ಸರ್ಕಾರಿ ಅಭಿಯೋಜಕರ ನೇಮಕಾತಿಗೆ ಸಂಬಂಧಿಸಿದಂತೆ ಹೊಸದಾಗಿ ಸ್ಥಿತಿಗತಿ ವರದಿ ಸಲ್ಲಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಮಂಗಳವಾರ ಕರ್ನಾಟಕ ಹೈಕೋರ್ಟ್ ನಿರ್ದೇಶಿಸಿದೆ. ಈ ಮಧ್ಯೆ, 104 ಮಂದಿ ಸಹಾಯಕ ಸರ್ಕಾರಿ ಅಭಿಯೋಜಕರನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗಿದೆ. 109 ಅಭ್ಯರ್ಥಿಗಳ ದಾಖಲಾತಿ ಪರಿಶೀಲಿಸಲಾಗಿದೆ. ಸಹಾಯಕ ಸರ್ಕಾರಿ ಅಭಿಯೋಜಕರಿಗೆ ಹಿರಿಯ ಸರ್ಕಾರಿ ಅಭಿಯೋಜಕರಾಗಿ ಪದೋನ್ನತಿ ನೀಡುವ ವಿಚಾರವನ್ನು ಸರ್ಕಾರ ಪರಿಗಣಿಸುವ ಸಾಧ್ಯತೆ ಇದೆ ಎಂದು ಸರ್ಕಾರದ ವಕೀಲರು ಹೈಕೋರ್ಟ್‌ಗೆ ವಿವರಿಸಿದರು.
ರಾಜ್ಯದಾದ್ಯಂತ ಖಾಲಿ ಇರುವ ಸರ್ಕಾರಿ ಅಭಿಯೋಜಕರ ನೇಮಕಾತಿಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಎಂ ಜಿ ಎಸ್ ಕಮಲ್ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.
“ರಾಜ್ಯ ಸರ್ಕಾರವು ಸರ್ಕಾರಿ ಅಭಿಯೋಜಕರ ನೇಮಕಾತಿ ಪ್ರಕ್ರಿಯೆಯನ್ನು ಬಹುತೇಕ ಪೂರ್ಣಗೊಳಿಸಿದ್ದು, ನ್ಯಾಯಾಲಯದ ಆದೇಶಕ್ಕೆ ಸಂಬಂಧಿಸಿದಂತೆ ಸಣ್ಣಪುಟ್ಟ ಅನುಪಾಲನೆ ಬಾಕಿ ಇದೆ. ಈ ಕುರಿತು ಮುಂದಿನ ವಿಚಾರಣೆಗೆ ವೇಳೆಗೆ ಹೊಸದಾಗಿ ಸ್ಥಿತಿಗತಿ ವರದಿ ಸಲ್ಲಿಸಬೇಕು” ಎಂದಿರುವ ಹೈಕೋರ್ಟ್ ವಿಚಾರಣೆಯನ್ನು ಮೂರು ವಾರಗಳ ಕಾಲ ಮುಂದೂಡಿದೆ.
ಇದಕ್ಕೂ ಮುನ್ನ, ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ವಕೀಲ ಮಹೇಂದ್ರ ಅವರು “104 ಮಂದಿ ಸಹಾಯಕ ಸರ್ಕಾರಿ ಅಭಿಯೋಜಕರನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗಿದೆ. ಸರ್ಕಾರಿ ಅಭಿಯೋಜಕರ ಪರೀಕ್ಷೆ ಬರೆದಿದ್ದ ಅಭ್ಯರ್ಥಿಗಳ ಉತ್ತರ ಪತ್ರಿಕೆ ಮೌಲ್ಯಮಾಪನ ನಡೆಸಲಾಗಿದ್ದು, ಯಶಸ್ವಿಯಾದ 161 ಅಭ್ಯರ್ಥಿಗಳ ಪಟ್ಟಿಯನ್ನು 2022ರ ಡಿಸೆಂಬರ್ 15ರಂದು ಪ್ರಕಟಿಸಲಾಗಿದೆ. ಈ ಪೈಕಿ 158 ಮಂದಿ ವೈವಾದಲ್ಲಿ ಭಾಗಿಯಾಗಿದ್ದರು. ಆಯ್ಕೆ ಸಮಿತಿಯು 143 ಮಂದಿಯನ್ನು ಆಯ್ಕೆ ಮಾಡಿದ್ದು, ಈ ಪೈಕಿ ಐವರು ಹೈದರಾಬಾದ್-ಕರ್ನಾಟಕ ಭಾಗದವರಾಗಿದ್ದು, ಉಳಿದ 138 ಮಂದಿ ಕರ್ನಾಟಕದ ಇತರೆ ಭಾಗಗಳಿಗೆ ಸೇರಿದವರಾಗಿದ್ದಾರೆ” ಎಂದು ತಿಳಿಸಿದ್ದಾರೆ.
