IPS officer Amrit Paul 
ಸುದ್ದಿಗಳು

ಪಿಎಸ್‌ಐ ಹಗರಣ: ಹಿರಿಯ ಐಪಿಎಸ್‌ ಅಧಿಕಾರಿ ಅಮೃತ್‌ ಪೌಲ್‌ ಡಿಫಾಲ್ಟ್‌ ಜಾಮೀನು ಅರ್ಜಿ ತಿರಸ್ಕರಿಸಿದ ವಿಶೇಷ ನ್ಯಾಯಾಲಯ

ಆರೋಪಿ ಪೌಲ್‌ ವಿರುದ್ಧ 2022ರ ಸೆ.28ರಂದು ಆರೋಪ ಪಟ್ಟಿ ಸಲ್ಲಿಸಿದ್ದು, ಪಿ ಸಿ ಕಾಯಿದೆ ಅಡಿ ಸಂಜ್ಞೇಯ ಪರಿಗಣನೆಗೆ ಪ್ರಾಸಿಕ್ಯೂಷನ್‌ ಸಾಕಷ್ಟು ದಾಖಲೆ ಸಲ್ಲಿಸಿದೆ ಎಂಬ ಆಧಾರಗಳ ಹಿನ್ನೆಲೆಯಲ್ಲಿ ನ್ಯಾಯಾಲಯವು ಜಾಮೀನು ಅರ್ಜಿ ತಿರಸ್ಕರಿಸಿದೆ.

Bar & Bench

ಪೊಲೀಸ್‌ ಸಬ್‌ಇನ್‌ಸ್ಪೆಕ್ಟರ್‌ (ಪಿಎಸ್‌ಐ) ನೇಮಕಾತಿ ಹಗರಣದ ಪ್ರಮುಖ ಆರೋಪಿ, ಅಮಾನತುಗೊಂಡಿರುವ ಪೊಲೀಸ್‌ ನೇಮಕಾತಿ ವಿಭಾಗದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಅಮೃತ್‌ ಪೌಲ್‌ ಅವರ ಡಿಫಾಲ್ಟ್‌ ಜಾಮೀನು ಅರ್ಜಿಯನ್ನು ಬೆಂಗಳೂರಿನ ವಿಶೇಷ ನ್ಯಾಯಾಲಯವು ಬುಧವಾರ ತಿರಸ್ಕರಿಸಿದೆ.

ಹಿರಿಯ ಐಪಿಎಸ್‌ ಅಧಿಕಾರಿ ಅಮೃತ್‌ ಪೌಲ್‌ ಸಲ್ಲಿಸಿದ್ದ ಜಾಮೀನು ಮನವಿಯ ವಿಚಾರಣೆ ನಡೆಸಿದ 23ನೇ ಹೆಚ್ಚುವರಿ ನಗರ ಮತ್ತು ಸತ್ರ ಹಾಗೂ ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಅಡಿ ಸ್ಥಾಪಿಸಲಾಗಿರುವ ನ್ಯಾಯಾಲಯದ ವಿಶೇಷ ನ್ಯಾಯಾಧೀಶರಾದ ಕೆ ಲಕ್ಷ್ಮಿನಾರಾಯಣ ಭಟ್‌ ಅವರ ನೇತೃತ್ವದ ಪೀಠವು ಈ ಆದೇಶ ಮಾಡಿದೆ.

ಆರೋಪಿ ಪೌಲ್‌ ವಿರುದ್ಧ 2022ರ ಸೆಪ್ಟೆಂಬರ್‌ 28ರಂದು ಆರೋಪ ಪಟ್ಟಿ ಸಲ್ಲಿಸಿದ್ದು, ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಅಡಿ ಸಂಜ್ಞೇಯ ಪರಿಗಣನೆಗೆ ಪ್ರಾಸಿಕ್ಯೂಷನ್‌ ಸಾಕಷ್ಟು ದಾಖಲೆ ಸಲ್ಲಿಸಿದೆ ಎಂಬ ವಾದ ಪರಿಗಣಿಸಿ, ನ್ಯಾಯಾಲಯವು ಜಾಮೀನು ಅರ್ಜಿ ತಿರಸ್ಕರಿಸಿದೆ.

ಈ ಹಿಂದೆ ಹೆಚ್ಚುವರಿ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಮತ್ತು ಬೆಂಗಳೂರು ಸಿಟಿ ಸಿವಿಲ್‌ ನ್ಯಾಯಾಲಯ ಹಾಗೂ ವಿಶೇಷ ನ್ಯಾಯಾಲಯವು ಪೌಲ್‌ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದವು. ಜುಲೈ 4ರಂದು ಅಮೃತ್‌ ಪೌಲ್‌ ಅವರನ್ನು ಸಿಐಡಿ ಬಂಧಿಸಿತ್ತು. ಜುಲೈ 15ರವರೆಗೆ ಪೊಲೀಸ್‌ ಕಸ್ಟಡಿಯಲ್ಲಿದ್ದ ಪೌಲ್‌ ಅವರನ್ನು ಆನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಪ್ರಾಸಿಕ್ಯೂಷನ್‌ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಪಿ ಪ್ರಸನ್ನಕುಮಾರ್‌ ವಾದಿಸಿದ್ದರು.