Karnataka High Court and Justice H P Sandesh
Karnataka High Court and Justice H P Sandesh 
ಸುದ್ದಿಗಳು

[ಪಿಎಸ್‌ಐ ಹಗರಣ] ಬೇಲಿಯೇ ಎದ್ದು ಹೊಲ ಮೇಯಲೇಕೆ ಬಿಟ್ಟಿರಿ? ಕಳಂಕಿತರ ಪತ್ತೆ ಹಚ್ಚಲಿಲ್ಲವೇಕೆ? ಹೈಕೋರ್ಟ್‌ ಪ್ರಶ್ನೆ

Siddesh M S

ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಪಿಎಸ್‌ಐ) ನೇಮಕಾತಿ ಹಗರಣದಲ್ಲಿ ಬಂಧಿತರಾಗಿರುವ ಆರು ಮಂದಿಯ ಜಾಮೀನು ಮತ್ತು ಒಬ್ಬ ಪೊಲೀಸ್ ಸಬ್‌ಇನ್‌ಸ್ಪೆಕ್ಟರ್‌ ಅವರ ನಿರೀಕ್ಷಣಾ ಜಾಮೀನು ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿರುವ ಕರ್ನಾಟಕ ಹೈಕೋರ್ಟ್ ಬುಧವಾರ ತೀರ್ಪು ಕಾಯ್ದಿರಿಸಿದೆ.

ಪ್ರಕರಣ ಸಂಬಂಧ ಬಂಧಿತರಾಗಿರುವ ಆರೋಪಿಗಳಾದ ಸಿ ಎನ್ ಶಶಿಧರ್, ಆರ್ ಶರತ್ ಕುಮಾರ್, ಎಚ್ ಯು ರಘುವೀರ್, ಕೆ ಸಿ ದಿಲೀಪ್ ಕುಮಾರ್, ಎಚ್ ಆರ್ ಪ್ರವೀಣ್ ಕುಮಾರ್, ಕೆ ಸೂರಿ ನಾರಾಯಣ್ ಅವರ ಜಾಮೀನು ಹಾಗೂ ತಲೆಮರೆಸಿಕೊಂಡಿರುವ ಆರೋಪಿಯಾದ ಬ್ಯಾಡರಹಳ್ಳಿ ಠಾಣೆಯ ಸಬ್ ಇನ್ಸ್‌ಪೆಕ್ಟರ್ ನವೀನ್ ಪ್ರಸಾದ್ ನಿರೀಕ್ಷಣಾ ಜಾಮೀನು ಮನವಿಗಳನ್ನು ಒಟ್ಟಾಗಿ ಸೇರಿಸಿ ನ್ಯಾಯಮೂರ್ತಿ ಎಚ್‌ ಪಿ ಸಂದೇಶ್‌ ಅವರ ನೇತೃತ್ವದ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ಜಾಮೀನು ನೀಡುವಂತೆ ಬಲವಾಗಿ ಮನವಿ ಮಾಡಿದರು. ಇದಕ್ಕೆ ಆಕ್ಷೇಪಿಸಿದ ಅಪರಾಧ ತನಿಖಾ ದಳ (ಸಿಐಡಿ) ಪ್ರತಿನಿಧಿಸಿದ್ದ ಸರ್ಕಾರಿ ಅಭಿಯೋಜಕರಾದ ವಿ ಎಸ್ ಹೆಗ್ಡೆ ಅವರು ಜಾಮೀನು ಅರ್ಜಿಗಳನ್ನು ವಜಾಗೊಳಿಸಬೇಕು ಎಂದು ಕೋರಿದರು.

ವಾದ-ಪ್ರತಿವಾದ ಆಲಿಸಿದ ನ್ಯಾಯಮೂರ್ತಿ ಸಂದೇಶ್ ಅವರು ಸಾಧ್ಯವಾದರೆ ಶುಕ್ರವಾರ ತೀರ್ಪು ಪ್ರಕಟಿಸಲಾಗುವುದು. ಇಲ್ಲವೇ ತೀರ್ಪಿನ ಉಕ್ತಲೇಖನ ನೀಡಲಾಗುವುದು ಎಂದು ತಿಳಿಸಿದರು.

