ಆಯುಷ್ಮಾನ್ ಭಾರತ ಯೋಜನೆಯಡಿ ರಾಜ್ಯದ ಹಲವು ಆಸ್ಪತ್ರೆಗಳಿಗೆ ಹಣ ಪಾವತಿಸದೇ ಬಾಕಿ ಉಳಿಸಿಕೊಂಡಿರುವ ಪಂಜಾಬ್‌ನ ಆರೋಗ್ಯ ಇಲಾಖೆಯ ಕ್ರಮವನ್ನು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಈಚೆಗೆ ತೀಕ್ಷ್ಣವಾಗಿ ಪ್ರಶ್ನಿಸಿದೆ.
ಆಯುಷ್ಮಾನ್ ಭಾರತ್ ಯೋಜನೆಯಡಿ ಬಾಕಿ ಹಣ ಪಾವತಿಸುವಂತೆ ಕೋರಿ ಭಾರತೀಯ ವೈದ್ಯಕೀಯ ಸಂಸ್ಥೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ವಿನೋದ್ ಎಸ್. ಭಾರದ್ವಾಜ್ ಅವರ ಏಕಸದಸ್ಯ ಪೀಠ ನಡೆಸಿತು.
ಭಾರತ ಸರ್ಕಾರದಿಂದ ಪಡೆದುಕೊಂಡಿರುವ ಹಣವನ್ನು ಆಸ್ಪತ್ರೆಗಳಿಗೆ ಬಿಡುಗಡೆ ಮಾಡದೇ ಏಕೆ ತಡೆ ಹಿಡಿಯಲಾಗಿದೆ ಎಂಬುದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಸಮಾಧಾನಕರ ಉತ್ತರ ನೀಡಿಲ್ಲ ಎಂದು ಪೀಠ ಹೇಳಿದೆ.
“ಅನುದಾನವನ್ನು ಬೇರೆ ಕಡೆಗೆ ವರ್ಗಾವಣೆ ಮಾಡಿರುವ ಅಥವಾ ಅನಧಿಕೃತ ಬಳಕೆಗೆ ಅನುಮತಿಸಿರುವ ಅಧಿಕಾರಿಗಳ ವಿರುದ್ಧ ಸಾಮಾನ್ಯವಾಗಿ ಕಠಿಣ ಕ್ರಮಕ್ಕೆ ಆದೇಶಿಸಲಾಗುತ್ತಿತ್ತು. ಆದರೆ, ಅಂಥ ಕ್ರಮಕೈಗೊಳ್ಳುವುದಕ್ಕೂ ಮುನ್ನ, 2021ರ ಡಿಸೆಂಬರ್‌ನಿಂದ ಇಲ್ಲಿಯವರೆಗೆ ಕೇಂದ್ರ ಸರ್ಕಾರದಿಂದ ಪಂಜಾಬ್ ಸರ್ಕಾರಕ್ಕೆ ದೊರೆತಿರುವ ಹಣ ಮರುಪಾವತಿ ಮತ್ತು ಅದನ್ನು ಹೇಗೆ ಬಳಕೆ ಮಾಡಲಾಗಿದೆ ಎಂಬುದಕ್ಕೆ ಸಂಬಂಧಿಸಿದಂತೆ ವಿಸ್ತೃತ ಪ್ರತಿಕ್ರಿಯೆ ಪಡೆಯಬೇಕಿದೆ. ಅಲ್ಲದೇ, ಆಯುಷ್ಮಾನ್ ಭಾರತ್‌ಗಾಗಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಹಣವನ್ನು ಅದಕ್ಕೇ ಬಳಕೆ ಮಾಡಲಾಗಿದೆಯೋ ಅಥವಾ ಇಲ್ಲವೇ ಎಂಬುದನ್ನು ಅಫಿಡವಿಟ್‌ನಲ್ಲಿ ತಿಳಿಸಬೇಕು” ಎಂದು ನ್ಯಾಯಾಲಯ ಆದೇಶಿಸಿದೆ.
ಕೆಳಗಿನ ವಿಚಾರಗಳಿಗೆ ಸಂಬಂಧಿಸಿದಂತೆ ಡಿಸೆಂಬರ್ 2021ರಿಂದ 2024ರವರೆಗೆ ವೆಚ್ಚ ಮಾಡಿರುವುದಕ್ಕೆ ಸಂಬಂಧಿಸಿದಂತೆ ಅಫಿಡವಿಟ್ ಸಲ್ಲಿಸಲು ಹಣಕಾಸು ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ನ್ಯಾಯಾಲಯ ನಿರ್ದೇಶಿಸಿತು.
