ ಆದೇಶ ಇನ್ನಷ್ಟೇ ಪ್ರಕಟವಾಗಬೇಕಿದೆ.

ಸಿಐಡಿ ಪೊಲೀಸರ ಪರ ವಿಶೇಷ ಸರ್ಕಾರಿ ಅಭಿಯೋಜಕ ಪಿ ಪ್ರಸನ್ನ ಕುಮಾರ್‌ ಅವರು “ಅಮೃತ್ ಪೌಲ್‌ ಅವರು ಪಿಎಸ್ಐ ನೇಮಕಾತಿಯ ಉಸ್ತುವಾರಿ ವಹಿಸಿದ್ದರು. ಉತ್ತರ ಪತ್ರಿಕೆಗಳನ್ನು (ಓಎಂಆರ್‌ ಶೀಟ್‌) ಇರಿಸಲಾಗಿದ್ದ ಸ್ಟ್ರಾಂಗ್‌ ರೂಂ ಲಾಕರ್‌ನ ಕೀ ಪೌಲ್‌ ಅವರ ಬಳಿಯಿತ್ತು. ಅದನ್ನು ತಮ್ಮ ಕಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ನೀಡಿ ಓಎಂಆರ್ ಶೀಟ್‌ಗಳನ್ನು ತಿದ್ದುಪಡಿ ಮಾಡಿದ್ದಾರೆ. ಮಧ್ಯವರ್ತಿಗಳೊಂದಿಗೆ ಒಳಸಂಚು ರೂಪಿಸಿ ನೇಮಕಾತಿಯಲ್ಲಿ ಅಕ್ರಮ ನಡೆಸಿದ್ದಾರೆ. ಈ ಕೃತ್ಯದ ಸಂಬಂಧ ಪಡೆದಿದ್ದ ಲಂಚದ ಹಣವನ್ನು ಜಫ್ತಿ ಮಾಡಲಾಗಿದೆ. ಆದ್ದರಿಂದ, ಅರ್ಜಿ ವಜಾಗೊಳಿಸಬೇಕು ಎಂದು ಕೋರಿದ್ದರು. ಈ ವಾದ ಪುರಸ್ಕರಿಸಿದ ನ್ಯಾಯಪೀಠವು ಅರ್ಜಿಯನ್ನು ತಿರಸ್ಕರಿಸಿದೆ.

ಪ್ರಕರಣದ ಹಿನ್ನೆಲೆ: ರಾಜ್ಯದಲ್ಲಿ 545 ಪಿಎಸ್‌ಐ ಹುದ್ದೆ ನೇಮಕಾತಿಗೆ ನಡೆದ ಪರೀಕ್ಷೆಯನ್ನು 54,287 ಅಭ್ಯರ್ಥಿಗಳು ಎದುರಿಸಿದ್ದರು. ಇಲ್ಲಿ ಪ್ರಾವಿಷನಲ್‌ ಆಯ್ಕೆ ಪಟ್ಟಿಯಲ್ಲಿ ಹೆಸರು ಹೊಂದಿದ್ದ ಹಲವು ಅಭ್ಯರ್ಥಿಗಳು ವಿದ್ಯುನ್ಮಾನ ಸಾಧನಗಳು, ಆನಂತರ ಒಎಂಆರ್‌ ತಿರುಚುವ ಮೂಲಕ ಅನುಕೂಲ ಪಡೆದಿದ್ದರು ಎಂಬುದು ಆರೋಪವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿಯು ಹಲವು ಮಂದಿಯನ್ನು ಬಂಧಿಸಿತ್ತು. ಹಗರಣಕ್ಕೆ ಸಂಬಂಧಿಸಿದಂತೆ ಕಲಬುರ್ಗಿಯ ಚೌಕ್‌ ಮತ್ತು ಸ್ಟೇಷನ್‌ ಬಜಾರ್‌ ಠಾಣೆ, ಬೆಂಗಳೂರಿನ ಹೈಗ್ರೌಂಡ್ಸ್‌ ಸೇರಿದಂತೆ ಹಲವು ಕಡೆ ಆರೋಪಿಗಳ ವಿರುದ್ಧ ಪ್ರತ್ಯೇಕ ಎಫ್‌ಐಆರ್‌ಗಳನ್ನು ದಾಖಲಿಸಲಾಗಿತ್ತು.

