Supreme Court, Punjab 
ಸುದ್ದಿಗಳು

ಬಿಎಸ್‌ಎಫ್‌ ವ್ಯಾಪ್ತಿ ವಿಸ್ತರಿಸಿದ್ದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ಪಂಜಾಬ್‌

ಕೇಂದ್ರ ಗೃಹ ಸಚಿವಾಲಯವು ಅಕ್ಟೋಬರ್ 11ರಂದು ಪಂಜಾಬ್, ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ರಾಜ್ಯಗಳಿಗೆ ಸಂಬಂಧಿಸಿದಂತೆ ಗಡಿ ಭದ್ರತಾ ಪಡೆ (ಬಿಎಸ್‌ಎಫ್‌) ವ್ಯಾಪ್ತಿಯನ್ನು 15 ರಿಂದ 50 ಕಿ ಮೀ ವರೆಗೆ ವಿಸ್ತರಿಸಿ ಅಧಿಸೂಚನೆ ಹೊರಡಿಸಿದೆ.

Bar & Bench

ಕೇಂದ್ರ ಗೃಹ ಸಚಿವಾಲಯವು ಅಕ್ಟೋಬರ್ 11ರಂದು ಪಂಜಾಬ್, ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ರಾಜ್ಯಗಳಿಗೆ ಸಂಬಂಧಿಸಿದಂತೆ ಗಡಿ ಭದ್ರತಾ ಪಡೆ (ಬಿಎಸ್‌ಎಫ್‌) ವ್ಯಾಪ್ತಿಯನ್ನು 15 ರಿಂದ 50 ಕಿ ಮೀ ವರೆಗೆ ವಿಸ್ತರಿಸಿ ಅಧಿಸೂಚನೆ ಹೊರಡಿಸಿರುವುದನ್ನು ಪ್ರಶ್ನಿಸಿ ಪಂಜಾಬ್‌ ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಸಲ್ಲಿಸಿದೆ.

ಅಕ್ಟೋಬರ್‌ 11ರ ಗೃಹ ಇಲಾಖೆಯ ಅಧಿಸೂಚನೆಯನ್ನು ಸಂವಿಧಾನದ 131ನೇ ವಿಧಿಯಡಿ ಪ್ರಶ್ನಿಸಲಾಗಿದ್ದು, ಸಂವಿಧಾನದ ಏಳನೇ ಷೆಡ್ಯೂಲ್‌ನ ಪ್ರವೇಶಿಕೆ 1 (ಸಾರ್ವಜನಿಕ ಸುವ್ಯವಸ್ಥೆ) ಮತ್ತು 2ರ (ಪೊಲೀಸ್‌) ಅಡಿ ಕೇಂದ್ರದ ನಿಲುವು ಸಂವಿಧಾನ ವಿರೋಧಿಯಾಗಿದೆ. ಸಾರ್ವಜನಿಕ ಸುವ್ಯವಸ್ಥೆ ಮತ್ತು ಆಂತರಿಕ ಶಾಂತಿಯ ನಿರ್ವಹಣೆಗೆ ಸಂಬಂಧಿಸಿದ ಅಥವಾ ಅಗತ್ಯವಿರುವ ವಿಷಯದ ಕುರಿತು ಕಾನೂನು ಮಾಡಲು ಅರ್ಜಿದಾರರ ಸಂಪೂರ್ಣ ಅಧಿಕಾರವನ್ನು ಕೇಂದ್ರದ ಅಧಿಸೂಚನೆ ಅತಿಕ್ರಮಿಸುತ್ತದೆ” ಎಂದು ಹೇಳಲಾಗಿದೆ.

ಕೇಂದ್ರದ ನಿರ್ಧಾರವು ಒಕ್ಕೂಟ ವ್ಯವಸ್ಥೆಯ ತತ್ವಗಳಿಗೆ ವಿರುದ್ಧವಾಗಿದ್ದು, ರಾಜ್ಯಗಳಿಗೆ ಸಂಬಂಧಿಸಿದಂತೆ ಕಾನೂನು ರೂಪಿಸುವ ವಿಚಾರದಲ್ಲಿ ಅರ್ಜಿದಾರರನ್ನು ಅಧಿಕಾರರಹಿತವಾಗಿಸುತ್ತದೆ ಎಂದು ವಾದಿಸಲಾಗಿದೆ.

ಕೇಂದ್ರ ಸರ್ಕಾರವು 1969ರಿಂದ ಹೊರಡಿಸಿಕೊಂಡು ಬರುತ್ತಿರುವ ಅಧಿಸೂಚನೆಗಳಲ್ಲೂ ಪಂಜಾಬ್‌ನಲ್ಲಿ ಬಿಎಸ್‌ಎಫ್‌ ವ್ಯಾಪ್ತಿಯು 15 ಕಿ ಮೀಗೆ ಸೀಮಿತವಾಗಿದೆ. ಇದಲ್ಲದೇ, ಅಕ್ಟೋಬರ್‌ 11ರಂದು ಅಧಿಸೂಚನೆ ಹೊರಡಿಸುವುದಕ್ಕೂ ಮುನ್ನ ಕೇಂದ್ರ ಸರ್ಕಾರವು ತಮ್ಮ ಜೊತೆ ಸಮಾಲೋಚನೆ ನಡೆಸಿಲ್ಲ ಎಂದು ಹೇಳಲಾಗಿದೆ.

ಪಶ್ಚಿಮ ಬಂಗಾಳವು ಕೇಂದ್ರ ಸರ್ಕಾರದ ಅಧಿಸೂಚನೆಯನ್ನು ಪ್ರಶ್ನಿಸಿ ಕಲ್ಕತ್ತಾ ಹೈಕೋರ್ಟ್‌ನಲ್ಲಿ ಮನವಿ ಸಲ್ಲಿಸಿದೆ. ಈ ಮನವಿಯ ವಿಚಾರಣೆಯು ಡಿಸೆಂಬರ್‌ 14ರಂದು ವಿಚಾರಣೆಗೆ ಬರುವ ಸಾಧ್ಯತೆ ಇದೆ.