Bengaluru City civil court and Amrit Paul 
ಸುದ್ದಿಗಳು

ತನಿಖಾಧಿಕಾರಿ ಕಸ್ಟಡಿಯಲ್ಲಿರುವ ಲ್ಯಾಪ್‌ಟಾಪ್‌, ಪೆನ್‌ಡ್ರೈವ್‌ ಕೋರಿಕೆ: ಪೌಲ್‌ ಆಪ್ತ ಶಂಭುಲಿಂಗಯ್ಯ ಅರ್ಜಿ ವಜಾ

ಶಂಭುಲಿಂಗಯ್ಯ ನೀಡಿರುವ ಹೇಳಿಕೆಯಲ್ಲಿ 35ನೇ ಆರೋಪಿ ಅಮೃತ್‌ ಪೌಲ್‌ ಅವರು ಹಗರಣಕ್ಕೆ ಸಂಬಂಧಿಸಿದ 1.35 ಕೋಟಿ ರೂಪಾಯಿ ಹಣವನ್ನು ಶಂಭುಲಿಂಗಯ್ಯ ಅವರ ಬಳಿ ಇರಿಸಿದ್ದರು ಎಂಬುದು ಮೇಲ್ನೋಟಕ್ಕೆ ತಿಳಿದು ಬಂದಿದೆ ಎಂದಿರುವ ನ್ಯಾಯಾಲಯ.

Siddesh M S

ಪೊಲೀಸ್‌ ಸಬ್‌ಇನ್‌ಸ್ಪೆಕ್ಟರ್‌ (ಪಿಎಸ್‌ಐ) ನೇಮಕ ಪ್ರಕರಣದಲ್ಲಿ ಆರೋಪಿಯಾಗಿರುವ ಮಾಜಿ ಐಪಿಎಸ್‌ ಅಧಿಕಾರಿ ಅಮೃತ್‌ ಪೌಲ್‌ ಅವರ ಹಣಕಾಸು ಸಲಹೆಗಾರ ಶಂಭುಲಿಂಗಯ್ಯ ಅವರು ತಮ್ಮಿಂದ ವಶಪಡಿಸಿಕೊಳ್ಳಲಾಗಿರುವ ಲ್ಯಾಪ್‌ಟಾಪ್‌, ಪೆನ್‌ಡ್ರೈವ್‌ ಮತ್ತು ಹಾರ್ಡ್‌ ಡಿಸ್ಕ್‌ಗಳನ್ನು ತಮ್ಮ ಮಧ್ಯಂತರ ವಶಕ್ಕೆ ನೀಡಲು ಬಿಡುಗಡೆಗೊಳಿಸುವಂತೆ ತನಿಖಾಧಿಕಾರಿಗೆ ನಿರ್ದೇಶಿಸಲು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಿಶೇಷ ನ್ಯಾಯಾಲಯ ಈಚೆಗೆ ತಿರಸ್ಕರಿಸಿದೆ.

ಪಿಎಸ್‌ಐ ಹಗರಣಕ್ಕೆ ಸಂಬಂಧಿಸಿದಂತೆ ಪ್ರಾಸಿಕ್ಯೂಷನ್‌ ಸಲ್ಲಿಕೆಯಾಗಿರುವ ಆರೋಪಪಟ್ಟಿಯಲ್ಲಿ 218ನೇ ಸಾಕ್ಷಿಯಾಗಿರುವ ಶಂಭುಲಿಂಗಯ್ಯ ಸಲ್ಲಿಸಿದ್ದ ಅರ್ಜಿಯನ್ನು ಭ್ರಷ್ಟಾಚಾರ ನಿಷೇಧ ಕಾಯಿದೆ ಅಡಿ ಸ್ಥಾಪಿಸಲಾಗಿರುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಕೆ ಎಂ ರಾಧಾಕೃಷ್ಣ ವಜಾ ಮಾಡಿದ್ದಾರೆ.

Judge K M Radhakrishna

ಪಿಐಎಸ್‌ ಪ್ರಕರಣದ ತನಿಖಾಧಿಕಾರಿಗೆ ಮೂರು ಎಚ್‌ ಪಿ ಲ್ಯಾಪ್‌ಟಾಪ್‌, ನಾಲ್ಕು ಸೀಗೇಟ್ಸ್‌ ಹಾರ್ಡ್‌ ಡಿಸ್ಕ್‌, ಎರಡು ಸ್ಯಾನ್‌ಡಿಸ್ಕ್‌ ಕ್ರೂಜರ್‌ ಬ್ಲೇಡ್‌ ಮತ್ತು ಎಂಟು ಜಿ ಬಿ ಪೆನ್‌ಡ್ರೈಗಳನ್ನು ಮರಳಿಸಲು ನಿರ್ದೇಶಿಸಬೇಕು ಎಂದು ಶಂಭುಲಿಂಗಯ್ಯ ತಮ್ಮ ಅರ್ಜಿಯಲ್ಲಿ ಕೋರಿದ್ದರು.

