Punjab & Haryana High Court, live-in relationship 
ಸುದ್ದಿಗಳು

ಲಿವ್‌-ಇನ್‌ ಸಂಬಂಧದಲ್ಲಿ ವಿವಾಹಿತ ಪುರುಷ; ಜೋಡಿಗೆ ರಕ್ಷಣೆ ಒದಗಿಸಲು ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್‌ ಆದೇಶ

ಅಲಾಹಾಬಾದ್‌ ಹೈಕೋರ್ಟ್‌ ಹೊರಡಿಸಿರುವ ಆದೇಶಕ್ಕೆ ಅಸಮ್ಮತಿ ಸೂಚಿಸಿರುವ ನ್ಯಾ. ಅಮೋಲ್‌ ರತ್ತನ್‌ ಸಿಂಗ್‌ ಅವರು 2018ರಲ್ಲಿ ಸುಪ್ರೀಂ ಕೋರ್ಟ್‌ ವ್ಯಭಿಚಾರವನ್ನು ನಿರಾಪರಾಧೀಕರಣಗೊಳಿಸಿದ್ದು ಅರ್ಜಿದಾರರು ಯಾವುದೇ ಅಪರಾಧ ಎಸಗಿಲ್ಲ ಎಂದಿದ್ದಾರೆ.

Bar & Bench

ವಿವಾಹಿತ ಪುರುಷನೊಬ್ಬ ಮದುವೆಗೆ ಸಂಬಂಧಿಸಿದಂತೆ ವಿಚ್ಛೇದನ ಪ್ರಕ್ರಿಯೆ ಬಾಕಿ ಇದ್ದರೂ ಲಿವ್‌-ಇನ್‌ ಸಂಬಂಧದಲ್ಲಿದ್ದ ಪ್ರಕರಣದಲ್ಲಿ ಲಿವ್‌-ಇನ್‌ ಜೋಡಿಗೆ ರಕ್ಷಣೆ ಒದಗಿಸುವಂತೆ ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್‌ ಆದೇಶ ಮಾಡಿದೆ (ಪರಮ್‌ಜೀತ್‌ ಕೌರ್ ವರ್ಸಸ್‌ ಪಂಜಾಬ್‌ ಸರ್ಕಾರ).

ಇಂಥದ್ದೇ ಪ್ರಕರಣದಲ್ಲಿ ಅಲಾಹಾಬಾದ್‌ ಹೈಕೋರ್ಟ್‌ ಹೊರಡಿಸಿರುವ ಆದೇಶಕ್ಕೆ ಅಸಮ್ಮತಿ ಸೂಚಿಸಿರುವ ನ್ಯಾ. ಅಮೋಲ್‌ ರತ್ತನ್‌ ಸಿಂಗ್‌ ಅವರು 2018ರಲ್ಲಿ ಸುಪ್ರೀಂ ಕೋರ್ಟ್‌ ವ್ಯಭಿಚಾರವನ್ನು ನಿರಾಪರಾಧೀಕರಣಗೊಳಿಸಿರುವುದರಿಂದ ಅರ್ಜಿದಾರರು ಯಾವುದೇ ಅಪರಾಧ ಎಸಗಿಲ್ಲ ಎಂದಿದ್ದಾರೆ.

ವಿಚ್ಛೇದನ ಪಡೆಯದೇ ಮತ್ತೊಬ್ಬರ ಜೊತೆ ಲಿವ್‌-ಇನ್‌ ಸಂಬಂಧದಲ್ಲಿರುವ ವಿವಾಹಿತರಿಗೆ ರಕ್ಷಣೆ ಒದಗಿಸಲಾಗದು ಎಂದು ಶ್ರೀಮತಿ ಅನಿತಾ ವರ್ಸಸ್‌ ಉತ್ತರ ಪ್ರದೇಶ ಸರ್ಕಾರ ಪ್ರಕರಣದಲ್ಲಿ ಅಲಾಹಾಬಾದ್‌ ಹೈಕೋರ್ಟ್‌ ನೀಡಿದ್ದ ತೀರ್ಪಿಗೆ ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್‌ ಅಸಮ್ಮತಿ ಸೂಚಿಸಿದೆ

ಈ ವಿಚಾರಕ್ಕೆ ಸಂಬಂಧಿಸಿದಂತೆ ನ್ಯಾ. ಸಿಂಗ್‌ ಅವರು ಸುಪ್ರೀಂ ಕೋರ್ಟ್‌ ಜೋಸೆಫ್‌ ಶೈನ್‌ ವರ್ಸಸ್‌ ಭಾರತ ಸರ್ಕಾರ ಪ್ರಕರಣದಲ್ಲಿ ನೀಡಿರುವ ತೀರ್ಪನ್ನು ಅವಲಂಬಿಸಿದ್ದು, ವ್ಯಭಿಚಾರವನ್ನು ಅಪರಾಧೀಕರಿಸುವ ಸಂವಿಧಾನದ 14, 15 ಮತ್ತು 21ನೇ ವಿಧಿಗೆ ವಿರುದ್ಧವಾಗಿರುವ ಐಪಿಸಿಯ ಸೆಕ್ಷನ್‌ 497 ಅನ್ನು ಸರ್ವೋಚ್ಚ ನ್ಯಾಯಾಲಯವು ರದ್ದುಗೊಳಿಸಿತ್ತು.

