Plane
Plane 
ಸುದ್ದಿಗಳು

ಮಾಸ್ಕ್‌ ನಿಯಮಾವಳಿ ಉಲ್ಲಂಘಿಸುವ ಪ್ರಯಾಣಿಕರ ವಿಮಾನ ಪಯಣ ನಿಷೇಧಿಸಿ: ಡಿಜಿಸಿಎಗೆ ದೆಹಲಿ ಹೈಕೋರ್ಟ್‌ ನಿರ್ದೇಶನ

Bar & Bench

ವಿಮಾನ ಮತ್ತು ವಿಮಾನ ನಿಲ್ದಾಣಗಳಲ್ಲಿ ಮಾಸ್ಕ್‌ ಧರಿಸುವುದು ಮತ್ತು ಕೋವಿಡ್‌ ನಿಯಮಾವಳಿಗಳನ್ನು ಪಾಲಿಸುವುದಕ್ಕೆ ಸಂಬಂಧಿಸಿದಂತೆ ಮಾರ್ಗಸೂಚಿಗಳನ್ನು ಹೊರಡಿಸುವಂತೆ ಶುಕ್ರವಾರ ನಾಗರಿಕ ವಿಮಾನಯಾನ ನಿರ್ದೇಶನಾಲಯಕ್ಕೆ (ಡಿಜಿಸಿಎ) ದೆಹಲಿ ಹೈಕೋರ್ಟ್‌ ನಿರ್ದೇಶಿಸಿದೆ.

ಮಾಸ್ಕ್‌ ಧರಿಸುವುದಕ್ಕೆ ನಿರಾಕರಿಸುವವರು ಮತ್ತು ಕೈ ಸ್ವಚ್ಛಗೊಳಿಸುವುದಕ್ಕೆ ನಿರಾಕರಿಸುವ ಮೂಲಕ ಮಾರ್ಗಸೂಚಿ ಉಲ್ಲಂಘಿಸಿದವರನ್ನು ವಿಮಾನ ಹಾರಾಟಕ್ಕೆ ನಿಷೇಧ ಹೇರುವ ಪಟ್ಟಿಗೆ ಸೇರಿಸುವಂತೆ ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿಪಿನ್‌ ಸಾಂಘಿ ಮತ್ತು ನ್ಯಾಯಮೂರ್ತಿ ಸಚಿನ್‌ ದತ್ತ ಅವರಿದ್ದ ವಿಭಾಗೀಯ ಪೀಠ ಆದೇಶಿಸಿದೆ.

“ಕೋವಿಡ್‌ ಮಾರ್ಗಸೂಚಿಗಳನ್ನು ಗಂಭೀರವಾಗಿ ಜಾರಿಗೊಳಿಸಲಾಗುತ್ತಿಲ್ಲ ಎನಿಸುತ್ತಿದೆ. ನಿಯಮಗಳನ್ನು ಕಡ್ಡಾಯವಾಗಿ ಜಾರಿಗೊಳಿಸುವುದು ಪ್ರತಿವಾದಿಗಳ ಕರ್ತವ್ಯವಾಗಿದೆ. ಈ ಹಿನ್ನೆಲೆಯಲ್ಲಿ ಮಾಸ್ಕ್‌ ಧರಿಸದ ಮತ್ತು ಸ್ವಚ್ಛತಾ ನಿಯಮಗಳನ್ನು ಪಾಲಿಸದವರ ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲು ವಿಮಾನ ನಿಲ್ದಾಣದ ಸಿಬ್ಬಂದಿ, ವಿಮಾನದ ಕ್ಯಾಪ್ಟನ್‌ಗಳು, ಪೈಲಟ್‌ಗಳಿಗೆ ಡಿಜಿಸಿಎ ಪ್ರತ್ಯೇಕ ಮಾರ್ಗಸೂಚಿ ಹೊರಡಿಸಬೇಕು. ನಿಯಮಗಳನ್ನು ಪಾಲಿಸದವರ ವಿರುದ್ಧ ಪ್ರಕರಣ ದಾಖಲಿಸಿ, ದಂಡ ವಿಧಿಸಬೇಕು. ಅಲ್ಲದೇ, ಅವರನ್ನು ವಿಮಾನ ಹಾರಾಟಕ್ಕೆ ನಿಷೇಧ ಹೇರಲಾಗಿರುವ ಪಟ್ಟಿಗೆ ಸೇರಿಸಬೇಕು. ಮಾರ್ಗಸೂಚಿಗಳನ್ನು ಕಡ್ಡಾಯಗೊಳಿಸುವ ನಿಟ್ಟಿನಲ್ಲಿ ಇದು ಅತ್ಯಂತ ಅವಶ್ಯ. ಈ ಸಂಬಂಧ ಕೈಗೊಳ್ಳಲಾದ ಕ್ರಮದ ಕುರಿತು ಜುಲೈನಲ್ಲಿ ವರದಿ ಸಲ್ಲಿಸಬೇಕು” ಎಂದು ಆದೇಶದಲ್ಲಿ ಹೇಳಲಾಗಿದೆ.

ಕೋವಿಡ್‌ ನಿಯಮಾವಳಿಗಳಾದ ಸಾಮಾಜಿಕ ಅಂತರವನ್ನು ಪಾಲಿಸದಿರುವುದಕ್ಕೆ ನ್ಯಾ. ಸಿ ಹರಿಶಂಕರ್‌ ಕಳೆದ ವರ್ಷದ ಮಾರ್ಚ್‌ನಲ್ಲಿ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿದ್ದ ಮನವಿಯ ವಿಚಾರಣೆಯನ್ನು ಹೈಕೋರ್ಟ್‌ ನಡೆಸಿತು. ಕೋಲ್ಕತಾ-ದೆಹಲಿ ನಡುವಿನ ವಿಮಾನದಲ್ಲಿ ಪ್ರಯಾಣಿಕರೊಬ್ಬರು ಸೂಕ್ತವಾದ ರೀತಿಯಲ್ಲಿ ಮಾಸ್ಕ್‌ ಧರಿಸದೇ, ಕೋವಿಡ್‌ ನಿಯಮಾವಳಿಗಳನ್ನು ಉಲ್ಲಂಘಿಸಿದ್ದಕ್ಕೆ ಸಾಕ್ಷಿಯಾಗಿದ್ದ ನ್ಯಾ. ಹರಿಶಂಕರ್‌ ಅವರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದರು.