High Court of Jammu & Kashmir, Srinagar
High Court of Jammu & Kashmir, Srinagar  
ಸುದ್ದಿಗಳು

ಉಗ್ರರ ಅಂತ್ಯಕ್ರಿಯೆಯಲ್ಲಿ ಸಾರ್ವಜನಿಕವಾಗಿ ಪ್ರಾರ್ಥನೆ ಸಲ್ಲಿಸುವುದು ದೇಶ ವಿರೋಧಿ ಚಟುವಟಿಕೆಯಲ್ಲ: ಕಾಶ್ಮೀರ ಹೈಕೋರ್ಟ್

Bar & Bench

ಹತ್ಯೆಗೀಡಾದ ಉಗ್ರರಿಗೆ ಸಾರ್ವಜನಿಕವಾಗಿ ಅಂತ್ಯಕ್ರಿಯೆಯ ಪ್ರಾರ್ಥನೆಗಳನ್ನು ಸಲ್ಲಿಸುವುದು ಸಂವಿಧಾನದ 21ನೇ ವಿಧಿಯಡಿ ದೊರೆತಿರುವ ವೈಯಕ್ತಿಕ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವಂತಹ ರಾಷ್ಟ್ರ ವಿರೋಧಿ ಚಟುವಟಿಕೆ ಎಂದು ಪರಿಗಣಿತವಾಗದು ಎಂಬುದಾಗಿ ಜಮ್ಮು, ಕಾಶ್ಮೀರ ಹಾಗೂ ಲಡಾಖ್‌ ಹೈಕೋರ್ಟ್‌ ಇತ್ತೀಚೆಗೆ ಹೇಳಿದೆ [ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶ ಮತ್ತು ಜಾವಿದ್‌ ಅಹಮದ್‌ ಶಾ ನಡುವಣ ಪ್ರಕರಣ].

ವೈಯಕ್ತಿಕ ಸ್ವಾತಂತ್ರ್ಯದ ಹಕ್ಕು ಅತ್ಯಂತ ಅಮೂಲ್ಯವಾದುದು ಮತ್ತು ಕಾನೂನಿನ ಅಡಿಯಲ್ಲಿ ರೂಪಿಸಲಾದ ಕಾರ್ಯವಿಧಾನದ ಹೊರತಾಗಿ ಅದರಿಂದ ಯಾರೂ ವಂಚಿತರಾಗಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿಗಳಾದ ಅಲಿ ಮೊಹಮ್ಮದ್ ಮಾಗ್ರೆ ಮತ್ತು ಎಂ ಡಿ ಅಕ್ರಮ್ ಚೌಧರಿ ಅವರಿದ್ದ ಪೀಠ ಒತ್ತಿಹೇಳಿತು.

“ಹಳ್ಳಿಯ ಹಿರೀಕರು ಎನ್ನಲಾದ ಇಲ್ಲಿ ಪ್ರತಿವಾದಿಗಳಾಗಿರುವವರ ಸೂಚನೆಯಂತೆ ಹತ್ಯೆಗೀಡಾದ ಉಗ್ರನ ಅಂತ್ಯಕ್ರಿಯೆಯ ವೇಳೆ ಸಾರ್ವಜನಿಕವಾಗಿ ಪ್ರಾರ್ಥನೆ ಸಲ್ಲಿಸುವುದು ಸಂವಿಧಾನದ 21ನೇ ವಿಧಿಯಡಿ ದೊರೆತಿರುವ ವೈಯಕ್ತಿಕ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವಂತಹ ರಾಷ್ಟ್ರ ವಿರೋಧಿ ಚಟುವಟಿಕೆ ಎಂದು ಪರಿಗಣಿತವಾಗದು” ಎಂದು ನ್ಯಾಯಾಲಯ ವಿವರಿಸಿತು.

ಒಬ್ಬ ವ್ಯಕ್ತಿಯು ಕ್ರಿಮಿನಲ್ ಆರೋಪ ಎದುರಿಸುತ್ತಿರುವಾಗ ಅಥವಾ ಅಪರಾಧಕ್ಕಾಗಿ ಶಿಕ್ಷೆಗೊಳಗಾದಾಗ ಮತ್ತು ಜೈಲು ಶಿಕ್ಷೆಗೆ ಗುರಿಯಾದಾಗ ವೈಯಕ್ತಿಕ ಸ್ವಾತಂತ್ರ್ಯ ಮೊಟಕುಗೊಳಿಸಬಹುದು ಎಂದು ಮೇನಕಾ ಗಾಂಧಿ ಮತ್ತು ಕೇಂದ್ರ ಸರ್ಕಾರ ನಡುವಣ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪನ್ನು ಅವಲಂಬಿಸಿರುವುದಾಗಿ ನ್ಯಾಯಾಲಯ ಹೇಳಿತು.

ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯಿದೆ ಅಡಿಯಲ್ಲಿ ಅಪರಾಧ ಎಸಗಿದ್ದ ಪ್ರತಿವಾದಿಗಳಿಗೆ ಜಾಮೀನು ನೀಡುವ ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಗೆ ಸಂಬಂಧಿಸಿದಂತೆ ಈ ಆದೇಶ ನೀಡಲಾಗಿದೆ.

ಭದ್ರತಾ ಪಡೆಗಳೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಸ್ಥಳೀಯ ಉಗ್ರನೊಬ್ಬನನ್ನು ಹತ್ಯೆ ಮಾಡಲಾಗಿತ್ತು. ಉಗ್ರಗಾಮಿಯ ಮೃತದೇಹದ ಅನುಪಸ್ಥಿತಿಯಲ್ಲಿ ಅಂತ್ಯಕ್ರಿಯೆಯ ಪ್ರಾರ್ಥನೆ ಮಾಡಲು ಗ್ರಾಮಸ್ಥರನ್ನು ವ್ಯಕ್ತಿಯೊಬ್ಬ ಪ್ರಚೋದಿಸಿದ್ದ.

ಆತ ಮತ್ತಷ್ಟು ಪ್ರಚೋದಿಸಿದ ಹಿನ್ನೆಲೆಯಲ್ಲಿ ಮಸೀದಿಯ ಇಮಾಮ್‌ ಅಂತ್ಯಕ್ರಿಯೆ ಪ್ರಾರ್ಥನೆ ಸಲ್ಲಿಸಿದ್ದರು. ಈ ವೇಳೆ ಹಾಜರಿದ್ದ ಜನರ ಭಾವನೆಗಳನ್ನು ಬಳಸಿಕೊಂಡು ಅವರನ್ನು ಸ್ವಾತಂತ್ರ್ಯ ಸಿಗುವವರೆಗೂ ಸಂಘರ್ಷದ ಹಾದಿಯಲ್ಲಿ ಮುನ್ನಡೆಯುವಂತೆ ಪ್ರಚೋದಿಸಲಾಯಿತು.

ವಿಚಾರಣಾ ನ್ಯಾಯಾಲಯವು ಆರೋಪಿಗಳಿಗೆ ಜಾಮೀನು ನೀಡುವಾಗ ಅಪರಾಧದ ಎಸಗಿದ ಬಗ್ಗೆ ಇರುವ ಸಾಕಷ್ಟು ಪುರಾವೆಗಳನ್ನು ಪರಿಗಣಿಸಲಿಲ್ಲ ಎಂಬುದು ಸರ್ಕಾರದ ಪ್ರಾಥಮಿಕ ವಾದವಾಗಿತ್ತು.

ಆದರೆ, ಇದನ್ನು ತಳ್ಳಿ ಹಾಕಿದ ಹೈಕೋರ್ಟ್‌ ಕೆಳ ನ್ಯಾಯಾಲಯದ ಆದೇಶದಲ್ಲಿನ ಅವಲೋಕನ ಸರಿಯಾಗಿದೆ ಎಂದಿದೆ. "ಭಾರತದ ಸಂವಿಧಾನದ 21ನೇ ವಿಧಿಯಡಿಯಲ್ಲಿ ಒದಗಿಸಲಾದ ಸ್ವಾತಂತ್ರ್ಯದ ಮೂಲಭೂತ ಹಕ್ಕನ್ನು ಯಾವುದೇ ವ್ಯಕ್ತಿ ಕಸಿದುಕೊಳ್ಳಲು ಸಾಧ್ಯವಿಲ್ಲ" ಎಂದು ಅದು ತಿಳಿಸಿದೆ. ಆರೋಪಿಗಳ ವಿರುದ್ಧ ಜಾಮೀನು ನಿರಾಕರಿಸುವಂತಹ ಯಾವುದೇ ದೋಷಾರೋಪ ಕಂಡುಬಂದಿಲ್ಲ ಎಂದು ಕೂಡ ಹೈಕೋರ್ಟ್ ಒತ್ತಿ ಹೇಳಿದೆ.

"ಆಕ್ಷೇಪಿತ ಆದೇಶದಲ್ಲಿ ಹಸ್ತಕ್ಷೇಪ ಮಾಡಲು ಯಾವುದೇ ಆಧಾರ ಇಲ್ಲದೆ ಇರುವುದರಿಂದ ಅದನ್ನು ಎತ್ತಿಹಿಡಿಯಲಾಗಿದೆ. ಪರಿಣಾಮ, ಎರಡೂ ಮೇಲ್ಮನವಿಗಳನ್ನು ವಜಾಗೊಳಿಸಲಾಗಿದೆ." ಎಂದು ನ್ಯಾಯಾಲಯ ಹೇಳಿದೆ.