Supreme Court, Uttarakhand HC 
ಸುದ್ದಿಗಳು

ನೈನಿತಾಲ್‌ ಆಚೆಗೆ ಹೈಕೋರ್ಟ್ ಸ್ಥಳಾಂತರ: ಉತ್ತರಾಖಂಡ ಉಚ್ಚ ನ್ಯಾಯಾಲಯದ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ

ಈ ಕ್ರಮ ಪ್ರಶ್ನಿಸಿ ಉತ್ತರಾಖಂಡ ಹೈಕೋರ್ಟ್ ವಕೀಲರ ಸಂಘ ಸಲ್ಲಿಸಿದ್ದ ಮನವಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿಗಳಾದ ಪಿ ಎಸ್ ನರಸಿಂಹ ಮತ್ತು ಸಂಜಯ್ ಕರೋಲ್ ಅವರ ಪೀಠ ರಾಜ್ಯ ಸರ್ಕಾರದ ಪ್ರತಿಕ್ರಿಯೆ ಕೇಳಿದೆ.

Bar & Bench

ನೈನಿತಾಲ್‌ನಿಂದ ಹೊರೆಗೆ ಹೈಕೋರ್ಟ್‌ ಸ್ಥಳಾಂತರಿಸುವುದಕ್ಕೆ ಸೂಕ್ತ ಸ್ಥಳ ಗುರುತಿಸಲು ಉತ್ತರಾಖಂಡ ಹೈಕೋರ್ಟ್ ಮೇ 8ರಂದು ಹೊರಡಿಸಿದ ಆದೇಶಕ್ಕೆ ಸುಪ್ರೀಂ ಕೋರ್ಟ್ ಈಚೆಗೆ ತಡೆ ನೀಡಿದೆ [ಉತ್ತರಾಖಂಡ ಹೈಕೋರ್ಟ್ ವಕೀಲರ ಸಂಘ ಮತ್ತು ಉತ್ತರಾಖಂಡ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ಈ ಕ್ರಮ ಪ್ರಶ್ನಿಸಿ ಉತ್ತರಾಖಂಡ ಹೈಕೋರ್ಟ್ ವಕೀಲರ ಸಂಘ ಸಲ್ಲಿಸಿದ ಮನವಿಗೆ  ಸಂಬಂಧಿಸಿದಂತೆ ನ್ಯಾಯಮೂರ್ತಿಗಳಾದ ಪಿ ಎಸ್ ನರಸಿಂಹ ಮತ್ತು ಸಂಜಯ್ ಕರೋಲ್ ಅವರಿದ್ದ ಪೀಠ ರಾಜ್ಯ ಸರ್ಕಾರದ ಪ್ರತಿಕ್ರಿಯೆ ಕೇಳಿತು.

ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ “ಪೀಠಗಳ ಸ್ಥಾಪನೆ ಸಂಸತ್ತಿಗೆ ಸಂಬಂಧಿಸಿದ ವಿಚಾರವಾಗಿದ್ದು ಹೈಕೋರ್ಟ್‌ ತೀರ್ಪು ಜನಾಭಿಪ್ರಾಯ ಸಂಗ್ರಹದಂತೆ ಇದೆ”  ಎಂದರು. 

ಹೈಕೋರ್ಟ್ ಸ್ಥಾಪನೆ ಮತ್ತು ನ್ಯಾಯಮೂರ್ತಿಗಳು, ನ್ಯಾಯಾಂಗ ಅಧಿಕಾರಿಗಳು, ಸಿಬ್ಬಂದಿ, ನ್ಯಾಯಾಲಯ ಕೊಠಡಿಗಳು, ಸಭಾಂಗಣ, ಕನಿಷ್ಠ 7,000 ವಕೀಲರಿಗೆ ಅಗತ್ಯವಾದ ಚೇಂಬರ್‌ಗಳು, ಕ್ಯಾಂಟೀನ್‌ ಹಾಗೂ ಪಾರ್ಕಿಂಗ್‌ ಸ್ಥಳಾವಕಾಶ ಕಲ್ಪಿಸುವಂತೆ ಉತ್ತರಾಖಂಡದ ಮುಖ್ಯ ಕಾರ್ಯದರ್ಶಿಗಳಿಗೆ ನ್ಯಾಯಾಲಯ ಆದೇಶಿಸಿತ್ತು.

ಈ ಸಂಬಂಧ ತಾನು ಸೂಚಿಸಿರುವ ಕಾರ್ಯವನ್ನು ಮುಖ್ಯ ಕಾರ್ಯದರ್ಶಿಯವರು ಒಂದು ತಿಂಗಳೊಳಗೆ ಪೂರ್ಣಗೊಳಿಸಿ ಜೂನ್ 7ರೊಳಗೆ ವರದಿ ಸಲ್ಲಿಸಬೇಕು ಎಂದು ಹೈಕೋರ್ಟ್‌ ಆದೇಶಿಸಿತ್ತು. ನ್ಯಾಯಾಂಗ ಕ್ಷೇತ್ರದ ಪ್ರಮುಖ ಸದಸ್ಯರು ಹಾಗೂ ಸರ್ಕಾರದ ಅಧಿಕಾರಿಗಳನ್ನು ಒಳಗೊಂಡಂತೆ ತಾನು ರಚಿಸಿರುವ ಸಮಿತಿ ಕೂಡ ಜೂನ್ 7ರೊಳಗೆ ವರದಿ ಸಲ್ಲಿಸುವಂತೆ ಹೈಕೋರ್ಟ್‌ ಸೂಚಿಸಿತ್ತು. ಪ್ರಕರಣದ ಕುರಿತು ಮತದಾನದ ಮೂಲಕ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಲು ಹೈಕೋರ್ಟ್‌ ಆನ್‌ಲೈನ್‌ ವೇದಿಕೆಯೊಂದನ್ನೂ ಸೃಜಿಸಿತ್ತು.

ಆದೇಶದ ವಿರುದ್ಧ ಹೈಕೋರ್ಟ್ ವಕೀಲರ ಸಂಘ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. ನೈನಿತಾಲ್‌ನಲ್ಲಿ ಉತ್ತರಾಖಂಡ ಹೈಕೋರ್ಟ್‌ನ ಪ್ರಧಾನ ಪೀಠ ಸ್ಥಾಪಿಸಿದ ರಾಷ್ಟ್ರಪತಿಗಳ ಆದೇಶಕ್ಕೆ ಸಂಬಂಧಿಸಿದಂತೆ ಮತದಾನ ಮಾಡುವಂತೆ ಹೈಕೋರ್ಟ್‌ ನಿರ್ದೇಶಿಸುವಂತಿಲ್ಲ. ಪ್ರಧಾನ ಪೀಠ ಸ್ಥಾಪನೆಯ ಬಗ್ಗೆ ಸಂಸತ್ತು ಅಥವಾ ಕೇಂದ್ರ ಸರ್ಕಾರ ಮಾತ್ರ ನಿರ್ಧರಿಸಬಹುದೇ ವಿನಾ ಹೈಕೋರ್ಟ್‌ ಅಲ್ಲ ಎಂದು ಅದು ವಾದಿಸಿದೆ. ಕಕ್ಷಿದಾರರ ವಾದ ಆಲಿಸಿದ ನ್ಯಾ ಯಾಲಯ ಆದೇಶಕ್ಕೆ ತಡೆ ನೀಡಿತು.