BBMP 
ಸುದ್ದಿಗಳು

ಪಾರ್ಸಿ ಅಗ್ನಿ ದೇವಾಲಯದ ಸಮೀಪ ಶೌಚಾಲಯ ನಿರ್ಮಾಣಕ್ಕೆ ಆಕ್ಷೇಪ: ಬಿಬಿಎಂಪಿಗೆ ಹೈಕೋರ್ಟ್‌ ನೋಟಿಸ್‌

ಬಾಳೆಕುಂದ್ರಿ ವೃತ್ತದಲ್ಲಿರುವ ಪಾರ್ಸಿ ಅಗ್ನಿ ದೇವಾಲಯದ ಎದುರುಗಡೆ ಬಿಬಿಎಂಪಿ ಸಾರ್ವಜನಿಕ ಶೌಚಾಲಯ ನಿರ್ಮಿಸುತ್ತಿದೆ. ಇದರಿಂದ ಪ್ರಾರ್ಥನಾ ಮಂದಿರಕ್ಕೆ ಬರುವ ಭಕ್ತರಿಗೆ ಮತ್ತು ಸನ್ನಿಧಾನದ ಪಾವಿತ್ರ್ಯಕ್ಕೆ ಧಕ್ಕೆ ಉಂಟಾಗಲಿದೆ ಎಂದು ಆಕ್ಷೇಪ.

Bar & Bench

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯು (ಬಿಬಿಎಂಪಿ) ನಗರದ ಬಾಳೆಕುಂದ್ರಿ ವೃತ್ತದಲ್ಲಿರುವ ಪಾರ್ಸಿ ಅಗ್ನಿ ಪ್ರಾರ್ಥನಾಲಯದ ಬಳಿ ಸಾರ್ವಜನಿಕ ಶೌಚಾಲಯ ನಿರ್ಮಾಣ ಮಾಡುತ್ತಿರುವುದನ್ನು ಆಕ್ಷೇಪಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಬಿಬಿಎಂಪಿಗೆ ನೋಟಿಸ್ ಜಾರಿಗೊಳಿಸಲು ಕರ್ನಾಟಕ ಹೈಕೋರ್ಟ್‌ ಮಂಗಳವಾರ ಆದೇಶಿಸಿದೆ.

ಬೆಂಗಳೂರು ಪಾರ್ಸಿ ಜೊರಾಸ್ಟ್ರಿಯನ್ ಅಂಜುಮನ್ (ಬಿಪಿಝಡ್‌ಎ) ಗೌರವ ಕಾರ್ಯದರ್ಶಿ ದಿನ್‌ಶಾ ಕೊವಾಸ್‌ಜಿ ಸಲ್ಲಿಸಿರುವ‌ ಅರ್ಜಿಯನ್ನು ನ್ಯಾಯಮೂರ್ತಿ ಅಶೋಕ ಎಸ್‌.ಕಿಣಗಿ ಅವರಿದ್ದ ಏಕಸದಸ್ಯ ಪೀಠ ಪ್ರಕರಣದ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ಪೀಠ ಪ್ರತಿವಾದಿಯಾದ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿತು. ಅಂತೆಯೇ, ಶೌಚಾಲಯ ಉದ್ಘಾಟಿಸದಂತೆ ಮಧ್ಯಂತರ ತಡೆ ನೀಡಿ ವಿಚಾರಣೆಯನ್ನು ಅಕ್ಟೋಬರ್ 30ಕ್ಕೆ ಮುಂದೂಡಿತು.

ಬೆಂಗಳೂರಿನ ಬಾಳೆಕುಂದ್ರಿ ವೃತ್ತದಲ್ಲಿರುವ ಪಾರ್ಸಿ ಅಗ್ನಿ ದೇವಾಲಯದ ಎದುರುಗಡೆ ಬಿಬಿಎಂಪಿ ಸಾರ್ವಜನಿಕ ಶೌಚಾಲಯ ನಿರ್ಮಿಸುತ್ತಿದೆ. ಇದರಿಂದ ಪ್ರಾರ್ಥನಾ ಮಂದಿರಕ್ಕೆ ಬರುವ ಭಕ್ತರಿಗೆ ಮತ್ತು ಸನ್ನಿಧಾನದ ಪಾವಿತ್ರ್ಯಕ್ಕೆ ಧಕ್ಕೆ ಉಂಟಾಗಲಿದೆ. ಆದ್ದರಿಂದ, ಶೌಚಾಲಯ ತೆರವುಗೊಳಿಸಲು ಬಿಬಿಎಂಪಿಗೆ ನಿರ್ದೇಶಿಬೇಕು ಎಂದು ಅರ್ಜಿದಾರರು ಕೋರಿದ್ದಾರೆ.