Supreme Court with Public Interest Litigation 
ಸುದ್ದಿಗಳು

ಕ್ಷುಲ್ಲಕ ಪಿಐಎಲ್‌ಗಳ ಕುರಿತಂತೆ ಸುಪ್ರೀಂ ಕೋರ್ಟ್ 2022ರಲ್ಲಿ ವ್ಯವಹರಿಸಿದ್ದು ಹೇಗೆ ಗೊತ್ತೆ?

ಪಿಐಎಲ್‌ಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯ ಅನೇಕ ಪ್ರಮುಖ ಆದೇಶ ಮತ್ತು ನಿರ್ದೇಶನಗಳನ್ನು ನೀಡಿದ್ದರೂ ತಪ್ಪುಗ್ರಹಿಕೆಯಿಂದ ಕೂಡಿದ ಅಥವಾ ಪ್ರಚೋದಿತ ಇಲ್ಲವೇ ಪ್ರಚಾರಕ್ಕಾಗಿ ಸಲ್ಲಿಸಿದ ಪಿಐಎಲ್‌ಗಳ ಬಗ್ಗೆ ಕೆಂಗಣ್ಣು ಬೀರಿತು.

Bar & Bench

ಕಳೆದ ಹಲವು ವರ್ಷಗಳಿಂದ ಮುಂದುವರೆದಿರುವಂತೆ ಸುಪ್ರೀಂ ಕೋರ್ಟ್‌ 2022ರಲ್ಲಿ ಕೂಡ ಕ್ಷುಲ್ಲಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ (ಪಿಐಎಲ್‌) ಬಗ್ಗೆ ಕ್ರಮ ತೆಗೆದುಕೊಂಡಿದೆ.

ಕೇಂದ್ರ ಕಾನೂನು ಸಚಿವ ಕಿರೆನ್‌ ರಿಜಿಜು ಅವರು ಎರಡು ವಾರಗಳ ಹಿಂದೆಯಷ್ಟೇ  ದೇಶದ ಸಾಂವಿಧಾನಿಕ ನ್ಯಾಯಾಲಯ ನಿಷ್ಪ್ರಯೋಜಕ ಪಿಐಎಲ್‌ಗಳನ್ನು ಆಲಿಸಬಾರದು ಎಂದು ಹೇಳಿದ್ದರು.

ಪಿಐಎಲ್‌ಗಳಿಗೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯ ಅನೇಕ ಪ್ರಮುಖ ಆದೇಶ ಮತ್ತು ನಿರ್ದೇಶನಗಳನ್ನು ನೀಡಿದರೂ ತಪ್ಪುಗ್ರಹಿಕೆಯಿಂದ ಕೂಡಿದ ಅಥವಾ ಪ್ರಚೋದಿತ ಇಲ್ಲವೇ ಪ್ರಚಾರಕ್ಕಾಗಿ ಸಲ್ಲಿಸಿದ ಪಿಐಎಲ್‌ಗಳ ಬಗ್ಗೆ ಕೆಂಗಣ್ಣು ಬೀರಿದೆ. ನ್ಯಾಯಾಲಯದ ಕೋಪಕ್ಕೆ ಕಾರಣವಾದ 2022 ರ ಕೆಲವು ಪಿಐಎಲ್‌ಗಳ ವಿವರ ಹೀಗಿದೆ:

Taj mahal

ಸ್ಮಾರಕ ಕುರಿತಾದ ದಾವೆ

ತಾಜ್‌ ಮಹಲ್‌ ಬಗ್ಗೆ ಪಠ್ಯಪುಸ್ತಕಗಳಲ್ಲಿ ಪ್ರಕಟಿಸಲಾಗಿರುವ ʼತಪ್ಪು ಇತಿಹಾಸʼವನ್ನು ತೆಗೆದುಹಾಕುವಂತೆ ಕೋರಿ ಸಲ್ಲಿಸಿದ್ದ  ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಎಂ ಆರ್ ಶಾ ಮತ್ತು ಸಿ ಟಿ ರವಿಕುಮಾರ್ ಅವರಿದ್ದ ಪೀಠ ವಜಾಗೊಳಿಸಿತು.