ಅಮೃತ್‌ ಪೌಲ್‌ ಅವರಿಗೆ 5 ಕೋಟಿ ರೂಪಾಯಿ ನೀಡಿದ್ದು, ಹೀಗಾಗಿ ಅವರು ಪಿಎಸ್‌ಐ ಪರೀಕ್ಷೆ ಬರೆದಿದ್ದ ಅಭ್ಯರ್ಥಿಗಳ ಒಎಂಆರ್‌ ಕಿಟ್‌ಬಾಕ್ಸ್‌ಗಳನ್ನು ಇರಿಸಿದ್ದ ಅಲ್ಮೇರಾಗಳ ಕೀಗಳನ್ನು ನೀಡಿದ್ದು, ಇದನ್ನು ಬಳಸಿ ಒಎಂಆರ್‌ ತಿರುಚಿರುವುದಾಗಿ ಪೊಲೀಸ್‌ ನೇಮಕಾತಿ ವಿಭಾಗದಲ್ಲಿ ಉಪ ಪೊಲೀಸ್‌ ವರಿಷ್ಠಾಧಿಕಾರಿಯಾಗಿದ್ದ ಬಂಧಿತರಾಗಿ ಅಮಾನತುಗೊಂಡಿರುವ 31ನೇ ಆರೋಪಿ ಶಾಂತಕುಮಾರ್‌ ಹೇಳಿಕೆ ನೀಡಿದ್ದರು.

ಪ್ರಕರಣ ಸಂಬಂಧ 2022ರ ಜುಲೈ 4ರಂದು ಪೌಲ್ ಅವರನ್ನು ತನಿಖಾಧಿಕಾರಿಗಳು ಬಂಧಿಸಿದ್ದರು. ನಂತರ ಪ್ರಕರಣದ ತನಿಖೆ ನಡೆಸಿದ್ದ ಸಿಐಡಿ ಪೊಲೀಸರು, ಪೌಲ್‌ ವಿರುದ್ಧ ಏಳು ಆರೋಪ ಪಟ್ಟಿ ಸಲ್ಲಿಸಿದ್ದರು. ಹೈಕೋರ್ಟ್‌ 2023ರ ಸೆಪ್ಟೆಂಬರ್‌ 25ರಂದು ಪೌಲ್ಗೆ ಜಾಮೀನು ಮಂಜೂರು ಮಾಡಿತ್ತು.

ಸಿಐಡಿ ಉಪ ಪೊಲೀಸ್‌ ವರಿಷ್ಠಾಧಿಕಾರಿ ಪಿ ನರಸಿಂಹ ಮೂರ್ತಿ ಅವರ ದೂರಿನ ಮೇರೆಗೆ ಅಮೃತ್‌ ಪೌಲ್‌ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 120(ಬಿ), 36, 37, 119, 409, 420, 465, 468, 471, 201 ಜೊತೆಗೆ ಸೆಕ್ಷನ್‌ 34 ಹಾಗೂ ಭ್ರಷ್ಟಾಚಾರ ನಿಷೇಧ ಕಾಯಿದೆ ಸೆಕ್ಷನ್‌ಗಳಾದ 7(ಎ) (ಸಿ), 7ಎ, 8, 13(1)(ಎ) ಜೊತೆಗೆ 13(2) ಅಡಿ ಬೆಂಗಳೂರಿನ ಹೈಗ್ರೌಂಡ್ಸ್‌ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿತ್ತು.