Dam Image for representative purpose
ಸುದ್ದಿಗಳು

ಪಾಕಿಸ್ತಾನಕ್ಕೆ ಮಾಡಿದಂತೆ ನೀರು ಹರಿಸದೆ ಇರಬೇಡಿ: ಹರಿಯಾಣ-ಪಂಜಾಬ್‌ ಜಲವಿವಾದ ಕುರಿತು ಹೈಕೋರ್ಟ್ ಬುದ್ಧಿವಾದ

ಪಂಜಾಬ್ ಸರ್ಕಾರ ನಂಗಲ್ ಅಣೆಕಟ್ಟನ್ನು ಸ್ವಾಧೀನಪಡಿಸಿಕೊಂಡಿದ್ದು ಹರಿಯಾಣಕ್ಕೆ ನೀರು ಹರಿಸುತ್ತಿಲ್ಲ ಎಂದು ಆರೋಪಿಸಿ ಭಾಕ್ರಾ ಬಿಯಾಸ್ ನಿರ್ವಹಣಾ ಮಂಡಳಿ (ಬಿಬಿಎಂಬಿ) ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.

Bar & Bench

ಪಂಜಾಬ್ ಮತ್ತು ಹರಿಯಾಣ ರಾಜ್ಯಗಳ ನಡುವೆ ನಡೆಯುತ್ತಿರುವ ಜಲ ವಿವಾದದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ನೀರು ಬಿಡದಂತೆ ಕೈಗೊಂಡಿರುವ ಕ್ರಮಗಳನ್ನು ರಾಜ್ಯಗಳು ಪರಸ್ಪರರ ವಿರುದ್ಧ ಪ್ರಯೋಗಿಸಬಾರದು ಎಂದು ಮಂಗಳವಾರ ಕಿವಿ ಹಿಂಡಿದೆ.

ಪಂಜಾಬ್ ಸರ್ಕಾರ ನಂಗಲ್ ಅಣೆಕಟ್ಟನ್ನು ಸ್ವಾಧೀನಪಡಿಸಿಕೊಂಡಿದ್ದು ಹರಿಯಾಣಕ್ಕೆ ನೀರು ಹರಿಸುತ್ತಿಲ್ಲ ಎಂದು ಆರೋಪಿಸಿ ಭಾಕ್ರಾ ಬಿಯಾಸ್ ನಿರ್ವಹಣಾ ಮಂಡಳಿ (ಬಿಬಿಎಂಬಿ) ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಶೀಲ್ ನಾಗು ಮತ್ತು ನ್ಯಾಯಮೂರ್ತಿ ಸುಮೀತ್ ಗೋಯಲ್ ಅವರಿದ್ದ ವಿಭಾಗೀಯ ಪೀಠ ಆಲಿಸಿತು.

ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರು ದಾಳಿ ನಡೆಸಿ ಹಲವು ಪ್ರವಾಸಿಗರನ್ನು ಹತ್ಯೆ ಮಾಡಿದ ಹಿನ್ನೆಲೆಯಲ್ಲಿ ಪಾಕಿಸ್ತಾನಕ್ಕೆ ನದಿ ನೀರು ಹರಿಸದೆ ಇರಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಈ ವಿಚಾರ ಪ್ರಸ್ತಾಪಿಸಿದ ಮುಖ್ಯ ನ್ಯಾಯಮೂರ್ತಿ ನಾಗು "ನಾವು ನಮ್ಮ ಶತ್ರು ದೇಶಕ್ಕೆ ಹೀಗೆ ಮಾಡುತ್ತಿದ್ದೇವೆ. ನಮ್ಮ ರಾಜ್ಯಗಳ ನಡುವೆಯೇ ಅಂಥದ್ದು ನಡೆಯಬಾರದು" ಎಂದು ಹೇಳಿದರು.

