Chief Justice P B Varale and Justice Krishna S. Dixit 
ಸುದ್ದಿಗಳು

[ಮಹಿಳೆ ವಿವಸ್ತ್ರ] ದ್ರೌಪದಿಯ ವಸ್ತ್ರಾಪಹರಣದಿಂದ ಪಾರು ಮಾಡಲು ಕೃಷ್ಣನಿದ್ದ; ಇಲ್ಲಿ ಯಾರಿದ್ದಾರೆ?: ಹೈಕೋರ್ಟ್‌ ಕಿಡಿ

“ತಕ್ಷಣ ಪೊಲೀಸರು ಸಂತ್ರಸ್ತೆಯ ನೆರವಿಗೆ ಏಕೆ ಧಾವಿಸಲಿಲ್ಲ. ಮೊದಲಿಗೆ ಇಂಥ ಘಟನೆ ನಡೆಯುವುದಕ್ಕೆ ಅವಕಾಶ ನೀಡಿದ್ದಾದರು ಹೇಗೆ?" ಎಂದು ಪ್ರಶ್ನಿಸಿದ ನ್ಯಾಯಾಲಯ.

Bar & Bench

ಬೆಳಗಾವಿ ತಾಲ್ಲೂಕಿನ ಹೊಸ ವಂಟಮುರಿ ಗ್ರಾಮದಲ್ಲಿ ಮಹಿಳೆಯೊಬ್ಬರನ್ನು ವಿವಸ್ತ್ರಗೊಳಿಸಿ ಹಲ್ಲೆ ಮಾಡಿರುವ ಘಟನೆಯ ಬಗ್ಗೆ ಗಂಭೀರ ಆಕ್ಷೇಪ ವ್ಯಕ್ತಪಡಿಸಿದ ಕರ್ನಾಟಕ ಹೈಕೋರ್ಟ್‌ ಗುರುವಾರ ಸಂತ್ರಸ್ತೆ ಅನುಭವಿಸಿರಬಹುದಾದ ಯಾತನೆ ಕುರಿತು ಮಮ್ಮಲ ಮರುಗಿತು.

ಘಟನೆಗೆ ಸಂಬಂಧಿಸಿದಂತೆ ದಾಖಲಿಸಿಕೊಂಡಿರುವ ಸ್ವಯಂಪ್ರೇರಿತ ಪ್ರಕರಣದ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾ. ಕೃಷ್ಣ ಎಸ್‌. ದೀಕ್ಷಿತ್‌ ಅವರ ನೇತೃತ್ವದ ವಿಭಾಗೀಯ ಪೀಠವು ಸ್ವಾತಂತ್ರ್ಯಾನಂತರವೂ ಇಂಥ ಘಟನೆ ನಡೆದಿರುವುದಕ್ಕೆ ನಾಚಿಕೆಯಿಂದ ತಲೆತಗ್ಗಿಸಬೇಕಿದೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿತು.

ಸಂತ್ರಸ್ತೆಯ ಪುತ್ರ ತನ್ನದೇ ಸಮುದಾಯದ ಯುವತಿಯೊಂದಿಗೆ ಪರಾರಿಯಾದ ಹಿನ್ನೆಲೆಯಲ್ಲಿ ಯುವತಿಯ ಕುಟುಂಬಸ್ಥರು ಹುಡುಗನ ತಾಯಿಯನ್ನು ವಿವಸ್ತ್ರಗೊಳಿಸಿ, ಮರಕ್ಕೆ ಕಟ್ಟಿ ಹಲ್ಲೆ ನಡೆಸಿದ್ದರು. “ಈ ಸಂದರ್ಭದಲ್ಲಿ ತಕ್ಷಣ ಪೊಲೀಸರು ಸಂತ್ರಸ್ತೆಯ ನೆರವಿಗೆ ಏಕೆ ಧಾವಿಸಲಿಲ್ಲ. ಮೊದಲಿಗೆ ಇಂಥ ಘಟನೆ ನಡೆಯುವುದಕ್ಕೆ ಅವಕಾಶ ನೀಡಿದ್ದಾದರು ಹೇಗೆ?” ಎಂದು ಖಾರವಾಗಿ ಪೀಠವು ಸರ್ಕಾರವನ್ನು ಪ್ರಶ್ನಿಸಿತು.