ಸಾಮಾನ್ಯ ಅಪರಾಧ ಕೃತ್ಯವಲ್ಲ

ಅರ್ಜಿದಾರರು ಎಸಗಿರುವುದು ಸಾಮಾನ್ಯ ಅಪರಾಧ ಕೃತ್ಯವಲ್ಲ. ಇದೊಂದು ದೊಡ್ಡ ಹಗರಣ ಹಾಗೂ ಸಮಾಜದ ಮೇಲಿನ ದಾಳಿಯಾಗಿದೆ (ಟೆರರ್‌) ಎಂದು ನ್ಯಾಯಾಲಯ ಸರಿಯಾಗಿಯೇ ಹೇಳಿದೆ. ಒಟ್ಟು 545 ಪಿಎಸ್‌ಐ ಹುದ್ದೆಗಳಿಗೆ 50 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಆದರೆ, ಅರ್ಜಿದಾರರು, ಕೆಲ ಪೊಲೀಸ್ ಅಧಿಕಾರಿಗಳು, ಮಧ್ಯವರ್ತಿಗಳು ಮತ್ತು ಅಭ್ಯರ್ಥಿಗಳು ಒಟ್ಟಾಗಿ ಸೇರಿ ಅಕ್ರಮ ನಡೆಸಿ ಇಡೀ ನೇಮಕಾತಿ ಪ್ರಕ್ರಿಯೆ ರದ್ದುಮಾಡುವ ಪರಿಸ್ಥಿತಿ ಸೃಷ್ಟಿಸಿದ್ದಾರೆ. ಅಭ್ಯರ್ಥಿಗಳ ಓಎಂಆರ್ ಶೀಟುಗಳನ್ನು ತಿದ್ದಲಾಗಿದೆ ಎಂದು ಎಸ್‌ಪಿಪಿ ಪೀಠಕ್ಕೆ ವಿವರಿಸಿದರು.
ಪೊಲೀಸ್‌ ನೇಮಕಾತಿ ವಿಭಾಗದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಅಮೃತ್ ಪೌಲ್, ಸಬ್ ಇನ್ಸ್‌ಪೆಕ್ಟರ್ ಸೇರಿದಂತೆ ಕೆಲ ಪೊಲೀಸ್ ಅಧಿಕಾರಿಗಳೇ ಹಗರಣದಲ್ಲಿ ಭಾಗಿಯಾಗಿದ್ದಾರೆ. ಇದರಿಂದ ಇಡೀ ಪೊಲೀಸ್ ಇಲಾಖೆಗೆ ಕೆಟ್ಟ ಹೆಸರು ಬಂದಿದೆ. ಇದಲ್ಲದೇ ಇನ್ನೂ ಹಲವು ಕಪ್ಪು ಕುರಿಗಳು (ಕಳಂಕಿತರು) ಹಗರಣದಲ್ಲಿ ಭಾಗಿಯಾಗಿದ್ದು, ಅವರನ್ನು ಪತ್ತೆ ಹಚ್ಚಬೇಕಿದೆ. ಅಮೃತ್ ಪೌಲ್ ತನಿಖೆಗೆ ಸಹಕರಿಸದ ಕಾರಣ ಮಂಪುರು ಪರೀಕ್ಷೆಗೆ ಅನುಮತಿ ಕೋರಲಾಗಿದೆ ಎಂದು ಎಸ್‌ಪಿಪಿ ತಿಳಿಸಿದರು.

V S Hegde, State Public Prosecutor

ಬೇಲಿಯೇ ಎದ್ದು ಹೊಲ ಮೇಯಲು ಏಕೆ ಬಿಟ್ಟಿರಿ?

ವಿಚಾರಣೆಯ ಸಂದರ್ಭದಲ್ಲಿ ಹಗರಣದ ಕುರಿತು ಎಸ್‌ಪಿಪಿ ವಿವರಿಸುತ್ತಿದ್ದಾಗ ನ್ಯಾಯಮೂರ್ತಿ ಸಂದೇಶ್‌ ಅವರಯ “ಬೇಲಿಯೇ ಎದ್ದು ಹೊಲ ಮೇಯಲು ಏಕೆ ಬಿಟ್ಟಿರಿ? ಕಪ್ಪು ಕುರಿಗಳನ್ನು ಪತ್ತೆ ಹಚ್ಚುವುದು ಸರ್ಕಾರದ ಕೆಲಸವಲ್ಲವೇ? ಅಧಿಕಾರಿಗಳೇ ಅಕ್ರಮ ನಡೆಸಲು ಬಾಗಿಲು ತೆರೆದಿದ್ದಾರಲ್ಲವೇ? ಅವರನ್ನು ಕಠಿಣವಾಗಿ ದಂಡಿಸುವುದು ಸರ್ಕಾರದ ಜವಾಬ್ದಾರಿಯಲ್ಲವೇ? ಎಂದು ಪ್ರಶ್ನಿಸಿದರು.

