Punjab and Haryana map, Punjab and Haryana High Court  
ಸುದ್ದಿಗಳು

ಭಾಕ್ರಾ ನಂಗಲ್ ಮಂಡಳಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪಂಜಾಬ್ ಪೊಲೀಸರ ಪತ್ತೆಗೆ ಹೈಕೋರ್ಟ್ ಆದೇಶ

ಭಾಕ್ರಾ ನಂಗಲ್ ಅಣೆಕಟ್ಟಿನ ಕಾರ್ಯನಿರ್ವಹಣೆಯಲ್ಲಿ ಹಸ್ತಕ್ಷೇಪ ಮಾಡದಂತೆ ಪಂಜಾಬ್ ಸರ್ಕಾರ ಮತ್ತು ಪಂಜಾಬ್ ಪೊಲೀಸರಿಗೆ ಹೈಕೋರ್ಟ್ ಈ ಹಿಂದೆ ನಿರ್ದೇಶನ ನೀಡಿತ್ತು.

Bar & Bench

ಭಾಕ್ರಾ ನಂಗಲ್ ಅಣೆಕಟ್ಟು ಮತ್ತು ಲೋಹಂದ್ ನಿಯಂತ್ರಣ ಕೊಠಡಿಯ ನೀರು ನಿಯಂತ್ರಣ ಕಚೇರಿಗಳಲ್ಲಿ ಭಾಕ್ರಾ ನಂಗಲ್ ನಿರ್ವಹಣಾ ಮಂಡಳಿಯ (ಬಿಬಿಎಂಬಿ) ಅಧ್ಯಕ್ಷರು ಸೇರಿದಂತೆ ಹಿರಿಯ ಅಧಿಕಾರಿಗಳ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ ಪೊಲೀಸ್‌ ಅಧಿಕಾರಿಗಳನ್ನು ಪತ್ತೆ ಹಚ್ಚುವಂತೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಈಚೆಗೆ ಸೂಚಿಸಿದೆ.

ಅಣೆಕಟ್ಟಿನ ಕಾರ್ಯನಿರ್ವಹಣೆಯಲ್ಲಿ ಹಸ್ತಕ್ಷೇಪ ಮಾಡದಂತೆ ಪಂಜಾಬ್ ಸರ್ಕಾರ ಮತ್ತು ಪಂಜಾಬ್ ಪೊಲೀಸರಿಗೆ ಹೈಕೋರ್ಟ್ ಮೇ 6 ರಂದು ನಿರ್ದೇಶನ ನೀಡಿತ್ತು. ಆದೇಶದ ಹೊರತಾಗಿಯೂ ಬಿಬಿಎಂಬಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪೊಲೀಸ್‌ ಅಧಿಕಾರಿಗಳನ್ನು ಪತ್ತೆ ಹಚ್ಚುವಂತೆ ಮುಖ್ಯ ನ್ಯಾಯಮೂರ್ತಿ ಶೀಲ್ ನಾಗು ಮತ್ತು ನ್ಯಾಯಮೂರ್ತಿ ಸುಮೀತ್ ಗೋಯೆಲ್ ಅವರಿದ್ದ ವಿಭಾಗೀಯ ಪೀಠ ಹೇಳಿದೆ.

ಆದರೆ ಪಂಜಾಬ್‌ ಪೊಲೀಸ್‌ ಸಿಬ್ಬಂದಿ ತೋರಿದ ಅವಿಧೇಯತೆ ಉದ್ದೇಶಪೂರ್ವಕವೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕಿದೆ ಎಂದು ಅದು ಸ್ಪಷ್ಟಪಡಿಸಿದೆ.