ವಿಚಾರಣೆಯ ವೇಳೆ ಮುಖ್ಯ ನ್ಯಾಯಮೂರ್ತಿಗಳು “ಸಂತ್ರಸ್ತ ಮಹಿಳೆಯು ಅನುಭವಿಸಿರುವ ಮಾನಸಿಕ ಯಾತನೆ ನೋಡಿ. ಆಕೆಯ ಮನೆಯಿಂದ ಎಳೆದು ತಂದು, ವಿವಸ್ತ್ರಗೊಳಿಸಿ ಎರಡು ಗಂಟೆಗಳ ಕಾಲ ಆಕೆಯನ್ನು ಥಳಿಸಲಾಗಿದೆ. ಬೆಳಿಗಿನ ಜಾವ 3.30ಕ್ಕೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಆದರೆ, ಆಕೆಯನ್ನು ಮಧ್ಯರಾತ್ರಿ 1 ಗಂಟೆಯಲ್ಲಿ ಮನೆಯಿಂದ ಹೊರಗೆ ಎಳೆದು ತಂದು ಕಂಬಕ್ಕೆ ಕಟ್ಟಿ ಅಮಾನವೀಯವಾಗಿ, ಪ್ರಾಣಿಯ ರೀತಿಯಲ್ಲಿ ದಾಳಿ ನಡೆಸಲಾಗಿದೆ. ಆರೋಪಿಗಳು ಮನುಷ್ಯರೇ? ಪ್ರಾಣಿಗಳಿಗೂ ಒಂದು ಸೂಕ್ಷ್ಮತೆ ಇರುತ್ತದೆ. ಮನುಷ್ಯರು ನಡೆದುಕೊಳ್ಳುವ ರೀತಿ ಇದೇ? ಎರಡು ಗಂಟೆಗಳ ಕಾಲ ಸಂತ್ರಸ್ತೆಯ ಮೇಲೆ ಮೃಗೀಯ ವ್ಯಕ್ತಿಗಳು ದಾಳಿ ನಡೆಸಿದ್ದಾರೆ. ಅವರನ್ನು ಮನುಷ್ಯರು ಎನ್ನಲು ನಾಚಿಕೆಯಾಗುತ್ತದೆ. ಮನುಷ್ಯ ಇಷ್ಟು ಕ್ರೂರಿಯಾಗಲು ಹೇಗೆ ಸಾಧ್ಯ? ಅಮಾನವೀಯ? ರಾಜ್ಯ ಸರ್ಕಾರ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದೆ ಎಂಬುದು ತಿಳಿದಿದೆ. ಆದರೆ, ಪರಿಸ್ಥಿತಿ ನೋಡಿ” ಎಂದು ಬೇಸರಿಸಿದರು.

ನ್ಯಾ. ದೀಕ್ಷಿತ್‌ ಅವರು “ಈ ಘಟನೆ ನಡೆಯಲು ಅವಕಾಶ ನೀಡಿದ್ದೇಕೆ? ಅಲ್ಲಿ ಪೊಲೀಸ್‌ ಗಸ್ತು ಇರಲಿಲ್ಲವೇ? ಪೊಲೀಸರ ಕೆಲಸ ತನಿಖೆ ಮಾಡುವುದಷ್ಟೇ ಅಲ್ಲ, ಘಟನೆಯನ್ನೂ ತಡೆಯುವುದೂ ಸಹ. ತಪ್ಪಿತಸ್ಥ ಪೊಲೀಸ್‌ ಇನ್‌ಸ್ಪೆಕ್ಟರ್‌ ವಿರುದ್ಧ ಏನು ಕ್ರಮಕೈಗೊಳ್ಳಲಾಗಿದೆ” ಎಂದರು.

