Electricity transmission tower 
ಸುದ್ದಿಗಳು

ಜೆಎಸ್‌ಡಬ್ಲ್ಯು ಎನರ್ಜಿಯಿಂದ ವಿದ್ಯುತ್‌ ಖರೀದಿ: ಯೂನಿಟ್‌ಗೆ ₹7.25 ಪಾವತಿಸಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಸೂಚನೆ

ಏಕಸದಸ್ಯ ಪೀಠದ ಮುಂದೆ ಇರುವ ಅರ್ಜಿಯು ಇತ್ಯರ್ಥವಾಗುವವರೆಗೂ ರಾಜ್ಯ ಸರ್ಕಾರವು ಜೆಎಸ್‌ಡಬ್ಲ್ಯು ಎನರ್ಜಿ ಲಿಮಿಟೆಡ್‌ಗೆ ಪ್ರತಿ ಯೂನಿಟ್‌ ವಿದ್ಯುತ್‌ಗೆ ₹7.25 ರೂಪಾಯಿ ಪಾವತಿಸಿ ಖರೀದಿಸಲು ಸೂಚಿಸಿದ ಹೈಕೋರ್ಟ್‌.

Bar & Bench

ಏಕಸದಸ್ಯ ಪೀಠದ ಮುಂದೆ ಬಾಕಿ ಇರುವ ಅರ್ಜಿ ಇತ್ಯರ್ಥವಾಗುವವರೆಗೆ ರಾಜ್ಯ ಸರ್ಕಾರವು ಜೆಎಸ್‌ಡಬ್ಲ್ಯು ಎನರ್ಜಿ ಲಿಮಿಟೆಡ್‌ಗೆ ಪ್ರತಿ ಯೂನಿಟ್‌ (ಕೆಡಬ್ಲ್ಯುಎಚ್‌) ವಿದ್ಯುತ್‌ಗೆ ₹7.25 ಪಾವತಿಸಿ ಖರೀದಿಸುವಂತೆ ಕರ್ನಾಟಕ ಹೈಕೋರ್ಟ್‌ ಸೋಮವಾರ ಆದೇಶಿಸಿದೆ.

ರಾಜ್ಯ ಸರ್ಕಾರದ ಆದೇಶದಂತೆ ಸರ್‌ಪ್ಲಸ್‌ ವಿದ್ಯುತ್‌ ಅನ್ನು ರಾಜ್ಯದ ಗ್ರಿಡ್‌ಗೆ ಸರಬರಾಜು ಮುಂದುವರಿಸುವಂತೆ ಏಕಸದಸ್ಯ ಪೀಠವು ಅಕ್ಟೋಬರ್‌ 27ರಂದು ಜೆಎಸ್‌ಡಬ್ಲ್ಯುಗೆ ಆದೇಶ ಮಾಡಿತ್ತು. ಈ ಆದೇಶವನ್ನು ಪ್ರಶ್ನಿಸಿ ಜೆಎಸ್‌ಡಬ್ಲ್ಯು ಸಲ್ಲಿಸಿದ್ದ ಮೇಲ್ಮನವಿಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರ ನೇತೃತ್ವದ ವಿಭಾಗೀಯ ಪೀಠವು ಇತ್ಯರ್ಥಪಡಿಸಿದೆ.

