ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ 
ಸುದ್ದಿಗಳು

ಸಿಬಿಎಸ್ಇ ಹತ್ತನೇ ತರಗತಿ ವಿದ್ಯಾರ್ಥಿನಿಗೆ ಶೂನ್ಯ ಅಂಕ: ಶಾಲೆಗೆ ₹ 30,000 ದಂಡ ವಿಧಿಸಿದ ಪಂಜಾಬ್‌ ಹೈಕೋರ್ಟ್‌

ಅರ್ಜಿದಾರೆಯ ಅಂಕ ಸರಿಪಡಿಸದ ಸಿಬಿಎಸ್‌ಇ ನಿರ್ಧಾರ ರದ್ದುಗೊಳಿಸಿದ ನ್ಯಾಯಾಲಯ ಹೊಸದಾಗಿ ಫಲಿತಾಂಶ ಪ್ರಕಟಿಸುವಂತೆ ಸೂಚಿಸಿತು.

Bar & Bench

ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ (ಸಿಬಿಎಸ್ಇ) ಪರೀಕ್ಷೆಯಲ್ಲಿ ಹತ್ತನೇ ತರಗತಿ ವಿದ್ಯಾರ್ಥಿನಿಗೆ ತಪ್ಪಾಗಿ ಶೂನ್ಯ ಅಂಕ ನೀಡಿದ್ದ ಶಾಲೆಗೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಇತ್ತೀಚೆಗೆ 30,000 ರೂ. ದಂಡ ವಿಧಿಸಿದೆ [ರಿಯಾ ಮತ್ತು ಸರ್ಕಾರ ನಡುವಣ ಪ್ರಕರಣ]

"ಶಾಲೆಯ ತಪ್ಪಿನಿಂದಾಗಿ ಅರ್ಜಿದಾರೆ ತೊಂದರೆ ಅನುಭವಿಸಿದ್ದು ಮಾತ್ರವಲ್ಲದೆ, ಪ್ರತಿವಾದಿ-ಮಂಡಳಿ (ಸಿಬಿಎಸ್‌ಇ) ಕೂಡ ತನ್ನ ಯಾವುದೇ ತಪ್ಪಿಲ್ಲದಿದ್ದರೂ ದಾವೆ ವೆಚ್ಚ ಭರಿಸುವಂತಾಯಿತು" ಎಂದು ನ್ಯಾಯಮೂರ್ತಿ ವಿಕಾಸ್ ಬಹ್ಲ್ ಹೇಳಿದರು.

ಶಾಲೆಯ ನಿರ್ಲಕ್ಷ್ಯದ ಪರಿಣಾಮವಾಗಿ, ಒಂದೇ ಹೆಸರಿದ್ದ ಇಬ್ಬರು ವಿದ್ಯಾರ್ಥಿನಿಯರ ಅಂಕ ಬದಲಾಗಿತ್ತು. ಪರಿಣಾಮ ಶೂನ್ಯ ಅಂಕ ಪಡೆದ ವಿದ್ಯಾರ್ಥಿನಿ ಹನ್ನೆರಡನೇ ತರಗತಿ ಬೋರ್ಡ್ ಪರೀಕ್ಷೆಗಳಲ್ಲಿ ಭಾಗವಹಿಸಲು ಸಾಧ್ಯವಾಗಿರಲಿಲ್ಲ.

ಹೀಗಾಗಿ ಫಲಿತಾಂಶ ತಿದ್ದುಪಡಿ ಮಾಡಿ ಪರಿಷ್ಕೃತ ಅಂಕಪಟ್ಟಿ ನೀಡುವಂತೆ ಕೋರಿ ವಿದ್ಯಾರ್ಥಿನಿ ನ್ಯಾಯಾಲಯದ ಮೊರೆ ಹೋಗಿದ್ದರು. ಪ್ರಕರಣದಲ್ಲಿ ಸಿಬಿಎಸ್‌ಇ ಮಧ್ಯಪ್ರವೇಶಿಸುವಂತೆ ಆಕೆ ಕೋರಿದ್ದರು. ಆಗ ಪರಿಷ್ಕೃತ ಅಂಕಗಳನ್ನು ನಿಗದಿತ ಸಮಯದೊಳಗೆ ಆನ್‌ಲೈನ್‌ ವೇದಿಕೆಯಲ್ಲಿ ಸಲ್ಲಿಸಿಲ್ಲ ಎಂದು ಶಾಲೆ ತಿಳಿಸಿತ್ತು. ಪದೇ ಪದೇ ವಿನಂತಿಸಿದರೂ, ಅರ್ಜಿಯನ್ನು ಮಂಡಳಿಗೆ ಕಳುಹಿಸಲಾಗಿದೆ ಎಂದು ಶಾಲೆ ಹೇಳುತ್ತಿತ್ತೇ ವಿನಾ ಕ್ರಮ ಕೈಗೊಳ್ಳುತ್ತಿರಲಿಲ್ಲ ಎಂದು ಆಕೆ ಅಳಲು ತೋಡಿಕೊಂಡಿದ್ದರು.

ವಾದ ಆಲಿಸಿದ ನ್ಯಾಯಾಲಯ "ಅರ್ಜಿದಾರರು ತನ್ನ 11ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು ಶಾಲೆಯ ತಪ್ಪಿನಿಂದಾಗಿ 12ನೇ ತರಗತಿ ಪರೀಕ್ಷೆ ಬರೆಯಲು ಸಾಧ್ಯವಾಗಿಲ್ಲ. ಅರ್ಜಿದಾರರ ಪರವಾಗಿ ಸೂಕ್ತ ನಿರ್ದೇಶನ ನೀಡದೆ ಹೋದರೆ ಅವರ ಭವಿಷ್ಯ ಅಪಾಯಕ್ಕೆ ತುತ್ತಾಗಲಿದೆ" ಎಂದಿತು.

ನಿರ್ಲಕ್ಷ್ಯಕ್ಕಾಗಿ ನ್ಯಾಯಾಲಯ ಶಾಲೆಗೆ ₹ 30,000 ದಂಡ ವಿಧಿಸಿತು. ಅನಗತ್ಯವಾಗಿ ವ್ಯಾಜ್ಯಕ್ಕೆ ಸಿಬಿಎಸ್‌ಸಿಯನ್ನು ಎಳೆದು ತಂದಿದ್ದಕ್ಕಾಗಿ ದಾವೆ ವೆಚ್ಚ ಭರಿಸಲೆಂದು ಸಿಬಿಎಸ್‌ಇಗೆ ಆ ದಂಡದ ಮೊತ್ತವನ್ನು ಪಾವತಿಸುವಂತೆಯೂ ಶಾಲೆಗೆ ನಿರ್ದೇಶಿಸಲಾಯಿತು.

ಇದೇ ವೇಳೆ ಅರ್ಜಿದಾರೆಯ ಅಂಕ ಸರಿಪಡಿಸದ ಸಿಬಿಎಸ್‌ಇ ನಿರ್ಧಾರವನ್ನೂ ರದ್ದುಗೊಳಿಸಿದ ನ್ಯಾಯಾಲಯ ಹೊಸದಾಗಿ ಫಲಿತಾಂಶ ಪ್ರಕಟಿಸುವಂತೆ ಸೂಚಿಸಿತು.

[ಆದೇಶದ ಪ್ರತಿಯನ್ನು ಇಲ್ಲಿ ಓದಿ]

Riya v State.pdf
Preview