ರೈತರ ಪ್ರತಿಭಟನೆ, ದೆಹಲಿ-ಹರಿಯಾಣ ಗಡಿ, ಗಾಜಿಪುರ
ರೈತರ ಪ್ರತಿಭಟನೆ, ದೆಹಲಿ-ಹರಿಯಾಣ ಗಡಿ, ಗಾಜಿಪುರ 
ಸುದ್ದಿಗಳು

ಯುವ ರೈತನ ಸಾವಿಗೆ ಖಂಡನೆ: ನಾಳೆ ಕರ್ತವ್ಯದಿಂದ ದೂರವಿರಲು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ವಕೀಲರ ಸಂಘ ನಿರ್ಧಾರ

Bar & Bench

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತರು ನಡೆಸುತ್ತಿರುವ 'ದೆಹಲಿ ಚಲೋ' ಮೆರವಣಿಗೆ ವೇಳೆ ನಿನ್ನೆ ಪೊಲೀಸರು ಮತ್ತು ರೈತರ ನಡುವೆ ಉಂಟಾದ ಘರ್ಷಣೆಯಿಂದಾಗಿ 21 ವರ್ಷದ ರೈತರೊಬ್ಬರು ಮೃತಪಟ್ಟಿದ್ದನ್ನು ವಿರೋಧಿಸಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ವಕೀಲರ ಸಂಘದ ಕಾರ್ಯಕಾರಿ ಸಮಿತಿ (ಇಸಿ) ಫೆಬ್ರವರಿ 23ರಂದು ಶುಕ್ರವಾರ ಕರ್ತವ್ಯದಿಂದ ದೂರ ಇರಲು ನಿರ್ಧರಿಸಿದೆ.

"ತಾನು ರೈತ ಸಂಘಟನೆಗೆ ನಿರಂತರ ಬೆಂಬಲ ಸೂಚಿಸಿರುವೆ. ಪೊಲೀಸರ ಅತಿರೇಕದಿಂದಾಗಿ ಯುವ ರೈತನೊಬ್ಬ ಪ್ರಾಣ ಕಳೆದುಕೊಂಡಿದ್ದು ವಿಷಾದನೀಯ ಮತ್ತು ಖಂಡನೀಯ. ಈ ಹಿನ್ನೆಲೆಯಲ್ಲಿ ಕಾರ್ಯಕಾರಿ ಸಮಿತಿಯು 23/02/2024 ರಂದು ಕೆಲಸದಿಂದ ದೂರವಿರಲು ನಿರ್ಧರಿಸಿದೆ" ಎಂದು ಸಂಘ ಹೇಳಿದೆ.

ಆದರೆ ಹರಿಯಾಣ ಅಡ್ವೊಕೇಟ್ ಜನರಲ್ ಬಲದೇವ್ ರಾಜ್ ಮಹಾಜನ್ ಅವರ ಕಚೇರಿ ಈ ಕ್ರಮವನ್ನು ವಿರೋಧಿಸಿದ್ದು ಹರಿಯಾಣದ ಎಲ್ಲಾ ಕಾನೂನು ಅಧಿಕಾರಿಗಳು ನಾಳೆ ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಿದೆ.

ಖಾನೌರಿ ಗಡಿಯಲ್ಲಿ ಭದ್ರತಾ ಸಿಬ್ಬಂದಿ ಮತ್ತು ರೈತರ ನಡುವೆ ನಡೆದ ಘರ್ಷಣೆಯಲ್ಲಿ ಪಂಜಾಬ್‌ನ ಬಟಿಂಡಾದ ರೈತ ಶುಭಕರನ್ ಸಿಂಗ್ ಬುಧವಾರ ಸಾವನ್ನಪ್ಪಿದ್ದರು. 

ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡುವ ಕಾಯಿದೆ ಜಾರಿ ಸೇರಿದಂತೆ ತಮ್ಮ ನ್ಯಾಯಸಮ್ಮತ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಸರ್ಕಾರ ಮತ್ತು ರೈತರ ನಡುವಿನ ಮಾತುಕತೆ ಮುರಿದುಬಿದ್ದುದ್ದರಿಂದ ಬುಧವಾರದಿಂದ ರೈತರು ದೆಹಲಿಯತ್ತ ಮತ್ತೆ ಹೆಜ್ಜೆ ಇರಿಸಿದ್ದರು. ರೈತರು ಮೆರವಣಿಗೆ ನಡೆಸದಂತೆ ನಿರ್ಬಂಧಿಸುವ ಯತ್ನದಲ್ಲಿದ್ದಾಗ ಶುಭಕರನ್ ಸಿಂಗ್ ಮೃತಪಟ್ಟಿದ್ದಾರೆ ಎಂದು ರೈತ ಸಂಘಟನೆ ಅಖಿಲ ಭಾರತ ಕಿಸಾನ್ ಸಭಾ ಆರೋಪಿಸಿದೆ.

ಮತ್ತೊಂದೆಡೆ ಯುವ ರೈತನ ಸಾವಿನ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕೆಂದು ಕೋರಿ ವಕೀಲ ಹರಿಂದರ್ ಪಾಲ್ ಸಿಂಗ್ ಅವರು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ

ರೈತರ ಪ್ರತಿಭಟನೆಗೆ ಅಡ್ಡಿ ಉಂಟುಮಾಡುವ ಹರಿಯಾಣ ಸರ್ಕಾರ, ಪಂಜಾಬ್ ಸರ್ಕಾರ ಮತ್ತು ಭಾರತ ಸರ್ಕಾರದ ಎಲ್ಲಾ ಕ್ರಮಗಳನ್ನು ತಡೆಯುವ ಆದೇಶ ನೀಡುವಂತೆ ಮನವಿಯಲ್ಲಿ ಕೋರಲಾಗಿದೆ.