BJP
BJP 
ಸುದ್ದಿಗಳು

ಅಭ್ಯರ್ಥಿಗಳ ಕ್ರಿಮಿನಲ್ ಹಿನ್ನೆಲೆ ಪ್ರಕಟಣೆ ವಿವಾದ: ಬಿಜೆಪಿಗೆ ವಿಧಿಸಲಾಗಿದ್ದ ದಂಡದ ಆದೇಶ ಹಿಂಪಡೆದ ಸುಪ್ರೀಂ

Bar & Bench

ಬಿಹಾರದಲ್ಲಿ 2021ರಲ್ಲಿ ನಡೆದ ಚುನಾವಣೆ ವೇಳೆ ಪಕ್ಷದ ಅಭ್ಯರ್ಥಿಗಳ ಕ್ರಿಮಿನಲ್‌ ವಿವರಗಳನ್ನು ಸೂಕ್ತ ರೀತಿಯಲ್ಲಿ ಬಹಿರಂಗಪಡಿಸಬೇಕು ಎಂದಿದ್ದ ತನ್ನ ಸೂಚನೆಗಳನ್ನು ಪಾಲಿಸದ ಕಾರಣಕ್ಕೆ  ಬಿಜೆಪಿಗೆ ₹ 1 ಲಕ್ಷ ದಂಡ ವಿಧಿಸಿ 2021ರಲ್ಲಿ ನೀಡಿದ್ದ ತೀರ್ಪಿನ ಪ್ಯಾರಾಗಳನ್ನು ಸುಪ್ರೀಂ ಕೋರ್ಟ್‌ ಸೋಮವಾರ ಹಿಂಪಡೆದಿದೆ  [ಬಿ ಎಲ್ ಸಂತೋಷ್  ಮತ್ತು ಬ್ರಜೇಶ್ ಸಿಂಗ್ ಇನ್ನಿತರರ ನಡುವಣ ಪ್ರಕರಣ].

"ಇದು ಈ ನ್ಯಾಯಾಲಯದ ಆದೇಶವನ್ನು ಧಿಕ್ಕರಿಸಲು ಮತ್ತು ನಿರ್ಲಕ್ಷಿಸಲು ಉದ್ದೇಶಪೂರ್ವಕ ಮತ್ತು ಬೇಕಂತಲೇ ಮಾಡಿದ ಕೆಲಸ ಎನ್ನಲಾಗದು" ಎಂದು ನ್ಯಾಯಮೂರ್ತಿಗಳಾದ ದಿನೇಶ್ ಮಹೇಶ್ವರಿ ಮತ್ತು ಬಿ ಆರ್ ಗವಾಯಿ ಅವರಿದ್ದ ಪೀಠ ವಿವರಿಸಿದೆ.

ನ್ಯಾಯಾಂಗ ನಿಂದನೆ ಆರೋಪದಲ್ಲಿ ಪಕ್ಷವನ್ನು ತಪ್ಪಿತಸ್ಥರೆಂದು ಪರಿಗಣಿಸಿದ ಸುಪ್ರೀಂ ಕೋರ್ಟ್ ಆದೇಶ ಪ್ರಶ್ನಿಸಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ಸಲ್ಲಿಸಿದ್ದ ಪ್ರಸ್ತುತ ಅರ್ಜಿಯ ಕುರಿತು ಭಾರತೀಯ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್‌ ಕಳೆದ ತಿಂಗಳು ನೋಟಿಸ್ ನೀಡಿತ್ತು.

ಫೆಬ್ರವರಿ 13, 2020ರಲ್ಲಿ ಸುಪ್ರೀಂ ಕೋರ್ಟ್‌ ನೀಡಿದ್ದ ಆದೇಶಕ್ಕೆ ವಿರುದ್ಧವಾಗಿ ಕಡಿಮೆ ಪ್ರಸಾರದ ಪತ್ರಿಕೆಗಳಲ್ಲಿ ಮಾತ್ರ ಬಿಜೆಪಿ ತನ್ನ ಅಭ್ಯರ್ಥಿಗಳ ಕ್ರಿಮಿನಲ್‌ ಪೂರ್ವಾಪರ ಪ್ರಕಟಿಸಿರುವುದನ್ನು ಗಮನಿಸಿದ್ದ ನ್ಯಾಯಮೂರ್ತಿಗಳಾದ ರೋಹಿಂಟನ್  ಫಾಲಿ ನಾರಿಮನ್ (ಈಗ ನಿವೃತ್ತ) ಹಾಗೂ ಬಿ ಆರ್ ಗವಾಯಿ ಅವರಿದ್ದ ಪೀಠ  ₹ 1 ಲಕ್ಷ ಮೊತ್ತದ ದಂಡ ವಿಧಿಸಿತ್ತು. 

