ಸುದ್ದಿಗಳು

ಸಾವರ್ಕರ್‌ ವಿರುದ್ಧದ ಮಾನಹಾನಿ ಪ್ರಕರಣ: ರಾಹುಲ್‌ಗೆ ಸಮನ್ಸ್‌ ಜಾರಿಗೊಳಿಸಿದ ಪುಣೆ ನ್ಯಾಯಾಲಯ

ದಿವಂಗತ ವಿನಾಯಕ ದಾಮೋದರ ಸಾವರ್ಕರ್ ಅವರ ಮೊಮ್ಮಗ ಸಾತ್ಯಕಿ ಸಾವರ್ಕರ್ ಅವರು ರಾಹುಲ್‌ ಗಾಂಧಿಯವರ ವಿರುದ್ಧ ಮಾನಹಾನಿ ಮೊಕದ್ದಮೆ ದಾಖಲಿಸಿದ್ದಾರೆ.

Bar & Bench

ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿಯವರು ವಿನಾಯಕ ದಾಮೋದರ ಸಾವರ್ಕರ್ ವಿರುದ್ಧ ಇಂಗ್ಲೆಂಡ್‌ಗೆ ಭೇಟಿ ನೀಡಿದ್ದ ವೇಳೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಲಾದ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಪುಣೆ ನ್ಯಾಯಾಲಯವು ರಾಹುಲ್ ಅವರಿಗೆ ಸಮನ್ಸ್‌ ಜಾರಿಗೊಳಿಸಿದೆ. ಆಗಸ್ಟ್ 19 ರಂದು ತನ್ನ ಮುಂದೆ ಹಾಜರಾಗುವಂತೆ ರಾಹುಲ್ ಅವರಿಗೆ ಆದೇಶಿಸಲಾಗಿದೆ.

ದಿವಂಗತ ವಿನಾಯಕ ದಾಮೋದರ ಸಾವರ್ಕರ್ ಅವರ ಮೊಮ್ಮಗ ಸಾತ್ಯಕಿ ಸಾವರ್ಕರ್ ಅವರು ರಾಹುಲ್‌ ಗಾಂಧಿಯವರ ವಿರುದ್ಧ ದೂರು ದಾಖಲಿಸಿದ್ದಾರೆ. ಪುಣೆಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಅಕ್ಷಿ ಜೈನ್ ಮೇ 30 ರಂದು ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ (ಸಿಆರ್‌ಪಿಸಿ) ಸೆಕ್ಷನ್ 204 ರ ಅಡಿಯಲ್ಲಿ ಪ್ರಕರಣದ ಸಂಬಂಧ ಪ್ರಕ್ರಿಯೆಯನ್ನು ಮುಂದುವರಿಸಲು ಆದೇಶ ಹೊರಿಡಿಸಿದ್ದಾರೆ.

ಇದಕ್ಕೂ ಮುನ್ನ ನ್ಯಾಯಾಧೀಶರು ಮಾನಹಾನಿ ದೂರಿನ ಕುರಿತು ಸೆಕ್ಷನ್ 202, ಸಿಆರ್‌ಪಿಸಿ ಪ್ರಕಾರ ತನಿಖೆ ನಡೆಸುವಂತೆ ಪುಣೆ ಪೊಲೀಸರಿಗೆ ಸೂಚಿಸಿದ್ದರು. ಪೊಲೀಸರು ಮೇ 27 ರಂದು ನ್ಯಾಯಾಧೀಶರ ಮುಂದೆ ತನ್ನ ತನಿಖಾ ವರದಿಯನ್ನು ಸಲ್ಲಿಸಿದ್ದರು. ಇದರ ನಂತರ, ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಅವರು ದೂರಿನ ಆಧಾರದಲ್ಲಿ ರಾಹುಲ್‌ ಗಾಂಧಿ ವಿರುದ್ಧ ಪ್ರಕ್ರಿಯೆ ಮುಂದುವರಿಸಲು ಅನುಮತಿಸಿದ್ದಾರೆ.

ರಾಹುಲ್‌ ಗಾಂಧಿ ಅವರು ಸಾವರ್ಕರ್ ವಿರುದ್ಧ "ಪದೇ ಪದೇ ಮಾನಹಾನಿ" ಮಾಡುತ್ತಿದ್ದಾರೆ ಎಂದು ಸಾತ್ಯಕಿ ಸಲ್ಲಿಸಿದ್ದ ದೂರಿನಲ್ಲಿ ಆರೋಪಿಸಲಾಗಿದೆ. ಮಾರ್ಚ್ 5, 2023 ರಂದು ಬ್ರಿಟನ್‌ನಲ್ಲಿ ಸಾಗರೋತ್ತರ ಕಾಂಗ್ರೆಸ್‌ನ ಸಭೆಯನ್ನು ಉದ್ದೇಶಿಸಿ ಗಾಂಧಿ ಮಾತನಾಡುತ್ತಿದ್ದಾಗ ಸಾರ್ವಕರ್‌ ಅವರಿಗೆ ಮಾನಹಾನಿ ಉಂಟುಮಾಡುವಂತಹ ಹೇಳಿಕೆಗಳನ್ನು ನೀಡಿದ್ದರು. ಗಾಂಧಿಯವರು ಸಾವರ್ಕರ್ ವಿರುದ್ಧ ಉದ್ದೇಶಪೂರ್ವಕವಾಗಿ ಸಂಬಂಧವಿಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ತಾವು ಹೇಳುತ್ತಿರುವುದು ಸುಳ್ಳು ಎಂದು ಗೊತ್ತಿದ್ದೂ ಅವರ ಖ್ಯಾತಿಗೆ ಧಕ್ಕೆ ತರುತ್ತಾರೆ ಎಂದು ದೂರುದಾರರು ಹೇಳಿದ್ದಾರೆ.

ತನಗೆ ಮತ್ತು ತನ್ನ ಕುಟುಂಬಕ್ಕೆ ಮಾನಸಿಕ ಯಾತನೆ ಉಂಟು ಮಾಡಲು ಗಾಂಧಿ ಉದ್ದೇಶಪೂರ್ವಕವಾಗಿ ಈ ಮಾತುಗಳನ್ನು ಹೇಳಿದ್ದಾರೆ ಎಂದು ಅರ್ಜಿದಾರರು ಆರೋಪಿಸಿದ್ದು, ಪುಣೆಯ ಜುಡಿಷಿಯಲ್‌ ಮ್ಯಾಜಿಸ್ಟ್ರೇಟ್ ಮುಂದೆ ದೂರು ಸಲ್ಲಿಸಿದ್ದರು. ರಾಹುಲ್‌ ಗಾಂಧಿಯವರು "ಮಾನಹಾನಿಕರ ಆರೋಪಗಳ" ಭಾಷಣವನ್ನು ಇಂಗ್ಲೆಂಡ್‌ನಲ್ಲಿ ಮಾಡಿದ್ದರೂ, ಅದರ ಪರಿಣಾಮವನ್ನು ಪುಣೆಯಲ್ಲಿ ಅನುಭವಿಸಲಾಯಿತು ಏಕೆಂದರೆ ಅದು ಭಾರತದಾದ್ಯಂತ ಪ್ರಕಟವಾಯಿತು ಮತ್ತು ಪ್ರಸಾರವಾಯಿತು ಎಂದು ಅವರು ಆಕ್ಷೇಪಿಸಿದ್ದರು.