“ಏಕಸದಸ್ಯ ಪೀಠವು ತನ್ನ ಮುಂದಿರುವ ಅರ್ಜಿಯನ್ನು ಒಂದು ವಾರದಲ್ಲಿ ಇತ್ಯರ್ಥಪಡಿಸಬೇಕು. ವಿದ್ಯುತ್‌ ಖರೀದಿ ದರ ಸೇರಿದಂತೆ ಎಲ್ಲಾ ವಿವಾದಾತ್ಮಕ ಅಂಶಗಳನ್ನು ಆಲಿಸಲು ಏಕಸದಸ್ಯ ಪೀಠವು ಮುಕ್ತವಾಗಿದ್ದು, ಎಲ್ಲಾ ವಾದಗಳನ್ನು ಮುಕ್ತವಾಗಿರಿಸಲಾಗಿದೆ ಎಂದು ಪುನರುಚ್ಚರಿಸಬೇಕಿಲ್ಲ. ಏಕಸದಸ್ಯ ಪೀಠದ ಮುಂದೆ ಇರುವ ಅರ್ಜಿಯು ಇತ್ಯರ್ಥವಾಗುವವರೆಗೂ ರಾಜ್ಯ ಸರ್ಕಾರವು ಜೆಎಸ್‌ಡಬ್ಲ್ಯು ಎನರ್ಜಿ ಲಿಮಿಟೆಡ್‌ಗೆ ಪ್ರತಿ ಯೂನಿಟ್‌ (ಕಿಲೋ ವ್ಯಾಟ್‌ ಹವರ್‌-ಕೆಡಬ್ಲ್ಯುಎಚ್‌) ವಿದ್ಯುತ್‌ಗೆ ₹ 7.25 ರೂಪಾಯಿ ಪಾವತಿಸಬೇಕು. ಹಾಲಿ ವಿದ್ಯುತ್‌ ಖರೀದಿ ದರವು ಅರ್ಜಿಯ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ” ಎಂದು ವಿಭಾಗೀಯ ಪೀಠ ಆದೇಶದಲ್ಲಿ ಹೇಳಿದೆ.

ಜೆಎಸ್‌ಡಬ್ಲ್ಯು ಪ್ರತಿನಿಧಿಸಿದ್ದ ಹಿರಿಯ ವಕೀಲ ಮುಕುಲ್‌ ರೋಹಟ್ಗಿ ಅವರು “ಅಕ್ಟೋಬರ್‌ 16ರಂದು ರಾಜ್ಯ ಸರ್ಕಾರವು ಆದೇಶದ ಮೂಲಕ ಪ್ರತಿ ಯೂನಿಟ್‌ಗೆ ₹ 4.86 ರಂತೆ ವಿದ್ಯುತ್‌ ಖರೀದಿಸಲಾಗುವುದು ಎಂದಿದೆ. ಆದರೆ, ಈ ಆದೇಶ ಮಾಡಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿಲ್ಲ. ವಿದ್ಯುಚ್ಛಕ್ತಿ ಕಾಯಿದೆ ಸೆಕ್ಷನ್‌ 11ರ ಅಡಿ ಕೇಂದ್ರ ಸರ್ಕಾರವು ಫೆಬ್ರವರಿ 20ರಂದು ಮಾಡಿರುವ ಆದೇಶ ಪಾಲಿಸಬೇಕಿದೆ” ಎಂದರು.

“ಮಾರುಕಟ್ಟೆಯಲ್ಲಿ ಹಾಲಿ ಚಾಲ್ತಿಯಲ್ಲಿರುವ ದರಕ್ಕೆ ವಿರುದ್ಧವಾಗಿ ರಾಜ್ಯ ಸರ್ಕಾರ ಅರ್ಧ ಹಣ ಪಾವತಿಸಲಾಗುವುದು ಎಂದಿದೆ. ಇದರಿಂದ ಪ್ರತಿ ದಿನ ಜೆಎಸ್‌ಡಬ್ಲ್ಯುಗೆ ₹10 ಕೋಟಿ ನಷ್ಟವಾಗಲಿದೆ. ಈ ಮಧ್ಯೆ, ಫೆಬ್ರವರಿ 20ರ ಆದೇಶವನ್ನು ಕೇಂದ್ರ ಸರ್ಕಾರವು 2024ರ ಜೂನ್‌ 30ರವರೆಗೆ ವಿಸ್ತರಿಸಿದೆ. ಇದನ್ನು ಉಲ್ಲೇಖಿಸಿದರೂ ಏಕಸದಸ್ಯ ಪೀಠವು ಇದನ್ನು ಪರಿಗಣಿಸಿಲ್ಲ” ಎಂದರು.