“ಈ ಹಂತದಲ್ಲಿ ಮೇಲ್ನೋಟಕ್ಕೆ ಅರ್ಜಿದಾರರು ಯಾವುದೇ ಅಪರಾಧವನ್ನು ಎಸಗಿಲ್ಲ ಎಂದೆನಿಸುತ್ತದೆ. ಈ ನ್ಯಾಯಾಲಯದ ಮುಂದೆ ವಿಚ್ಛೇದನ ಮನವಿ ಬಾಕಿ ಇದೆಯೋ, ಇಲ್ಲವೋ, ಆದರೆ ಅವರು ವಯಸ್ಕರಾಗಿದ್ದು ಲಿವ್‌ ಇನ್‌ ಸಂಬಂಧದಲ್ಲಿ ಇದ್ದಾರೆ” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಎರಡನೇ ಅರ್ಜಿದಾರರ ಪತ್ನಿ ಮತ್ತು ಸಮ್ರಾಲ ಪೊಲೀಸ್‌ ಠಾಣೆಯ ಅಧಿಕಾರಿ ತಮಗೆ ಕಿರುಕುಳ ನೀಡುತ್ತಿರುವುದರಿಂದ ರಕ್ಷಣೆ ನೀಡುವಂತೆ ಅರ್ಜಿದಾರ ಕೋರಿದ್ದಾರೆ. ಅರ್ಜಿದಾರರ ಜೀವನ ಮತ್ತು ಸ್ವಾತಂತ್ರ್ಯವನ್ನು ರಕ್ಷಿಸುವಂತೆ ಹಿರಿಯ ಪೊಲೀಸ್‌ ವರಿಷ್ಠಾಧಿಕಾರಿಗೆ (ಎಸ್‌ಎಸ್‌ಪಿ) ನಿರ್ದೇಶಿಸಿರುವ ನ್ಯಾಯಾಲಯವು ನೋಟಿಸ್‌ ಜಾರಿ ಮಾಡಿದೆ. ಅರ್ಜಿದಾರರ ಲಿವ್‌-ಇನ್‌ ಸಂಬಂಧಕ್ಕೆ ಸಂಬಂಧಿಸಿದಂತೆ ಪೊಲೀಸ್‌ ಅಧಿಕಾರಿ ಕಿರುಕುಳ ನೀಡಿದರೆ ಅವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ನ್ಯಾಯಾಲಯ ಎಚ್ಚರಿಸಿದೆ. ಸೆಪ್ಟೆಂಬರ್‌ 24ಕ್ಕೆ ವಿಚಾರಣೆ ಮುಂದೂಡಲಾಗಿದ್ದು, ಈ ವೇಳೆಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಎಸ್‌ಎಸ್‌ಪಿಗೆ ನ್ಯಾಯಾಲಯ ಆದೇಶಿಸಿದೆ.

ಮತ್ತೊಬ್ಬ ಪುರುಷನನ್ನು ವರಿಸಿರುವ ಹಿನ್ನೆಲೆಯಲ್ಲಿ ಲಿವ್‌ ಇನ್‌ ಸಂಬಂಧದಲ್ಲಿರುವ ಮಹಿಳೆಗೆ ರಕ್ಷಣೆ ನೀಡಲಾಗದು ಎಂದು ಕೆಲವು ವಾರಗಳ ಹಿಂದೆ ಪಂಜಾಬ್‌ ಮತ್ತು ಹರಿಯಾಣ ನ್ಯಾಯಾಲಯ ಹೇಳಿತ್ತು. ಇಂಥದ್ದೇ ಪ್ರಕರಣದಲ್ಲಿ ರಕ್ಷಣೆ ಒದಗಿಸಲು ನಿರಾಕರಿಸಿದ್ದ‌ ರಾಜಸ್ಥಾನ ಹೈಕೋರ್ಟ್‌, ರಕ್ಷಣೆ ಒದಗಿಸಿದರೆ ಪರೋಕ್ಷವಾಗಿ ಕಾನೂನುಬಾಹಿರ ಸಂಬಂಧಕ್ಕೆ ಅಧಿಕೃತತೆ ನೀಡಿದಂತಾಗುತ್ತದೆ ಎಂದಿತ್ತು.

ಮಹಿಳೆಯು ಪರ ಪುರುಷನ ಜೊತೆ ಮದುವೆ ಮಾಡಿಕೊಂಡಿರುವುದರಿಂದ ಲಿವ್‌ ಇನ್‌ ಸಂಬಂಧಕ್ಕೆ ರಕ್ಷಣೆ ಒದಗಿಸಲಾಗದು ಎಂದು ಕಳೆದ ಜೂನ್‌ನಲ್ಲಿ ರಕ್ಷಣೆ ನಿರಾಕರಿಸಿದ್ದ ಅಲಾಹಾಬಾದ್‌ ಹೈಕೋರ್ಟ್‌, 'ಅಕ್ರಮ' ಸಂಬಂಧಕ್ಕೆ ಅನುಮತಿ ನೀಡಲಾಗದು ಎಂದಿತ್ತು.