Punjab and Haryana High Court
Punjab and Haryana High Court 
ಸುದ್ದಿಗಳು

ನಿಷೇಧಿತ ತಳಿಗಳ ಸಾಕುನಾಯಿ ವಶಕ್ಕೆ ಸೂಚಿಸಿದ ಪ್ರಕರಣ: ಗ್ರಾಹಕರ ಆಯೋಗದ ಆದೇಶಕ್ಕೆ ಪಂಜಾಬ್‌ & ಹರಿಯಾಣ ಹೈಕೋರ್ಟ್‌ ತಡೆ

Bar & Bench

ನಿಷೇಧಗೊಂಡಿರುವ 11 ತಳಿಯ ಸಾಕು ನಾಯಿಗಳನ್ನು ವಶಪಡಿಸಿಕೊಳ್ಳುವಂತೆ ಮತ್ತು ಎಲ್ಲಾ ಬೀದಿ ನಾಯಿಗಳನ್ನು ವಶಕ್ಕೆ ಪಡೆದು ದೊಡ್ಡಿಯಲ್ಲಿ ಇಡುವಂತೆ ಗುರುಗ್ರಾಮದ ನಗರಸಭೆಗೆ ನಿರ್ದೇಶಿಸಿದ್ದ ಗ್ರಾಹಕರ ವ್ಯಾಜ್ಯಗಳ ಆಯೋಗದ ಆದೇಶಕ್ಕೆ ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್‌ ಈಚೆಗೆ ತಡೆ ನೀಡಿದೆ [ಶಿವಾನಿ ದಸಮಹಾಪಾತ್ರ ಮತ್ತು ಇತರರು ವರ್ಸಸ್‌ ಹರಿಹಾಣ ರಾಜ್ಯ ಮತ್ತು ಇತರರು].

ಗ್ರಾಹಕ ನ್ಯಾಯಾಲಯದ ಆದೇಶವು ತನ್ನ ಅಧಿಕಾರ ವ್ಯಾಪ್ತಿ ಮೀರಿದ್ದು, ಗ್ರಾಹಕ ಸಂರಕ್ಷಣಾ ಕಾಯಿದೆಯಿಂದ ತನಗೆ ನೀಡಲಾದ ವ್ಯಾಪ್ತಿ ಮತ್ತು ಅಧಿಕಾರ ಮೀರಿ ಆದೇಶ ಮಾಡಿದೆ ಎಂದು ಆಕ್ಷೇಪಿಸಿ ಸಲ್ಲಿಸಿರುವ ಎರಡು ಮನವಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ವಿನೋದ್‌ ಎಸ್‌ ಭಾರದ್ವಾಜ್‌ ಅವರ ನೇತೃತ್ವದ ಏಕಸದಸ್ಯ ಪೀಠವು ನಡೆಸಿತು.

“ಗುರುಗ್ರಾಮದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು 15.11.2022ರಂದು ಮಾಡಿರುವ ಮಧ್ಯಂತರ ಆದೇಶಕ್ಕೆ ಮುಂದಿನ ಆದೇಶದವರೆಗೆ ತಡೆ ನೀಡಲಾಗಿದೆ” ಎಂದು ಹೈಕೋರ್ಟ್‌ ನಿರ್ದೇಶಿಸಿದೆ.

ಬೀದಿ ನಾಯಿಗಳಿಂದ ಕಡಿತಕ್ಕೆ ಒಳಗಾಗುವ ಅಥವಾ ದಾಳಿಯಲ್ಲಿ ಗಾಯಗೊಳ್ಳುವವರೆಗೆ ಪರಿಹಾರ ನೀಡಲು ನೀತಿ ರೂಪಿಸುವಂತೆ ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗವು ಗುರುಗ್ರಾಮದ ನಗರಸಭೆಗೆ ಆದೇಶಿಸಿತ್ತು. “ಪರಿಹಾರವು ₹20,000ರಿಂದ ₹2 ಲಕ್ಷ ವರೆಗೆ ಇರಬಹುದು. ಪರಿಹಾರವು ಶ್ವಾನ ದಾಳಿ ಮತ್ತು ಗಾಯದಿಂದ ಆದ ಹಾನಿಯನ್ನು ಅವಲಂಬಿಸಿರುತ್ತದೆ” ಎಂದು ಆಯೋಗ ಹೇಳಿತ್ತು. 

ಅಮೆರಿಕನ್‌ ಪಿಟ್‌ ಬುಲ್‌ ಟೆರೈರ್ಸ್‌, ಡೊಗೊ ಅರ್ಜೆಂಟಿನೊ, ರೊಟ್‌ವೈಲರ್‌, ನಿಯೋಪೊಲಿಟನ್‌ ಮಸ್ಟಿಫ್‌, ಬೋರ್‌ಬೋಯಲ್‌, ಪ್ರೆಸಾ ಕನಾರಿಯೊ, ವೂಲ್ಫ್‌ ಡಾಗ್‌, ಬಂಡಾಗ್‌, ಅಮೆರಿಕನ್‌ ಬುಲ್‌ಡಾಗ್‌, ಫಿಲಾ ಬ್ರಸೆಲೈರೊ ಮತ್ತು ಕಾನ್‌ ಕೊರ್ಸೊ ತಳಿಯ ನಾಯಿಗಳಿಗೆ ಭಾರತ ಸರ್ಕಾರ ನಿಷೇಧ ವಿಧಿಸಿದೆ. ಹೀಗಾಗಿ, ಈ ತಳಿಯ ಶ್ವಾನಗಳಿಗೆ ವಿಧಿಸಿರುವ ನಿಷೇಧ ಆದೇಶವನ್ನು ಜಾರಿಗೊಳಿಸಬೇಕು ಎಂದು ಆಯೋಗವು ಆದೇಶದಲ್ಲಿ ಹೇಳಿತ್ತು.

“ಮೇಲೆ ಉಲ್ಲೇಖಿಸಿರುವ ತಳಿಯ ಶ್ವಾನಗಳನ್ನು ಸಾಕಲು ಮಾಲೀಕರಿಗೆ ನೀಡಲಾಗಿರುವ ಪರವಾನಗಿಯನ್ನು ಗುರುಗ್ರಾಮದ ನಗರಸಭೆಯು ತಕ್ಷಣ ಜಾರಿಗೆ ಬರುವಂತೆ ರದ್ದುಪಡಿಸಬೇಕು ಮತ್ತು ಆ ಎಲ್ಲಾ ನಾಯಿಗಳನ್ನು ವಶಕ್ಕೆ ಪಡೆಯಬೇಕು” ಎಂದು ಗ್ರಾಹಕರ ವ್ಯಾಜ್ಯ ಆಯೋಗ ಆದೇಶಿಸಿತ್ತು. ಇದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ.