High Court of Karnataka 
ಸುದ್ದಿಗಳು

[ಪಿಟಿಸಿಎಲ್‌ ಕಾಯಿದೆ] ಜಮೀನು ಮಾರಾಟ ಮಾಡಿ ಮರಳಿ ಜಮೀನಿನ ಹಕ್ಕು ಪುನರ್‌ ಸ್ಥಾಪಿಸಲು ಕೋರಿದ್ದ ಮೇಲ್ಮನವಿ ವಜಾ

ಪಿಟಿಸಿಎಲ್ ಕಾಯಿದೆಯಡಿ ಸಲ್ಲಿಕೆಯಾಗುವ ಅರ್ಜಿಗಳ ವಿಚಾರಣೆಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಕಾಯಿದೆ ಅಡಿ ನಿಯಮಗಳನ್ನು ಸ್ವಯಂಪ್ರೇರಿತವಾಗಿ ಜಾರಿಗೊಳಿಸುವ ಅಧಿಕಾರ ಹೊಂದಿದ್ದರೂ ಕ್ರಮ ಕೈಗೊಳ್ಳಲು ವಿಳಂಬಿಸುತ್ತಿದ್ದಾರೆ ಎಂದಿರುವ ನ್ಯಾಯಾಲಯ.

Bar & Bench

ಪರಿಶಿಷ್ಟ ಜಾತಿಗೆ (ಎಸ್‌ಸಿ) ಸೇರಿದ ವ್ಯಕ್ತಿಗೆ ಸರ್ಕಾರದಿಂದ ಮಂಜೂರಾಗಿದ್ದ ಜಮೀನನ್ನು ಮತ್ತೊಬ್ಬರಿಗೆ ನೋಂದಣಿ ಮಾಡಿಕೊಟ್ಟು, ಈ ಸಂಗತಿಯನ್ನು ಮರೆಮಾಚಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕೆಲವು ಜಮೀನುಗಳ ಪರಭಾರೆ ನಿಷೇಧ (‍‍‍ಪಿಟಿಸಿಎಲ್‌) ಕಾಯಿದೆ–1978ರ ಅಡಿಯಲ್ಲಿ ಜಮೀನಿನ ಹಕ್ಕು ಪುನರ್‌ ಸ್ಥಾಪಿಸಲು ನ್ಯಾಯಾಲಯದ ಮೆಟ್ಟಿಲೇರಿದ್ದ ಕುಟುಂಬದ ಸದಸ್ಯರಿಗೆ ಕರ್ನಾಟಕ ಹೈಕೋರ್ಟ್ ಈಚೆಗೆ ₹25 ಸಾವಿರ ದಂಡ ವಿಧಿಸಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲ್ಲೂಕಿನ ಸಿಂಗೇನ ಅಗ್ರಹಾರ ವ್ಯಾಪ್ತಿಯಲ್ಲಿ ಚಿಕ್ಕವೆಂಕಟಮ್ಮ ಅವರಿಗೆ ಸರ್ಕಾರದಿಂದ ಜಮೀನು ಮಂಜೂರಾಗಿತ್ತು. ಇದನ್ನು ಅವರು ಮಾರಾಟ ಮಾಡಿದ್ದರು. ತದನಂತರ ಜಮೀನನ್ನು ಪುನಾ ಪಡೆಯಲು ಕಾನೂನು ಹೋರಾಟ ನಡೆಸಿದ್ದ ಚಿಕ್ಕವೆಂಕಟಮ್ಮ ಕುಟುಂಬದ ವಾರಸುದಾರರು ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ವಿ ಕಾಮೇಶ್ವರ ರಾವ್ ಮತ್ತು ಟಿ ಎಂ ನದಾಫ್‌ ನೇತೃತ್ವದ ವಿಭಾಗೀಯ ಪೀಠ ವಜಾ ಮಾಡಿದೆ.

“ದಂಡದ ಮೊತ್ತವನ್ನು ಆರು ವಾರಗಳಲ್ಲಿ ಕರ್ನಾಟಕ ರಾಜ್ಯ ವಕೀಲರ ಕಲ್ಯಾಣ ನಿಧಿಗೆ ಪಾವತಿ ಮಾಡಬೇಕು. ತಪ್ಪಿದಲ್ಲಿ ಹೈಕೋರ್ಟ್ ರಿಜಿಸ್ಟ್ರಾರ್ ಈ ಮೊತ್ತವನ್ನು ಮೇಲ್ಮನವಿದಾರರಿಂದ ವಸೂಲಿ ಮಾಡಬೇಕು” ಎಂದು ನ್ಯಾಯಾಲಯ ನಿರ್ದೇಶಿಸಿದೆ.

“ಪಿಟಿಸಿಎಲ್ ಕಾಯಿದೆಯನ್ನು ಸಾಮಾಜಿಕ ಮತ್ತು ಅರ್ಥಿಕ ತುಳಿತಕ್ಕೆ ಒಳಗಾದವರ ನೆರವಿಗಾಗಿ ಅನುಷ್ಠಾನೊಳಿಸಲಾಗಿದೆ. ಈ ಕಾಯಿದೆಯಡಿ ಮಂಜೂರಾದ ಜಮೀನನ್ನು ಪರಭಾರೆ ಮಾಡುವುದಕ್ಕೆ ನಿಷೇಧವಿದೆ. ಆದರೂ, ಶ್ರೀಮಂತರು ಹಾಗೂ ಪ್ರಬಲರು ಇಂತಹ ಜಮೀನುಗಳನ್ನು ಪಡೆಯಲು ಅನುದಾನಿತರ ಬಡತನ ಮತ್ತು ಅನಕ್ಷರತೆಯನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ” ಎಂದು ವಿಷಾದಿಸಿದೆ.

ಅಂತೆಯೇ, “ಪಿಟಿಸಿಎಲ್ ಕಾಯಿದೆಯಡಿ ಸಲ್ಲಿಕೆಯಾಗುವ ಅರ್ಜಿಗಳ ವಿಚಾರಣೆಗೆ ಅಧಿಕಾರಿಗಳೂ ಸರಿಯಾಗಿ ಸ್ಪಂದಿಸುತ್ತಿಲ್ಲ. ಕಾಯಿದೆ ಅಡಿಯ ನಿಯಮಗಳನ್ನು ಸ್ವಯಂಪ್ರೇರಿತವಾಗಿ ಜಾರಿಗೊಳಿಸುವ ಅಧಿಕಾರ ಹೊಂದಿದ್ದರೂ ಕ್ರಮ ಕೈಗೊಳ್ಳುವಲ್ಲಿ ವಿಳಂಬ ಧೋರಣೆ ತೋರುತ್ತಿದ್ದಾರೆ. ಇದರಿಂದಾಗಿ ಫಲಾನುಭವಿಗಳು ಬಲಿಪಶುಗಳಾಗುವಂತಾಗಿದೆ. ಆದ್ದರಿಂದ, ಸರ್ಕಾರ ಇಂತಹ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಅಗತ್ಯ ಕಾರ್ಯ ವಿಧಾನ ಜಾರಿ ಮಾಡಬೇಕು” ಎಂದು ಪೀಠ ತಾಕೀತು ಮಾಡಿದೆ.

Narayanamma Vs State of Karnataka.pdf
Preview