ಮುಂದುವರಿದು, “ಈ ಘಟನೆಯಿಂದ ಗ್ರಾಮದಲ್ಲಿನ ಇತರೆ ಮಹಿಳೆಯರಿಗೆ ಏನನ್ನಿಸಲಿದೆ? ಸೂಕ್ಷ್ಮಮತಿಯಾದ ಮಹಿಳೆಗೆ ಸಹಜವಾಗಿ ಭಯ ಸೃಷ್ಟಿಯಾಗಲಿದೆ. ಆಕೆ ಈ ದೇಶವನ್ನು ದ್ವೇಷಿಸಲಾರಂಭಿಸಬಹುದು. ಮಹಭಾರತದಲ್ಲಿ ದ್ರೌಪದಿಯ ಸೀರೆ ಅಪಹರಣವಾದಾಗಲೂ ಇದು ನಡೆದಿರಲಿಲ್ಲ. ಇದು ಅದಕ್ಕಿಂತಲೂ ಕ್ರೂರ” ಎಂದರು.

ಇದಕ್ಕೆ ಧ್ವನಿಗೂಡಿಸಿದ ಮುಖ್ಯ ನ್ಯಾಯಮೂರ್ತಿಗಳು “ಅದೃಷ್ಟವಶಾತ್‌ ಮಹಾಭಾರತದಲ್ಲಿ ದ್ರೌಪದಿಗೆ ಸಹಾಯ ಮಾಡಲು ಶ್ರೀಕೃಷ್ಣ ಇದ್ದ. ಇಂದಿನ ಆಧುನಿಕ ಕಾಲಮಾನದಲ್ಲಿ ಈ ಬಡ ದ್ರೌಪದಿಗೆ (ಸಂತ್ರಸ್ತೆ) ಸಹಾಯಲು ಮಾಡಲು ಯಾರಿದ್ದಾರೆ? ಯಾವ ಕೃಷ್ಣನೂ ಸಹಾಯಕ್ಕೆ ಬರುವುದಿಲ್ಲ, ದ್ರೌಪದಿ ಸಹಾಯಕ್ಕಾಗಿ ಅಂಗಲಾಚಿದಾಗ ಕೃಷ್ಣ ಸಹಾಯ ಮಾಡಿದ್ದ. ದುರುದೃಷ್ಟವಶಾತ್‌ ಇದು ದುರ್ಯೋಧನ ಮತ್ತು ದುಶ್ಯಾಸನರ ಜಗತ್ತು. ಇಲ್ಲಿ ಒಬ್ಬೇ ಒಬ್ಬ ಶ್ರೀಕೃಷ್ಣ ಪರಮಾತ್ಮ ಸಹಾಯಕ್ಕೆ ಬರುವುದಿಲ್ಲ” ಎಂದು ಬೇಸರಿಸಿದರು.

ಮುಂದುವರಿದು “ಈ ಘಟನೆಯು ಪುರುಷ ಪ್ರಧಾನ ವ್ಯವಸ್ಥೆ ಎಷ್ಟು ಆಳವಾಗಿದೆ ಎಂಬುದನ್ನು ತೋರಿಸುತ್ತದೆ. ಆರೋಪಿಗಳು ಪುರುಷರು ಎಂದ ಮಾತ್ರಕ್ಕೆ ಅವರು ಮಹಿಳೆಯ ಜೊತೆ ಘೋರವಾಗಿ ನಡೆದುಕೊಳ್ಳಬಹುದೇ? ಪುರುಷನಾದ ಮಾತ್ರಕ್ಕೆ ಮಹಿಳೆಯ ಜೊತೆ ಅಮಾನವೀಯವಾಗಿ ನಡೆದುಕೊಳ್ಳುವ ಸನ್ನದು ನೀಡಿದವರು ಯಾರು? ಇದು ಮಾನಸಿಕತೆಯ ಸಮಸ್ಯೆ ಇರಬಹುದೇ? ಎಂದರು.

“ಇಂಥ ಘಟನೆಗಳನ್ನು ಪೊಲೀಸರು ತಪ್ಪಿಸಬೇಕು. ಯುವಕ-ಯುವತಿ ಪರಾರಿಯಾಗುವ ವಿಚಾರ ಸಣ್ಣ ಹಳ್ಳಿಯಲ್ಲಿ ಕಾಳ್ಗಿಚ್ಚಿನಂತೆ ಹಬ್ಬುತ್ತದೆ. ಬೆಳಗಾವಿ ಜಿಲ್ಲೆಯ ಪೊಲೀಸರು ಪರಿಸ್ಥಿತಿ ಕೈಮೀರದಂತೆ ಜನರಿಗೆ ಎಚ್ಚರಿಸಬೇಕಿತ್ತು” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.