ಇದಕ್ಕೆ ಎಸ್‌ಪಿಪಿ ಅವರು “ಯಾವುದೇ ಲೋಪಕ್ಕೆ ಅವಕಾಶವಿಲ್ಲದೆ ಅತ್ಯಂತ ವೈಜ್ಞಾನಿಕ, ವೃತ್ತಿಪರ ಮತ್ತು ಪಾರದರ್ಶಕವಾಗಿ ತನಿಖೆ ನಡೆಸಲಾಗುತ್ತಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲಾ ಕಳಂಕಿತರನ್ನು ಪತ್ತೆ ಹಚ್ಚಲಾಗುವುದು. ಅಕ್ರಮದಲ್ಲಿ ಎಲ್ಲಾ ಅಭ್ಯರ್ಥಿಗಳು ಭಾಗಿಯಾಗಿದ್ದಾರೆ ಎನ್ನಲಾಗದು. ಕೆಲ ಅಭ್ಯರ್ಥಿಗಳ ಪಾತ್ರವಿದ್ದು, ಅವರ ವಿರುದ್ಧ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಲಿದೆ” ಎಂದು ಪೀಠಕ್ಕೆ ಭರವಸೆ ನೀಡಿದರು.

“ಪ್ರಕರಣ ತನಿಖೆ ಮುಂದುವರಿದಿದ್ದು, ಅಮೃತ್ ಪೌಲ್ ಅವರ ಮೊಬೈಲ್ ಪೋನ್ ಅನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ವರದಿ ಬರಬೇಕಿದೆ. ಅದನ್ನು ಆಧರಿಸಿ ಹೆಚ್ಚಿನ ತನಿಖೆ ನಡೆಸಿದರೆ ಮತ್ತಷ್ಟು ಸಂಗತಿಗಳು ಬಯಲಾಗಬಹುದು. ಆರೋಪಿ ಶ್ರೀಧರ್ ಎಂಬುವರಿಂದ 2 ಕೋಟಿ ರೂಪಾಯಿಗೂ ಅಧಿಕ ಹಣ ವಶಪಡಿಸಿಕೊಳ್ಳಲಾಗಿದೆ. ಆ ಹಣ ಯಾರು-ಯಾರಿಂದ ಪಡೆದರು ಎಂಬ ಬಗ್ಗೆ ವಿವರ ಕಲೆ ಹಾಕಬೇಕಿದೆ. ಆರೋಪಿಗಳು ಮತ್ತು ಅಭ್ಯರ್ಥಿಗಳ ಮೊಬೈಲ್‌ ಸಂಭಾಷಣೆ, ಅವರು ಹಣಕಾಸಿಗೆ ಬೇಡಿಕೆಯಿಟ್ಟಿರುವುದು, ಹಣಕ್ಕೆ ಚೌಕಾಸಿ, ಹಣ ಪಾವತಿಯಾದ ಮತ್ತು ವಸೂಲಿ ಮಾಡಿರುವ ಬಗ್ಗೆ ಸಂಪೂರ್ಣ ವಿವರಗಳನ್ನು ಒಳಗೊಂಡ ಸಿಡಿಆರ್ ಲಭ್ಯವಿದೆ. ಹೀಗಾಗಿ, ಅರ್ಜಿದಾರರಿಗೆ ಜಾಮೀನು ನೀಡಬಾರದು” ಎಂದು ಮನವಿ ಮಾಡಿದರು.

ವಿಚಾರಣೆಯ ಒಂದು ಹಂತದಲ್ಲಿ ಪೀಠವು “ಜಾಮೀನು ಮನವಿಗಳನ್ನು ದಂಡ ವಿಧಿಸಿ ವಜಾ ಮಾಡಲು ಅವಕಾಶವಿದೆಯೇ” ಎಂದು ಪ್ರಶ್ನಿಸಿತು. ಇದಕ್ಕೆ ಎಸ್‌ಪಿಪಿ ಅವರು “ಆ ತರಹದ ಐತಿಹ್ಯಗಳಿಲ್ಲ. ಈ ಘನ ನ್ಯಾಯಾಲಯವು ಹಾಗೆ ಮಾಡುವ ಮೂಲಕ ಮಾದರಿಯಾಗಬಹುದು” ಎಂದರು.