ಬೆಳಗಾವಿ ಜಿಲ್ಲೆ ರಾಯಬಾಗ ತಾಲ್ಲೂಕಿನ ಹುಬ್ಬಾರವಾಡಿ ಗ್ರಾಮದಲ್ಲಿ ಖಾಸಗಿ ಕಂಪೆನಿಯೊಂದರ ರಾಸಾಯನಿಕ ಗೊಬ್ಬರ ಸಂಗ್ರಹಗಾರಕ್ಕೆ ಹೊಂದಿಕೊಂಡಿರುವ ಪ್ರಾಥಮಿಕ ಶಾಲೆ ಮತ್ತು ಅಂಗನವಾಡಿ ಕೇಂದ್ರದ ಕೊಳವೆಬಾವಿ ನೀರು ಕಲುಷಿತಗೊಳ್ಳುತ್ತಿದೆ ಎಂದು ಆಕ್ಷೇಪಿಸಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಂಬಂಧ ರಾಜ್ಯ ಸರ್ಕಾರ ಹಾಗೂ ಸ್ಥಳೀಯ ಆಡಳಿತಕ್ಕೆ ಕರ್ನಾಟಕ ಹೈಕೋರ್ಟ್ ಬುಧವಾರ ನೋಟಿಸ್ ಜಾರಿಗೊಳಿಸಿದೆ.
ಸ್ಥಳೀಯ ನಿವಾಸಿ ಪಾಂಡುರಂಗ ಮಹದೇವ ಕಾಂಬ್ಳೆ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಲೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ನೇತೃತ್ವದ ವಿಭಾಗೀಯ ಪೀಠವು ಬುಧವಾರ ವಿಚಾರಣೆ ನಡೆಸಿತು.
ಕೆಲ ಕಾಲ ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ಪೀಠವು ಇದೊಂದು ಸಾರ್ವಜನಿಕ ಮಹತ್ವದ ಗಂಭೀರ ವಿಚಾರ. ಅಲ್ಲದೇ, ಅರ್ಜಿ ಸಂಬಂಧ ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯದರ್ಶಿ, ರಾಯಬಾಗ ತಹಶೀಲ್ದಾರ್, ಚಿಕ್ಕೋಡಿ ಕಾರ್ಯಕಾರಿ ಎಂಜಿನಿಯರ್, ಸಹಾಯಕ ಕಾರ್ಯಕಾರಿ ಎಂಜಿನಿಯರ್, ರಾಯಬಾಗ ಉಪ ವಿಭಾಗ, ರಾಯಬಾಗ ಸಿಡಿಪಿಒ, ರಾಯಬಾಗ ಬಿಇಒ, ಹುಬ್ಬಾರವಾಡಿ ಪಿಡಿಒ, ರಾಯಬಾಗ ತಾಲ್ಲೂಕು ಪಂಚಾಯಿತಿ ಕಾರ್ಯಕಾರಿ ಅಧಿಕಾರಿ, ಕಾರ್ಯಕಾರಿ ಎಂಜಿನಿಯರ್ ಹೆಸ್ಕಾಂ ಮತ್ತು ಗಂಗಾ ಕಾವೇರಿ ಗೋದಾವರಿ ಫರ್ಟಿಲೈಸರ್ಸ್ ಪ್ರೈವೇಟ್ ಲಿಮಿಟೆಡ್ ಕಂಪೆನಿಗೆ ನೋಟಿಸ್ ಜಾರಿಗೊಳಿಸಿ ನಾಲ್ಕು ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸಲು ನಿರ್ದೇಶನ ನೀಡಿದ ಪೀಠವು 2024ರ ಜನವರಿ 8ಕ್ಕೆ ವಿಚಾರಣೆ ಮುಂದೂಡಿತು.
