Arundhati Roy - Mother Mary Comes to M 
ಸುದ್ದಿಗಳು

ಅರುಂಧತಿ ರಾಯ್ ಧೂಮಪಾನದ ಮುಖಪುಟ ಚಿತ್ರ ಪ್ರಶ್ನಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್‌

"ಅವರು ಒಬ್ಬ ಪ್ರಸಿದ್ಧ ಲೇಖಕಿ. ಅವರು ಧೂಮಪಾನವನ್ನ ಉತ್ತೇಜಿಸಿಲ್ಲ" ಎಂದು ನ್ಯಾಯಾಲಯ ಹೇಳಿದೆ.

Bar & Bench

ಲೇಖಕಿ ಅರುಂಧತಿ ರಾಯ್ ಅವರ ಇತ್ತೀಚಿನ ಪುಸ್ತಕ ' ಮದರ್ ಮೇರಿ ಕಮ್ಸ್ ಟು ಮಿ ' ಮುಖಪುಟದಲ್ಲಿ ಕಡ್ಡಾಯ ಆರೋಗ್ಯ ಎಚ್ಚರಿಕೆ ಇಲ್ಲದೆ ಅವರು ಸಿಗರೇಟ್ ಸೇದುತ್ತಿರುವ ಭಾವಚಿತ್ರ ಪ್ರಕಟಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಶುಕ್ರವಾರ ವಜಾಗೊಳಿಸಿದೆ [ರಾಜಸಿಂಹನ್ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ಅಕ್ಟೋಬರ್ 13 ರಂದು ಕೇರಳ ಹೈಕೋರ್ಟ್ ಅರ್ಜಿ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರು.  ತಂಬಾಕು ಉತ್ಪನ್ನಗಳ ಜಾಹೀರಾತುಗಳನ್ನು ನಿಯಂತ್ರಿಸುವ ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ (ಜಾಹೀರಾತು ನಿಷೇಧ ಮತ್ತು ವ್ಯಾಪಾರ ಮತ್ತು ವಾಣಿಜ್ಯ ನಿಯಂತ್ರಣ, ಉತ್ಪಾದನೆ, ಪೂರೈಕೆ ಮತ್ತು ವಿತರಣೆ) ಕಾಯ್ದೆ, 2003 ರ ಸೆಕ್ಷನ್ 5ಅನ್ನು ಕಾಯಿದೆಯನ್ನು ಮುಖಪುಟ ಚಿತ್ರ ಉಲ್ಲಂಘಿಸುತ್ತದೆ ಎಂದು ಅರ್ಜಿದಾರರು ವಾದಿಸಿದ್ದರು.

ಆದರೆ ಅರುಂಧತಿ ಅವರು ಧೂಮಪಾನವನ್ನು ಪ್ರಚಾರ ಮಾಡಿಲ್ಲ ಇಲ್ಲವೇ ಆ ಬಗ್ಗೆ ಜಾಹೀರಾತು ನೀಡಿಲ್ಲ. ಪುಸ್ತಕ ಖರೀದಿಸಿ ಓದುವವರಿಗೆ ಮಾತ್ರ ಚಿತ್ರದ ಪ್ರಭಾವ ಸೀಮಿತವಾಗಿದೆ. ಆದ್ದರಿಂದ, ಯಾವುದೇ ಕಾನೂನು ಉಲ್ಲಂಘನೆಯಾಗಿಲ್ಲ ಎಂದು ಸಿಜೆಐ ಸೂರ್ಯಕಾಂತ್‌ ಮತ್ತು ನ್ಯಾ. ಜೊಯಮಲ್ಯ ಬಾಗ್ಚಿ ಅವರಿದ್ದ ಪೀಠ ನುಡಿಯಿತು.

 "ಅವರ ಸಾಹಿತ್ಯ ಕೃತಿಯಿಂದ 2003 ರ ಕಾಯ್ದೆಯ ಸೆಕ್ಷನ್ 5 ರ ಯಾವುದೇ ಉಲ್ಲಂಘನೆಯಾಗಿಲ್ಲ. ಹೈಕೋರ್ಟ್ ಆದೇಶದಲ್ಲಿ ಹಸ್ತಕ್ಷೇಪ ಮಾಡಲು ನಮಗೆ ಯಾವುದೇ ಕಾರಣ ಸಿಗುತ್ತಿಲ್ಲ. ವಿಶೇಷ ಅನುಮತಿ ಅರ್ಜಿಯನ್ನು ವಜಾಗೊಳಿಸಲಾಗಿದೆ" ಎಂದು ಸುಪ್ರೀಂ ಕೋರ್ಟ್ ಆದೇಶ ತಿಳಿಸಿದೆ.

