Punjab and Haryana High Court  
ಸುದ್ದಿಗಳು

ಖಾಸಗಿ ಔದ್ಯೋಗಿಕ ವಲಯದಲ್ಲಿ ಸ್ಥಳೀಯರಿಗೆ ಶೇ.75 ಮೀಸಲಾತಿ: ಕಾಯಿದೆ ರದ್ದುಪಡಿಸಿದ ಹರಿಯಾಣ ಹೈಕೋರ್ಟ್

ಸರ್ಕಾರದ ಕಾಯಿದೆ ಪ್ರಶ್ನಿಸಿದ್ದ ಅರ್ಜಿಗಳನ್ನು ನ್ಯಾಯಮೂರ್ತಿಗಳಾದ ಗುರ್ಮೀತ್ ಸಿಂಗ್ ಸಂಧವಾಲಿಯಾ ಮತ್ತು ಹರ್ಪ್ರೀತ್ ಕೌರ್ ಜೀವನ್ ಅವರಿದ್ದ ವಿಭಾಗೀಯ ಪೀಠ ಪುರಸ್ಕರಿಸಿತು.

Bar & Bench

ಹರಿಯಾಣದ ಸ್ಥಳೀಯ ನಿವಾಸಿಗಳಿಗೆ ಖಾಸಗಿ ಔದ್ಯೋಗಿಕ ವಲಯದಲ್ಲಿ ಶೇ.75ರಷ್ಟು ಮೀಸಲಾತಿ ಕಲ್ಪಿಸುವ ಹರಿಯಾಣ ರಾಜ್ಯ ಸ್ಥಳೀಯ ಅಭ್ಯರ್ಥಿಗಳ ಉದ್ಯೋಗ ಕಾಯಿದೆ- 2020 ಅನ್ನು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಶುಕ್ರವಾರ ರದ್ದುಗೊಳಿಸಿದೆ [ಫರಿದಾಬಾದ್ ಇಂಡಸ್ಟ್ರೀಸ್ ಅಸೋಸಿಯೇಷನ್ ಮತ್ತು ಹರಿಯಾಣ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ಸಂವಿಧಾನದ ಭಾಗ IIIನ್ನು (ಮೂಲಭೂತ ಹಕ್ಕುಗಳು) ಕಾಯಿದೆ ಉಲ್ಲಂಘಿಸುತ್ತದೆ ಎಂದು ನ್ಯಾಯಮೂರ್ತಿಗಳಾದ ಗುರ್ಮೀತ್ ಸಿಂಗ್ ಸಂಧವಾಲಿಯಾ ಮತ್ತು ಹರ್‌ಪ್ರೀತ್ ಕೌರ್ ಜೀವನ್ ಅವರಿದ್ದ ವಿಭಾಗೀಯ ಪೀಠ ವಿವರಿಸಿದೆ.   

ರಾಜ್ಯ ಶಾಸಕಾಂಗದ ಅಧಿಕಾರಗಳು ರಾಷ್ಟ್ರೀಯ ಹಿತಾಸಕ್ತಿಗೆ ಧಕ್ಕೆ ತರುವಂತಿಲ್ಲ ಮತ್ತು ಕೇಂದ್ರ ಸರ್ಕಾರದ ಅಧಿಕಾರವನ್ನು ನೇರವಾಗಿ ಅತಿಕ್ರಮಿಸುವಂತಿಲ್ಲ ಎಂದು ನ್ಯಾಯಾಲಯ ಹೇಳಿದೆ.

ದೇಶಾದ್ಯಂತ ಕೃತವಾಗಿ ಗೋಡೆಗಳನ್ನು ನಿರ್ಮಿಸುವಂತಹ ಇಂತಹ ಹೆಚ್ಚಿನ ಕಾಯಿದೆಗಳನ್ನು ಉಳಿದ ರಾಜ್ಯಗಳೂ ಜಾರಿಗೆ ತರಬಹುದಾದ್ದರಿಂದ ಸ್ಥಳೀಯ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳುವಂತೆ ಸರ್ಕಾರ ಖಾಸಗಿ ಉದ್ಯೋಗದಾತರನ್ನು ಒತ್ತಾಯಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.

