ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ₹2 ಕೋಟಿ ಸುಲಿಗೆ ಮಾಡಿದ ಪ್ರಕರಣದಲ್ಲಿ ಬಂಧಿತರಾಗಿರುವ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸಹೋದರ ಗೋಪಾಲ ಜೋಶಿ ಮತ್ತಿತರರ ವಿರುದ್ಧದ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ನ್ಯಾಯಾಲಯದ ಮುಂದೆ ಇಡುವಂತೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಗುರುವಾರ ಆದೇಶಿಸಿದೆ.
ಪ್ರಕರಣ ರದ್ದತಿ ಕೋರಿರುವ ಅರ್ಜಿಯ ಭಾಗವಾಗಿ ಸಲ್ಲಿಸಿದ್ದ ಮೆಮೊ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಪೀಠವು ಈಗ ಮೆಮೊ ಸಲ್ಲಿಸಿರುವುದೇಕೆ ಎಂದು ಹಿರಿಯ ವಕೀಲ ಡಿ ಆರ್ ರವಿಶಂಕರ್ ಅವರನ್ನು ಪ್ರಶ್ನಿಸಿತು.
ಆಗ ರವಿಶಂಕರ್ ಅವರು “ಇಡೀ ಪ್ರಕರಣ ಹಣ ವರ್ಗಾವಣೆಗೆ ಸಂಬಂಧಿಸಿದ್ದಾಗಿದೆ. ಕಳೆದ ಮಾರ್ಚ್, ಏಪ್ರಿಲ್, ಮೇ ಹಾಗೂ ಆಗಸ್ಟ್ನಲ್ಲಿ ಘಟನಾವಳಿಗಳು ನಡೆದಿವೆ. ಆದರೆ, ಅಕ್ಟೋಬರ್ 17ರಂದು ಪ್ರಕರಣ ದಾಖಲಿಸಿದ್ದು, ಗೋಪಾಲ ಜೋಶಿ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ. ಇದರಲ್ಲಿ ಇಬ್ಬರನ್ನು ಪೊಲೀಸ್ ಕಸ್ಟಡಿಗೆ, ಇನ್ನಿಬ್ಬರನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ” ಎಂದರು.
ಆಗ ಪೀಠವು ವಿಶೇಷ ಸರ್ಕಾರಿ ಅಭಿಯೋಜಕ ಬಿ ಎನ್ ಜಗದೀಶ್ ಅವರನ್ನು ಕುರಿತು ಏನಾಗಿದೆ ಎಂದಿತು. ಅದಕ್ಕೆ ಜಗದೀಶ್ ಅವರು “ಲೋಕಸಭೆ ಚುನಾವಣೆಗೆ ಬಿಜೆಪಿ ಟಿಕೆಟ್ ಕೊಡಿಸುವ ವಿಚಾರವು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ಕಚೇರಿಯಲ್ಲಿ ನಡೆದಿದೆ. ಈ ಕುರಿತು ತನಿಖೆ ನಡೆಯುತ್ತಿದೆ” ಎಂದರು.
ಇದನ್ನು ಆಲಿಸಿದ ಪೀಠವು ಅಕ್ಟೋಬರ್ 28ರಂದು (ಸೋಮವಾರ) ಪ್ರಕರಣದ ವಿಚಾರಣೆ ನಡೆಸಲಾಗುವುದು. ಅಂದು ಪ್ರಕರಣದ ದಾಖಲೆಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಜಗದೀಶ್ ಅವರಿಗೆ ಆದೇಶಿಸಿತು.
ಗೋಪಾಲ ಜೋಶಿ ಮತ್ತು ಅವರ ಪುತ್ರ ಅಜಯ್ ಜೋಶಿ ಅವರನ್ನು ನ್ಯಾಯಾಲಯವು 10 ದಿನ ಪೊಲೀಸ್ ಕಸ್ಟಡಿಗೆ ನೀಡಿದೆ. ಅಥಣಿಯ ಎಂಜಿನಿಯರ್ ಸೋಮಶೇಖರ್ ನಾಯಕ್ ಹಾಗೂ ಬಸವೇಶ್ವರನಗರದ ನಿವಾಸಿ ವಿಜಯಕುಮಾರಿ ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.
