ಸುದ್ದಿಗಳು

5, 8, 9, 11ನೇ ತರಗತಿ ವಿದ್ಯಾರ್ಥಿಗಳಿಗೆ ಪಬ್ಲಿಕ್‌ ಪರೀಕ್ಷೆ: ಸರ್ಕಾರದಿಂದ ಮೇಲ್ಮನವಿ ಸಲ್ಲಿಕೆ; ಇಂದೇ ವಿಚಾರಣೆ

ಸಿಜೆ ಅಂಜಾರಿಯಾ ಅವರು “ಈ ಪೀಠ ಇರುವುದಿಲ್ಲ. ಹೀಗಾಗಿ ಮತ್ತೊಂದು ಪೀಠವನ್ನು ರಚನೆ ಮಾಡಿ ಇಂದೇ ವಿಚಾರಣೆಗೆ ವ್ಯವಸ್ಥೆ ಮಾಡಲಾಗುವುದು” ಎಂದು ತಿಳಿಸಿದರು.

Bar & Bench

ರಾಜ್ಯ ಪಠ್ಯಕ್ರಮವಿರುವ ಶಾಲೆಗಳ 5, 8, 9 ಮತ್ತು 11ನೇ ತರಗತಿ ಮಕ್ಕಳಿಗೆ ರಾಜ್ಯಮಟ್ಟದ ಪಬ್ಲಿಕ್‌ (ಬೋರ್ಡ್‌) ಪರೀಕ್ಷೆ ನಡೆಸುವ ಸಂಬಂಧ ರಾಜ್ಯ ಸರ್ಕಾರ ಹೊರಡಿಸಿದ್ದ ಸುತ್ತೋಲೆಯನ್ನು ರದ್ದುಪಡಿಸಿರುವ ಏಕಸದಸ್ಯ ಪೀಠದ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿರುವ ಮೇಲ್ಮನವಿ ವಿಚಾರಣೆ ನಡೆಸಲು ಇಂದೇ ವಿಭಾಗೀಯ ಪೀಠ ರಚಿಸುವುದಾಗಿ ಮುಖ್ಯ ನ್ಯಾಯಮೂರ್ತಿ ಹೇಳಿದ್ದಾರೆ.

ಗುರುವಾರ ಕಲಾಪ ಪ್ರಾರಂಭವಾಗುತ್ತಿದ್ದಂತೆ ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಟಿ ಜೆ ಶಿವಶಂಕರೇಗೌಡ ಅವರ ನೇತೃತ್ವದ ವಿಭಾಗೀಯ ಪೀಠದ ಮುಂದೆ ಹೆಚ್ಚುವರಿ ಅಡ್ವೋಕೇಟ್ ಜನರಲ್ ವಿಕ್ರಮ್ ಹುಯಿಲಗೋಳ ಅವರು ಪ್ರಕರಣ ಉಲ್ಲೇಖಿಸಿದರು.

ಮಾರ್ಚ್‌ 11ರಿಂದ ಪಬ್ಲಿಕ್ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ಎಲ್ಲಾ ರೀತಿಯ ಸಿದ್ಧತೆ ನಡೆಸಿಕೊಂಡಿದೆ. ಈ ಹಂತದಲ್ಲಿ ಏಕಸದಸ್ಯ ಪೀಠವು ಶಿಕ್ಷಣ ಇಲಾಖೆ ಸುತ್ತೋಲೆಗಳನ್ನು ರದ್ದುಪಡಿಸಿರುವ ಕಾರಣ ಪರೀಕ್ಷೆ ನಡೆಸಲು ಸಮಸ್ಯೆ ಎದುರಾಗಿದೆ. ಆದ್ದರಿಂದ, ತುರ್ತಾಗಿ ಅರ್ಜಿ ವಿಚಾರಣೆಗೆ ಪರಿಗಣಿಸಬೇಕು. ಏಕಸದಸ್ಯ ಪೀಠದ ಆದೇಶಕ್ಕೆ ತಡೆಯಾಜ್ಞೆ ನೀಡಬೇಕು. ಪರೀಕ್ಷಾ ವೇಳಾಪಟ್ಟಿ ಸಿದ್ದಗೊಂಡಿದೆ ಎಂದು ವಿವರಿಸಿದರು.

ಆಗ ಸಿಜೆ ಅಂಜಾರಿಯಾ ಅವರು “ಒಂದು ಗಂಟೆಯ ಕಾಲ ಮಾತ್ರ ಈ ಪೀಠ ವಿಚಾರಣೆ ನಡೆಸಲಿದೆ. ಹೀಗಾಗಿ ಮತ್ತೊಂದು ಪೀಠವನ್ನು ರಚನೆ ಮಾಡಿ ಇಂದೇ ವಿಚಾರಣೆಗೆ ವ್ಯವಸ್ಥೆ ಮಾಡಲಾಗುವುದು” ಎಂದು ತಿಳಿಸಿದರು.