ಪ್ರಚಾರಕ್ಕಾಗಿ ಇಂತಹ ಅರ್ಜಿಗಳನ್ನು ಸಲ್ಲಿಸದಂತೆ ಅರ್ಜಿದಾರರಿಗೆ ಅದು ಎಚ್ಚರಿಕೆ ನೀಡಿದೆ.

“ಅವರು (ಅರುಂಧತಿ) ಪ್ರಸಿದ್ಧ ಲೇಖಕಿ. ಅವರು ಧೂಮಪಾನ ಪ್ರಚಾರ ಮಾಡಿಲ್ಲ. ಪುಸ್ತಕದಲ್ಲಿ ಎಚ್ಚರಿಕೆ ಇದೆ. ಇದನ್ನೆಲ್ಲಾ ಪ್ರಚಾರಕ್ಕಾಗಿ ಯಾಕೆ ಮಾಡುತೀರಿ? ಪುಸ್ತಕದ ಚಿತ್ರವನ್ನು ನಗರದೆಲ್ಲೆಡೆ ಹೋರ್ಡಿಂಗ್ ಆಗಿ ಹಾಕಿಲ್ಲ. ಪುಸ್ತಕ ತೆಗೆದುಕೊಂಡು ಓದುವವರು ಮಾತ್ರ ಇದನ್ನು ನೋಡುತ್ತಾರೆ. ಚಿತ್ರವನ್ನು ಜಾಹೀರಾತು ಎಂದು ಕರೆಯಲು ಆಗುವುದಿಲ್ಲ. ಪುಸ್ತಕ, ಪ್ರಕಾಶಕರು ಅಥವಾ ಲೇಖಕರಿಗೆ ಸಿಗರೇಟ್ ಜಾಹೀರಾತಿನೊಂದಿಗೆ ಸಂಬಂಧವಿಲ್ಲ. ಇದು ಜಾಹೀರಾತು ಅಲ್ಲ. ನೀವು ಲೇಖಕರ ನಿಲುವುಗಳ ಬಗ್ಗೆ ಭಿನ್ನಾಭಿಪ್ರಾಯ ಹೊಂದಿರಬಹುದು ಹಾಗೆಂದ ಮಾತ್ರಕ್ಕೆ ಸುಳ್ಳು ಪ್ರಕರಣಕ್ಕೆ ಆಸ್ಪದವಿಲ್ಲ” ಎಂದು ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿತು.

ಕೇರಳ ಹೈಕೋರ್ಟ್‌ನಲ್ಲಿ ಪ್ರಕಾಶಕರಾದ ಪೆಂಗ್ವಿನ್ ರ್ಯಾಂಡಮ್‌ ಹೌಸ್‌ ಇಂಡಿಯಾ,  ಅರ್ಜಿದಾರರ ವಾದವನ್ನು ಆಕ್ಷೇಪಿಸಿತ್ತು. ಕೋಟ್ಪಾ ಕಾಯಿದೆ ಸಿಗರೇಟ್‌ ಜಾಹೀರಾತು ನಿಷೇಧಕ್ಕೆ ಮಾತ್ರ ಅನ್ವಯವಾಗಲಿದ್ದು ಪುಸ್ತಕ ಮುಖಪುಟದಲ್ಲಿನ ಕಲಾತ್ಮಕ ಪ್ರಸ್ತುತಿಯನ್ನು ಈ ಕಾಯ್ದೆಯ ವ್ಯಾಪ್ತಿಗೆ ತರಲಾಗದು. ಅಲ್ಲದೆ ಸ್ವಯಂ ಪ್ರೇರಣೆಯಿಂದ ಧೂಮಪಾನದ ಅಪಾಯ ಕುರಿತು ಪುಸ್ತಕದಲ್ಲಿ ಶಾಸನಬದ್ಧ ಎಚ್ಚರಿಕೆಯ ಸಾಲುಗಳನ್ನು ಪ್ರಕಟಿಸಲಾಗಿದೆ ಎಂದಿತ್ತು. ವಾದ ಆಲಿಸಿದ್ದ ಹೈಕೋರ್ಟ್‌ ಪಿಐಎಲ್‌ ತಿರಸ್ಕರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.