ಪ್ರಕರಣದ ಹಿನ್ನೆಲೆ: ಲೋಕಸಭೆ ಚುನಾವಣೆಗೆ ಬಿಜೆಪಿ ಟಿಕೆಟ್ ಕೊಡಿಸುವ ಆಮಿಷವೊಡ್ಡಿ ವಿಜಯಪುರ ಜಿಲ್ಲೆಯ ನಾಗಠಾಣ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ದೇವಾನಂದ್ ಫೂಲ್ ಸಿಂಗ್ ಚವ್ಹಾಣ್ ಅವರಿಂದ ₹2 ಕೋಟಿ ಸುಲಿಗೆ ನಡೆಸಿದ್ದ ಆರೋಪದ ಸಂಬಂಧ ಸುನೀತಾ ಚವ್ಹಾಣ್ ನೀಡಿದ ದೂರಿನ ಅನ್ವಯ ಬೆಂಗಳೂರಿನ ಬಸವೇಶ್ವರನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ದೇವಾನಂದ್ ಚವ್ಹಾಣ್ ಅವರು ಗೋಪಾಲ ಜೋಶಿ ಅವರನ್ನು ಹುಬ್ಬಳ್ಳಿಯ ನಿವಾಸದಲ್ಲಿ ಭೇಟಿ ಮಾಡಿದ್ದರು. ಸೋಮಶೇಖರ್ ನಾಯಕ್ ಅವರು ಗೋಪಾಲ ಜೋಶಿ ಅವರನ್ನು ಭೇಟಿ ಮಾಡಿಸಿದ್ದರು. ಕೇಂದ್ರದಲ್ಲಿ ನನ್ನ ಸಹೋದರ ಪ್ರಲ್ಹಾದ್ ಜೋಶಿ ಅವರ ವರ್ಚಸ್ಸು ಚೆನ್ನಾಗಿದ್ದು, ವಿಜಯಪುರ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಗೋಪಾಲ ಜೋಶಿ ಆಮಿಷವೊಡ್ಡಿದ್ದರು. ಇದಕ್ಕಾಗಿ ₹5 ಕೋಟಿ ಸಿದ್ಧತೆ ಮಾಡಿಕೊಳ್ಳುವಂತೆಯೂ ಸೂಚಿಸಿದ್ದರು. ಅಷ್ಟು ಹಣವಿಲ್ಲ ಎಂದಾಗ ಸದ್ಯಕ್ಕೆ ₹25 ಲಕ್ಷ ಕೊಡುವಂತೆ ತಿಳಿಸಿದ್ದರು. ಆ ಹಣವನ್ನು ಗೋಪಾಲ ಜೋಶಿ ಸೂಚಿಸಿದ ವಿಜಯಕುಮಾರಿ ಅವರ ಮನೆಗೆ ತಲುಪಿಸಲಾಗಿತ್ತು. ಅಲ್ಲದೇ, ₹5 ಕೋಟಿ ಮೌಲ್ಯ ನಮೂದಿಸಿದ್ದ ಚೆಕ್ ಸಹ ಪಡೆದುಕೊಂಡಿದ್ದರು ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.
ಟಿಕೆಟ್ ಸಂಬಂಧ ಅಮಿತ್ ಶಾ ಅವರ ಆಪ್ತ ಸಹಾಯಕರ ಜೊತೆಗೆ ಮಾತನಾಡಿರುವುದಾಗಿ ಗೋಪಾಲ ಜೋಶಿ ಹೇಳಿದ್ದರು. ಆದರೆ, ಟಿಕೆಟ್ ಕೊಡಿಸದೇ ವಂಚಿಸಿದ್ದಾರೆ. ಅದಾದ ಮೇಲೆ ಬಸವೇಶ್ವರನಗರದ ವಿಜಯಕುಮಾರಿ ಅವರ ಮನೆಗೆ ಕರೆಸಿಕೊಂಡು ಚೆಕ್ ವಾಪಸ್ ನೀಡಿದ್ದರು. ₹25 ಲಕ್ಷ ವಾಪಸ್ ನೀಡುವಂತೆ ಕೇಳಿದಾಗ ₹200 ಕೋಟಿ ಮೊತ್ತದ ಯೋಜನೆಗಳ ಬಿಲ್ ತೋರಿಸಿ ₹1.75 ಕೋಟಿ ನೀಡಿದರೆ 20 ದಿನಗಳಲ್ಲಿ ಎಲ್ಲಾ ಹಣವನ್ನೂ ವಾಪಸ್ ನೀಡುವುದಾಗಿ ಹೇಳಿದ್ದರು. ಅವರ ಮಾತು ನಂಬಿ ಹಂತ ಹಂತವಾಗಿ ₹1.75 ಕೋಟಿ ನೀಡಿದ್ದೆ ಎಂದು ದೇವಾನಂದ್ ಚವ್ಹಾಣ್ ಅವರ ಪತ್ನಿ ಸುನೀತಾ ಚವ್ಹಾಣ್ ನೀಡಿರುವ ದೂರಿನಲ್ಲಿ ವಿವರಿಸಿರುವುದನ್ನು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.