ಪಿಎಸ್‌ಐ ಹಗರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಹೈಗ್ರೌಂಡ್ಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದ್ದು, ತನಿಖಾಧಿಕಾರಿಯು ಜಪ್ತಿ ಮಾಡಿರುವ ವಸ್ತುಗಳು/ಪರಿಕರ/ಸಾಧನಗಳನ್ನು ಹೆಚ್ಚುವರಿ ಆರೋಪ ಪಟ್ಟಿ ಸಲ್ಲಿಸುವಾಗ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ನ್ಯಾಯಾಲಯದ ಅನುಮತಿಯ ಹಿನ್ನೆಲೆಯಲ್ಲಿ ಅರ್ಜಿದಾರರು ಕೋರಿರುವ ಸಾಧನಗಳು ತನಿಖಾಧಿಕಾರಿಗಳ ವಶದಲ್ಲಿವೆ. ಈಗಾಗಲೇ ಪ್ರಕರಣದ ಸಂಖ್ಯೆಯಾಗಿದ್ದು, 43ಕ್ಕೂ ಹೆಚ್ಚು ಆರೋಪಿಗಳ ವಿರುದ್ಧ ವಿಶೇಷ ಪ್ರಕರಣ ದಾಖಲಾಗಿದೆ. ಈ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಅಮೃತ್‌ ಪೌಲ್‌ ಮತ್ತು ಇತರೆ ಆರೋಪಿಗಳು ಗಂಭೀರವಾದ ಭ್ರಷ್ಟಾಚಾರ ಆರೋಪಗಳನ್ನು ಎದುರಿಸುತ್ತಿದ್ದಾರೆ ಎಂದು ನ್ಯಾಯಾಲಯವು ಆದೇಶದಲ್ಲಿ ದಾಖಲಿಸಿದೆ.

ತಮ್ಮ ಉದ್ಯಮ ನಡೆಸಲು ಮತ್ತು ಪುತ್ರಿಯ ಅಧ್ಯಯನಕ್ಕೆ ಲ್ಯಾಪ್‌ಟಾಪ್‌ಗಳು ಅಗತ್ಯವಾಗಿದೆ. ಈಗಾಗಲೇ ಪ್ರಕರಣದಲ್ಲಿ ತನಿಖೆ ಮುಗಿದಿದೆ. ಬಹುದಿನಗಳ ಕಾಲ ವಿದ್ಯುನ್ಮಾನ ಸಾಧನಗಳನ್ನು ಬಳಕೆ ಮಾಡದೇ ಇಟ್ಟರೆ ಅವುಗಳ ಆಂತರಿಕ ಭಾಗಗಳು ನಾಶವಾಗುತ್ತವೆ ಎಂದು ಶಂಭುಲಿಂಗಯ್ಯ ಅರ್ಜಿಯಲ್ಲಿ ವಾದಿಸಿದ್ದಾರೆ. ಹಾಲಿ ಪ್ರಕರಣದಲ್ಲಿ ಶಂಭುಲಿಂಗಯ್ಯ ಅವರು ಅಮೃತ್‌ ಪೌಲ್‌ ಅವರ ಗೆಳೆಯ ಮತ್ತು ಹಣಕಾಸು ಸಲಹೆಗಾರ ಎಂಬುದು ನಿರ್ವಿವಾದ. ನ್ಯಾಯಾಲಯಕ್ಕೆ ಸಲ್ಲಿಸಿರುವ ದಾಖಲೆಗಳು ಮತ್ತು ಸಿಆರ್‌ಪಿಸಿ ಸೆಕ್ಷನ್‌ 164 ಅಡಿಯಲ್ಲಿ ಶಂಭುಲಿಂಗಯ್ಯ ಅವರು ನೀಡಿರುವ ಹೇಳಿಕೆಯಲ್ಲಿ 35ನೇ ಆರೋಪಿ ಅಮೃತ್‌ ಪೌಲ್‌ ಅವರು ಹಗರಣಕ್ಕೆ ಸಂಬಂಧಿಸಿದ 1.35 ಕೋಟಿ ರೂಪಾಯಿ ಹಣವನ್ನು ಶಂಭುಲಿಂಗಯ್ಯ ಅವರ ಬಳಿ ಇರಿಸಿದ್ದರು ಎಂಬುದು ಮೇಲ್ನೋಟಕ್ಕೆ ತಿಳಿದು ಬರುತ್ತದೆ ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.

