Punjab & Haryana High Court, live-in relationship
Punjab & Haryana High Court, live-in relationship 
ಸುದ್ದಿಗಳು

ಲಿವ್-ಇನ್ ಸಂಬಂಧದಲ್ಲಿರುವ ವಿವಾಹಿತ ಮಹಿಳೆಗೆ ರಕ್ಷಣೆ ನಿರಾಕರಿಸಿದ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್

Bar & Bench

ಲಿವ್-ಇನ್ ಸಂಬಂಧದಲ್ಲಿರುವ ಮಹಿಳೆಯೊಬ್ಬರು ಈಗಾಗಲೇ ಮದುವೆಯಾಗಿರುವ ಹಿನ್ನೆಲೆಯಲ್ಲಿ ಪೊಲೀಸ್‌ ರಕ್ಷಣೆ ನೀಡುವಂತೆ ಸರ್ಕಾರಕ್ಕೆ ನಿರ್ದೇಶಿಸಲು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ನಿರಾಕರಿಸಿದೆ.

ಅರ್ಜಿದಾರೆ ತನ್ನ ಪತಿಯಿಂದ ಕಾನೂನಾತ್ಮಕವಾಗಿ ವಿಚ್ಛೇದನ ಪಡೆದಿಲ್ಲ. ಹೀಗಾಗಿ ಇಬ್ಬರು ಅರ್ಜಿದಾರರ ನಡುವಿನ ಸಂಬಂಧ ಅಪವಿತ್ರವಾದುದು. ಈ ಕಾರಣಕ್ಕೆ ಅರ್ಜಿ ವಜಾಗೊಳಿಸಲು ಅರ್ಹ ಎಂದು ನ್ಯಾ. ಸಂತ ಪ್ರಕಾಶ್ ಅವರಿದ್ದ ಪೀಠ ತಿಳಿಸಿತು. ಅಲ್ಲದೆ ಪ್ರತಿವಾದಿಗಳ ವಿರುದ್ಧದ ಆರೋಪಗಳಿಗೆ ಯಾವುದೇ ಆಧಾರವಿಲ್ಲ ಎಂದು ಹೇಳಿತು.

ಕಳೆದ ವಾರವಷ್ಟೇ, ರಾಜಸ್ಥಾನ ಹೈಕೋರ್ಟ್ ಸಹ ಜೀವನ ಸಂಬಂಧದಲ್ಲಿರುವ ಜೋಡಿಗೆ ಪೊಲೀಸ್ ರಕ್ಷಣೆ ವಿಸ್ತರಿಸಲು ನಿರಾಕರಿಸಿತ್ತು. ಮಹಿಳೆ ಈಗಾಗಲೇ ಮದುವೆಯಾಗಿದ್ದರಿಂದ, ದಂಪತಿಗಳಿಗೆ ರಕ್ಷಣೆ ನೀಡುವುದು ಪರೋಕ್ಷವಾಗಿ ಅಂತಹ ಅಕ್ರಮ ಸಂಬಂಧಗಳಿಗೆ ಒಪ್ಪಿಗೆ ಸೂಚಿಸಿದಂತಾಗುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು. ಅಲಾಹಾಬಾದ್‌ ಹೈಕೋರ್ಟ್‌ ಕೂಡ ಇತ್ತೀಚೆಗೆ ಇಂಥದ್ದೇ ತೀರ್ಪು ನೀಡಿತ್ತು.

ಪ್ರಕರಣದ ಮೊದಲ ಪ್ರತಿವಾದಿಯಾಗಿರುವ ವ್ಯಕ್ತಿಯನ್ನು ತನ್ನ ಇಚ್ಛೆಗೆ ವಿರುದ್ಧವಾಗಿ ಮಹಿಳೆ ಮದುವೆಯಾಗಿದ್ದು ದಂಪತಿಗೆ ಇಬ್ಬರು ಮಕ್ಕಳಿದ್ದರು. ಆದರೆ ಮದುವೆ ಬಗ್ಗೆ ಅಸಮಾಧಾನ ಹೊಂದಿದ್ದ ಮಹಿಳೆ ಪ್ರಕರಣದ ಎರಡನೇ ಅರ್ಜಿದಾರನನ್ನು ಪ್ರೀತಿಸುತ್ತಿದ್ದರು. ಗಂಡ ತನಗೆ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಿದ್ದುದರಿಂದ ಮನೆ ತೊರೆದ ಆಕೆ ಎರಡನೇ ಅರ್ಜಿದಾರನೊಂದಿಗೆ ವಾಸಿಸಲು ಆರಂಭಿಸಿದ್ದರು.

ಪತಿ ಮತ್ತು ಆತನ ಕುಟುಂಬ ಸದಸ್ಯರು ತಮ್ಮ ಸಂಬಂಧ ಕೊನೆಗೊಳಿಸುವಂತೆ ಬೆದರಿಕೆ ಹಾಕಲಾರಂಭಿಸಿದರು. ಪ್ರತಿವಾದಿಗಳು ತಮ್ಮ ಮೇಲೆ ದಾಳಿ ನಡೆಸುವ ಭಯವಿದೆ ಎಂದು ಅರ್ಜಿದಾರ ಜೋಡಿ ಪೊಲೀಸರ ಮೊರೆ ಹೋಗಿದ್ದರು. ಆದರೆ ಅವರು ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಹೈಕೋರ್ಟ್‌ ಮೆಟ್ಟಿಲೇರಿದ್ದರು.