ಭಾರತ-ಪಾಕ್ ನಡುವೆ ಯುದ್ಧದ ಛಾಯೆ ಮೂಡಿರುವುದರಿಂದ ಪಂಜಾಬ್‌ನಲ್ಲಿ  ಮೂಡಿರುವ ಬಿಗುವಿನ ವಾತಾವರಣ ಪರಿಗಣಿಸಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಮಹಾನಿರ್ದೇಶಕರು (ಡಿಜಿಪಿ) ಮತ್ತು ಮುಖ್ಯ ಕಾರ್ಯದರ್ಶಿಗೆ ನ್ಯಾಯಾಂಗ ನಿಂದನೆ ನೋಟಿಸ್‌ ನೀಡುತ್ತಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.

ಹರಿಯಾಣ ಮತ್ತು ರಾಜಸ್ಥಾನದ ಕೆಲವು ಭಾಗಗಳಿಗೆ ಹೆಚ್ಚುವರಿ ನೀರು ಬಿಡುಗಡೆ ಮಾಡುವುದನ್ನು ಪಂಜಾಬ್ ಪೊಲೀಸರು ತಡೆದಿದ್ದಾರೆ ಎಂದು ಆರೋಪಿಸಿ ಈ ಹಿಂದೆ ಬಿಬಿಎಂಬಿ ಹೈಕೋರ್ಟ್‌ ಮೆಟ್ಟಿಲೇರಿತ್ತು. ಈ ಸಂದರ್ಭದಲ್ಲಿ ಪೊಲೀಸರು ಬಿಬಿಎಂಬಿ ಅಧಿಕಾರಿಗಳ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ್ದಾರೆ ಎಂದು ಅದು ದೂರಿತ್ತು.

ಹರಿಯಾಣ ಮತ್ತು ರಾಜಸ್ಥಾನದ ಕೆಲವು ಭಾಗಗಳ ತುರ್ತು ಅಗತ್ಯಗಳನ್ನು ಪೂರೈಸಲು ಹೆಚ್ಚುವರಿಯಾಗಿ 4,500 ಕ್ಯೂಸೆಕ್ ನೀರು ಬಿಡುಗಡೆ ಮಾಡುವಂತೆ ಮೇ 2ರಂದು ಕೇಂದ್ರ ಗೃಹ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ನಡೆದ ಸಭೆ ತೆಗೆದುಕೊಂಡ ನಿರ್ಧಾರ ಪಾಲಿಸುವಂತೆ ನ್ಯಾಯಾಲಯ ಈ ಹಿಂದೆ ಪಂಜಾಬ್ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಈ ಆದೇಶದ ಹೊರತಾಇಯೂ ಪಂಜಾಬ್‌ ಪೊಲೀಸರು ಹರಿಯಾಣ ಮತ್ತಿತರ ರಾಜ್ಯಗಳಿಗೆ ನೀರು ಹರಿಸಲು ಅವಕಾಶ ಮಾಡಿಕೊಡುತ್ತಿಲ್ಲ ಎಂದು ಬಿಬಿಎಂಬಿ ಅಧ್ಯಕ್ಷ ಮನೋಜ್‌ ತ್ರಿಪಾಠಿ ದೂರಿದ್ದರು.

ಪಂಜಾಬ್ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ ಕೈಗೊಳ್ಳುವಂತೆ ಕೋರಿ ಫತೇಹಾಬಾದ್‌ನ ಮತಾನಾ ಗ್ರಾಮ ಪಂಚಾಯತ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.

ತಾನು ಮೇ 6 ರಂದು ಹೊರಡಿಸಿದ ನಿರ್ದೇಶನಗಳನ್ನು ಪುನರುಚ್ಚರಿಸಿದ ಹೈಕೋರ್ಟ್‌, ಡಿಜಿಪಿ ಮತ್ತು ಮುಖ್ಯ ಕಾರ್ಯದರ್ಶಿಯವರಿಗೆ ತಮ್ಮ ಉತ್ತರ ಸಲ್ಲಿಸಲು ಎರಡು ವಾರಗಳ ಕಾಲಾವಕಾಶ ನೀಡಿದೆ.