ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್
ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ 
ಸುದ್ದಿಗಳು

ಎಜಿ ಕಚೇರಿಯಲ್ಲಿ ವಕೀಲೆಯರಿಗೆ ಶೇ.33 ಮೀಸಲಾತಿ: ರಾಜ್ಯ ಸರ್ಕಾರದ ಪ್ರತಿಕ್ರಿಯೆ ಕೇಳಿದ ಪಂಜಾಬ್‌ ಹೈಕೋರ್ಟ್

Bar & Bench

ರಾಜ್ಯ ಅಡ್ವೊಕೇಟ್ ಜನರಲ್ ಕಚೇರಿಯಲ್ಲಿ ಮಹಿಳಾ ವಕೀಲರಿಗೆ ಶೇ 33ರಷ್ಟು ಮೀಸಲಾತಿ ನೀಡುವಂತೆ ಕೋರಿ ಸಲ್ಲಿಸಲಾದ ಅರ್ಜಿಗೆ ಸಂಬಂಧಿಸಿದಂತೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಡಿಸೆಂಬರ್ 20ರಂದು ಪಂಜಾಬ್ ಸರ್ಕಾರದ ಪ್ರತಿಕ್ರಿಯೆ ಕೇಳಿದೆ.

ರಾಜ್ಯ ಸರ್ಕಾರ 2024 ರ ಜನವರಿ 5 ರೊಳಗೆ ಪ್ರತಿಕ್ರಿಯೆ ಸಲ್ಲಿಸುವಂತೆ ನ್ಯಾಯಮೂರ್ತಿ ಸಂಜೀವ್ ಪ್ರಕಾಶ್ ಶರ್ಮಾ ಅವರು ಸೂಚಿಸಿದರು. ನೋಟಿಸ್ ಸ್ವೀಕರಿಸಿದ ಸರ್ಕಾರಿ ವಕೀಲರು ಉತ್ತರ ಸಲ್ಲಿಸಲು ಸಮಯ ಕೋರಿದರು.

63 ವಕೀಲರನ್ನು ಸಹಾಯಕ ಅಡ್ವೊಕೇಟ್ ಜನರಲ್ ಆಗಿ ನೇಮಿಸಲು ಕಳೆದ ತಿಂಗಳು ರಾಜ್ಯ ಸರ್ಕಾರ ಹೊರಡಿಸಿದ ಜಾಹೀರಾತನ್ನು ಪ್ರಶ್ನಿಸಿ 26 ವರ್ಷದ ವಕೀಲೆ ಸುನಯನಾ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಪೀಠ ಈ ಆದೇಶ ಹೊರಡಿಸಿದೆ.

ಮಹಿಳಾ ವಕೀಲರಿಗೆ ಯಾವುದೇ ಮೀಸಲಾತಿ ಒದಗಿಸದ ಜಾಹೀರಾತನ್ನು ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ.

ಪಂಜಾಬ್‌ನ ವಿವಿಧ ಹುದ್ದೆಗಳಿಗೆ ಸಂಬಂಧಿಸಿದಂತೆ ಮಹಿಳೆಯರಿಗೆ ಶೇಕಡಾ 33 ರಷ್ಟು ಮೀಸಲಾತಿ ಕಲ್ಪಿಸುವ ಪಂಜಾಬ್ ನಾಗರಿಕ ಸೇವೆಗಳ (ಮಹಿಳೆಯರಿಗೆ ಹುದ್ದೆಗಳ ಮೀಸಲಾತಿ) ನಿಯಮಾವಳಿ, 2020 ಅನ್ನು ಜಾಹೀರಾತು ಉಲ್ಲಂಘಿಸುತ್ತದೆ. ಇದೇ ಜಾಹೀರಾತಿನಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ವಕೀಲರಿಗೆ ಕೆಲ ಹುದ್ದೆಗಳನ್ನು ಮೀಸಲಿರಿಸುವುದು ತಾರತಮ್ಯದಿಂದ ಕೂಡಿದ್ದು ಸಂವಿಧಾನದ 14ನೇ ವಿಧಿಯ ಉಲ್ಲಂಘನೆಯಾಗಿದೆ ಎಂದು ನ್ಯಾಯಾಲಯ ಹೇಳಿದೆ.

ಸರ್ಕಾರ ಕಳೆದ ತಿಂಗಳು 200ಕ್ಕೂ ಹೆಚ್ಚು ವಿವಿಧ ಬಗೆಯ ಕಾನೂನು ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿ ಜಾಹೀರಾತು ಹೊರಡಿಸಿತ್ತು.178 ಹುದ್ದೆಗಳನ್ನು ಸಾಮಾನ್ಯ ವರ್ಗಕ್ಕೆ, 58 ಹುದ್ದೆಗಳನ್ನು ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಗೆ ಮೀಸಲಿಡಲಾಗಿತ್ತು. ಅರ್ಜಿದಾರೆ ಸಾಮಾನ್ಯ ವರ್ಗದ ಅಡಿಯಲ್ಲಿ ನೇಮಕಾತಿ ಅರ್ಜಿ ಸಲ್ಲಿಸಿದ್ದರು. 

ಅರ್ಜಿದಾರರಾದ ಸುನಯನಾ ಅವರನ್ನು ವಕೀಲರಾದ ಎಚ್. ಸಿ. ಅರೋರಾ ಪ್ರತಿನಿಧಿಸಿದ್ದರು. ಸರ್ಕಾರದ ಪರವಾಗಿ ಹೆಚ್ಚುವರಿ ಅಡ್ವೊಕೇಟ್ ಜನರಲ್ ಪರಮ್‌ಜಿತ್‌ ಬಟ್ಟಾ ವಾದ ಮಂಡಿಸಿದ್ದರು.

[ಆದೇಶದ ಪ್ರತಿಯನ್ನು ಇಲ್ಲಿ ಓದಿ]

Sunaina v. State of Punjab & Others.pdf
Preview