ತನ್ನ ಆದೇಶವನ್ನು ಭಾಗಶಃ ಪಾಲಿಸಿದ್ದಕ್ಕಾಗಿ 2021ರ ಆದೇಶದಲ್ಲಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್, ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ), ಸಂಯುಕ್ತ ಜನತಾ ದಳ, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಹಾಗೂ ಲೋಕ ಜನಶಕ್ತಿ ಪಕ್ಷಗಳಿಗೂ (ಎಲ್‌ಜೆಪಿ) ₹ 1 ಲಕ್ಷ ದಂಡ ವಿಧಿಸಲಾಗಿತ್ತು.

ಇಡಿಯಾಗಿ ನಿಯಮ ಪಾಲಿಸದಿದ್ದ ಸಿಪಿಎಂ ಮತ್ತು ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿಗೆ (ಎನ್‌ಸಿಪಿ) ತಲಾ ₹ 5 ಲಕ್ಷ ದಂಡ ವಿಧಿಸಲಾಗಿತ್ತು.

ಸೋಮವಾರ ನಡೆದ ವಿಚಾರಣೆ ವೇಳೆ  ನ್ಯಾ. ಗವಾಯಿ ಅವರು "ಇಲ್ಲಿ ಎರಡು ಅಂಶಗಳಿವೆ. ಒಂದು ಕ್ರಿಮಿನಲ್ ಪೂರ್ವಾಪರ ಹೊಂದಿರುವ ಅಭ್ಯರ್ಥಿಗೆ ಏಕೆ ಆದ್ಯತೆ ನೀಡಲಾಗಿದೆ ಎಂಬುದಕ್ಕೆ ತೃಪ್ತಿದಾಯಕ ಕಾರಣಗಳನ್ನು ನೀಡಲಾಗಿಲ್ಲ, ಅದು ವ್ಯಕ್ತಿನಿಷ್ಠವಾದುದು ಎಂದು ನಾವು ಭಾವಿಸುತ್ತೇವೆ. ಅದು ಉದ್ದೇಶಪೂರ್ವಕವೇ? ಫಾರ್ಮ್‌ C7 ಸಲ್ಲಿಸುವಾಗ ಒಬ್ಬ ಅಭ್ಯರ್ಥಿಯ ಹೆಸರು ಬಿಟ್ಟುಹೋಗಿದೆ. ಆದರೆ ಈ ರೀತಿಯದ್ದು ದೋಷವೇ ಎಂಬುದು  ನಮಗೆ ತಿಳಿದಿಲ್ಲ ... ನಾವು ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ವ್ಯಕ್ತಿನಿಷ್ಠ ಅಂಶಗಳನ್ನು ಹೊಂದಿರುವ ವಲಯ ಪ್ರವೇಶಿಸುತ್ತೇವೆ" ಎಂದರು.

ಇದಕ್ಕೆ ದನಿಗೂಡಿಸಿದ ನ್ಯಾ. ಗವಾಯಿ ಅವರು ಕ್ರಿಮಿನಲ್ ಹಿನ್ನಲೆಯುಳ್ಳ ಅಭ್ಯರ್ಥಿಗಳನ್ನು ಸ್ಪರ್ಧಿಸದಂತೆ ನಿರ್ಬಂಧಿಸುವ ಬಗ್ಗೆ ಸಂಸತ್ತು ನಿರ್ಧಾರ ಕೈಗೊಳ್ಳಬೇಕು. ಅಂತಹ ಅಭ್ಯರ್ಥಿಗಳನ್ನು ಕಣಕ್ಕಿಳಿಸದಂತೆ ಸುಪ್ರೀಂ ಕೋರ್ಟ್ ನಿರ್ಬಂಧಿಸಲು ಸಾಧ್ಯವಿಲ್ಲ ಎಂದು ಹೇಳಿದರು. "ಇದು [ರಾಜಕೀಯ ಪಕ್ಷಗಳಿಗೆ] ದಂಡ ವಿಧಿಸುವುದರ ಬಗ್ಗೆ ಅಲ್ಲ, ಆದರೆ (ರಾಜಕೀಯ ಪಕ್ಷಗಳು) ಕಳಂಕಿತರಾಗುವ ಬಗ್ಗೆ" ಎಂದು ಅವರು ಹೇಳಿದರು.