ಅಂತಿಮವಾಗಿ ಪೀಠವು “ರಾಜ್ಯ ಸರ್ಕಾರ ಸಲ್ಲಿಸಿರುವ ಸ್ಥಿತಿಗತಿ ವರದಿ ತೃಪ್ತಿ ತಂದಿಲ್ಲ. ವರದಿಯಲ್ಲಿ ಸಂತ್ರಸ್ತ ಮಹಿಳೆಗೆ ಮನೋವೈಜ್ಞಾನಿಕ ಕೌನ್ಸೆಲಿಂಗ್‌, ಆಕೆಗೆ ಚಿಕಿತ್ಸೆ ನೀಡಿರುವುದು, ಗಾಯದ ಮಾಹಿತಿ ನೀಡಲಾಗಿಲ್ಲ” ಎಂದಿತು.

ಆಗ ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ ಅವರು “ಅಫಿಡವಿಟ್‌ನಲ್ಲಿ ಹೆಚ್ಚುವರಿ ಮಾಹಿತಿಯನ್ನು ಸಲ್ಲಿಸಲಾಗುವುದು” ಎಂದರು. ಈ ಹಿನ್ನೆಲೆಯಲ್ಲಿ ಹೆಚ್ಚುವರಿ ಸ್ಥಿತಿಗತಿ ವರದಿ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ಸೋಮವಾರದವರೆಗೆ ಕಾಲಾವಕಾಶ ನೀಡಲಾಗಿದೆ. ಪ್ರಕರಣದ ತನಿಖೆಯನ್ನು ಎಸಿಪಿಗೆ ವಹಿಸಲಾಗಿದೆ. ಅವರೂ ನ್ಯಾಯಾಲಯದಲ್ಲಿ ಹಾಜರಿದ್ದಾರೆ. ಮುಂದಿನ ವಿಚಾರಣೆ ವೇಳೆಗೆ ಎಸಿಪಿ ಜೊತೆಗೆ ಬೆಳಗಾವಿ ಪೊಲೀಸ್‌ ಆಯುಕ್ತರು ವಿಚಾರಣೆಗೆ ಹಾಜರಾಗಬೇಕು” ಎಂದು ಆದೇಶಿಸಿದೆ.

ಕೊನೆಗೆ ಪೀಠವು “21ನೇ ಶತಮಾನದಲ್ಲಿ ಇಂಥ ಘಟನೆ ನಡೆಯಬಾರದಿತ್ತು. ನಮಗೆ ಮಾತೇ ಹೊರಡದಂತಾಗಿದೆ. ನಾವು ಏನು ಹೇಳುವುದು? ನಮ್ಮ ತಾಂತ್ರಿಕ ಮುನ್ನಡೆ, ಆರ್ಥಿಕ ಶಕ್ತಿ ಗಳಿಕೆಗೆ ಅರ್ಥ ಇಲ್ಲವಾಗಿದೆ. ನಮ್ಮನ್ನು ನಾವು ಮನಷ್ಯರು ಎಂದು ಕರೆದುಕೊಳ್ಳಲಾಗದಿದ್ದರೆ ಎಲ್ಲವೂ ನಿಷ್ಪಲವಾಗಲಿದೆ. ಇದು ಎಲ್ಲರಿಗೂ ನಾಚಿಕೆಗೇಡಿನ ವಿಚಾರ. ಸ್ವಾತಂತ್ರ್ಯ ಬಂದ 75 ವರ್ಷಗಳ ಬಳಿಕ ಈ ಪರಿಸ್ಥಿತಿ ಒಪ್ಪಲಾಗದು. ನಮ್ಮ ಬೇಸರವನ್ನು ಕಠಿಣ ಶಬ್ದಗಳಲ್ಲಿ ವ್ಯಕ್ತಪಡಿಸಬಹುದಷ್ಟೇ” ಎಂದು ಅರೆಕ್ಷಣ ಮೌನಕ್ಕೆ ಜಾರಿದರು.