ತಿಂಗಳಿಗೆ ₹ 30,000ಕ್ಕಿಂತ ಕಡಿಮೆ ವೇತನ ಪಡೆಯುತ್ತಿರುವ ನೌಕರರ ವರ್ಗವನ್ನು ಮುಕ್ತ ಮಾರುಕಟ್ಟೆಯಿಂದ ನೇಮಕಾತಿ ಮಾಡಿಕೊಳ್ಳದಂತೆ ಖಾಸಗಿ ಉದ್ಯೋಗದಾತರಿಗೆ ನಿರ್ಬಂಧ ಒಡ್ಡಿ ಕಾಯಿದೆ ರೂಪಿಸುವುದು ಸರ್ಕಾರದ ವ್ಯಾಪ್ತಿ ಮೀರಿದ್ದಾಗಿದೆ ಎಂದು ಅದು ತೀರ್ಪು ನೀಡಿದೆ.

ಸಂವಿಧಾನದಡಿ ನಿಷೇಧಿತವಾಗಿರುವ ಕೆಲಸ ಮಾಡುವಂತೆ ಸರ್ಕಾರ ಖಾಸಗಿ ಉದ್ಯೋಗದಾತರಿಗೆ ನಿರ್ದೇಶಿಸುವಂತಿಲ್ಲ. ತಮ್ಮ ರಾಜ್ಯಕ್ಕೆ ಸೇರಿದವರಲ್ಲ ಎಂಬ ಕಾರಣಕ್ಕಾಗಿ ವ್ಯಕ್ತಿಗಳ ವಿರುದ್ಧ ತಾರತಮ್ಯ ಎಸಗುವಂತಿಲ್ಲ ಮತ್ತು ದೇಶದ ಉಳಿದ ಜನರ ಬಗ್ಗೆ ಋಣಾತ್ಮಕ ತಾರತಮ್ಯ ಧೋರಣೆ ತಾಳುವಂತಿಲ್ಲ ಎಂದು ನ್ಯಾಯಾಲಯ ನುಡಿದಿದೆ.

ವ್ಯಕ್ತಿಗಳ ಜನ್ಮ ಸ್ಥಳ ಮತ್ತು ವಾಸಸ್ಥಳದ ಆಧಾರದ ಮೇಲೆ ಉದ್ಯೋಗಕ್ಕೆ ಸಂಬಂಧಿಸಿದಂತೆ  ತಾರತಮ್ಯ ಎಸಗುವುದನ್ನು ಸಂವಿಧಾನ ನಿರ್ಬಂಧಿಸುತ್ತದೆ ಎಂದು ಅದು ಅಭಿಪ್ರಾಯಪಟ್ಟಿದೆ.

ಭ್ರಾತೃತ್ವ ಎಂಬ ಪದ ಸಾಮಾನ್ಯ ಸಹೋದರತ್ವದ ಅರ್ಥ ಸೂಚಿಸುತ್ತದೆ.  ಇದು ಎಲ್ಲಾ ಭಾರತೀಯರನ್ನು ಅವರಿಗೆ ಸಂಬಂಧಿಸಿದ ರಾಜ್ಯವನ್ನು ಲೆಕ್ಕಿಸದೆ  ಅಪ್ಪಿಕೊಳ್ಳುವುದಾಗಿದ್ದು ಒಂದು ರಾಜ್ಯ ಸರ್ಕಾರ ಉಳಿದ ರಾಜ್ಯಗಳ ಜನರ ಬಗ್ಗೆ ಕುರುಡಾಗಿ ವರ್ತಿಸುವಂತಿಲ್ಲ ಎಂದು ಅದು ಹೇಳಿದೆ.

ಸರ್ವೋಚ್ಚ ನ್ಯಾಯಾಲಯದ ಸಾಂವಿಧಾನಿಕ ತೀರ್ಪುಗಳು ಮತ್ತು ಸಂವಿಧಾನದ ಮೂಲಕ ನಿಗದಿಪಡಿಸಿದ ತತ್ವಗಳನ್ನು  ಉಲ್ಲಂಘಿಸಿದ ಹೊಣೆ ಕಾಯಿದೆಯದ್ದಾಗಿದೆ ಎಂದು ಅದು ತೀರ್ಪು ನೀಡಿದೆ.