ತಾಜ್‌ಮಹಲ್‌ ಸ್ಮಾರಕದ ನಿಜವಾದ ಕಾಲಮಾನ ನಿರ್ಧರಿಸಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ (ಎಎಸ್‌ಐ) ನಿರ್ದೇಶನ ನೀಡುವುದು ಸೇರಿದಂತೆ ಮನವಿಯಲ್ಲಿ ಮಾಡಿದ್ದ ಪ್ರಾರ್ಥನೆಗಳನ್ನು ನ್ಯಾಯಮೂರ್ತಿಗಳು ಮನ್ನಿಸಲಿಲ್ಲ.

 "ನಿಮ್ಮ ಕೋರಿಕೆ ನೋಡಿ. ತಪ್ಪು ಸತ್ಯಗಳನ್ನು ತೆಗೆದುಹಾಕಿ ಎನ್ನುವಿರಾ? ನೀವು ಅದನ್ನು ನಿರ್ಧರಿಸುತ್ತೀರಾ?" ನ್ಯಾಯಾಲಯ ಪ್ರಶ್ನಿಸಿತು.

ಇದೇ ಪೀಠ ತಾಜ್‌ ಮಹಲ್‌ನ ಕೆಲವು ಕೊಠಡಿಗಳನ್ನು ತೆರೆಯಲು ಸೂಚಿಸಬೇಕು ಎಂದು ಸಲ್ಲಿಸಿದ್ದ ಪಿಐಎಲ್‌ ಅನ್ನು ಅಕ್ಟೋಬರ್‌ನಲ್ಲಿ ವಜಾಗೊಳಿಸಿತ್ತು. ತಾಜ್‌ ಮಹಲ್‌ ಶಿವನ ದೇವಸ್ಥಾನವಾಗಿದ್ದು, ಅದನ್ನು 'ತೇಜೊ ಮಹಾಲಯ' ಎಂದು ಇತಿಹಾಸದಲ್ಲಿ ಹೇಳಲಾಗಿದೆ ಎನ್ನುವ ವಾದಕ್ಕೆ ಅಂತ್ಯ ಹಾಡುವ ದೃಷ್ಟಿಯಿಂದ ತಾಜ್‌ ಮಹಲ್‌ನ ಕೆಲವು ಕೊಠಡಿಗಳನ್ನು ತೆರೆಯಲು ಆದೇಶಿಸಬೇಕು ಎಂದು ಕೋರಲಾಗಿತ್ತು. ಇದು ಪ್ರಚಾರ ಹಿತಾಸಕ್ತಿ ಅರ್ಜಿ ಎಂದು ನ್ಯಾ. ಶಾ ಹೇಳಿದ್ದರು.

ಹೆಸರಲ್ಲೇನಿದೆ?

ಪಂಜಾಬ್ ನ್ಯಾಷನಲ್ ಬ್ಯಾಂಕ್ ಮತ್ತು ಬ್ಯಾಂಕ್‌ ಆಫ್‌ ಬರೋಡದ ಅಧಿಕೃತ ಹೆಸರುಗಳಿಂದ ಪಂಜಾಬ್‌ ಮತ್ತು ಬರೋಡಾ ಎಂಬ ಪದಗಳನ್ನು ತೆಗೆದುಹಾಕುವಂತೆ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಹಿರಿಯ ಲೆಕ್ಕ ಪರಿಶೋಧಕ ಓಂಕಾರ್‌ ಶರ್ಮಾ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ವಜಾಗೊಳಿಸಿತು.