ಶಂಭುಲಿಂಗಯ್ಯ ಅವರು ತಾವು ಸ್ವೀಕರಿಸಿದ ಹಣವನ್ನು ಪೌಲ್‌ ಅವರು ಸೂಚಿಸಿದ ವ್ಯಕ್ತಿಗಳಿಗೆ ಹೂಡಿಕೆ ಮಾಡಿದ್ದಲ್ಲದೇ, ಹಣದ ಮಾಹಿತಿಯನ್ನು ಲ್ಯಾಪ್‌ಟಾಪ್‌, ಪೆನ್‌ಡ್ರೈವ್‌ ಮತ್ತು ಹಾರ್ಡ್‌ ಡಿಸ್ಕ್‌ ಇತ್ಯಾದಿಯಲ್ಲಿ ದಾಖಲಿಸಿದ್ದರು. ಈ ಗ್ಯಾಜೆಟ್‌ಗಳನ್ನು ಅವರು ಮಧ್ಯಂತರ ಕಸ್ಟಡಿಗೆ ಕೋರುತ್ತಿದ್ದಾರೆ ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.

ವಾಸ್ತವಿಕ ಅಂಶಗಳನ್ನು ಗಮನಿಸಿದರೆ ಅಪರಾಧಕ್ಕೆ ಸಂಬಂಧಿಸಿದ ಸಾಧನಗಳನ್ನು ಶಂಭುಲಿಂಗಯ್ಯ ತಮ್ಮ ಮಧ್ಯಂತರ ಕಸ್ಟಡಿಗೆ ನೀಡಲು ಬಿಡುಗಡೆಗೊಳಿಸುವಂತೆ ಕೋರುತ್ತಿದ್ದಾರೆ. ತನಿಖಾ ಸಂಸ್ಥೆಯು ಆರೋಪ ಪಟ್ಟಿ ಸಲ್ಲಿಸಿದ ಮಾತ್ರಕ್ಕೆ ಜಪ್ತಿ ಮಾಡಿದ ಸಾಧನಗಳನ್ನು ಶಂಭುಲಿಂಗಯ್ಯ ಅವರ ವಶಕ್ಕೆ ನೀಡಲಾಗದು. ಏಕೆಂದರೆ ಅವುಗಳಲ್ಲಿ ದಾಖಲಾಗಿರುವ ದತ್ತಾಂಶ ತಿರುಚುವ ಅಥವಾ ನಾಶಪಡಿಸುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು ಎಂದು ಸರ್ಕಾರಿ ಅಭಿಯೋಜಕರು ಹೇಳಿರುವುದನ್ನು ನಿರಾಕರಿಸಲಾಗದು ಎಂದು ನ್ಯಾಯಾಲಯ ಆದೇಶದಲ್ಲಿ ದಾಖಲಿಸಿದೆ.

ಹೀಗಾಗಿ, ಶಂಭುಲಿಂಗಯ್ಯ ಕೋರಿರುವ ಸಾಧನಗಳನ್ನು ವಿಚಾರಣೆ ಪೂರ್ಣಗೊಳ್ಳುವವರೆಗೆ ಇಟ್ಟುಕೊಳ್ಳುವುದು ಅತ್ಯಂತ ಅಗತ್ಯವಾಗಿದ್ದು, ಹಗರಣಕ್ಕೆ ಸಂಬಂಧಿಸಿದ ಮಾಹಿತಿಯನ್ನು ರಕ್ಷಿಸುವುದು ತೀರ ಅನಿವಾರ್ಯ. ಈ ನೆಲೆಯಲ್ಲಿ ಶಂಭುಲಿಂಗಯ್ಯ ಸಲ್ಲಿಸಿರುವ ಅರ್ಜಿ ಊರ್ಜಿತವಾಗುವುದಿಲ್ಲ ಎಂದು ನ್ಯಾಯಾಲಯ ಆದೇಶದಲ್ಲಿ ದಾಖಲಿಸಿದೆ.

Shambulingaiah Vs High Ground PS.pdf
Preview