Supreme Court 

 
ಸುದ್ದಿಗಳು

[ಪ್ರಚಾರ ಹಿತಾಸಕ್ತಿ ಮೊಕದ್ದಮೆ] ಕಾಂಗ್ರೆಸ್‌, ಎಸ್‌ಪಿ, ಆಪ್‌ ಅಭ್ಯರ್ಥಿಗಳ ಅನರ್ಹಗೊಳಿಸಲು ಕೋರಿ ಅರ್ಜಿ: ಸುಪ್ರೀಂ ಗರಂ

"ಈ ಪಿಐಎಲ್‌ ಗುಪ್ತ ಕಾರ್ಯಸೂಚಿಯ ಉದ್ದೇಶ ಹೊಂದಿದೆ ಎನ್ನುವುದು ನಮ್ಮ ಮೂವರ ಅನಿಸಿಕೆಯಾಗಿದೆ. ನಿಮಗೆ ನಾವು ದಂಡ ವಿಧಿಸಬೇಕು," ಎಂದು ಗರಂ ಆದ ಸಿಜೆಐ.

Bar & Bench

ಉತ್ತರ ಪ್ರದೇಶ ಮತ್ತು ಪಂಜಾಬ್‌ ಚುನಾವಣೆಗಳಲ್ಲಿ ಮತದಾರರಿಗೆ ಉಚಿತ ಕೊಡುಗೆಗಳ ಆಶ್ವಾಸನೆ ನೀಡಿರುವ ಕಾಂಗ್ರೆಸ್‌, ಸಮಾಜವಾದಿ ಪಕ್ಷ ಹಾಗೂ ಆಮ್‌ ಆದ್ಮಿ ಪಕ್ಷಗಳ ಅಭ್ಯರ್ಥಿಗಳನ್ನು ಅನರ್ಹಗೊಳಿಸುವಂತೆ ಕೋರಿ ಹಿಂದೂ ಸೇನಾ ಮುಖಂಡರೊಬ್ಬರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು (ಪಿಐಎಲ್‌) ಆಲಿಸಲು ಸುಪ್ರೀಂ ಕೋರ್ಟ್‌ ಗುರುವಾರ ನಿರಾಕರಿಸಿತು.

ಪ್ರಕರಣದ ವಿಚಾರಣೆಯನ್ನು ನಡೆಸಿದ ಸಿಜೆಐ ಎನ್‌ ವಿ ರಮಣ, ನ್ಯಾ. ಎ ಎಸ್‌ ಬೋಪಣ್ಣ ಮತ್ತು ನ್ಯಾ. ಹಿಮಾ ಕೋಹ್ಲಿ ಅವರಿದ್ದ ತ್ರಿಸದಸ್ಯ ಪೀಠವು, ಕೆಲ ನಿರ್ದಿಷ್ಟ ರಾಜಕೀಯ ಪಕ್ಷಗಳನ್ನು ಪಕ್ಷಕಾರರನ್ನಾಗಿ ಮಾಡಿರುವುದನ್ನು ನೋಡಿದರೆ ಈ ಅರ್ಜಿಯು ಪ್ರಚಾರದ ಉದ್ದೇಶದಿಂದ ಕೂಡಿರುವುದಾಗಿದೆ ಎಂದರು. "ಈ ಪಿಐಎಲ್‌ ಗುಪ್ತ ಕಾರ್ಯಸೂಚಿಯ ಉದ್ದೇಶ ಹೊಂದಿದೆ ಎನ್ನುವುದು ನಮ್ಮ ಮೂವರ ಅನಿಸಿಕೆಯಾಗಿದೆ. ನಿಮಗೆ ನಾವು ದಂಡ ವಿಧಿಸಬೇಕು. ಯಾರು ನೀವು?" ಎಂದು ಸಿಜೆಐ ಅರ್ಜಿದಾರರನ್ನು ಕಠಿಣವಾಗಿ ಕೇಳಿದರು.

ಈ ವೇಳೆ ಅರ್ಜಿದಾರ ಪರ ವಕೀಲರು, "ನಾನು ಹಿಂದೂ ಸೇನಾದ ಮುಖಂಡ" ಎಂದು ಅರ್ಜಿದಾರರ ವಿವರ ನೀಡಿದರು. ನೀವೇಕೆ ನಿರ್ದಿಷ್ಟ ಹೆಸರುಗಳನ್ನು ಪ್ರತಿವಾದಿಗಳನ್ನಾಗಿ ಮಾಡಿದ್ದೀರಿ. ಹಾಗೆ ಮಾಡಿರುವುದು ಇದನ್ನು ಉದ್ದೇಶಪೂರ್ವಕ ಅರ್ಜಿಯನ್ನಾಗಿಸುತ್ತದೆ ,"ಎಂದು ನ್ಯಾ. ಬೋಪಣ್ಣ ಹೇಳಿದರು.

ಅಂತಿಮವಾಗಿ ಅರ್ಜಿದಾರರು ಮನವಿಯನ್ನು ಹಿಂಪಡೆದರು.