ಇಂತಹ ಹೆಸರುಗಳಿಂದಾಗಿ ಬ್ಯಾಂಕ್‌ಗಳು ಪ್ರಾದೇಶಿಕ,  ರಾಷ್ಟ್ರೀಯ ಅಥವಾ ಅಂತರರಾಷ್ಟ್ರೀಯ ಎಂಬುದು ತಿಳಿಯುವುದಿಲ್ಲ ಎಂಬ ಅರ್ಜಿದಾರರ ವಾದವನ್ನು ಸುಪ್ರೀಂ ಕೋರ್ಟ್‌ ಒಪ್ಪಲಿಲ್ಲ. ಇದು ನೀತಿ ನಿರೂಪಣೆಯ ವ್ಯಾಪ್ತಿಗೆ ಬರುವ ವಿಚಾರವಾಗಿದ್ದು ಹೆಸರು ಬದಲಿಸುವುದು ನ್ಯಾಯಾಲಯದ ಕೆಲಸವಲ್ಲ ಎಂದು ಸಿಜೆಐ ಡಿ ವೈ ಚಂದ್ರಚೂಡ್‌ ಮತ್ತು ನ್ಯಾ. ಹಿಮಾ ಕೊಹ್ಲಿ ಅವರಿದ್ದ ಪೀಠ ಹೇಳಿ ಅರ್ಜಿಯನ್ನು ವಜಾಗೊಳಿಸಿತು.

ಮತ್ತೊಂದು ಸಂದರ್ಭದಲ್ಲಿ, ಬಾಂಬೆ ಹೈಕೋರ್ಟ್ ಅನ್ನು ಮಹಾರಾಷ್ಟ್ರ ಹೈಕೋರ್ಟ್ ಎಂದು ಮರುನಾಮಕರಣ ಮಾಡಬೇಕೆಂದು ಕೋರಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್ ಮತ್ತು ವಿಕ್ರಮ್ ನಾಥ್ ಅವರಿದ್ದ  ಸುಪ್ರೀಂ ಕೋರ್ಟ್‌ ಪೀಠ ವಜಾಗೊಳಿಸಿತ್ತು.

ಕಾನೂನು ವಿದ್ಯಾರ್ಥಿಗಳ ಅರ್ಜಿಗಳು

ಕೆಳವರ್ಗದ ಸಮುದಾಯಗಳಿಗೆ ಮೀಸಲಾತಿ ರದ್ದುಗೊಳಿಸುವಂತೆ ಕೋರಿ ಎಲ್‌ಎಲ್‌ಎಂ ವಿದ್ಯಾರ್ಥಿಯೊಬ್ಬರು ಉನ್ನತ ನ್ಯಾಯಾಲಯದ ಮೊರೆ ಹೋಗಿದ್ದರು. ಡಿಸೆಂಬರ್‌ ತಿಂಗಳ ಆರಂಭದಲ್ಲಿ ಪ್ರಕರಣ ವಿಚಾರಣೆಗೆ ಬಂದಾಗ ಸಿಜೆಐ ಚಂದ್ರಚೂಡ್‌ ಮತ್ತು ನ್ಯಾ. ಪಿ ಎಸ್‌ ನರಸಿಂಹ ಅವರಿದ್ದ ಪೀಠ ಅರ್ಜಿಯನ್ನು ಪರಿಗಣಿಸಲು ನಿರಾಕರಿಸಿತು. ʼಅರ್ಜಿ ಹಿಂತೆದುಕೊಳ್ಳದಿದ್ದರೆ ಒಂದು ಲಕ್ಷ ದಂಡ ವಿಧಿಸಬೇಕಾಗುತ್ತದೆ. ಅರ್ಜಿ ಕಾನೂನು ಪ್ರಕ್ರಿಯೆಯನ್ನು ದುರುಪಯೋಗಪಡಿಸಿಕೊಂಡಿದೆʼ ಎಂದು ಕಿಡಿಕಾರಿತ್ತು. ಬಳಿಕ ಅರ್ಜಿಯನ್ನು ಮನವಿದಾರರು ಹಿಂಪಡೆದಿದ್ದರು.