ಹರಿಯಾಣಕ್ಕೆ ಹೆಚ್ಚುವರಿ ನೀರು ಬಿಡಲು ನಿರ್ಧಾರ ತೆಗೆದುಕೊಂಡ ನಂತರ ಪಂಜಾಬ್ ನಂಗಲ್ ಅಣೆಕಟ್ಟಿನಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿದೆ. ಇದು ಬಿಬಿಎಂಬಿ ನ್ಯಾಯಾಲಯದ ಮೆಟ್ಟಿಲೇರಿತ್ತು.

"ಜಲಾಶಯ ತುಂಬಿ ಹರಿಯುವಂತಾಗುತ್ತದೆ, ಅಣೆಕಟ್ಟಿನ ಕೆಳಭಾಗದಲ್ಲಿರುವ ರಾಜ್ಯಗಳಿಗೆ ನೀರು ಇಲ್ಲದಂತಾಗುತ್ತದೆ" ಎಂದು ಬಿಬಿಎಂಬಿ ಪರವಾಗಿ ಹಿರಿಯ ವಕೀಲ ರಾಜೇಶ್ ಗರ್ಗ್ ನ್ಯಾಯಾಲಯಕ್ಕೆ ತಿಳಿಸಿದರು. ಅಣೆಕಟ್ಟಿನಲ್ಲಿ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯೆಯಾಗಿ ಪಂಜಾಬ್ ಸರ್ಕಾರದ ಪರ ವಾದ ಮಂಡಿಸಿದ ಹಿರಿಯ ವಕೀಲ ಗುರುಮಿಂದರ್‌ ಸಿಂಗ್‌ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ಸರ್ಕಾರಕ್ಕೆ ಇರುವ ವಿಶೇಷ ಹಕ್ಕು ಎಂದು ಹೇಳುವ ಮೂಲಕ ಅಣೆಕಟ್ಟೆಯ ಭದ್ರತೆಗೆ ಪಂಜಾಬ್‌ ಪೊಲೀಸರ ನಿಯೋಜನೆಯನ್ನು ಸಮರ್ಥಿಸಿಕೊಂಡರು.

ಈ ಹಂತದಲ್ಲಿ ಗರ್ಗ್‌, ಹಿಮಾಚಲ ಪ್ರದೇಶ ಕೂಡ ತನ್ನಲ್ಲಿರುವ ಭಾಕ್ರಾ ಅಣೆಕಟ್ಟೆಯ ಬಗ್ಗೆ ಇದೇ ರೀತಿ ಮಾತನಾಡಬಹುದು ಎಂದು ಪ್ರತಿಕ್ರಿಯಿಸಿದರು.

ವಿಚಾರಣೆಯ ಈ ಹಂತದಲ್ಲಿ ನ್ಯಾಯಾಲು ಅಣೆಕಟ್ಟೆಯ ಭದ್ರತೆ ಯಾರು ನೋಡಿಕೊಳ್ಳುತ್ತಾರೆ ಎಂದು ಕೇಳಿದಾಗ ಪಂಜಾಬ್‌ ಪೊಲೀಸರು ಎಂದು ಸಿಂಗ್‌ ಪ್ರತಿಕ್ರಿಯಿಸಿದರು. ಆಗ ಕೇಂದ್ರ ಅರೆಸೇನಾ ಪಡೆ ನಿಯೋಜಿಸುವಂತೆ ಗರ್ಗ್ ಕೋರಿದರು. ಇಂತಹ ಸ್ಥಳಗಳನ್ನು ಅರೆಸೇನಾಪಡೆ ನಿರ್ವಹಿಸಬೇಕು ಎಂದು ಪೀಠವೂ ಸಹ ಅಭಿಪ್ರಾಯಪಟ್ಟಿತು.

ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ ಮಂಗಳವಾರದಂದೇ ಆದೇಶ ಪ್ರಕಟಿಸುವುದಾಗಿ ತಿಳಿಸಿತು.