“ಅಭ್ಯರ್ಥಿಗಳ ಆಯ್ಕೆ ಪಟ್ಟಿಯನ್ನು ಪ್ರಶ್ನಿಸಿ ಕೆಲವು ಅಭ್ಯರ್ಥಿಗಳು ಕರ್ನಾಟಕ ಆಡಳಿತಾತ್ಮಕ ನ್ಯಾಯ ಮಂಡಳಿ (ಕೆಎಸ್‌ಎಟಿ) ಮೆಟ್ಟಿಲೇರಿದ್ದು, ಅದನ್ನು ಈಚೆಗೆ ಕೆಎಸ್‌ಎಟಿ ವಜಾ ಮಾಡಿದೆ. ಔಪಚಾರಿಕ ಪ್ರಕ್ರಿಯೆ ಪಾಲಿಸಿ ಸರ್ಕಾರಿ ಅಭಿಯೋಜಕರನ್ನು ನೇಮಕ ಮಾಡಲು ಸರ್ಕಾರ ಬದ್ಧವಾಗಿದ್ದು, ಕೆಎಸ್‌ಎಟಿಯು ಮಧ್ಯಂತರ ಆದೇಶ ಮಾಡಿದ್ದರಿಂದ ನೇಮಕಾತಿ ಪ್ರಕ್ರಿಯೆ ವಿಳಂಬವಾಗಿತ್ತು. 2023ರ ಫೆಬ್ರವರಿ 7ರಂದು ಆಯ್ಕೆಯಾದ ಅಭ್ಯರ್ಥಿಗಳ ಅಂತಿಮ ಪಟ್ಟಿ ಮಾಡಲಾಗಿದ್ದು, ದಾಖಲಾತಿ ಪರಿಶೀಲನೆ ನಡೆಸಲಾಗುತ್ತಿದೆ. ಈ ಪೈಕಿ 109 ಅಭ್ಯರ್ಥಿಗಳ ದಾಖಲಾತಿ ಪರಿಶೀಲಿಸಲಾಗಿದೆ. ಸಹಾಯಕ ಸರ್ಕಾರಿ ಅಭಿಯೋಜಕರಿಗೆ ಹಿರಿಯ ಸರ್ಕಾರಿ ಅಭಿಯೋಜಕರಾಗಿ ಪದೋನ್ನತಿ ನೀಡುವ ವಿಚಾರವನ್ನು ಸರ್ಕಾರ ಪರಿಗಣಿಸುವ ಸಾಧ್ಯತೆ ಇದೆ” ಎಂದು ತಿಳಿಸಿದ್ದಾರೆ ಎಂದು ನ್ಯಾಯಾಲಯವು ಆದೇಶದಲ್ಲಿ ದಾಖಲಿಸಿ ಕೊಂಡಿತು.
ಸಹಾಯಕ ಸರ್ಕಾರಿ ಅಭಿಯೋಜಕರು ಮತ್ತು (ಎಪಿಪಿ) ಸಹಾಯಕ ಸರ್ಕಾರಿ ವಕೀಲರ (ಎಜಿಪಿ) ನೇಮಕಾತಿಗಾಗಿ 2022ರ ಜುಲೈ 23 ಮತ್ತು 24ರಂದು ನಡೆದ ಪರೀಕ್ಷೆಯಲ್ಲಿ ಭ್ರಷ್ಟಾಚಾರ, ಅಕ್ರಮ ನಡೆದಿರುವ ಕುರಿತು ವ್ಯಾಪಕ ದೂರುಗಳು ಸಲ್ಲಿಕೆಯಾಗಿದ್ದವು. ಈ ಬಗ್ಗೆ ಕೂಡಲೇ ಇಲಾಖಾ ತನಿಖೆ ನಡೆಸಿ, ತಪ್ಪಿತಸ್ಥರ ವಿವರಗಳೊಂದಿಗೆ 10 ದಿನಗಳ ಒಳಗಾಗಿ ವರದಿ ಸಲ್ಲಿಸುವಂತೆ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಚೆಗೆ ಸೂಚಿಸಿರುವುದನ್ನು ಇಲ್ಲಿ ನೆನೆಯಬಹುದಾಗಿದೆ.