ಅದೇ ರೀತಿ ದೇಶದಾದ್ಯಂತ ಇರುವ ಶಿಕ್ಷಣ ಸಂಸ್ಥೆಗಳಲ್ಲಿ ಏಕರೂಪದ ವಸ್ತ್ರ ಸಂಹಿತೆ ಜಾರಿಗೊಳಿಸುವಂತೆ ಕೋರಿ ಮತ್ತೊಬ್ಬ ಕಾನೂನು ವಿದ್ಯಾರ್ಥಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಲು ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ಸುಧಾಂಶು ಧುಲಿಯಾ ಅವರಿದ್ದ ಪೀಠ ನಿರಾಕರಿಸಿತು. “ಈ ಪ್ರಕರಣ ನ್ಯಾಯಾಲಯಕ್ಕೆ ಬರುವಂಥದ್ದಲ್ಲ. ದೇಶದೆಲ್ಲೆಡೆ ಏಕರೂಪದ ಸಮವಸ್ತ್ರ ಇರಬೇಕು ಎಂದು ಹೇಳಲು ಸಾಧ್ಯವಿಲ್ಲʼ ಎಂಬುದಾಗಿ ನ್ಯಾಯಾಲಯ. ಅರ್ಜಿದಾರರು ಕಡೆಗೆ ಮನವಿ ವಾಪಸ್‌ ಪಡೆದಿದ್ದರು.  

 ಹೇ ಭಗವಾನ್‌

ಸತ್ಸಂಗದ ಸಂಸ್ಥಾಪಕ ಶ್ರೀ ಶ್ರೀ ಠಾಕೂರ್ ಅನುಕುಲಚಂದ್ರ ಅವರನ್ನು "ಪರಮಾತ್ಮ" ಎಂದು ಘೋಷಿಸಬೇಕೆಂದು ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ಡಿಸೆಂಬರ್‌ನಲ್ಲಿ ತಿರಸ್ಕರಿಸಿತು. ತಪ್ಪು ಗ್ರಹಿಕೆಯಿಂದ ಕೂಡಿದ ಅರ್ಜಿ ಸಲ್ಲಿಸಿದ್ದ ದಾವೆದಾರರಿಗೆ ನ್ಯಾಯಮೂರ್ತಿಗಳಾದ ಎಂ ಆರ್ ಶಾ ಮತ್ತು ಸಿ ಟಿ ರವಿಕುಮಾರ್ ಅವರಿದ್ದ ಪೀಠವು ₹ 1 ಲಕ್ಷ ದಂಡ ವಿಧಿಸಿತು.  “ಶ್ರೀ ಠಾಕೂರ್ ಅನುಕೂಲ್‌ಚಂದ್ರ ಅವರನ್ನು ತನ್ನ ದೇವರೆಂದು ಪರಿಗಣಿಸಲು ಅರ್ಜಿದಾರರು ಸ್ವತಂತ್ರರಾಗಿದ್ದರೂ, ಅದನ್ನು ಇತರರ ಮೇಲೆ ಹೇರುವಂತಿಲ್ಲ” ಎಂದು ನ್ಯಾಯಾಲಯ ಹೇಳಿತು,

ಇತ್ತ, ಪುರಿ ಜಗನ್ನಾಥ ದೇವಾಲಯದ ಸುತ್ತ ನಿರ್ಮಾಣ ಕಾಮಗಾರಿ ಪ್ರಶ್ನಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಯನ್ನು ಪ್ರಚಾರ ಹಿತಾಸಕ್ತಿ ಮನವಿ ಎಂದು ಕರೆದು ಸುಪ್ರೀಂ ಕೋರ್ಟ್‌  ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಹಿಮಾ ಕೊಹ್ಲಿ ಅವರಿದ್ದ ಪೀಠ ಜೂನ್‌ನಲ್ಲಿ ವಜಾ ಮಾಡಿತ್ತು.

ಇಂತಹ ಮನವಿಗಳು ನ್ಯಾಯಾಲಯ ಸಮಯ ಪೋಲು ಮಾಡುವುದರಿಂದ ಇಂತಹವುಗಳನ್ನು ಮೊಳಕೆಯಲ್ಲಿಯೇ ಚಿವುಟಬೇಕಿದೆ ಎಂದಿದ್ದ ಪೀಠ ಅರ್ಜಿದಾರರಿಗೆ ₹ 1 ಲಕ್ಷ ದಂಡ ವಿಧಿಸಿತ್ತು.