ರಾಜ್ಯ ಸರ್ಕಾರ ಪ್ರತಿನಿಧಿಸಿದ್ದ ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ ಅವರು “ವಿದ್ಯುತ್‌ ಕೊರತೆ ನೀಗಿಸಿಕೊಳ್ಳಲು ರಾಜ್ಯ ಸರ್ಕಾರವು ಈ ಹಿಂದೆಯೂ ವಿದ್ಯುಚ್ಛಕ್ತಿ ಕಾಯಿದೆ ಸೆಕ್ಷನ್‌ 11 ಅನ್ನು ಜಾರಿಗೊಳಿಸಿದೆ. ಬರ ಪರಿಸ್ಥಿತಿಯಿಂದಾಗಿ ಪ್ರತಿದಿನವೂ ರಾಜ್ಯ ಸರ್ಕಾರ ವಿದ್ಯುತ್‌ ಸಮಸ್ಯೆ ಎದುರಿಸುತ್ತಿದೆ. ಹೀಗಾಗಿ, ರಾಜ್ಯದಲ್ಲಿನ ವಿದ್ಯುತ್‌ ಉತ್ಪಾದಕರಿಗೆ ವಿದ್ಯುತ್‌ ಉತ್ಪಾದಿಸಿ ರಾಜ್ಯದ ಗ್ರಿಡ್‌ಗೆ ಮಾತ್ರ ವಿದ್ಯುತ್‌ ಪೂರೈಸಲು ಕಾಯಿದೆ ಸೆಕ್ಷನ್‌ 11ರ ಅಡಿ ತನ್ನ ವ್ಯಾಪ್ತಿ ಬಳಕೆ ಮಾಡುವುದು ಅನಿವಾರ್ಯವಾಗಿದೆ” ಎಂದರು.

ಕೆಲವು ಷರತ್ತಿಗೆ ಒಳಪಟ್ಟು ರಾಜ್ಯದಲ್ಲಿ ಕಾರ್ಯಾಚರಿಸುತ್ತಿರುವ ಎಲ್ಲಾ ವಿದ್ಯುತ್‌ ಉತ್ಪಾದಕರಿಗೆ ಅಲ್ಲಿ ಉತ್ಪಾದಿಸಲ್ಪಟ್ಟ ವಿದ್ಯುತ್‌ ಅನ್ನು ರಾಜ್ಯದ ಗ್ರಿಡ್‌ಗೆ ಪೂರೈಸುವಂತೆ ರಾಜ್ಯ ಸರ್ಕಾರ ಆದೇಶಿಸಿತ್ತು. ಕರ್ನಾಟಕ ರಾಜ್ಯ ವಿದ್ಯುತ್‌ ನಿಯಂತ್ರಣ ಆಯೋಗದ (ಕೆಇಆರ್‌ಸಿ) ಮುಂದಿರುವ ಪ್ರಕ್ರಿಯೆಗೆ ಒಳಪಟ್ಟು ಎಲ್ಲಾ ಎಸ್ಕಾಂಗಳು ತಾತ್ಕಾಲಿಕವಾಗಿ ಪ್ರತಿ ಯೂನಿಟ್‌ಗೆ ₹ 4.86 ಪಾವತಿಸಬೇಕು ಎಂಬುದು ಷರತ್ತುಗಳಲ್ಲಿ ಒಂದಾಗಿತ್ತು. ಈ ಮಧ್ಯೆ, ಅಕ್ಟೋಬರ್‌ 17ರಂದು ಈ ಹಿಂದೆ ನೀಡಿದ್ದ ಎನ್‌ಒಸಿ/ಒಪ್ಪಿಗೆಯನ್ನು ಹಿಂಪಡೆದು ಆದೇಶ ಹೊರಡಿಸಿತ್ತು.

ರಾಜ್ಯದಲ್ಲಿ ಕಾರ್ಯಾಚರಿಸುತ್ತಿರುವ ಆಮದು ಮಾಡಿಕೊಂಡ ಕಲ್ಲಿದ್ದಲು ಆಧಾರಿತ ವಿದ್ಯುಚ್ಛಕ್ತಿ ಘಟಕ ಹೊಂದಿರುವ ಜೆಎಸ್‌ಬ್ಲ್ಯು ಪ್ರತಿ ಯೂನಿಟ್‌ಗೆ ವಿದ್ಯುತ್‌ಗೆ ₹ 7.25 ರಂತೆ ಪೂರೈಸಲಾಗುವುದು ಎಂದು ಆಗಸ್ಟ್‌ 11ರಂದು ರಾಜ್ಯ ಸರ್ಕಾರದ ಮುಂದೆ ಪ್ರಸ್ತಾವ ಇರಿಸಿತ್ತು.