ಗಂಗಾ ಕಾವೇರಿ ಗೋದಾವರಿ ಫರ್ಟಿಲೈಸರ್ಸ್ ಪ್ರೈವೇಟ್ ಲಿಮಿಟೆಡ್ ಕಂಪೆನಿಯ ರಾಸಾಯನಿಕ ಗೊಬ್ಬರ ಸಂಗ್ರಹಗಾರ (ಗೋದಾಮಿ) ಕಳೆದ ಏಳು ವರ್ಷಗಳಿಂದ ಹುಬ್ಬಾರವಾಡಿ ಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಗೋದಾಮಿನ ಕಾಂಪೌಂಡ್‌ಗೆ ಹೊಂದಿಕೊಂಡು ಸರ್ಕಾರಿ ಪ್ರಾಥಮಿಕ ಶಾಲೆ ಮತ್ತು ಅಂಗನವಾಡಿ ಕೇಂದ್ರ ಇದೆ. ಇದರಲ್ಲಿ 500 ಮಕ್ಕಳು ಕಲಿಯುತ್ತಿದ್ದಾರೆ. ಗೋದಾಮಿನ ಹತ್ತಿರವೇ ಸಾರ್ವಜನಿಕ ಬೋರ್‌ವೆಲ್ ಇದೆ. ಹುಬ್ಬಾರವಾಡಿ ಗ್ರಾಮ ಮತ್ತು ಶಾಲೆಗೆ ಅದು ಏಕೈಕ ನೀರಿನ ಮೂಲವಾಗಿದೆ. ಗೋದಾಮಿಗೆ ಪ್ರತಿನಿತ್ಯ 40ರಿಂದ 50 ಭಾರಿ ಸರಕು ವಾಹನಗಳು ಬಂದು ಹೋಗುತ್ತವೆ. ಗೋದಾಮಿನ ಆವರಣದಲ್ಲಿ ರಾಸಾಯನಿಕಗಳು ಚೆಲ್ಲುವುದರಿಂದ ಗೋದಾಮಿನಲ್ಲಿ ಬಳಸುವ ಮತ್ತು ಲಾರಿ ಚಾಲಕರು ಸ್ನಾನ ಮಾಡು ನೀರಿನೊಂದಿಗೆ ಆ ರಾಸಾಯನಿಕಗಳು ಕೊಳವೆಬಾವಿ ನೀರಿಗೆ ಸೇರಿ ನೀರು ಕಲುಷಿತಗೊಳ್ಳುತ್ತಿದೆ. ಈ ಸಂಬಂಧ ಸ್ಥಳೀಯ ಆಡಳಿತ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದ್ದರೂ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಅರ್ಜಿಯಲ್ಲಿ ದೂರಲಾಗಿದೆ.
ಆದ್ದರಿಂದ, ಗೋದಾಮು ಸ್ಥಳಾಂತರಿಸಲು ಅರ್ಜಿದಾರರು ನೀಡಿರುವ ಮನವಿ, ನೀರು ಕಲುಷಿತಗೊಳ್ಳುತ್ತಿರುವುದನ್ನು ತಡೆಯಲು ಕ್ರಮ ಕೈಗೊಳ್ಳುವಂತೆ ಕೋರಿ ಶಾಲಾ ಮುಖ್ಯ ಶಿಕ್ಷಕರು ಸಲ್ಲಿಸಿರುವ ಹಲವು ಮನವಿಗಳನ್ನು ಪರಿಗಣಿಸುವಂತೆ ಹಾಗೂ ಗ್ರಾಮಸ್ಥರು ಸಲ್ಲಿಸಿರುವ ಮನವಿಗಳನ್ನು ಸ್ಥಳೀಯ ಪಂಚಾಯಿತಿ ಪಿಡಿಒ ಸಂಬಂಧಪಟ್ಟ ಅಧಿಕಾರಿಗಳಿಗೆ ರವಾನಿಸಿದ್ದು, ಅದರಂತೆ ಕ್ರಮ ಜರುಗಿಸಲು ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ. ಅರ್ಜಿ ವಿಚಾರಣೆ ಮುಗಿಯುವ ತನಕ ಗೋದಾಮಿನ ಕಾರ್ಯನಿರ್ವಹಣೆ ಸ್ಥಗಿತಗೊಳಿಸಲು ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಮಧ್ಯಂತರ ಮನವಿ ಮಾಡಲಾಗಿದೆ.ಅರ್ಜಿದಾರರ ಪರ ವಕೀಲ ಎನ್ ಆರ್ ಹರೀಶ್ ವಾದ ಮಂಡಿಸಿದರು.