ಧಾರ್ಮಿಕ ಮೆರವಣಿಗೆಗಳನ್ನು ಕೋಮುಗಲಭೆಗಳೊಂದಿಗೆ ಸಮೀಕರಿಸುವ ಪಿಐಎಲ್‌ಗೆ ಕೂಡ ಸಿಜೆಐ ಡಿ ವೈ ಚಂದ್ರಚೂಡ್‌ ನೇತೃತ್ವದ ಪೀಠ ಡಿಸೆಂಬರ್‌ ಆರಂಭದಲ್ಲಿ ಅಸಮ್ಮತಿ ಸೂಚಿಸಿತು.

Supreme Court and Ashwini Kumar Upadhyay

ಅಶ್ವಿನಿ ಉಪಾಧ್ಯಾಯರ ಪಿಐಎಲ್‌ಗಳು

ಬಿಜೆಪಿ ನಾಯಕ ಮತ್ತು ವಕೀಲ ಅಶ್ವಿನಿ ಉಪಾಧ್ಯಾಯ ಅವರು ಸಲ್ಲಿಸುವ ಪಿಐಎಲ್‌ಗಳ ಮೇಲೆ ಕಣ್ಣಾಡಿಸದೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ಕುರಿತಾದ ಹಿನ್ನೋಟ  ಬರೆಯಲು ಹೊರಡುವ ಯಾವ ಪತ್ರಿಕಾ ವರದಿಯೂ ಪೂರ್ಣವಾಗದು.

ಉಪಾಧ್ಯಾಯ ಅವರ 100 ಕ್ಕೂ ಹೆಚ್ಚು ಪಿಐಎಲ್‌ ಗಳು ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಉಳಿದಿವೆ. ಅವುಗಳಲ್ಲಿ ಕೆಲವು ಅರ್ಜಿಗಳಲ್ಲಿ ಸುಪ್ರೀಂ ಕೋರ್ಟ್‌ ಮಹತ್ವದ ಸೂಚನೆಗಳನ್ನು ನೀಡಿದೆ. ಆದರೂ 2022 ರಲ್ಲಿ ನ್ಯಾಯಾಲಯ ಅವರ ಕೆಲವು ಪಿಐಎಲ್‌ಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ.

ಹೈಕೋರ್ಟ್ ಮತ್ತು ಜಿಲ್ಲಾ ನ್ಯಾಯಾಲಯಗಳಲ್ಲಿ ನ್ಯಾಯಾಧೀಶರ ಸಂಖ್ಯೆ ದ್ವಿಗುಣಗೊಳಿಸಲು ಸೂಚಿಸುವಂತೆ ಅವರು ಮಾಡಿದ್ದ ಮನವಿಯ ಬಗ್ಗೆ ನ್ಯಾಯಾಲಯ ಪ್ರತಿಕೂಲ ಅಭಿಪ್ರಾಯ ವ್ಯಕ್ತಪಡಿಸಿತು.

"ನೀವು ನೋಡುವ ಪ್ರತಿಯೊಂದು ಕೆಟ್ಟದ್ದೂ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಅರ್ಹವಲ್ಲ. ನಿಮ್ಮ ರಾಮಬಾಣ ಸಮರ್ಥನೀಯವಾಗಲಾರದು. ಅಸ್ತಿತ್ವದಲ್ಲಿರುವ ಖಾಲಿ ಹುದ್ದೆಗಳಿಗೆ ನ್ಯಾಯಾಧೀಶರನ್ನು ಭರ್ತಿ ಮಾಡಲು ಪ್ರಯತ್ನಿಸಿ ಆಗ ಅದು ಎಷ್ಟು ಕಷ್ಟ ಎಂದು ನಿಮಗೆ ಅರ್ಥವಾಗುತ್ತದೆ" ಎಂದು ಸಿಜೆಐ ಹೇಳಿದ್ದರು

ಅರ್ಜಿದಾರರದ್ದು ʼಜನಪ್ರಿಯ ವಿಧಾನʼ ಎಂದು ಟೀಕಿಸಿದ ನ್ಯಾಯಾಲಯ ಹೈಕೋರ್ಟ್‌ಗಳಲ್ಲಿ ಈಗ ಇರುವ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವಲ್ಲಿನ ತೊಂದರೆಯನ್ನು ವಿವರಿಸಿತ್ತು.