ರಾಜ್ಯದಲ್ಲಿ ಮುದ್ರಣ, ಶ್ರವಣ ಮತ್ತು ವಿದ್ಯುನ್ಮಾನ ಮಾಧ್ಯಮಗಳಲ್ಲಿ ಮತ್ತು ಯಾವ ಭಾಷೆಯಲ್ಲಿ ಜಾಹೀರಾತು ಪ್ರಕಟಿಸಲು ಎಷ್ಟು ವೆಚ್ಚ ಮಾಡಲಾಗಿದೆ ಎಂಬುದಕ್ಕೆ ಸಂಬಂಧಿಸಿದ ಮಾಹಿತಿ ಒದಗಿಸಬೇಕು.
ಸಚಿವರು/ಶಾಸಕರು ಮತ್ತು ಒಂದನೇ ಶ್ರೇಣಿಯ ಅಧಿಕಾರಿಗಳ ಮನೆ/ಕಚೇರಿ ಮರು ನಿರ್ಮಾಣಕ್ಕೆ ವಿನಿಯೋಗಿಸಿರುವ ಹಣದ ವಿವರ ನೀಡಬೇಕು.
ಸಚಿವರು/ಶಾಸಕರು, ಪ್ರಥಮ ದರ್ಜೆ ಅಧಿಕಾರಿಗಳಿಗೆ ಹೊಸದಾಗಿ ಖರೀದಿಸುವುದಕ್ಕಾಗಿ ವ್ಯಯಿಸಿರುವ ಹಣದ ಮಾಹಿತಿ ನೀಡಬೇಕು.
ಪಂಜಾಬ್ ಸರ್ಕಾರವು ಕಾನೂನು ಹೋರಾಟದಲ್ಲಿ ರಾಜ್ಯ ಸರ್ಕಾರವನ್ನು ಪ್ರತಿನಿಧಿಸಲು ಸುಪ್ರೀಂ ಕೋರ್ಟ್ ಅಥವಾ ದೆಹಲಿ ಹೈಕೋರ್ಟ್ ಅಥವಾ ಇನ್ಯಾವುದೇ ಕಡೆ ವ್ಯಯಿಸಿರುವ ಹಣದ ಮಾಹಿತಿ ಒದಗಿಸಬೇಕು.
ಉಚಿತ ವಿದ್ಯುತ್, ಅಟಲ್ ದಳ ಯೋಜನೆ ಇತ್ಯಾದಿಗೆ ಬಜೆಟ್‌ನಲ್ಲಿ ಹಂಚಿಕೆ ಮಾಡಿರುವುದಕ್ಕೆ ಎಷ್ಟು ಅನುದಾನ ಖರ್ಚು ಮಾಡಲಾಗಿದೆ ಎಂಬುದರ ಮಾಹಿತಿ ಒದಗಿಸಬೇಕು.
ಇದೆಲ್ಲಾ ಮಾಹಿತಿ ಕೋರುತ್ತಿರುವುದು ನಿರ್ದಿಷ್ಟ ಉದ್ದೇಶಕ್ಕೆ ಸ್ವೀಕೃತವಾಗಿರುವ ಅನುದಾನವನ್ನು ಬೇರೆಕಡೆಗೆ ಬಳಕೆ ಮಾಡಲಾಗಿದೆಯೇ ಎಂಬುದನ್ನು ಪರಿಶೀಲಿಸುವುದಾಗಿದೆ. ನಿರ್ದಿಷ್ಟ ಉದ್ದೇಶಕ್ಕಾಗಿ ಸ್ವೀಕರಿಸಿರುವ ಹಣವನ್ನು ಅದರ ಜವಾಬ್ದಾರಿ ಹೊತ್ತಿರುವ ರಾಜ್ಯ ಸರ್ಕಾರವು ನೈಜ ಫಲಾನುಭವಿಗಳಿಗೆ ಬಿಡುಗಡೆ ಮಾಡಬೇಕು ಎಂದಿದೆ.
ನಿರ್ದಿಷ್ಟ ಉದ್ದೇಶಕ್ಕೆ ಬಂದಿರುವ ಹಣವನ್ನು ದುರ್ಬಳಕೆ ಮಾಡಿ, ಅದರ ನೈಜ ಫಲಾನುಭವಿಗಳು ತಮಗೆ ಬರಬೇಕಾದ ಬಾಕಿ ಕೋರಿ ದಾವೆ ಹೂಡುವಂತಾಗಬಾರದು ಎಂದು ನ್ಯಾಯಾಲಯ ಹೇಳಿದೆ.