"ಇದು ಸಂಸತ್ತು ಕಾಯಿದೆಯೊಂದರಲ್ಲಿ ಎಲ್ಲಾ ಪ್ರಕರಣಗಳನ್ನು 6 ತಿಂಗಳೊಳಗೆ ವಿಲೇವಾರಿ ಮಾಡುವುದಾಗಿ ಹೇಳುವಂತೆ ಇದೆ. ಇದು ಆ ರೀತಿ ಆಗದು" ಎಂದು ಸಿಜೆಐ ಚಂದ್ರಚೂಡ್ ಹೇಳಿದ್ದರು. 

ಅಂತೆಯೇ ಜನಸಂಖ್ಯಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಮಗ್ರ ನೀತಿ ಅಥವಾ ವಿಧೇಯಕ ರೂಪಿಸಲು ಕಾನೂನು ಆಯೋಗಕ್ಕೆ ನಿರ್ದೇಶಿಸುವಂತೆ ಕೋರಿ ಉಪಾಧ್ಯಾಯ ಮತ್ತು ಇತರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಲು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಎ ಎಸ್ ಓಕಾ ಅವರಿದ್ದ ಪೀಠ ನಿರಾಕರಿಸಿತ್ತು.

“ಒಂದೇ ದಿನಕ್ಕೆ ಜನಸಂಖ್ಯೆಯನ್ನು ನಿಯಂತ್ರಿಸಲಾಗದು. ಈ ಕುರಿತು ಕಾನೂನು ಆಯೋಗಕ್ಕಾದರೂ ಏನು ನಿರ್ದೇಶಿಸಬೇಕು...” ಎಂದು ನ್ಯಾ. ಕೌಲ್‌ ಕೇಳಿದ್ದರು.

(ಅ)ಗೌರವಯುತ ಅರ್ಜಿಗಳು

ಯೂಟ್ಯೂಬ್‌ನಲ್ಲಿನ ಜಾಹೀರಾತುಗಳು ಚಿತ್ತ ಚಂಚಲತೆಗೆ ಕಾರಣವಾಗುವ ಮೂಲಕ ತನ್ನ ಪರೀಕ್ಷಾ ತಯಾರಿಗೆ ಅಡ್ಡಿಯುಂಟು ಮಾಡಿದ್ದವು ಎಂದು ಆರೋಪಿಸಿ ಯೂಟ್ಯೂಬ್‌ನಿಂದ ₹75 ಲಕ್ಷ ಪರಿಹಾರ ಕೋರಿದ್ದ ಅರ್ಜಿದಾರನೊಬ್ಬನಿಗೆ ನ್ಯಾಯಮೂರ್ತಿ ಕೌಲ್ ನೇತೃತ್ವದ ಪೀಠ ʼಅತಿ ಕಿಡಿಗೇಡಿತನ' ಮತ್ತು ಅವಿವೇಕದಿಂದ ಕೂಡಿದ ಮನವಿ ಎಂದು ತರಾಟೆಗೆ ತೆಗೆದುಕೊಂಡಿತ್ತು.

 ನಿಮಗೆ (ಅರ್ಜಿದಾರನಿಗೆ) ಜಾಹೀರಾತು ಇಷ್ಟವಾಗದಿದ್ದರೆ ಅದನ್ನು ನೋಡಬೇಡಿ. ಏಕೆ ಜಾಹೀರಾತು ನೋಡಿದರು ಎಂಬುದು ಅವರ ಇಚ್ಛೆಗೆ ಬಿಟ್ಟದ್ದು. ಆದರೆ, ಇಂಥ ಅರ್ಜಿಗಳು ನ್ಯಾಯಾಲಯದ ಅಮೂಲ್ಯ ಸಮಯವನ್ನು ವ್ಯರ್ಥ ಮಾಡುವಂಥವಾಗಿವೆ” ಎಂದು ಪೀಠ ಟೀಕಿಸಿ ₹ 25,000 ದಂಡ ವಿಧಿಸಿತ್ತು.

ಮತ್ತೊಂದೆಡೆ, ಚುನಾವಣೋತ್ತರವಾಗಿ ಆರ್‌ಜೆಡಿ ಜೊತೆ ಮೈತ್ರಿ ಮಾಡಿಕೊಂಡು ಮತದಾರರಿಗೆ ವಂಚಿಸಿರುವ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರನ್ನು ಪದಚ್ಯುತಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು (ಪಿಐಎಲ್‌) ಎಂ ಆರ್ ಶಾ ಮತ್ತು ಎಂ ಎಂ ಸುಂದರೇಶ್‌ ಅವರಿದ್ದ ಪೀಠ ತಿರಸ್ಕರಿಸಿತು. ಕೆಲವು ಷರತ್ತುಗಳಿಗೆ ಒಳಪಟ್ಟು ಪಕ್ಷಾಂತರ ವಿರೋಧಿ ಕಾಯಿದೆ ಮತ್ತು ಸಂವಿಧಾನದ 10ನೇ ಶೆಡ್ಯೂಲ್ ಚುನಾವಣೋತ್ತರ ಮೈತ್ರಿಗೆ ಅನುಮತಿ ನೀಡಿವೆ ಎಂದಿತು ಪೀಠ.

ಪ್ರಾಚೀನ ಭಾರತೀಯ ವೈದ್ಯಕೀಯ ಪದ್ಧತಿಯಾದ ಆಯುರ್ವೇದದ ಬಗ್ಗೆ ವಿಕಿಪೀಡಿಯದಲ್ಲಿ ನಕಾರಾತ್ಮಕ ಟೀಕೆಗಳಿದ್ದು ಅವುಗಳನ್ನು ತೆಗೆದು ಹಾಕಲ ಕೋರಿದ್ದ ಮನವಿಯೊಂದನ್ನು ನ್ಯಾಯಮೂರ್ತಿಗಳಾದ ಎ ಎಸ್ ಬೋಪಣ್ಣ ಮತ್ತು ಪಿ ಎಸ್ ನರಸಿಂಹ ಅವರಿದ್ದ  ಪೀಠ ವಜಾಗೊಳಿಸಿತು. ಆಕ್ಷೇಪಾರ್ಹ ಲೇಖನವನ್ನು ಸಂಕಲಿಸಲು ವಿಕಿಪೀಡಿಯಾದಲ್ಲಿ ಅವಕಾಶವಿದೆ ಎಂದು ನ್ಯಾಯಮೂರ್ತಿಗಳು ಅರ್ಜಿದಾರರಿಗೆ ಮೌಖಿಕವಾಗಿ ಸೂಚಿಸಿದ್ದರು.

ಅದೇ ರೀತಿ ಸಂಸ್ಕೃತವನ್ನು ರಾಷ್ಟ್ರೀಯ ಭಾಷೆಯಾಗಿ ಘೋಷಿಸುವಂತೆ ಕೇಂದ್ರ ಸರ್ಕಾರಕ್ಕ ನಿರ್ದೇಶನ ನೀಡಬೇಕು ಎಂದು ಕೋರಿ ನಿವೃತ್ತ ಐಎಎಸ್ ಅಧಿಕಾರಿ ಮತ್ತು ವಕೀಲ ಕೆ.ಜಿ.ವಂಝಾರ ಅವರು ಸಲ್ಲಿಸಿದ್ದ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯ ಕಳೆದ ಸೆಪ್ಟೆಂಬರ್‌ನಲ್ಲಿ ವಜಾಗೊಳಿಸಿತು. ಇದನ್ನು ಪ್ರಶ್ನಿಸಲು ಸಂಸತ್ತು ಸರಿಯಾದ ವೇದಿಕೆಯೇ ವಿನಾ ನ್ಯಾಯಾಲಯವಲ್ಲ ಎಂದು ಎಂ ಆರ್ ಶಾ ಮತ್ತು ಕೃಷ್ಣ ಮುರಾರಿ ಅವರಿದ್ದ ಪೀಠ ಹೇಳಿತು.

ನೋಯ್ಡಾದಲ್ಲಿರುವ ಸೂಪರ್‌ಟೆಕ್ ಅವಳಿ ಗೋಪುರ ಕೆಡವುವ ಬದಲು ವಿಶ್ವವಿದ್ಯಾಲಯ ಅಥವಾ ಆಸ್ಪತ್ರೆಯಂತಹ ಸಾರ್ವಜನಿಕ ಉದ್ದೇಶಕ್ಕಾಗಿ ಬಳಸಿಕೊಳ್ಳುವಂತೆ ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದ ಎನ್‌ಜಿಒ ಒಂದಕ್ಕೆ ಸುಪ್ರೀಂ ಕೋರ್ಟ್‌ ಕಳೆದ ಆಗಸ್ಟ್‌ನಲ್ಲಿ ₹ 5 ಲಕ್ಷ ದಂಡ ವಿಧಿಸಿತ್ತು.

“ಮನವಿಯ ಉದ್ದೇಶ ಸ್ಪಷ್ಟವಾಗಿ ನ್ಯಾಯಾಲಯದ ತೀರ್ಪನ್ನು ಮತ್ತು ನಿರ್ದೇಶನಗಳನ್ನು ಜಾರಿಗೆ ತರದಂತೆ ತಡೆಯುವುದಾಗಿದೆ. ಸಂವಿಧಾನದ 32ನೇ ವಿಧಿಯಡಿ ನ್ಯಾಯವ್ಯಾಪ್ತಿ ಕೋರಿರುವುದು ವಿಚಾರಣೆಯ ಪ್ರಕ್ರಿಯೆಯ ಸ್ಪಷ್ಟ ದುರುಪಯೋಗ. ಆದ್ದರಿಂದ ಅರ್ಜಿ ವಜಾಗೊಳಿಸುದಲ್ಲದೆ ದಂಡ ವಿಧಿಸುವ ಆದೇಶ ನೀಡಲಾಗುತ್ತಿದೆ. ನಿಷ್ಪ್ರಯೋಜಕ ಮತ್ತು ಪ್ರಚೋದನೆಗೊಳಗಾದ ಅರ್ಜಿ ಸಲ್ಲಿಸಿ ಅಧಿಕಾರ ವ್ಯಾಪ್ತಿ ಚಲಾಯಿಸುವಂತೆ ಕೋರಿದಾಗ ನ್ಯಾಯಾಲಯ ದಂಡ ವಿಧಿಸಬಹುದಾಗಿದೆ” ಎಂದು ಪೀಠ ತಿಳಿಸಿತು. 

ದೆಹಲಿಯಲ್ಲಿ 10 ವರ್ಷಕ್ಕಿಂತ ಹಳೆಯ ಡೀಸೆಲ್ ವಾಹನಗಳು ಮತ್ತು 15 ವರ್ಷಕ್ಕಿಂತ ಹಳೆಯ ಪೆಟ್ರೋಲ್ ವಾಹನಗಳ ಮೇಲಿನ ನಿಷೇಧವನ್ನು ಪ್ರಶ್ನಿಸಿದ್ದ ಇಬ್ಬರು ಅರ್ಜಿದಾರರಿಗೆ ನ್ಯಾಯಮೂರ್ತಿಗಳಾದ ಎಲ್ ನಾಗೇಶ್ವರ ರಾವ್, ಎ ಎಸ್ ಬೋಪಣ್ಣ ಹಾಗೂ ಬಿಆರ್ ಗವಾಯಿ ಅವರಿದ್ದ ಪೀಠ ಮೇ ತಿಂಗಳಲ್ಲಿ,  ₹ 50,000 ದಂಡ ವಿಧಿಸಿತ್ತು. ಪಿಐಎಲ್‌ ಕ್ಷುಲ್ಲಕವಾಗಿದ್ದು ಕಾನೂನಿನ ಪ್ರಕ್ರಿಯೆಯ ದುರುಪಯೋಗವಾಗಿದೆ ಎಂದು ನ್ಯಾಯಮೂರ್ತಿಗಳು ತಿಳಿಸಿದ್ದರು.